ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಮಿತವ್ಯಯ ಹಾಗೂ ಪರಿಸರ ಸಂರಕ್ಷಣೆಯ ಕರೆಗೆ ಸ್ಪಂದಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ತಮ್ಮ ಐಷಾರಾಮಿ ಕಾರು ಮತ್ತು ಬೆಂಗಾವಲು ವಾಹನಗಳನ್ನು ಬಿಟ್ಟು ಸಾರ್ವಜನಿಕ ಸಾರಿಗೆಯಾದ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿ ಗಮನ ಸೆಳೆದಿದ್ದಾರೆ.
ಪಕ್ಷದ ಪ್ರಮುಖ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಜಯೇಂದ್ರ ಅವರು ಬೆಂಗಳೂರಿನ ನಮ್ಮ ಮೆಟ್ರೋ ಸೇವೆಯನ್ನು ಬಳಸಿದರು. ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ತನಕ ಸಾಮಾನ್ಯ ಪ್ರಯಾಣಿಕರಂತೆ ಮೆಟ್ರೋದಲ್ಲಿ ಸಂಚರಿಸಿದರು.

ರಾಜಧಾನಿಯ ಟ್ರಾಫಿಕ್ ದಟ್ಟಣೆ ನಡುವೆ ಸಮಯ ಉಳಿತಾಯ ಹಾಗೂ ಇಂಧನ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಅವರು ಈ ಸರಳ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದರು. ಕುಂಬಳಗೂಡಿನಲ್ಲಿ ನಡೆದ ಪಕ್ಷದ ಮಹತ್ವದ ಕಾರ್ಯಕ್ರಮಕ್ಕೆ ತೆರಳಲು ಮೆಟ್ರೋ ಪ್ರಯಾಣವನ್ನು ಆಯ್ದುಕೊಂಡ ವಿಜಯೇಂದ್ರ, ಯಾವುದೇ ವಿಐಪಿ ಅಬ್ಬರವಿಲ್ಲದೆ ಸಹಪ್ರಯಾಣಿಕರೊಂದಿಗೆ ಬೆರೆತು ಮಾತನಾಡಿದರು.

ಮೆಟ್ರೋದಲ್ಲಿ ಸಾರ್ವಜನಿಕರೊಂದಿಗೆ ಕುಶಲೋಪರಿ ನಡೆಸಿದ ವಿಜಯೇಂದ್ರ ಅವರ ಸರಳ ನಡೆ ಪ್ರಯಾಣಿಕರ ಗಮನ ಸೆಳೆಯಿತು. ಪ್ರಧಾನಿ ಮೋದಿ ಅವರ ಆಶಯಕ್ಕೆ ಅನುಗುಣವಾಗಿ ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ ನೀಡಿದ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.






