ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಟ್ ಯುಜಿ 2026 (NEET UG 2026) ಮರುಪರೀಕ್ಷೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆ ರದ್ದಾಗಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಇದೀಗ ಜೂನ್ 21, 2026ರಂದು ಭಾನುವಾರ ಮರುನಡೆಸಲು ತೀರ್ಮಾನಿಸಲಾಗಿದೆ.ಎನ್‌ಟಿಎ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿ ಪ್ರಕಟಿಸಿದ್ದು, “ಭಾರತ ಸರ್ಕಾರದ ಅನುಮೋದನೆಯೊಂದಿಗೆ ನೀಟ್ (ಯುಜಿ) 2026 ಮರುಪರೀಕ್ಷೆಯನ್ನು ಜೂನ್ 21ರಂದು ನಡೆಸಲಾಗುವುದು” ಎಂದು ತಿಳಿಸಿದೆ. ಜೊತೆಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಎನ್‌ಟಿಎ ಅಧಿಕೃತ ವೆಬ್‌ಸೈಟ್ ಹಾಗೂ ಅಧಿಕೃತ ಮಾಹಿತಿ ಮೂಲಗಳನ್ನು ಮಾತ್ರ ನಂಬುವಂತೆ ಮನವಿ ಮಾಡಲಾಗಿದೆ.

ಈ ಹಿಂದೆ ಮೇ 3ರಂದು ನಡೆದಿದ್ದ ನೀಟ್ ಯುಜಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮ ನಡೆದಿರುವ ಆರೋಪಗಳು ಕೇಳಿಬಂದಿದ್ದವು. ರಾಜಸ್ಥಾನ ಎಸ್‌ಒಜಿ ತನಿಖೆಯಲ್ಲಿ ಕೆಲವು ಪ್ರಶ್ನೆಗಳು ಮೂಲ ಪ್ರಶ್ನೆಪತ್ರಿಕೆಗೆ ಹೊಂದಿಕೆಯಾಗಿದ್ದವು ಎಂಬ ಮಾಹಿತಿ ಬಹಿರಂಗವಾದ ಹಿನ್ನೆಲೆ, ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಹಾಗೂ ಎನ್‌ಟಿಎ ನಿರ್ಧರಿಸಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದ್ದು, ಈಗಾಗಲೇ ಹಲವರ ಬಂಧನವೂ ನಡೆದಿದೆ.

ಎನ್‌ಟಿಎ ನೀಡಿರುವ ಮಾಹಿತಿಯ ಪ್ರಕಾರ, ಮರುಪರೀಕ್ಷೆಗೆ ಹೊಸ ನೋಂದಣಿ ಅಗತ್ಯವಿಲ್ಲ. ಈಗಾಗಲೇ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳ ವಿವರಗಳನ್ನೇ ಬಳಸಲಾಗುತ್ತದೆ. ಹಳೆಯ ಪ್ರವೇಶ ಪತ್ರ (Admit Card) ಅಮಾನ್ಯವಾಗಲಿದ್ದು, ಹೊಸ ಅಡ್ಮಿಟ್ ಕಾರ್ಡ್‌ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿಯೂ ಕೆಲವು ಬದಲಾವಣೆಗಳಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ನಡುವೆ, ದೇಶದಾದ್ಯಂತ ಸುಮಾರು 22 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಮರುಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರೀಕ್ಷಾ ದಿನಾಂಕ ಘೋಷಣೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲ ವಿದ್ಯಾರ್ಥಿಗಳು ಹೆಚ್ಚುವರಿ ಸಮಯ ಸಿಕ್ಕಿರುವುದರಿಂದ ನೆಮ್ಮದಿ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಮರುಪರೀಕ್ಷೆಯಿಂದ ಮಾನಸಿಕ ಒತ್ತಡ ಹೆಚ್ಚಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.






