ತಿರುವನಂತಪುರಂ:
ಕಾಂಗ್ರೆಸ್ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರನ್ನು ಕೇರಳದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ. ಕೇರಳ ಕಾಂಗ್ರೆಸ್ ಉಸ್ತುವಾರಿ ದೀಪದಾಸ್ ಮುನ್ಶಿ ಅಧಿಕೃತವಾಗಿ ಈ ಘೋಷಣೆ ಮಾಡಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟವಾದ 11 ದಿನಗಳ ಬಳಿಕ ಕಾಂಗ್ರೆಸ್ ಈ ಮಹತ್ವದ ನಿರ್ಧಾರ ಕೈಗೊಂಡಿದೆ. 61 ವರ್ಷದ ವಿ.ಡಿ. ಸತೀಶನ್ ಅವರು ಇದುವರೆಗೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಸಚಿವ ಸ್ಥಾನ ವಹಿಸಿಕೊಳ್ಳದೇ ನೇರವಾಗಿ ಮುಖ್ಯಮಂತ್ರಿ ಹುದ್ದೆಗೇರಿರುವುದು ವಿಶೇಷವಾಗಿದೆ.

ಎರ್ನಾಕುಲಂ ಜಿಲ್ಲೆಯ ನೆಟ್ಟೂರಿನಲ್ಲಿ ಜನಿಸಿದ ವಿ.ಡಿ. ಸತೀಶನ್ ವಿದ್ಯಾರ್ಥಿ ಜೀವನದಲ್ಲೇ ರಾಜಕೀಯ ಪ್ರವೇಶಿಸಿದ್ದರು. ಕಾಂಗ್ರೆಸ್ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಾಜ್ಯ ರಾಜಕೀಯದಲ್ಲಿ ಪ್ರಭಾವಿ ನಾಯಕರಾಗಿ ಬೆಳೆದಿದ್ದರು.ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್ನಲ್ಲಿ ತೀವ್ರ ಪೈಪೋಟಿ ನಡೆದಿತ್ತು. ವಿಶೇಷವಾಗಿ ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಹೆಸರುಗಳು ಬಲವಾಗಿ ಕೇಳಿಬಂದಿದ್ದವು. ಒಂದು ಹಂತದಲ್ಲಿ ಕೆ.ಸಿ. ವೇಣುಗೋಪಾಲ್ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ವಾತಾವರಣವೂ ನಿರ್ಮಾಣವಾಗಿತ್ತು. ಆದರೆ ಪಕ್ಷದ ಒಳರಾಜಕೀಯ ಚರ್ಚೆಗಳು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಪರಿಗಣಿಸಿದ ಹೈಕಮಾಂಡ್ ಕೊನೆಗೆ ವಿ.ಡಿ. ಸತೀಶನ್ ಪರ ತೀರ್ಮಾನ ಕೈಗೊಂಡಿದೆ.

ನೂತನ ಸಿಎಂ ಘೋಷಣೆಯ ಬಳಿಕ ಪ್ರತಿಕ್ರಿಯಿಸಿದ ಕೆ.ಸಿ. ವೇಣುಗೋಪಾಲ್, “ಹೈಕಮಾಂಡ್ ತೆಗೆದುಕೊಂಡ ನಿರ್ಧಾರವನ್ನು ನಾವು ಎಲ್ಲರೂ ಗೌರವಿಸುತ್ತೇವೆ. ವಿ.ಡಿ. ಸತೀಶನ್ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ” ಎಂದು ಹೇಳಿದ್ದಾರೆ.
ಇನ್ನೊಂದೆಡೆ, ವಿ.ಡಿ. ಸತೀಶನ್ ಹೆಸರನ್ನು ಘೋಷಿಸುತ್ತಿದ್ದಂತೆಯೇ ಕೇರಳದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.






