ತಿರುವನಂತಪುರಂ:
ಕೆ ಸಿ ವೇಣುಗೋಪಾಲ್ ಅವರನ್ನು ಕೇರಳದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಕಾಂಗ್ರೆಸ್ ಪಕ್ಷದಿಂದ ಈ ಕುರಿತು ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಆದರೆ ಬಲ್ಲ ಮೂಲಗಳ ಪ್ರಕಾರ ಕೆ ಸಿ ವೇಣುಗೋಪಾಲ ಅವರೇ ಸಿ ಎಂ ಎಂದು ಹೇಳಲಾಗುತ್ತಿದೆ.

ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಆರಂಭವಾಗಿತ್ತು. ಕೆ.ಸಿ. ವೇಣುಗೋಪಾಲ್, ವಿ.ಡಿ. ಸತೀಶನ್ ಹಾಗೂ ರಮೇಶ್ ಚೆನ್ನಿತ್ತಲಾ ಪ್ರಮುಖ ಆಕಾಂಕ್ಷಿಗಳಾಗಿದ್ದರು.

ಕಾಂಗ್ರೆಸ್ ಹೈಕಮಾಂಡ್ ಹಲವು ಸುತ್ತಿನ ಚರ್ಚೆ ನಡೆಸಿದರೂ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ. ಆದರೆ ಪಕ್ಷದ ಉನ್ನತ ಮೂಲಗಳನ್ನು ಉಲ್ಲೇಖಿಸಿ ಕೆಲವು ರಾಷ್ಟ್ರೀಯ ಮಾಧ್ಯಮಗಳು ಕೆ.ಸಿ. ವೇಣುಗೋಪಾಲ್ ಹೆಸರು ಮುಂಚೂಣಿಯಲ್ಲಿದೆ ಎಂದು ವರದಿ ಮಾಡಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಮಹತ್ವದ ಸಭೆಗಳ ಬಳಿಕ ಸಿಎಂ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆ ಮೈತ್ರಿ ಪಾಲುದಾರ Indian Union Muslim League ಪಕ್ಷವು ವಿ.ಡಿ. ಸತೀಶನ್ ಪರ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ. ಇದರಿಂದ ಕಾಂಗ್ರೆಸ್ ಒಳಗಿರುವ ಗೊಂದಲ ಇನ್ನಷ್ಟು ಹೆಚ್ಚಿದೆ ಎನ್ನಲಾಗುತ್ತಿದೆ. ಹೀಗಾಗಿ “ಕೆ.ಸಿ. ವೇಣುಗೋಪಾಲ್ ಕೇರಳ ಸಿಎಂ ಆಗಿ ಆಯ್ಕೆಯಾಗಿದ್ದಾರೆ” ಎಂಬ ಮಾಹಿತಿ ಅಧಿಕೃತವಾಗಿ ದೃಢಪಟ್ಟಿಲ್ಲ. ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಪ್ರಕಟಣೆ ಹೊರಡಿಸಿದ ಬಳಿಕವೇ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.






