ಬೆಳಗಾವಿ: ಜಿಲ್ಲೆಯ ಸಂಬರಗಿ ಗ್ರಾಮದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಗಾಳಿ-ಮಳೆ ಗ್ರಾಮಸ್ಥರನ್ನು ಕಂಗಾಲಾಗುವಂತೆ ಮಾಡಿದೆ. ಬಿರುಗಾಳಿ, ಗುಡುಗು ಮತ್ತು ಸಿಡಿಲಿನ ಅಬ್ಬರಕ್ಕೆ ಗ್ರಾಮದಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಭಾರೀ ಗಾಳಿಯ ಪರಿಣಾಮ ಹಲವು ಮನೆಗಳ ಮೇಲ್ಛಾವಣಿಯ ಪತ್ರಾಸ್‌ಗಳು ಹಾರಿ ಹೋಗಿದ್ದು, ಇಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಕೆಲ ಮನೆಗಳಲ್ಲಿ ಗೋಡೆಗಳಿಗೆ ಬಿರುಕು ಬಿದ್ದಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿದ ಪರಿಣಾಮ ಕೆಲ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವೂ ಉಂಟಾಗಿದೆ.

ಗಾಳಿ-ಮಳೆಯ ಅಬ್ಬರದಿಂದ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಏಕಾಏಕಿ ಆರಂಭವಾದ ಮಳೆಯಿಂದ ಜನರು ಸುರಕ್ಷಿತ ಸ್ಥಳಗಳಿಗೆ ಓಡಿಬಂದ ದೃಶ್ಯಗಳು ಕಂಡುಬಂದವು.
ಇನ್ನೊಂದೆಡೆ, ರೈತರು ಬೆಳೆದಿದ್ದ ಜೋಳ, ಸಜ್ಜೆ, ತರಕಾರಿ ಹಾಗೂ ಇತರೆ ಬೆಳೆಗಳಿಗೆ ಹಾನಿಯಾಗಿರುವ ಮಾಹಿತಿ ಲಭ್ಯವಾಗಿದೆ. ಮಳೆಯೊಂದಿಗೆ ಬಂದ ಬಿರುಗಾಳಿಯಿಂದ ಬೆಳೆಗಳು ನೆಲಕ್ಕುರುಳಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಘಟನಾ ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾನಿಯ ಅಂದಾಜು ಕಾರ್ಯ ಮುಂದುವರಿದಿದೆ. ನಷ್ಟ ಅನುಭವಿಸಿದ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಬೇಕು ಹಾಗೂ ರೈತರ ಬೆಳೆ ಹಾನಿಗೆ ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಗ್ರಾಮಸ್ಥರು ಮತ್ತು ಸಾಮಾಜಿಕ ಸಂಘಟನೆಯಾದ ಯೂಥ್ ಫೌಂಡೇಶನ್ ಆಗ್ರಹಿಸಿದೆ.





