ಬೆಂಗಳೂರು : ರಾಜ್ಯದ ಯೋಜನೆ ಮತ್ತು ಸಾಂಖಿಕ ಇಲಾಖೆ ಹಾಗೂ ಚಿತ್ರದುರ್ಗು ಉಸ್ತುವಾರಿ ಸಚಿವ ಡಿ. ಸುಧಾಕರ್ (Minister D Sudhakar passes away) ಇಂದು ಭಾನುವಾರ ಬೆಳಗಿನ ನಿಧನರಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಚಿವ ಡಿ. ಸುಧಾಕರ್ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮಣಿಪಾಲ ಆಸ್ಪತ್ರೆಯಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದ ಸಚಿವ ಡಿ ಸುಧಾಕರ್ ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ 3:15ರ ವೇಳೆಗೆ ವಿಧಿವಶರಾಗಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ನಲ್ಲಿ ವಿವಾದ: ಮಹಿಳಾ ಶಾಸಕಿ ಜೊತೆ ನಾಯಕನ ವರ್ತನೆಗೆ ಆಕ್ರೋಶ
ಡಿ. ಸುಧಾಕರ್ ಹಿರಿಯೂರು ಕ್ಷೇತ್ರದ ಶಾಸಕರಾಗಿದ್ದು. ಅವರ ನಿಧನದಿಂದ ರಾಜ್ಯ ರಾಜಕೀಯದಲ್ಲಿ ನೋವಿನ ವಾತಾವರಣ ನಿರ್ಮಾಣವಾಗಿದೆ. ಜನಪರ ನಾಯಕನಾಗಿ ಗುರುತಿಸಿಕೊಂಡಿದ್ದ ಅವರು ಬಡವರ ಪರ ಕಾಳಜಿ ವಹಿಸಿದ ರಾಜಕಾರಣಿಯಾಗಿದ್ದರು. ಹಿರಿಯೂರು ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಮಂಡಿ ಚಿಪ್ಪು ಶಸ್ತ್ರಚಿಕಿತ್ಸೆಗಾಗಿ ಯಶವಂತಪುರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಡಿ.ಸುಧಾಕರ್ ಅವರಿಗೆ ಶ್ವಾಸಕೋಶದ ಸೋಂಕು ತಗಲಿತ್ತು. ಹೀಗಾಗಿ, ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ತಜ್ಞ ವೈದ್ಯರ ಸತತ ಚಿಕಿತ್ಸೆ ನಂತರವೂ ಅವರು ಚೇತರಿಸಿಕೊಳ್ಳಲಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ.
ನಾಳೆ ಅಂತ್ಯಕ್ರಿಯೆ….
ಇಂದು ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ಹಿರಿಯೂರಿನ ನೆಹರೂ ಮೈದಾನದಲ್ಲಿ ಸಚಿವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಚಳ್ಳಕೆರೆಯ ಸ್ವಗೃಹದಲ್ಲಿ ಪೂಜೆ ವಿಧಿ-ವಿಧಾನಗಳು ನೆರವೇರಲಿವೆ. ಚಳ್ಳಕೆರೆ ಡಿ.ಸುಧಾಕರ್ ಕ್ರೀಡಾಂಗಣದಲ್ಲಿಯೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೇ 11ರಂದು (ನಾಳೆ) ಮಧ್ಯಾಹ್ನ 3ರಿಂದ 4 ಗಂಟೆಯ ಸುಮಾರಿಗೆ ಅಂತ್ಯಕ್ರಿಯೆಯ ವಿಧಿ-ವಿಧಾನಗಳು ನಡೆಯಲಿವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಗಣ್ಯರ ಸಂತಾಪ..
ಸಚಿವ ಡಿ.ಸುಧಾಕರ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷ ಹಾಗೂ ವಿಪಕ್ಷಗಳ ನಾಯಕರು ಸಂತಾಪ ಸೂಚಿಸಿದ್ದಾರೆ.






