• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ನಾಗರಿಕತೆ-ಮೌಲ್ಯಗಳ ಸಂಘರ್ಷದಲ್ಲಿ ಹೆಣ್ಣು

ಸಾಮಾಜಿಕ ಉನ್ನತಿಯ ಕಲ್ಪನೆಯನ್ನೇ ಪ್ರಶ್ನಿಸುತ್ತಿರುವ ಹೆಣ್ಣಿನ ಮೇಲಿನ ದೌರ್ಜನ್ಯಗಳು

ಪ್ರತಿಧ್ವನಿ by ಪ್ರತಿಧ್ವನಿ
May 5, 2026
in Uncategorized
0
ನಾಗರಿಕತೆ-ಮೌಲ್ಯಗಳ ಸಂಘರ್ಷದಲ್ಲಿ ಹೆಣ್ಣು
Share on WhatsAppShare on FacebookShare on Telegram

ನಾ ದಿವಾಕರ

ADVERTISEMENT

ದಕ್ಷಿಣ ಏಷ್ಯಾ ಮತ್ತು ಪಶ್ಚಿಮ ಯೂರೋಪ್‌ ದೇಶಗಳಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಸಮೀಕ್ಷೆ ನಡೆಸಿರುವ Into the Light Index on Global Child Sexual Exploitation and Abuse’ (ITL Index 2025) ವರದಿಯ ಮುಖ್ಯಾಂಶಗಳನ್ನು ಗಮನಿಸಿದರೆ ಸಾಕು, ನಾಗರಿಕತೆಯ ಉತ್ತುಂಗದಲ್ಲಿರುವ ಡಿಜಿಟಲ್‌ ಜಗತ್ತು ನೈತಿಕವಾಗಿ ಎಲ್ಲಿಗೆ ತಲುಪಿದೆ ಎಂದು ಸ್ಪಷ್ಟವಾಗುತ್ತದೆ. ಚೈಲ್ಡ್‌ ಲೈಟ್‌- ಮಕ್ಕಳ ರಕ್ಷಣೆಯ ಜಾಗತಿಕ ದತ್ತಾಂಶ ಸಂಸ್ಥೆ ಬಿಡುಗಡೆ ಮಾಡಿರುವ ಈ ವರದಿಯ ಅನುಸಾರ ದಕ್ಷಿಣ ಏಷ್ಯಾದ 8 ರಲ್ಲಿ ಒಬ್ಬ ಮಕ್ಕಳು 18 ವರ್ಷಗಳು ತುಂಬುವ ಮೊದಲೇ ಲೈಂಗಿಕ ದೌರ್ಜನ್ಯ, ಅತ್ಯಾಚಾರವನ್ನು ಎದುರಿಸಿರುತ್ತವೆ. ದಕ್ಷಿಣ ಏಷ್ಯಾದಲ್ಲಿ ಭಾರತ, ನೇಪಾಲ ಮತ್ತು ಶ್ರೀಲಂಕಾ ದೇಶಗಳಿಂದ ಸಂಗ್ರಹಿಸಿರುವ ಮಾಹಿತಿಯ ಅನುಸಾರ ಶೇಕಡಾ 12.5ರಷ್ಟು ಮಕ್ಕಳು, ಶೇ. 14.5 ಹೆಣ್ಣುಮಕ್ಕಳು, ಶೇ. 11.5 ಗಂಡುಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿರುತ್ತಾರೆ. ಸಂಖ್ಯೆಗಳ ಲೆಕ್ಕದಲ್ಲಿ ಇದು 5.4 ಕೋಟಿ ಆಗುತ್ತದೆ.

ಲಭ್ಯ ಮಾಹಿತಿಯ ಅನುಸಾರ ಈ ಮೂರೂ ದೇಶಗಳಲ್ಲಿ ಲೈಂಗಿಕ ಸಂತ್ರಸ್ತರ ಪೈಕಿ ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ. ಭಾರತದಲ್ಲಿ ನಡೆಯುತ್ತಿರುವ ಸಾಮಾಜಿಕ-ಲೈಂಗಿಕ ದೌರ್ಜನ್ಯಗಳನ್ನು ಗಮನಿಸುತ್ತಿರುವವರಿಗೆ ಈ ವರದಿಯೇನೂ ಅಚ್ಚರಿ ಮೂಡಿಸುವುದಿಲ್ಲ. 2022ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯಲ್ಲಿ ಭಾರತದಲ್ಲಿ ಪ್ರತಿ ಗಂಟೆಗೆ 51 ಹೆಣ್ಣು ಮಕ್ಕಳು ಅತ್ಯಾಚಾರ, ಲೈಂಗಿಕ ಹಿಂಸೆ, ದೌರ್ಜನ್ಯಗಳಿಗೆ ಒಳಗಾಗುತ್ತಿರುವುದಾಗಿ ದಾಖಲಿಸಲಾಗಿದೆ. 2024ರಲ್ಲಿ ಈ ಪ್ರಮಾಣದಲ್ಲಿ ಯಾವುದೇ ಇಳಿಕೆಯನ್ನೂ ದಾಖಲಿಸಲಾಗಿಲ್ಲ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಈ ಸಂಸ್ಥೆಯಿಂದ ಅಧಿಕೃತ ವರದಿಯೂ ಸಹ ಸಾರ್ವಜನಿಕವಾಗಿ ಪ್ರಕಟವಾಗಿಲ್ಲ.

ಈ ಅಂಕಿ ಸಂಖ್ಯೆಗಳು, ಸಮೀಕ್ಷೆಗಳು ಏನು ಹೇಳುತ್ತವೆಯೋ ಅದು ಅಕ್ಷರಶಃ ಸತ್ಯ ಎಂದು ನಿರೂಪಿಸುವ ಒಂದು ಸಮಾಜವನ್ನು ಡಿಜಿಟಲ್‌ ಭಾರತ ಕಟ್ಟಿಕೊಂಡಿದೆ. ಏಕೆಂದರೆ ಲೈಂಗಿಕ ದೌರ್ಜನ್ಯ ಎಂಬ ಕ್ರೂರ ಅಪರಾಧಿಕ ಕೃತ್ಯ ದೇಶಾದ್ಯಂತ ಯಾವುದೇ ಪ್ರಾಂತೀಯ ವ್ಯತ್ಯಯ, ವ್ಯತ್ಯಾಸಗಳಿಲ್ಲದೆ ನಡೆಯುತ್ತಲೇ ಇವೆ. ಚುನಾಯಿತ ಸರ್ಕಾರಗಳ ಸ್ವರೂಪ, ಸಿದ್ಧಾಂತ, ಆಡಳಿತ ವೈಖರಿ ಮತ್ತು ಕಠಿಣ ಕಾನೂನುಗಳು ಏನೇ ಇದ್ದರೂ ಹೆಣ್ಣು ಮಕ್ಕಳು ಎದುರಿಸುತ್ತಿರುವ ದೌರ್ಜನ್ಯಗಳು ಸಮಾನ ರೂಪದ್ದಾಗಿವೆ. ಆಳ್ವಿಕೆ, ಸಾಂವಿಧಾನಿಕ ಶಾಸನ ಮತ್ತು ಕಠಿಣ ಕಾನೂನುಗಳಿಗೂ ನಮಗೂ ಸಂಬಂಧವೇ ಇಲ್ಲ ಎಂಬ ದಾರ್ಷ್ಟ್ಯವನ್ನು, ಲೈಂಗಿಕ ದೌರ್ಜನ್ಯಗಳನ್ನೆಸಗುವ ಸಮಾಜದಲ್ಲಿ ನೇರವಾಗಿಯೇ ಗುರುತಿಸಬಹುದು.

ಇದು ಏಕಾಏಕಿ ಉದ್ಭವಿಸಿರುವ ಸಾಮಾಜಿಕ ಸಮಸ್ಯೆಯಲ್ಲ ಎನ್ನುವುದು ಸ್ಪಷ್ಟ. ಸಮಾಜದಲ್ಲಿ ಬೇರೂರಿರುವ ಮಹಿಳಾಧೀನತೆಯ ಕಲ್ಪನೆ ಮತ್ತು ದಿನಗಳು ಕಳೆದಂತೆ ಅದನ್ನು ಮತ್ತಷ್ಟು ಗಟ್ಟಿಯಾಗಿಸುತ್ತಿರುವ ಸಾಂಸ್ಕೃತಿಕ ವ್ಯವಸ್ಥೆ, ಹೆಣ್ಣು ಮಕ್ಕಳ ಜಗತ್ತನ್ನು ದೌರ್ಜನ್ಯಕ್ಕೊಳಗಾದ ಸಂತ್ರಸ್ತರ ಪುನರ್ವಸತಿ ಶಿಬಿರವನ್ನಾಗಿಸಿದೆ. ದೌರ್ಜನ್ಯಕ್ಕೊಳಗಾದ ಹೆಣ್ಣು ʼ ಸಂತ್ರಸ್ತೆ ʼ ಎನಿಸಿಕೊಂಡು ನ್ಯಾಯಾಸ್ಥಾನಗಳ ಬಾಗಿಲು ಬಡಿಯುತ್ತಲೇ ಇದ್ದಾಳೆ. ದುರಂತ ಎಂದರೆ ಈ ಸಂತ್ರಸ್ತೆಯರ ಸಾಲು (Queue) ಉದ್ದವಾಗುತ್ತಲೇ ಇದೆ. ಈ ಸಾಲನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ವಯೋಮಿತಿ ಎನ್ನುವುದು ಅಪ್ರಸ್ತುತವಾಗಿ ಕಾಣುತ್ತದೆ. ಅಂತಸ್ತು-ಸ್ಥಾನಮಾನಗಳೂ ಕೆಲವೊಮ್ಮೆ ಮಸುಕಾಗಿಬಿಡುತ್ತವೆ. ಆದಾಗ್ಯೂ NCRB ವರದಿಯಲ್ಲೇ ಹೇಳಿರುವಂತೆ ಅತಿ ಹೆಚ್ಚು ದೌರ್ಜನ್ಯಕ್ಕೊಳಗಾಗುವ ಹೆಣ್ಣು ಮಕ್ಕಳು ದಲಿತ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ.

ಪೂನಾದ ಅಮಾನುಷ ಘಟನೆ
ಇದನ್ನು ಸಾಕ್ಷೀಕರಿಸುವಂತೆ ಮಹಾರಾಷ್ಟ್ರದ ಪುಣೆಯಲ್ಲಿ ಒಂದು ಅಮಾನುಷ ಘಟನೆ ನಡೆದಿದೆ. ಸಮಾಜದ ದುರ್ಬಲ ವರ್ಗಗಳು ಸದಾ ಭೀತಿಯಲ್ಲೇ ಬದುಕುವಂತಹ ದುಸ್ಥಿತಿಯನ್ನು ಡಿಜಿಟಲ್‌ ಭಾರತ ಸೃಷ್ಟಿಸಿರುವುದು ದುರದೃಷ್ಟಕರವಾದರೂ, ಇದು ಭ್ರಮೆ ಅಲ್ಲ ವಾಸ್ತವ ಎನ್ನುವುದನ್ನು ಈ ಘಟನೆ ನಿರೂಪಿಸಿದೆ. ಪುಣೆ ಜಿಲ್ಲೆಯ ಭೋರ್‌ ತಾಲ್ಲೂಕು ಪ್ರಾಂತ್ಯದಲ್ಲಿ 65 ವರ್ಷದ ವ್ಯಕ್ತಿಯೊಬ್ಬ 4 ವರ್ಷದ ಹಸುಳೆಯ ಮೇಲೆ ಅತ್ಯಾಚಾರ ಎಸಗಿ, ಆ ಮಗುವನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವುದು ವರದಿಯಾಗಿದೆ. ತನಗೆ ಏನಾಗುತ್ತಿದೆ ಎಂದು ತಿಳಿಯುವಷ್ಟು ಬುದ್ಧಿಯೂ ಇಲ್ಲದ ನಿರ್ಭಾಗ್ಯ ಹಸುಳೆಯ ಕ್ರೂರ ಹತ್ಯೆ ನರಸಾಪುರದ ಗ್ರಾಮಸ್ಥರನ್ನು ಕೆರಳಿಸಿದ್ದು, ಬಂಧನಕ್ಕೊಳಗಾಗಿರುವ ಆರೋಪಿಗೆ ಉಗ್ರ ಶಿಕ್ಷೆ ವಿಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಮೈಸೂರಿನಲ್ಲಿ 9 ವರ್ಷದ ಬಲೂನು ಮಾರುವ ಅಲೆಮಾರಿ ಸಮುದಾಯದ ಕೂಸು ಹೀಗೆಯೇ ಅತ್ಯಾಚಾರ-ಹತ್ಯೆಗೀಡಾದಾಗ ಸದ್ದೇ ಆಗಲಿಲ್ಲ !!!!

ಈ ಘಟನೆಯನ್ನೇನೂ ಪ್ರತ್ಯೇಕಿಸಿ ನೋಡಿ ಅಥವಾ ಅಪರೂಪ ಎಂದು ಭಾವಿಸಬೇಕಿಲ್ಲ. ಕೆಲವೇ ದಿನಗಳ ಮುನ್ನ ಏಪ್ರಿಲ್‌ 30ರಂದು ಗ್ರೇಟರ್‌ ನೊಯ್ಡಾದಲ್ಲಿ 38 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದರು. ಕಾರಣ ಈ ವ್ಯಕ್ತಿ ತನ್ನ 14 ವರ್ಷದ ಮಲ-ಮಗಳನ್ನು ಹತ್ಯೆ ಮಾಡಿ ಅರಣ್ಯದೊಳಗೆ ಬಿಸಾಡಿದ್ದ. ಈ ಬಾಲಕಿಯೂ ಅತ್ಯಾಚಾರಕ್ಕೊಳಗಾಗಿದ್ದಳು ಎಂದು ಪ್ರಾಥಮಿಕ ವರದಿಗಳಲ್ಲಿ ಹೇಳಲಾಗಿದೆ. ಪೂನಾದ ಘಟನೆಯಲ್ಲಿ ಆರೋಪಿಯು 4 ವರ್ಷದ ಮಗುವನ್ನು ಕರು ತೋರಿಸುತ್ತೇನೆ ಎಂದು ಆಸೆ ಹುಟ್ಟಿಸಿ, ದನದ ಕೊಟ್ಟಿಗೆಯೊಂದಕ್ಕೆ ಕರೆದೊಯ್ದು, ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಆ ಕೂಸಿನ ಮೃತ ದೇಹವನ್ನು ಅಲ್ಲೇ ಇದ್ದ ಸಗಣಿಯಿಂದ ಮುಚ್ಚಿಹಾಕಿ ಪರಾರಿಯಾಗಿದ್ದಾನೆ.

ಸಂತ್ರಸ್ತ ಹಸುಳೆಯ ತಂದೆ ಯಾವುದೇ ರಾಜಕೀಯ ನಾಯಕರು ತನ್ನ ಮನೆಗೆ ಸಂತೈಸಲು ಭೇಟಿ ನೀಡಕೂಡದು ಎಂದು ವಿಡಿಯೋ ಮೂಲಕ ವಿನಂತಿ ಮಾಡಿದ್ದಾರೆ. ತನ್ನ ಮಗುವಿಗೆ ನ್ಯಾಯ ಸಿಗುವವರೆಗೂ, ಆರೋಪಿಗೆ ಮರಣದಂಡನೆಯಾಗುವವರೆಗೂ ಯಾವ ರಾಜಕಾರಣಿಯನ್ನೂ ಭೇಟಿಯಾಗುವುದಿಲ್ಲ ಎಂದೂ ಖಚಿತಪಡಿಸಿದ್ದಾರೆ. ಆರೋಪಿ ವ್ಯಕ್ತಿಯು ಈ ಮುನ್ನ ಎರಡು ಬಾರಿ ಲೈಂಗಿಕ ಅಪರಾಧಗಳ ಆರೋಪ ಎದುರಿಸಿದ್ದರೂ ಶಿಕ್ಷೆಗೊಳಗಾಗಿರಲಿಲ್ಲ ಎನ್ನಲಾಗಿದೆ. 2015ರಲ್ಲಿ ತನ್ನ ಸೋದರ ಸಂಬಂಧಿಯ 17 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದರೂ, ಪ್ರಾಸಿಕ್ಯೂಷನ್‌ ಆರೋಪ ಸಾಬೀತುಪಡಿಸಲು ವಿಫಲವಾದ ಕಾರಣ ಆರೋಪಿಯನ್ನು ಬಿಡುಗಡೆ ಮಾಡಲಾಗಿತ್ತು. 1998ರಲ್ಲಿ ಲೈಂಗಿಕ ಹಲ್ಲೆಯ ಆರೋಪ ಎದುರಿಸಿದ್ದ ಇದೇ ವ್ಯಕ್ತಿಯನ್ನು 2015ರಲ್ಲಿ ಆರೋಪಮುಕ್ತಗೊಳಿಸಲಾಗಿತ್ತು.

ಅಪರಾಧಿಕ ಪ್ರಜ್ಞೆಯ ಸ್ವೇಚ್ಛಾಚಾರ
ಒಂದು ಹೆಣ್ಣು ತನ್ನ ಮೇಲೆ ನಡೆದ ಅತ್ಯಾಚಾರಕ್ಕೆ ಸಾಕ್ಷಿ ನೀಡುವುದೆಂದರೆ ಏನು ? ಮನಸ್ಸಾಕ್ಷಿ ಇರುವ ಸಮಾಜದಲ್ಲಿ ಈ ಪ್ರಶ್ನೆ ಉದ್ಭವಿಸುವುದಿಲ್ಲ. ವಯಸ್ಕರಾದರೆ ಆಕೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎನ್ನುವುದಕ್ಕೆ ಸೂಕ್ತ ಸಾಕ್ಷಿಗಳನ್ನು ಸಿದ್ಧಪಡಿಸಿ ಅಪರಾಧಿಯನ್ನು ರಕ್ಷಿಸಲಾಗುತ್ತದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತೆಯನ್ನೇ ಅನುಮಾನದಿಂದ ನೋಡುವ ಒಂದು ದುಷ್ಟ ಬುದ್ಧಿಯನ್ನೂ ನಮ್ಮ ಸಮಾಜ ರೂಢಿಸಿಕೊಂಡಿದೆ. ಆಕೆಯ ಉಡುಪು, ನಡವಳಿಕೆ, ಓಡಾಡುವ ಸ್ವಾತಂತ್ರ್ಯ, ಕೆಲವೊಮ್ಮೆ ವ್ಯಕ್ತಿತ್ವ ಎಲ್ಲವನ್ನೂ ಪ್ರಶ್ನಿಸುವ ಮನೋಭಾವವನ್ನು ಸುಶಿಕ್ಷಿತ ಸಮಾಜವೂ ಸಹ ಬೆಳೆಸಿಕೊಂಡುಬಂದಿದೆ. ಆದರೆ ಪೂನಾದ ಘಟನೆಯಲ್ಲಿ 4 ವರ್ಷದ ಕೂಸಿನಲ್ಲಿ ಯಾವ ʼ ಸಂಭಾವ್ಯ ದೋಷವನ್ನು ʼ ಗುರುತಿಸಲು ಸಾಧ್ಯ ?

ಇದಕ್ಕೆ ಬಹುಶಃ ನಮ್ಮ ಸಮಾಜ ಉತ್ತರಿಸುವುದಿಲ್ಲ. ಇಲ್ಲಿ ಗಮನಿಸಬೇಕಿರುವುದು ಲೈಂಗಿಕ ದೌರ್ಜನ್ಯ ಎಸಗುವ ಮತ್ತು ಕ್ರೂರವಾಗಿ ಹತ್ಯೆ ಮಾಡುವ ದುಷ್ಟ ವ್ಯಕ್ತಿಗಳಲ್ಲಿ ಇರಬಹುದಾದ ಧೈರ್ಯ ಅಥವಾ ವಿಶ್ವಾಸವನ್ನು. ಬಾಹ್ಯ ಸಮಾಜದಲ್ಲಿ ಆಧುನಿಕ ಭಾರತ ಸ್ಪಷ್ಟವಾಗಿ ನಿರೂಪಿಸಿರುವ ಒಂದು ವಾಸ್ತವ ಎಂದರೆ, ಅತ್ಯಾಚಾರ ಎಸಗುವ ವ್ಯಕ್ತಿಯನ್ನು ರಕ್ಷಿಸುವಂತಹ ಒಂದು ಸಾಮಾಜಿಕ-ರಾಜಕೀಯ ವಾತಾವರಣ (Socio-political Ecosystem) ಇಲ್ಲಿ ಸದಾ ಸಕ್ರಿಯವಾಗಿಯೂ, ಕ್ರಿಯಾಶೀಲವಾಗಿಯೂ ಇರುತ್ತದೆ. ಹಣಬಲ, ತೋಳ್ಬಲ, ರಾಜಕೀಯ ಬೆಂಬಲ ಮತ್ತು ಅಧಿಕಾರ ರಾಜಕಾರಣದ ರಕ್ಷಾ ಕವಚ ಇಷ್ಟಿದ್ದರೆ, ಅತ್ಯಾಚಾರಕ್ಕೊಳಗಾದ ಹೆಣ್ಣು ಮಕ್ಕಳೇ ಅಪರಾಧಿಗಳಾಗಿಬಿಡುತ್ತಾರೆ.

ಇದರ ಒಂದು ಪ್ರಾತ್ಯಕ್ಷಿಕೆಯನ್ನು ವಿನೇಶ್‌ ಪೋಗಟ್‌ ಮತ್ತು ಆಕೆಯ ಸಹ ಕುಸ್ತಿಪಟುಗಳು ಎದುರಿಸಿದ ಪ್ರಕರಣದಲ್ಲಿ ಕಾಣಬಹುದು. ಭಾರತೀಯ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ , ಬಿಜೆಪಿ ನಾಯಕ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ನಿಂದ ಲೈಂಗಿಕ ಕಿರುಕುಳ ಎದುರಿಸಿದ ಆರು ಮಹಿಳಾ ಕುಸ್ತಿಪಟುಗಳ ಪೈಕಿ ತಾವೂ ಒಬ್ಬರು ಎಂದು ವಿನೇಶ್‌ ಪೋಗಟ್‌ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಈಗ ಬ್ರಿಜ್‌ ಭೂಷಣ್‌ ತವರೂರು ಗೋಂಡಾದಲ್ಲೇ ಕುಸ್ತಿ ಫೆಡರೇಷನ್‌ ಶ್ರೇಣಿಯನ್ನು ನಿರ್ಧರಿಸುವ ಪಂದ್ಯಾವಳಿ ನಡೆಯುತ್ತಿರುವುದರಿಂದ, ತನಗೆ ಸೂಕ್ತ ರಕ್ಷಣೆ ಒದಗಿಸುವಂತೆ ವಿನೇಶ್‌ ಪೋಗಟ್‌ ಕೋರಿದ್ದಾರೆ. ಒಲಂಪಿಕ್ಸ್‌ ಪದಕ ವಿಜೇತರಾದ ಮಹಿಳಾ ಕುಸ್ತಿಪಟುಗಳ ಸತತ ಹೋರಾಟದ ಹೊರತಾಗಿಯು ಆರೋಪಿ ಬ್ರಿಜ್‌ ಭೂಷಣ್‌ ಮುಕ್ತವಾಗಿರುವುದು ನೆಲದ ವಾಸ್ತವವನ್ನು (Ground reality) ಎತ್ತಿ ತೋರಿಸುತ್ತದೆ.

ಅಪರಾಧ ಶಿಕ್ಷೆ ಮತ್ತು ನ್ಯಾಯವ್ಯವಸ್ಥೆ
ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗುವ, ಅತ್ಯಾಚಾರ-ಹತ್ಯೆ ಮಾಡುವ, ಕಿರುಕುಳ ನೀಡುವ ಪುರುಷರಿಗೆ ಕಠಿಣ ಕಾನೂನುಗಳ ಅರಿವು ಇರಲೇಬೇಕೆಂದಿಲ್ಲ. ಏಕೆಂದರೆ ಹಲವು ಪ್ರಕರಣಗಳಲ್ಲಿ ಅನಕ್ಷರಸ್ಥ ವಲಸೆ ಕಾರ್ಮಿಕರೂ ಸಹ ಇಂತಹ ದುಷ್ಕೃತ್ಯಗಳಿಗೆ ಕಾರಣರಾಗಿರುತ್ತಾರೆ. ಒಂದು ವೇಳೆ ಕಾನೂನುಗಳ ಪರಿವೆ ಇದ್ದರೂ ಸಹ, ತಮಗೆ ಶಿಕ್ಷೆಯಾಗುವುದಿಲ್ಲ ಎಂಬ ಮನೋಭಾವವೂ ವಿಕೃತ ಕಾಮಿಗಳಲ್ಲಿ ಇರುತ್ತದೆ. ಏಕೆಂದರೆ ಭಾರತದಲ್ಲಿ ಅತ್ಯಾಚಾರ ಆರೋಪಿಗಳ ಶಿಕ್ಷೆಯ ಪ್ರಮಾಣ ಕಡಿಮೆ ಇದೆ. . 2022ರ NCRB ವರದಿಯ ಅನುಸಾರ 2018 ರಿಂದ 2022ರ ಅವಧಿಯಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಶೇಕಡಾ 27ರಷ್ಟಿದೆ . ತ್ವರಿತ ಗತಿಯ ನ್ಯಾಯಾಲಯಗಳು ಸಕ್ರಿಯವಾಗಿದ್ದರೂ ಸಹ, ಸಾಕ್ಷಿ, ಪುರಾವೆ ಮತ್ತು ಸಂತ್ರಸ್ತ ಕುಟುಂಬಗಳ ಅಸಹಾಯಕ ಪರಿಸ್ಥಿತಿಗಳು ಶಿಕ್ಷೆಯ ಪ್ರಮಾಣ ಕುಸಿಯುವುದಕ್ಕೆ ಕಾರಣವಾಗುತ್ತವೆ.

ಮತ್ತೊಂದೆಡೆ ಅತ್ಯಾಚಾರ-ಕೊಲೆ ಆರೋಪವನ್ನು ಎದುರಿಸಿ, ಶಿಕ್ಷೆಗೊಳಗಾಗಿ ಸೆರೆವಾಸದಲ್ಲಿರುವವರನ್ನೂ ಸಂಸ್ಕಾರವಂತರು ಎಂದು ಬಿಡುಗಡೆ ಮಾಡುವ ಚುನಾಯಿತ ಸರ್ಕಾರಗಳು ನಮ್ಮ ನಡುವೆ ಇದೆ. ನ್ಯಾಯಾಲಯದ ಕೃಪೆ ಈ ಅಪರಾಧಿಗಳು ಪುನಃ ಜೈಲುಪಾಲಾಗಿದ್ದಾರೆ. ಆದರೆ ಈ ಪ್ರಕರಣದ ಸಂತ್ರಸ್ತೆ ಬಿಲ್ಕಿಸ್‌ ಬಾನು ತಮ್ಮ ಮೇಲೆ ಅತ್ಯಾಚಾರ ಎಸಗಿ, ಮಗುವನ್ನು ಕೊಂದ ದುಷ್ಟರನ್ನು ಸಾರ್ವಜನಿಕವಾಗಿ ಸನ್ಮಾನಿಸಿದ ಪ್ರಸಂಗಕ್ಕೆ ಸಾಕ್ಷಿಯಾಗಿರುವುದು ವರ್ತಮಾನ ಭಾರತದ ಅತಿದೊಡ್ಡ ವ್ಯಂಗ್ಯ ಅಲ್ಲವೇ. ಆದರೆ ಇದು ವಾಸ್ತವ. ಉನ್ನಾವೋ ಪ್ರಕರಣದ ಆರೋಪಿ ಮುಕ್ತವಾಗಿ ಓಡಾಡಿಕೊಂಡಿರುವುದು ಈ ದುರಂತದ ಮತ್ತೊಂದು ಆಯಾಮ. ಕರ್ನಾಟಕದಲ್ಲಿ ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಯೊಬ್ಬರ ವಿರುದ್ದ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿರುವುದು ಮೂರನೆ ಆಯಾಮ.

ಈ ಬೆಳವಣಿಗೆಗಳು ಏನನ್ನು ಸೂಚಿಸುತ್ತವೆ ? ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಹೆಣ್ಣನ್ನು ಪೊಲೀಸರೇ ನಡುರಾತ್ರಿಯಲ್ಲಿ ಸುಟ್ಟುಹಾಕುವ ಹಾಥ್ರಸ್‌ ಪ್ರಕರಣ, 2019ರ ಡಿಸೆಂಬರ್‌ 6ರಂದು ಹೈದರಾಬಾದ್‌ ನಗರದಲ್ಲಿ 27 ವರ್ಷದ ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್ಕೌಂಟರ್‌ನಲ್ಲಿ ಸಾಯಿಸಿದ ಪ್ರಕರಣ, ಉತ್ತರ ಪ್ರದೇಶದ ಉನ್ನಾವೋ ಪ್ರಕರಣ ಇವೆಲ್ಲವೂ ಸಹ ಅತ್ಯಾಚಾರಿಗಳನ್ನು ರಕ್ಷಿಸುವ ಅಥವಾ ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳಿಗೆ ನ್ಯಾಯವಂಚನೆ ಮಾಡುವ ಘಟನೆಗಳಾಗಿಯೇ ಕಾಣುತ್ತವೆ. ಈ ಘಟನೆಗಳ ಬಗ್ಗೆ ಅರಿವಿರುವ ಹೆಣ್ಣು ಮಕ್ಕಳು, ಬದುಕುಳಿದಿದ್ದರೂ ತಮ್ಮ ಮೇಲೆ ನಡೆಯುವ ದೌರ್ಜನ್ಯಗಳನ್ನು ವರದಿ ಮಾಡಲು ಹಿಂಜರಿಯುವ ಸಾಧ್ಯತೆಗಳಿವೆ. ಏಕೆಂದರೆ ನ್ಯಾಯ ಮರೀಚಿಕೆ ಎಂಬ ಭಾವನೆ ದಟ್ಟವಾಗಿರುತ್ತದೆ.

ಡಿಜಿಟಲ್‌ ಯುಗದ ವಾಸ್ತವಗಳು
ಡಿಜಿಟಲ್‌ ಯುಗದಲ್ಲಿ ಅನಕ್ಷರಸ್ಥರಿಗೂ ವಿಶ್ವದ ಎಲ್ಲ ಸುದ್ದಿಗಳೂ ಅಂಗೈನಲ್ಲೇ ಸಿಗುವುದರಿಂದ, ಅತ್ಯಾಚಾರ ಎಸಗುವ ವ್ಯಕ್ತಿಗೂ ಇಂತಹ ಘಟನೆಗಳ ಅರಿವು ಇರಲು ಸಾಧ್ಯ. ಒಂದೆಡೆ ತನ್ನ ಸಮರ್ಥನೆಗೆ, ಬೆಂಬಲಕ್ಕೆ ಬರುವ ಬಲಾಢ್ಯ ಜಾತಿ ಸಮುದಾಯ, ರಾಜಕೀಯ ಪಕ್ಷಗಳು ಅತ್ಯಾಚಾರಿಗಳಲ್ಲಿ ನಿರ್ಭೀತಿಯ ಮನಸ್ಥಿತಿಗೆ ಕಾರಣವಾಗುತ್ತವೆ. ಮತ್ತೊಂದೆಡೆ ಹಣಬಲ, ತೋಳ್ಬಲ, ರಾಜಕೀಯ ಬಲ ಇದ್ದರೆ ಗೆದ್ದು ಬೀಗಬಹುದು ಎಂಬ ಅಹಂಕಾರವೂ ಸಹ ಇಂತಹ ದುಷ್ಟರಲ್ಲಿ ಇರುತ್ತದೆ. ಹೆಣ್ಣಿನ ವಯಸ್ಸು ಎಷ್ಟೇ ಇರಲಿ ಅತ್ಯಾಚಾರ ಎಸಗುವ ವ್ಯಕ್ತಿ ಅಮಾಯಕನಂತೂ ಆಗಿರಲಾರ. ಅವನೊಳಗಿನ ಕಾಮತೃಷೆ ದುಷ್ಟ ಕೃತ್ಯಕ್ಕೆ ಒಂದು ಕಾರಣವಾಗಿರಬಹುದಷ್ಟೇ.

ಪೂನಾದ ಘಟನೆಯಲ್ಲಿ ನಾಲ್ಕು ವರ್ಷದ ಕೂಸು ಅತ್ಯಾಚಾರಕ್ಕೊಳಗಾಗಿರುವುದು ಈ ಪುರುಷಾಹಮಿಕೆಯ ಕಾಮತೃಷೆಗೆ. 2018ರಲ್ಲಿ ಕಾಶ್ಮೀರದಲ್ಲಿ 8 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಘಟನೆ ಇನ್ನೂ ಹಸಿರಾಗಿದೆ. ಈ ಘಟನೆಯಲ್ಲಿ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯಾಗಿದ್ದರೂ, ಈ ದುಷ್ಟರ ಪರವಾಗಿ ಸಾರ್ವಜನಿಕ ಪ್ರತಿಭಟನೆ ನಡೆಸಿದ ರಾಜಕೀಯ ನಾಯಕರಿಗೆ ಚುನಾವಣೆಗಳಲ್ಲಿ ಮತದಾರರೂ ಶಿಕ್ಷೆ ನೀಡಲಿಲ್ಲ. ಬಿಲ್ಕಿಸ್‌ ಬಾನು ಪ್ರಕರಣದಲ್ಲಿ ಅಪರಾಧಿಗಳನ್ನು ಪುನಃ ಜೈಲಿಗೆ ಕಳುಹಿಸಲಾದರೂ, ಅವರನ್ನು ಸನ್ಮಾನಿಸಿದ ರಾಜಕೀಯ ನಾಯಕರಿಗೆ ಬಿಜೆಪಿಯ ಹೈಕಮಾಂಡ್‌ ಸಹ ಶಿಕ್ಷೆ ನೀಡಲಿಲ್ಲ. ಇದು ಡಿಜಿಟಲ್‌ ಭಾರತದ ರಾಜಕೀಯ ನೈತಿಕತೆಯನ್ನು ಸಂಕೇತಿಸುತ್ತದೆ.

ಪ್ರಜಾಸತ್ತಾತ್ಮಕ ಸುಧಾರಣೆಗಳ ಸಂಘ (ADR) ವರದಿಯ ಅನುಸಾರ 16 ಸಂಸದರು ಮತ್ತು 135 ಶಾಸಕರು ಮಹಿಳಾ ದೌರ್ಜನ್ಯದ ಆರೋಪ ಎದುರಿಸುತ್ತಿದ್ದಾರೆ. ಇವರ ಪೈಕಿ ಇಬ್ಬರು ಸಂಸದರು, 14 ಶಾಸಕರು ಅತ್ಯಾಚಾರದ ಆರೋಪ ಎದುರಿಸುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಈ ಪ್ರಮಾಣ ಇನ್ನೂ ಹತ್ತು ಪಟ್ಟು ಹೆಚ್ಚಾಗಿರಬಹುದು. ಆದರೆ ಚುನಾವಣೆಗಳಲ್ಲಿ ಸ್ಪರ್ಧಿಸಲು, ಗೆಲ್ಲಲು ಈ ಗಂಭೀರ ಆರೋಪಗಳು ಅಡ್ಡಿಯಾಗುವುದಿಲ್ಲ. ʼ ಲೈಂಗಿಕ ಅಪರಾಧ ʼ ಅಭ್ಯರ್ಥಿ ಆಯ್ಕೆಯ ಮಾನದಂಡವೂ ಆಗುವುದಿಲ್ಲ. ಯಾವುದೇ ರಾಜಕೀಯ ಪಕ್ಷಗಳು ಈ ಕುರಿತು ಗಂಭೀರ ಆಲೋಚನೆಯನ್ನೂ ಮಾಡಿಲ್ಲ. ಇದು ನವ ಭಾರತದ ದುರಂತ ಅಲ್ಲವೇ ?

ಈ ವಾತಾವರಣದಲ್ಲೇ (Ecosystem) ಭಾರತದ ಹೆಣ್ಣು ಮಕ್ಕಳು ನಿತ್ಯ ಶೋಷಣೆ, ನಿತ್ಯ ದೌರ್ಜನ್ಯ ಎದುರಿಸುತ್ತಿದ್ದಾರೆ. ಲಕ್ಷಾಂತರ ಪ್ರಕರಣಗಳು ದಾಖಲಾಗುತ್ತಲೇ ಇವೆ. ವರ್ಷದಿಂದ ವರ್ಷಕ್ಕೆ ಮಹಿಳಾ ದೌರ್ಜನ್ಯಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸರ್ಕಾರಗಳಿಗೆ ಇದು ಕಾನೂನು ಸುವ್ಯವಸ್ಥೆಯ ಪ್ರಶ್ನೆಯಾಗಿ ಕಾಣುತ್ತದೆ, ರಾಜಕೀಯ ಪಕ್ಷಗಳಿಗೆ ಅಸ್ಮಿತೆಯ ಆಧಾರದಲ್ಲಿ ಚುನಾವಣಾ ಲಾಭ ನಷ್ಟದ ಪ್ರಶ್ನೆಯಾಗುತ್ತದೆ. ಹಿತವಲಯದ ಸುಶಿಕ್ಷಿತ ಸಮಾಜಕ್ಕೆ ಇದು ಸ್ವಾಭಾವಿಕವಾಗಿ ನಡೆಯುವ ಘಟನೆಗಳಾಗಿ ಕಾಣುತ್ತವೆ. ಸಂತ್ರಸ್ತ ಹೆಣ್ಣು ಮಕ್ಕಳು, ಅವರ ಪೋಷಕರು ಈ ಎಲ್ಲ ಗೋಡೆಗಳನ್ನೂ ದಾಟಿ ಅಂತಿಮ ನ್ಯಾಯದ ಕನಸು ಕಾಣುತ್ತಾ ಕಾಲ ಕಳೆಯಬೇಕಿದೆ.

ಈ ನಡುವೆ ಪೂನಾದಂತಹ ಘಟನೆಗಳು ನಡೆಯುತ್ತಲೇ ಹೋಗುತ್ತವೆ. ಸುದ್ದಿಯಲ್ಲಿ ಸುದ್ದಿಯಾಗಿ ಪ್ರಜ್ಞಾವಂತ ಮನಸ್ಸುಗಳನ್ನು ಪ್ರಕ್ಷುಬ್ಧಗೊಳಿಸುತ್ತಿರುತ್ತವೆ. ಅಂತಿಮ ಪರಿಹಾರ ಎಲ್ಲಿದೆ ? ಯೋಚಿಸಬೇಕಿದೆ.
-೦-೦-೦-೦-

Tags: #FeminismCivilizationValuesCulturalConflictequalityGenderIssuesHumanValuesSocialChangeTraditionVsModernityWomenempowermentWomenInSociety
Previous Post

ರಾಹುಲ್ ಸಲಹೆ ಕೈಬಿಟ್ಟದ್ದೇ ಕಾಂಗ್ರೆಸ್‌ಗೆ ಹಿನ್ನಡೆ? ತಮಿಳುನಾಡು ಫಲಿತಾಂಶದ ಸುತ್ತ ಹೊಸ ಚರ್ಚೆ

Next Post

ವಿಜಯ್‌ ಗೆಲುವನ್ನು MGR ರೀತಿ ಹೋಲಿಸಬಹುದು : ಸಮೀಕ್ಷೆಗಳು ಉಲ್ಟಾ ಹೊಡೆದಿದ್ದೇಕೆ..?

Related Posts

ಪ್ರಕೃತಿ ವಿಕೋಪದ ಎಚ್ಚರಿಕೆ ನೀಡಿದ ಕೋಡಿಶ್ರೀ ನುಡಿದ ಭವಿಷ್ಯವೇನು ?
Uncategorized

ಪ್ರಕೃತಿ ವಿಕೋಪದ ಎಚ್ಚರಿಕೆ ನೀಡಿದ ಕೋಡಿಶ್ರೀ ನುಡಿದ ಭವಿಷ್ಯವೇನು ?

by ಪ್ರತಿಧ್ವನಿ
May 13, 2026
0

ಶಿವಮೊಗ್ಗ: ಸಾಗರ ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Dr. Shivananda Shivayogi Rajendra Swamiji( ಅವರು ಪ್ರಕೃತಿ...

Read moreDetails
ಹೈದ್ರಾಬಾದ್‌ ವಿರುದ್ಧ ರಣರೋಚಕ ಪಂದ್ಯ ಗೆದ್ದ ಗುಜರಾತ್‌ : SRH ಗಳಿಸಿರುವ ಸ್ಕೋರ್‌ ಎಷ್ಟು..?

ಹೈದ್ರಾಬಾದ್‌ ವಿರುದ್ಧ ರಣರೋಚಕ ಪಂದ್ಯ ಗೆದ್ದ ಗುಜರಾತ್‌ : SRH ಗಳಿಸಿರುವ ಸ್ಕೋರ್‌ ಎಷ್ಟು..?

May 12, 2026
ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಶೇ.1.5 ತುಟ್ಟಿಭತ್ಯೆ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಶೇ.1.5 ತುಟ್ಟಿಭತ್ಯೆ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್

May 12, 2026
ವಿಜಯ್ ಪ್ರಮಾಣವಚನ ಬಳಿಕ ಸಿದ್ದರಾಮಯ್ಯ ಫೋನ್ ಕಾಲ್; ಹೇಳಿದ್ದೇನು

ವಿಜಯ್ ಪ್ರಮಾಣವಚನ ಬಳಿಕ ಸಿದ್ದರಾಮಯ್ಯ ಫೋನ್ ಕಾಲ್; ಹೇಳಿದ್ದೇನು

May 11, 2026
ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಬೆಂಗಳೂರಿನಲ್ಲಿ ಟ್ರಾಫಿಕ್ ಬದಲಾವಣೆ: ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

ಕಾಂಗ್ರೆಸ್ ನಲ್ಲಿ ವಿವಾದ: ಮಹಿಳಾ ಶಾಸಕಿ ಜೊತೆ ನಾಯಕನ ವರ್ತನೆಗೆ ಆಕ್ರೋಶ

May 9, 2026
Next Post
ವಿಜಯ್‌ ಗೆಲುವನ್ನು MGR ರೀತಿ ಹೋಲಿಸಬಹುದು : ಸಮೀಕ್ಷೆಗಳು ಉಲ್ಟಾ ಹೊಡೆದಿದ್ದೇಕೆ..?

ವಿಜಯ್‌ ಗೆಲುವನ್ನು MGR ರೀತಿ ಹೋಲಿಸಬಹುದು : ಸಮೀಕ್ಷೆಗಳು ಉಲ್ಟಾ ಹೊಡೆದಿದ್ದೇಕೆ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada