ವೆಸ್ಟ್ ಬೆಂಗಾಲ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ ಸುಮಾರು 77 ಇವಿಎಂ ಯಂತ್ರಗಳಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ವಿವಾದಿತ ಮತಗಟ್ಟೆಗಳಲ್ಲಿ ಮರುಮತದಾನ ನಡೆಸುವ ಕುರಿತು ಚುನಾವಣಾ ಆಯೋಗ ಪರಿಶೀಲನೆ ಆರಂಭಿಸಿದೆ.

ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಫಾಲ್ಟಾ ವಿಧಾನಸಭಾ ಕ್ಷೇತ್ರ ಸೇರಿದಂತೆ ಹಲವೆಡೆ ಮತದಾನಕ್ಕೆ ಅಡ್ಡಿಪಡಿಸಲು ವಿಲಕ್ಷಣ ತಂತ್ರಗಳನ್ನು ಬಳಸಲಾಗಿದೆ ಎಂದು ದೂರಲಾಗಿದೆ. ಕೆಲವು ಇವಿಎಂ ಯಂತ್ರಗಳಲ್ಲಿ ನಿರ್ದಿಷ್ಟ ಅಭ್ಯರ್ಥಿಗಳ ಬಟನ್‌ಗಳ ಮೇಲೆ ಕಪ್ಪು ಟೇಪ್ ಹಾಗೂ ಸೆಲೋಫೇನ್ ಟೇಪ್ ಅಂಟಿಸಿರುವುದಾಗಿ, ಇನ್ನೂ ಕೆಲವು ಕಡೆ ಬಟನ್‌ಗಳ ಮೇಲೆ ಸುಗಂಧ ದ್ರವ್ಯ ಹಚ್ಚಿರುವುದಾಗಿ ಆರೋಪಿಸಲಾಗಿದೆ.

ಈ ತಂತ್ರದ ಹಿಂದೆ ಮತದಾನದ ರಹಸ್ಯವನ್ನು ಭಂಗಪಡಿಸುವ ಉದ್ದೇಶವಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮತದಾರರು ಬಟನ್ ಒತ್ತಿದ ಬಳಿಕ ಅವರ ಬೆರಳಿಗೆ ಅಂಟಿದ ವಾಸನೆ ಮೂಲಕ ಅವರು ಯಾರಿಗೆ ಮತ ಹಾಕಿದ್ದಾರೆ ಎಂಬುದನ್ನು ಪತ್ತೆಹಚ್ಚಿ, ನಂತರ ಬೆದರಿಕೆ ಹಾಕಲು ಈ ವಿಧಾನ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ.ಇದೇ ವೇಳೆ ಫಾಲ್ಟಾ ಕ್ಷೇತ್ರದಲ್ಲಿ ಪೊಲೀಸ್ ವೀಕ್ಷಕ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಹಾಗೂ All India Trinamool Congress ಅಭ್ಯರ್ಥಿ ಜಹಾಂಗೀರ್ ಖಾನ್ ನಡುವೆ ಮಾತಿನ ಚಕಮಕಿ ನಡೆದಿದ್ದು, “ನೀವು ಸಿಂಗಮ್ ಆಗಿರಬಹುದು, ನಾನು ಪುಷ್ಪ” ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಸಿಸಿಟಿವಿ ದೃಶ್ಯಗಳು ಹಾಗೂ ಪ್ರಿಸೈಡಿಂಗ್ ಅಧಿಕಾರಿಗಳ ವರದಿಗಳನ್ನು ಪರಿಶೀಲಿಸುತ್ತಿದ್ದಾರೆ. ಫಾಲ್ಟಾ ಕ್ಷೇತ್ರದಲ್ಲೇ 32 ಮತಗಟ್ಟೆಗಳ ಬಗ್ಗೆ ದೂರು ಬಂದಿದ್ದು, ಸುಮಾರು 20 ಕಡೆ ಮರುಮತದಾನ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಮೇ 4ರಂದು ಫಲಿತಾಂಶ ಪ್ರಕಟವಾಗಲಿರುವುದರಿಂದ, ಮೇ 2ರೊಳಗೆ ಮರುಮತದಾನ ಪ್ರಕ್ರಿಯೆ ಪೂರ್ಣಗೊಳಿಸಲು ಆಯೋಗ ಸಿದ್ಧತೆ ನಡೆಸಿದೆ. ಡೈಮಂಡ್ ಹಾರ್ಬರ್ ಕ್ಷೇತ್ರವು ಅಭಿಷೇಕ ಅವರ ಪ್ರಭಾವ ಪ್ರದೇಶವಾಗಿರುವುದರಿಂದ, ಈ ಬೆಳವಣಿಗೆ ರಾಜಕೀಯವಾಗಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.






