ರಾಯಚೂರು ತಾಲೂಕಿನ ಬಿಚ್ಚಾಲಿ ಗ್ರಾಮದಲ್ಲಿರುವ ಮಂತ್ರಾಲಯ ರಾಯರ ಜಪದ ಕಟ್ಟೆ ಸಮೀಪದ ಭೂ ವಿವಾದ ತೀವ್ರಗೊಂಡಿದ್ದು, ಸರ್ವೆ ವೇಳೆ ಗಲಾಟೆ ನಡೆದ ಘಟನೆ ನಡೆದಿದೆ.ಸರ್ಕಾರದ ಆದೇಶದನ್ವಯ ಇಂದು ಅಧಿಕಾರಿಗಳು ಭೂ ಸರ್ವೆ ಕಾರ್ಯಕ್ಕೆ ಮುಂದಾದಾಗ, ಸ್ಥಳೀಯರು ಮತ್ತು ಸಾಗುವಳಿದಾರರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ತಳ್ಳಾಟ-ನೂಕಾಟ ಉಂಟಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿತು. ಕೆಲವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಕೆಲವರನ್ನು ವಶಕ್ಕೆ ಪಡೆದರು. ಬಳಿಕ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಸರ್ವೆ ಕಾರ್ಯ ಮುಂದುವರಿಸಲಾಯಿತು.

ಬಿಚ್ಚಾಲಿ ಗ್ರಾಮದಲ್ಲಿ ಮಂತ್ರಾಲಯ ರಾಯರು ತಪಸ್ಸು ಮಾಡಿದ ಜಪದ ಕಟ್ಟೆ ಇದ್ದು, ಈ ಸ್ಥಳಕ್ಕೆ ಭಕ್ತರು ನಿತ್ಯ ಆಗಮಿಸುತ್ತಾರೆ. ಈ ಜಪದ ಕಟ್ಟೆಗೆ ಹೊಂದಿಕೊಂಡಿರುವ 2.33 ಎಕರೆ ಜಮೀನನ್ನು ರಾಜ್ಯ ಸರ್ಕಾರ ರಾಘವೇಂದ್ರ ಮಠ ನಂಜನಗೂಡು ಹಾಗೂ ಮಂತ್ರಾಲಯ ಕ್ಯಾಂಪ್ ಮಠಕ್ಕೆ ಮಂಜೂರು ಮಾಡಿತ್ತು. ಆದರೆ ಈ ಜಮೀನಿನ ಕೆಲವು ಭಾಗವನ್ನು ಸ್ಥಳೀಯರು ಸಾಗುವಳಿ ಮಾಡುತ್ತಿರುವ ಹಿನ್ನೆಲೆ ವಿವಾದ ಉಂಟಾಗಿದೆ.ಈ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವುದರಿಂದ, ಸರ್ಕಾರದ ಆದೇಶದಂತೆ ಭೂ ಗಡಿ ಗುರುತಿಸಿ ಹಸ್ತಾಂತರ ಪ್ರಕ್ರಿಯೆ ಆರಂಭಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಸರ್ಕಾರದ ಮಂಜೂರಾತಿ ಪ್ರಕಾರ ಸರ್ವೆ ನಡೆಯುತ್ತಿದ್ದು, ಅತಿಕ್ರಮಣ ಇದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. 2022ರಲ್ಲಿ ಕರ್ನಾಟಕ ಸರ್ಕಾರ ರಾಘವೇಂದ್ರ ಸ್ವಾಮಿ ಮಠ ನಂಜನಗೂಡು ಹಾಗೂ ಮಂತ್ರಾಲಯ ಕ್ಯಾಂಪ್ ಆಫೀಸ್ಗೆ ಭೂ ಮಂಜೂರು ಮಾಡಿದೆ. ಸರ್ಕಾರದ ಮಂಜೂರಾತಿ ಆದೇಶದನ್ವಯ ಗಡಿ ಗುರುತಿಸಿ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆದಿದೆ. ಈ ಸರ್ವೆ ಜಪದ ಕಟ್ಟೆಗೆಬರಲ್ಲ ಎಂದಿದ್ದಾರೆ.ಸದ್ಯ ಸರ್ವೆ ಕಾರ್ಯ ಮುಂದುವರಿದಿದ್ದು, ಭೂ ವಿವಾದದ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿಯೇ ಉಳಿದಿದೆ.






