ಬೆಂಗಳೂರು : ಪಕ್ಷದ ಶಾಸಕರು ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ಅನವಶ್ಯಕವಾಗಿ ಏನೇನೋ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು” ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗಿಂದು ಪ್ರತಿಕ್ರಿಯಿಸಿ, ಪಕ್ಷದ ಶಿಸ್ತನ್ನು ಎಲ್ಲಾ ಶಾಸಕರು ಕಾಪಾಡಬೇಕು. ಪಕ್ಷಕ್ಕೆ ಗೌರವ ನೀಡಬೇಕು. ಮಾಧ್ಯಮಗಳ ಮುಂದೆ ಪಕ್ಷದ ಗೌರವವನ್ನು ಹಾಳು ಮಾಡಬಾರದು. ಮುಖ್ಯಮಂತ್ರಿಗಳೂ ಸಹ ಈಗಾಗಲೇ ಈ ವಿಚಾರದ ಬಗ್ಗೆ ಹೇಳಿದ್ದಾರೆ. ಮುಂದಕ್ಕೆ ಎಲ್ಲರ ಭವಿಷ್ಯ ಪಕ್ಷದಲ್ಲಿದೆಯೇ ಹೊರತು ಮಾಧ್ಯಮಗಳಲ್ಲಿ ಇಲ್ಲ ಎಂದು ದೆಹಲಿಗೆ ತೆರಳಿರುವ ಶಾಸಕರಿಗೆ ತಾಕೀತು ಮಾಡಿದ್ದಾರೆ.
ಇದನ್ನೂ ಓದಿ : ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್ ಮೇಲೆ ಇಸ್ರೇಲ್ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?
ಶಾಸಕರು ದೆಹಲಿಗೆ ತೆರಳುವ ಮುಂಚೆ ನಿಮ್ಮ ಬಳಿ ಒಂದಷ್ಟು ಜನ ಚರ್ಚೆ ಮಾಡಿದ್ದಾರೆ. ಹೈಕಮಾಂಡ್ ಬಳಿ ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಮೊದಲ ಹಾಗೂ ಎರಡನೇ ಬಾರಿ ಗೆದ್ದಿರುವವರೂ ಮಂತ್ರಿಗಳಾಗಬಹುದು. ಈ ಹಿಂದೆ ಈ ರೀತಿ ನಡೆದಿದೆ. ಆದರೆ ಇದು ಸಮಯವಲ್ಲ. ಇನ್ನೂ ಚುನಾವಣೆಗಳು ನಡೆಯುತ್ತಿವೆ. ಒಂದಷ್ಟು ಜನ ತಮಿಳುನಾಡಿಗೆ ತೆರಳಿದ್ದಾರೆ. ಮೊದಲು ಚುನಾವಣೆ ಆಗಲಿ, ಆನಂತರ ಇದರ ಬಗ್ಗೆ ಯೋಚಿಸೋಣ ಎಂದು ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ವತಿಯಿಂದ ತಮಿಳುನಾಡಿಗೆ ತೆರಳುವಂತೆ ಸೂಚನೆ ನೀಡಿದ್ದರು. ಅಲ್ಲಿಗೆ ಹೋಗಿ ಬಂದಿದ್ದೇನೆ. ಮತ್ತೆ ತೆರಳಬೇಕಾಗಿದೆ. ಆ ಬಗ್ಗೆ ಎಐಸಿಸಿ ಅಧ್ಯಕ್ಷರಿಗೆ ವರದಿ ನೀಡಬೇಕಿತ್ತು. ಭೇಟಿ ಮಾಡಿ ವರದಿ ಮಾಡಿದ್ದೇನೆ ಎಂದು ಖರ್ಗೆ ಭೇಟಿಯ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದಾರೆ.






