ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು..
ಡಾ. ಬಿ.ಆರ್. ಅಂಬೇಡ್ಕರ್ ಮತ್ತೊಮ್ಮೆ ವಾರ್ಷಿಕ ಆಚರಣೆಗಳ ಕೇಂದ್ರ ಬಿಂದುವಾಗಿ ಸಾರ್ವಜನಿಕರ ನಡುವೆ ಕಾಣಿಸಿಕೊಳ್ಳಲಿದ್ದಾರೆ. ತಾನು ದೇಶದ ಅಭ್ಯುದಯಕ್ಕಾಗಿ ರೂಪಿಸಿಕೊಟ್ಟ ಸಂವಿಧಾನ ಮತ್ತು ಅದರೊಳಗಿನ ಆಶಯಗಳು ನಿಧಾನವಾಗಿ ಆವಿಯಾಗುತ್ತಿರುವುದನ್ನು ನೋಡಲು ಬರುತ್ತಿದ್ದಾರೋ ಅಥವಾ ತನ್ನ ಅನುಯಾಯಿಗಳು (ಈಗ ಭಕ್ತಾದಿಗಳೂ ಕಾಣುತ್ತಿದ್ದಾರೆ) ಈ ಆಶಯಗಳನ್ನು ತಮ್ಮ ನಿತ್ಯ ಬದುಕಿನ ಭಾಗವಾಗಿ ಅಳವಡಿಸಿಕೊಂಡು ಮುಂದೆ ಸಾಗುತ್ತಿದ್ದಾರೋ ಎಂಬ ಜಿಜ್ಞಾಸೆಯೊಂದಿಗೆ ಬಾಬಾ ಸಾಹೇಬರು ತಮ್ಮ 136ನೆಯ ಜನ್ಮದಿನದಂದು, ರಥಾರೂಢರಾಗಿ, ಉತ್ಸವ ಮೂರ್ತಿಯಾಗಿ ಕಂಗೊಳಿಸಲಿದ್ದಾರೆ.
ಈ ಅಮೂರ್ತ ರೂಪದ ಅಂಬೇಡ್ಕರರನ್ನು ಹೆಗಲ ಮೇಲೆ ಹೊತ್ತು ಮೆರೆಸಲಿಚ್ಛಿಸುವ ಜನಪ್ರತಿನಿಧಿಗಳಿಗೆ, ವರ್ತಮಾನದ ದುರವಸ್ಥೆಗೆ ಮರುಗುವ ಅಂಬೇಡ್ಕರರ ಕಾಲ್ಪನಿಕ ಕಂಬನಿ ಹನಿಗಳು ಕಾಣಿಸುವುದಾದರೂ ಹೇಗೆ ? ಆದಾಗ್ಯೂ ಅಂಬೇಡ್ಕರ್ ಮರುಗುವುದಕ್ಕೆ ಕಾರಣವೇನು ? ನಾವು ಕಣ್ತೆರೆದು ನೋಡಬೇಕು. ಒಂದೆಡೆ ಆಳುವ ವರ್ಗಗಳು ಸಂವಿಧಾನದ ಮೂಲ ಆಶಯಗಳನ್ನು ಮೂಲೆಗುಂಪು ಮಾಡುತ್ತಿದ್ದಾರೆ.
![]()
ಸಾಂವಿಧಾನಿಕ ರಕ್ಷಣೆ ಪಡೆಯಬೇಕಾದ ಜನಸಮುದಾಯಗಳನ್ನು, ಪ್ರಜಾತಂತ್ರ ವ್ಯವಸ್ಥೆಯ ಪರಿಧಿಯಿಂದಲೇ ಹೊರದೂಡುತ್ತಿದ್ದಾರೆ. ʼಒಂದು ಮತ –ಒಂದು ಮೌಲ್ಯʼ ಎಂಬ ಔದಾತ್ಯದ ನೆಲೆಯಲ್ಲಿ ಭಾರತದ ಸಮಸ್ತ ಜನತೆಗೆ ಕಲ್ಪಿಸಲಾಗಿರುವ ಮತದಾನದ ಹಕ್ಕನ್ನು ಈಗಾಗಲೇ 9 ಕೋಟಿ ಜನ ಕಳೆದುಕೊಂಡಿದ್ದಾರೆ. ಅಂತರ್ಲಿಂಗಿ (Trangender) ಸಮುದಾಯಗಳು ತಮ್ಮ ಪೌರತ್ವವನ್ನೇ ಕಳೆದುಕೊಳ್ಳಲಿವೆ. ಪ್ರಜಾಪ್ರಭುತ್ವದ ಅಡಿಪಾಯವಾದ ಒಕ್ಕೂಟ ವ್ಯವಸ್ಥೆ ಶಿಥಿಲವಾಗಿ ಅಧಿಕಾರ ವಿಕೇಂದ್ರೀಕರಣ ಅಥವಾ ʼ ಜನರ ಕೈಗೇ ಅಧಿಕಾರ ʼ ಎಂಬ ಔದಾತ್ಯಗಳು ಚರಿತ್ರೆಯ ಪುಟಗಳಲ್ಲಿ ಲೀನವಾಗುತ್ತಿವೆ.
ಆಡಳಿತ ವ್ಯವಸ್ಥೆಯ ಬೃಹನ್ನಾಟಕ
ಈ ನಡುವೆ ತಳಸಮಾಜದ ಶೋಷಿತ ಜನರು, ಪ್ರಜಾತಂತ್ರವನ್ನು ಗೌರವಿಸುವ ಸಮಾಜಗಳು ಸಂವಿಧಾನದ ರಕ್ಷಣೆಗಾಗಿ ಜನರು ಪಣತೊಟ್ಟು ನಿಂತಿರುವುದನ್ನೂ ಕಾಣುತ್ತಿದ್ದೇವೆ. ಸಂವಿಧಾನವನ್ನೇ ಧರ್ಮ ಎಂದು ಭಾವಿಸಿ ʼ ಧರ್ಮೋ ರಕ್ಷತಿ ರಕ್ಷಿತಃ ʼ ಘೋಷಣೆಯನ್ನೂ ಸಮೀಕರಿಲಾಗುತ್ತಿದೆ. ಸಂವಿಧಾನ ರಕ್ಷಣಾ ಸಮಿತಿಗಳೂ ನಿರಂತರ ಹೋರಾಟ ನಡೆಸುತ್ತಿವೆ.
ಕರ್ನಾಟಕ ಸರ್ಕಾರ ಸಂವಿಧಾನ ಪ್ರಸ್ತಾವನೆಯನ್ನು ಶಾಲೆಗಳಲ್ಲಿ ನಿತ್ಯ ಪ್ರಾರ್ಥನೆಯ ಒಂದು ಭಾಗವಾಗಿ ಮಾಡಿದೆ. ಸಾರ್ವಜನಿಕ ವಲಯದ ಪ್ರತಿಯೊಂದು ಸಭೆ-ಸಮಾರಂಭದಲ್ಲೂ ಪ್ರಸ್ತಾವನೆಯ ಓದು-ಪ್ರಮಾಣೀಕರಣ ಒಂದು ಶಿಸ್ತುಬದ್ಧ ವಿಧಿಯಾಗಿ ರೂಪುಗೊಂಡಿದೆ. ಚುನಾಯಿತ ಜನಪ್ರತಿನಿಧಿಗಳು, ರಾಜಕೀಯ ನಾಯಕರು ಅಂಬೇಡ್ಕರರ ಹಾದಿಯಲ್ಲೇ ಸಾಗುವ ಭರವಸೆಯನ್ನು ನೀಡುತ್ತಲೇ ಇದ್ದಾರೆ. ದಲಿತ ಸಂಘಟನೆಗಳು ಅಮೂರ್ತ ಅಂಬೇಡ್ಕರ್ ಅವರನ್ನು ಮೂರ್ತೀಕರಿಸಿ (Idolise) ತಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತಿವೆ.

ಸಂವಿಧಾನ ರಕ್ಷಣೆ ಸ್ವತಂತ್ರ ಸಾರ್ವಭೌಮ ಭಾರತದ ಸ್ವಾಭಾವಿಕ ನಡೆ ಆಗಬೇಕಿತ್ತು. ಆದರೆ ಸಂವಿಧಾನ ರಕ್ಷಣೆಗಾಗಿ ಹೋರಾಟ ನಡೆಸುವ ಪರಿಸ್ಥಿತಿ ಎದುರಾಗಿರುವುದೇ ಒಂದು ದುರಂತ ಅಲ್ಲವೇ ? ಆಡಳಿತ ವ್ಯವಸ್ಥೆ ಮತ್ತು ಅಧಿಕಾರ ರಾಜಕಾರಣ ತನ್ನ ನೈತಿಕ ಕರ್ತವ್ಯ ಎಂದು ಭಾವಿಸಿ ಸಂವಿಧಾನವನ್ನು ರಕ್ಷಣೆ ಮಾಡಬೇಕು. ಗ್ರಾಂಥಿಕವಾಗಿ ಅದನ್ನು ಏನೂ ಮಾಡಲಾಗುವುದಿಲ್ಲ.
ಆದರೆ ಮೌಲಿಕವಾಗಿ ಅದರೊಳಗಿನ ಪ್ರಜಾಸತ್ತಾತ್ಮಕ ಆಶಯ ಮತ್ತು ಕನಸುಗಳನ್ನು ಹಂತಹಂತವಾಗಿ ಕೊಲ್ಲುತ್ತಾ ಬರಬಹುದು. ಕಳೆದ ಹತ್ತು ವರ್ಷಗಳಲ್ಲಿ ಇದನ್ನು ಹೇಗೆ ಮಾಡಬಹುದು ಎನ್ನುವುದಕ್ಕೆ ಪ್ರಾತ್ಯಕ್ಷಿಕೆಯನ್ನು ಒದಗಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿ ಈ ಉಪಕ್ರಮಗಳಿಂದ ಆರಂಭವಾದ ಈ ಕಾರ್ಯಾಚರಣೆ ಈಗ ಎಸ್ಐಆರ್ (SIR)) ಮೂಲಕ ತನ್ನ ಅಂತಿಮ ಘಟ್ಟ ತಲುಪುತ್ತಿದೆ.

ಈ ನಡುವೆ ಬಲಿಷ್ಠ ಕೇಂದ್ರದ ಪ್ರತಿಪಾದಕರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಈ ವ್ಯವಸ್ಥೆಯ ನಿರ್ವಹಣೆಯನ್ನು ಪ್ರಜಾಸತ್ತಾತ್ಮಕ ಹಾದಿಯಲ್ಲಿ ಕೊಂಡೊಯ್ಯಲು ಸಾಂವಿಧಾನಿಕ ಸಂಸ್ಥೆಗಳನ್ನೇ ಹೆಚ್ಚು ಅವಲಂಬಿಸಿದ್ದರು. ಚುನಾವಣಾ ಆಯೋಗ, ಸಿಬಿಐ-ಈಡಿ ಮೊದಲಾದ ತನಿಖಾ ಸಂಸ್ಥೆಗಳು, ಪೊಲೀಸ್ ಮತ್ತು ಕಾನೂನು ವ್ಯವಸ್ಥೆ ಹಾಗೂ ನ್ಯಾಯಾಂಗ ಅಂಬೇಡ್ಕರರ ಈ ಕನಸನ್ನು ಸಾಕಾರಗೊಳಿಸುವ ರಥಚಕ್ರಗಳಾಗಿದ್ದವು.
ಈ ಚಕ್ರಗಳು ಹೆಜ್ಜೆ ತಪ್ಪಿದ ಕೂಡಲೇ ಎಚ್ಚರಿಸಿ, ಸರಿಪಡಿಸಿ ಮುನ್ನಡೆಗೆ ನೆರವಾಗಲು ʼ ಮಾಧ್ಯಮ ʼ ಎಂಬ ಸಂಸ್ಥೆಯನ್ನು ಸಹ ಬಲವಾಗಿ ನಂಬಿದ್ದರು. ಅಂಬೇಡ್ಕರ್ ಕಾಲಘಟ್ಟದಲ್ಲಿ ಔದ್ಯೋಗಿಕ ಬಂಡವಾಳಶಾಹಿಯ ಮಾರುಕಟ್ಟೆ ಅಸ್ತಿತ್ವದಲ್ಲಿದ್ದರೂ, ಇದರ ಭವಿಷ್ಯದ ಸಂಭಾವ್ಯ ಚಲನಗಳನ್ನು ಅಂಬೇಡ್ಕರ್ ಗಂಭೀರವಾಗಿ ಅಧ್ಯಯನ ಮಾಡಿರಲಿಲ್ಲ.
ಬದಲಾಗುತ್ತಿರುವ ಭಾರತದ ಕಡೆಗೆ
ಹಾಗಾಗಿ ಆರ್ಥಿಕತೆಯಲ್ಲಿ ಆಧಿಪತ್ಯ ಸಾಧಿಸುವ ಬಂಡವಾಳಶಾಹಿಯು, ನವ ಉದಾರವಾದಿ ಅವತಾರದಲ್ಲಿ ಮಾರುಕಟ್ಟೆ ಮತ್ತು ತಂತ್ರಜ್ಞಾನದ ಬಲದಿಂದ , ಪ್ರಜಾಪ್ರಭುತ್ವದ ಸಾಂಸ್ಥಿಕ ಬೇರುಗಳನ್ನೂ ಸಡಿಲಗೊಳಿಸಲು ಸಾಧ್ಯ ಎಂಬ ಕಲ್ಪನೆ ಅಂಬೇಡ್ಕರ್ ಅವರಿಗೆ ಇರಲಿಲ್ಲ. ಇರಬೇಕೆಂದು ಅಪೇಕ್ಷಿಸುವುದೂ ತರವಲ್ಲ. ಏಕೆಂದರೆ ಬಾಬಾ ಸಾಹೇಬ್ ಬಿಟ್ಟು ಹೋದ ಸಂವಿಧಾನ ಮತ್ತು ಕಟ್ಟಿಕೊಟ್ಟು ಹೋದ ಸಮ ಸಮಾಜದ ಕಲ್ಪನೆಯನ್ನು ಸಾಕಾರಗೊಳಿಸುವುದು ಅನಂತರದ ಸಮಾಜದ್ದಾಗಿತ್ತು.
ಈ ಸಂಸ್ಥೆಗಳ ಪ್ರತಿಯೊಂದು ನಡೆಯೂ ಪ್ರಜಾಪ್ರಭುತ್ವದ ಮಾಪಕಗಳಾಗಿ ಇರಬೇಕಿತ್ತು. ದುರದೃಷ್ಟವಶಾತ್ ಈ ರಥಚಕ್ರಗಳು 50 ವರ್ಷಗಳ ಹಿಂದೆಯೇ, 1975ರಲ್ಲೇ ತಮ್ಮ ಅಂತಃಶಕ್ತಿಯನ್ನು ಕಳೆದುಕೊಂಡು ನಿಸ್ತೇಜವಾದವು, ಪರಾವಲಂಬಿಗಳಾದವು , ಆಡಳಿತ ಸಾರಥ್ಯದ ಅಡಿಯಾಳುಗಳಾದವು.
ಈಗ ಇದು ಅಂತಿಮ ಘಟ್ಟ ತಲುಪಿದ್ದು, ಚುನಾವಣಾ ಆಯೋಗದ ಕ್ರಮಗಳೇ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಹಾದಿಯಲ್ಲಿ ಸಾಗುತ್ತಿದೆ.

ಕೊಂಚ ಮಟ್ಟಿಗೆ ನ್ಯಾಯಾಂಗವನ್ನು ಹೊರತುಪಡಿಸಿದರೆ ಉಳಿದೆಲ್ಲಾ ಸಾಂಸ್ಥಿಕ ನೆಲೆಗಳೂ ತಮ್ಮ ಸಾಂವಿಧಾನಿಕ ಸತ್ವವನ್ನು ಕಳೆದುಕೊಂಡಿರುವುದು ನೇರವಾಗಿ ಕಾಣುತ್ತಿದೆ. ಕೆಲವು ಸಂದರ್ಭಗಳಲ್ಲಿ ನ್ಯಾಯಾಂಗವೂ ಸಹ ಕೈಕಟ್ಟಿ ಕುಳಿತಂತೆ ಕಾಣುತ್ತದೆ (ಎಸ್ಐಆರ್ ಪ್ರಕ್ರಿಯೆಯ ಸಂದರ್ಭದಲ್ಲಿ) . ಆಡಳಿತ-ಹಣಕಾಸು ಭ್ರಷ್ಟಾಚಾರ ಸಂಪೂರ್ಣ ಸಾಂಸ್ಥೀಕರಣಕ್ಕೊಳಗಾಗಿದ್ದು, ವ್ಯವಸ್ಥೆಯ ನರನಾಡಿಗಳಲ್ಲೂ ಪ್ರವಹಿಸುವ ಮೂಲಕ ಜನಸಾಮಾನ್ಯರಿಗೆ ವಿಧಿಯಿಲ್ಲದೆ ಸಹಿಸಬೇಕಾದ ಹೊರೆಯಾಗಿದೆ.
ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆಗಳು ತಮ್ಮ ಸಾರ್ವಜನಿಕ ಉತ್ತರದಾಯಿತ್ವವನ್ನು ಮರೆತು, ಆಡಳಿತಾರೂಢ ಸರ್ಕಾರಗಳ ಅಣತಿಯಂತೆ ನಡೆಯುತ್ತಿರುವುದರಿಂದ, ʼ ಭ್ರಷ್ಟಾಚಾರ-ಅಕ್ರಮ ಹಗರಣ ʼ ಎಲ್ಲವೂ ಸಹ ಸಾಪೇಕ್ಷತೆಯನ್ನು ಪಡೆದುಕೊಂಡಿದೆ. ಭ್ರಷ್ಟ ಮತ್ತು ಪ್ರಾಮಾಣಿಕ ಇದನ್ನು ಅಳೆಯಲು ಪಕ್ಷನಿಷ್ಠೆಯನ್ನು ಮಾಪಕವಾಗಿ ಬಳಸಲಾಗುತ್ತಿದೆ.
ಡಾ. ಬಿ.ಆರ್. ಅಂಬೇಡ್ಕರ್ ಬಲವಾಗಿ ಪ್ರತಿಪಾದಿಸಿದ್ದ ಸಾಂವಿಧಾನಿಕ ನೈತಿಕತೆ (Consitutional Morality) ಬಹುಶಃ ಅವರೊಂದಿಗೇ ಪರಿನಿಬ್ಬಾಣ ಹೊಂದಿರುವಂತೆ ಕಾಣುತ್ತದೆ. ಬದಲಾಗಿ ಡಿಜಿಟಲ್ ಭಾರತದಲ್ಲಿ ನೈತಿಕತೆಯ ಮೂಲಾರ್ಥವನ್ನೇ ಮರು ನಿರ್ವಚಿಸಲಾಗಿದೆ. ಅಧಿಕಾರ ರಾಜಕಾರಣದಲ್ಲಿ ಇಂದು ನೈತಿಕ ಎನಿಸಿದ್ದು ನಾಳೆ ಅನೈತಿಕ ಎನಿಸುವ ಸನ್ನಿವೇಶ ಏರ್ಪಟ್ಟಿರುವುದರಿಂದ, ರಾಜಕೀಯ ಪಕ್ಷಗಳು, ಈ ಮೌಲ್ಯವನ್ನು ಗುಣಲಕ್ಷಣದ ರೂಪದಲ್ಲಿ ನೋಡದೆ, ವ್ಯಕ್ತಿಗತ ನೆಲೆಯಲ್ಲಿ ನಿಷ್ಕರ್ಷೆ ಮಾಡುತ್ತಿವೆ.
ಹಾಗಾಗಿಯೇ ಶಾಸನ ಸಭೆಗಳ ಚುನಾಯಿತ ಸದಸ್ಯರ ಪೈಕಿ ಅಪರಾಧಿಗಳ ಸಂಖ್ಯೆ ಷೇರುಮಾರುಕಟ್ಟೆಯ ಸೂಚ್ಯಂಕದ ಹಾಗೆ ಏರುಗತಿಯಲ್ಲೇ ಇದೆ. ಪ್ರಸಕ್ತ ಲೋಕಸಭೆಯಲ್ಲಿ 251 ಸಂಸದರು ಅಪರಾಧ ಹಿನ್ನೆಲೆ ಹೊಂದಿದ್ದಾರೆ, 171 ಸಂಸದರ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿವೆ. 543ರ ಪೈಕಿ 504 ಸಂಸದರು ಕೋಟ್ಯಧಿಪತಿಗಳಾಗಿದ್ದಾರೆ. (Association for Democratic Reforms )
ಈ ವಿಚಾರದಲ್ಲಿ ಕರ್ನಾಟಕ ವಿಧಾನಸಭೆ ಹಿಂದೆ ಬಿದ್ದಿಲ್ಲ. 2023ರ ಚುನಾವಣೆಗಳಲ್ಲಿ ಆಯ್ಕೆಯಾದ ಪ್ರತಿನಿಧಿಗಳ ಪೈಕಿ 122 ಶಾಸಕರ ವಿರುದ್ಧ ಅಪರಾಧ ಮೊಕದ್ದಮೆ, 71 ಶಾಸಕರ ವಿರುದ್ದ ಗಂಭೀರ ಅಪರಾಧ ಮೊಕದ್ದಮೆಗಳಿವೆ. 217 ಶಾಸಕರು ಕೋಟ್ಯಧಿಪತಿಗಳಾಗಿದ್ದಾರೆ.
ಅಂದರೆ ಸಂವಿಧಾನವನ್ನು ಪ್ರತಿನಿಧಿಸುವ ಭಾರತದ ಚುನಾಯಿತ ಪ್ರತಿನಿಧಿಗಳ ಆರ್ಥಿಕ ಅಂತಸ್ತು ಏರುಗತಿಯಲ್ಲಿದೆ, ಸಾಮಾಜಿಕ ಸ್ಥಾನಮಾನ ಉನ್ನತಿ ಪಡೆದಿದೆ ಆದರೆ ನೈತಿಕತೆಯ ನೆಲೆಯಲ್ಲಿ ನೋಡಿದಾಗ, ಇಡೀ ವ್ಯವಸ್ಥೆಯೇ ಪಾತಾಳಕ್ಕೆ ಕುಸಿಯುತ್ತಿದೆ. ಈ ಸಿರಿವಂತರ ಸಭೆಯಲ್ಲಿ ಅನುಮೋದಿಸಲಾಗುವ ಕಾಯ್ದೆ, ಕಾನೂನುಗಳು ದೇಶದ ಕಾರ್ಮಿಕರ ಪಾರಂಪರಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ. ರೈತರ ಕೃಷಿ ಭೂಮಿಯನ್ನು ಕಾರ್ಪೋರೇಟ್ ಮಾರುಕಟ್ಟೆಗೆ ಪರಭಾರೆ ಮಾಡುತ್ತಿವೆ. ಮಹಿಳಾಧೀನತೆಯನ್ನು ಪ್ರಚೋದಿಸುತ್ತಿವೆ.

ನವ ಆರ್ಥಿಕತೆ ಮತ್ತು ಸಂವಿಧಾನ
ಒಂದು ಕಾಲದಲ್ಲಿ, ಕೇವಲ ಮೂರು ದಶಕಗಳ ಹಿಂದೆ ಸರ್ಕಾರಗಳ ಅಳಿವು ಉಳಿವಿಗೆ ಮಾಪಕವಾಗಿದ್ದ ಉದ್ಯೋಗ-ನಿರುದ್ಯೋಗ ಈಗ ಕೇವಲ ಅಂಕಿಸಂಖ್ಯೆಗಳಿಗೆ ಸೀಮಿತವಾಗಿದೆ. ಏಕೆಂದರೆ ಜನರಿಗೆ ಉದ್ಯೋಗ ಒದಗಿಸುವ ಜವಾಬ್ದಾರಿಯನ್ನು ಮಾರುಕಟ್ಟೆಯ ಹೆಗಲಿಗೆ ರವಾನಿಸಲಾಗಿದೆ. ಉದ್ಯೋಗ ಮಾರುಕಟ್ಟೆಯಲ್ಲಿ ಲಭ್ಯವಾಗುವ ಅವಕಾಶಗಳನ್ನೇ ಶೋಷಿತ ಸಮುದಾಯಗಳು, ಮಹಿಳೆಯರು, ಗ್ರಾಮೀಣ ಬಡವರು ಮತ್ತು ಭೂಮಿ ಕಳೆದುಕೊಳ್ಳುವ ರೈತರು ತಮ್ಮೊಳಗೆ ಹಂಚಿಕೊಳ್ಳಬೇಕಿದೆ.
ಗ್ರಾಮೀಣ ಭಾರತಕ್ಕೆ ಜೀವನಾಡಿಯಂತಿದ್ದ ಮಹಾತ್ಮಗಾಂಧಿ ಉದ್ಯೋಗ ಯೋಜನೆಯನ್ನೂ MNREGA) ರದ್ದುಪಡಿಸಿ, ಈಗ ಉದ್ಯೋಗ ಸೃಷ್ಟಿಸುವುದನ್ನು ಕೇಂದ್ರ ಸರ್ಕಾರದ ಮರ್ಜಿಗೆ ಒಳಪಡಿಸಲಾಗಿದೆ. ನೂತನ ಕಾರ್ಮಿಕ ಸಂಹಿತೆಗಳು ದೇಶದ ಕಾರ್ಮಿಕ ವರ್ಗ ದಶಕಗಳ ಹೋರಾಟಗಳ ಮೂಲಕ ಗಳಿಸಿಕೊಂಡ ಜೀವರಕ್ಷಕ ಕಾಯ್ದೆಗಳೆಲ್ಲವನ್ನೂ ಶಿಥಿಲಗೊಳಿಸಿವೆ. ಈ ಪರಿಸ್ಥಿತಿಯಲ್ಲಿ ವ್ಯಾಸಂಗ ಪೂರೈಸಿ ಹೊರಬರುವ ಯುವ ಸಮೂಹ, ವಿಶೇ಼ಷವಾಗಿ ಮಿಲೆನಿಯಂ ಸಮಾಜ, ಮಾರುಕಟ್ಟೆಯ ಮುಲಾಜಿಗೆ ಒಳಪಟ್ಟು ತಮ್ಮ ಭವಿಷ್ಯದ ಕನಸು ಕಾಣಬೇಕಿದೆ.

ಈ ಉದ್ಯೋಗದ ಸಂತೆಯಲ್ಲಿ ಬಂದು ನಾಳಿನ ಕನಸುಗಳನ್ನು ಹೊತ್ತು ಕೈಚಾಚಿ ನಿಲ್ಲುವ ಯುವ ಸಮೂಹದ ಕಿರಿಯ ತಲೆಮಾರಿಗೆ ಶಿಕ್ಷಣವೂ ಸಹ ಮರೀಚಿಕೆಯಾಗುವ ಹಂತದಲ್ಲಿದೆ. ಪ್ರತಿಯೊಂದು ಶಾಲೆಯಲ್ಲೂ ಪ್ರಾರ್ಥನೆಯ ಜೊತೆಗೆ ಪ್ರತಿನಿತ್ಯ ಸಂವಿಧಾನ ಪ್ರಸ್ತಾವನೆಯನ್ನು ಓದುವ ನೀತಿಯನ್ನೇ ಜಾರಿಗೊಳಿಸಿರುವ ಕರ್ನಾಟಕ ಸರ್ಕಾರ ಈಗ 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಿಹಾಕಿ, ಗ್ರಾಮೀಣ ಬಡ ವಿದ್ಯಾರ್ಥಿಗಳನ್ನು ಕೆಪಿಎಸ್ ಮಾಗ್ನೆಟ್ ಶಾಲೆಗಳಿಗೆ ರವಾನೆ ಮಾಡುತ್ತಿದೆ.
ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳು ಭ್ರಷ್ಟಾಚಾರದ ಆಡುಂಬೊಲಗಳಾಗಿದ್ದು, ಕೇಂದ್ರ ಸರ್ಕಾರ ಮಂಡಿಸಲಿರುವ ಮಸೂದೆಯೊಂದು, ಇಡೀ ಶಿಕ್ಷಣ ವ್ಯವಸ್ಥೆಯ ನಿರ್ವಹಣೆ, ಪಠ್ಯಕ್ರಮ, ಹಣಕಾಸು ಮತ್ತು ಮೌಲ್ಯಮಾಪನದ ಜವಾಬ್ದಾರಿಯನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಲು ಸಜ್ಜಾಗಿದೆ.
ಸಾರ್ವಜನಿಕ ಉದ್ದಿಮೆ, ಸರ್ಕಾರಿ ಆಡಳಿತ ಮತ್ತು ಖಾಸಗಿ ವಲಯ ಮೂರೂ ನೆಲೆಗಳಲ್ಲಿ ಉದ್ಯೋಗಾವಕಾಶಗಳು ಯುವ ಸಮೂಹದ ಪಾಲಿಗೆ ಮರೀಚಿಕೆಯಾಗುತ್ತಿದೆ. ಈ ನಡುವೆಯೇ ಸಾಂವಿಧಾನಿಕವಾಗಿ ಒದಗಿಸಲಾಗುತ್ತಿರುವ ಉದ್ಯೋಗ-ಶಿಕ್ಷಣ ಮೀಸಲಾತಿ ಸೌಲಭ್ಯಗಳು ಕೆಲವೇ ಸಮುದಾಯಗಳಿಗೆ ಅಥವಾ ಕೆಲವೇ ವರ್ಗಗಳಿಗೆ ಸೀಮಿತವಾಗುತ್ತಿವೆ.

77 ವರ್ಷಗಳ ಮೀಸಲಾತಿ ನೀತಿಯ ಹೊರತಾಗಿಯೂ ಇಂದಿಗೂ ಇದರ ಫಲಾನುಭವಿಯಾಗುವ ಅವಕಾಶ ಪಡೆಯದ ತಳಸಮುದಾಯಗಳಲ್ಲಿನ ತಳಸ್ತರದ ಸಮಾಜಗಳು ಈಗ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿವೆ. ಇದನ್ನು ʼ ಒಳಮೀಸಲಾತಿ ʼ ಎಂದು ನಿರ್ವಚಿಸುವ ಮೂಲಕ ಮೂಲ ಸಾಂವಿಧಾನಿಕ ಕಲ್ಪನೆಯನ್ನೇ ಅಪಭ್ರಂಶಗೊಳಿಸಲಾಗುತ್ತಿದೆ. ನಾಲ್ಕು ಪೀಳಿಗೆಗಳಲ್ಲಿ ಫಲಾನುಭವಿಗಳಾಗಿ ಇಂದಿಗೂ ಉಪಭೋಗಿಸುತ್ತಿರುವ ಸಮುದಾಯಗಳು ಮೀಸಲಾತಿಯನ್ನು ತಮ್ಮ ಜನ್ಮಸಿದ್ಧ ಹಕ್ಕು ಎನ್ನುವ ರೀತಿಯಲ್ಲಿ, ʼ ಅನ್ಯ ʼರಿಗೆ ನಿರಾಕರಿಸುತ್ತಿವೆ.
ಶೋಷಿತರ ನಡುವೆ ಅನ್ಯರ ಕಲ್ಪನೆ
ಈ ʼ ಅನ್ಯ ʼರನ್ನು ಅಲೆಮಾರಿ ಸಮಾಜಗಳಲ್ಲಿ, ದಲಿತರಲ್ಲೇ ಎಡಗೈ ಎನಿಸಿಕೊಳ್ಳುವ ಮಾದಿಗ ಸಮುದಾಯಗಳಲ್ಲಿ ಗುರುತಿಸಲಾಗುತ್ತಿದ್ದು ಅಪಾರ ಸಂಖ್ಯೆಯಲ್ಲಿದ್ದಾರೆ, ಅಂಬೇಡ್ಕರ್ ನಿರ್ವಚಿಸಿದ ʼಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ʼ ಘೋಷಣೆಯನ್ನು ತಮಗೂ ಅನ್ವಯಿಸುವಂತೆ ಒತ್ತಾಯಿಸುತ್ತಿದ್ದಾರೆ.
ಕರ್ನಾಟಕದ ಮಟ್ಟಿಗೆ ಇದು ದಲಿತ ಚಳುವಳಿಯನ್ನೇ ತಾತ್ವಿಕವಾಗಿ ಇಬ್ಭಾಗ ಮಾಡಿದೆ. 1970ರ ʼ ನಾವು ʼ ಇಂದು ಮರೆಯಾಗಿದ್ದು ʼ ನಾವು ಮತ್ತು ಅವರು ʼ ಎಂದಾಗಿದೆ. ಸರ್ಕಾರಗಳ ಒಡೆದು ಆಳುವ ನೀತಿ, So called ಮನುವಾದಿಗಳ ಪಿತೂರಿ ಇವುಗಳ ಹೊರತಾಗಿಯೂ, ಈ ʼ ನಾವು ʼ ಎಂಬ ಕಲ್ಪನೆಯಲ್ಲಿ ಅಂಬೇಡ್ಕರ್ ಎಂಬ ಸಾಂಸ್ಥಿಕ-ಸಂಘಟನಾತ್ಮಕ ಶಕ್ತಿ ಉಳಿದಿದ್ದರೆ, ಇದನ್ನು ಯಾರಿಂದಲೂ ಭೇದಿಸಲಾಗುತ್ತಿರಲಿಲ್ಲ. 1970ರಲ್ಲಿ ಹುಟ್ಟಿದ ಭರವಸೆ, ಕಟ್ಟಿದ ಕನಸುಗಳು, 2026ರಲ್ಲಿ ಕರಗಿಹೋಗುವ ಆತಂಕದಲ್ಲಿ ನಾವಿದ್ದೇವೆ. ಆಗ ಕನಸು ಕಟ್ಟಿದವರು ಈಗ ಪರ-ವಿರೋಧ-ತಟಸ್ಥ ನೆಲೆಗಳಲ್ಲಿ ವಿರಮಿಸುತ್ತಿದ್ದಾರೆ.
ಈ ಸಂದಿಗ್ಧ ಸಂಕಟಗಳ ನಡುವೆ ನಾವು ಮತ್ತೊಂದು ಏಪ್ರಿಲ್ 14 ಆಚರಿಸುತ್ತಿದ್ದೇವೆ. ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ, ನಡೆದು ಬಂದ ಹಾದಿಯ ಆತ್ಮಾವಲೋಕನದ ಕ್ಷಣವಾಗದೆ, ವ್ಯಕ್ತಿಗತ ಸಂಘಟನೆಗಳ ಶಕ್ತಿ-ಸಾಮರ್ಥ್ಯ ಪ್ರದರ್ಶನಗಳ ಮೈದಾನವಾಗುತ್ತಿದ್ದು, ದಲಿತ ಸಮಾಜಗಳಲ್ಲೇ ಮೇಲ್ವರ್ಗ-ಮಧ್ಯಮ ವರ್ಗಗಳು ನೆಲ ನೋಡಿ ನಡೆಯುವುದನ್ನು ಮರೆತುಹೋಗಿವೆ. ಈ ಸಾಂಘಿಕ ಪೈಪೋಟಿಯ ಮೈದಾನದಲ್ಲೇ ಅಂಬೇಡ್ಕರ್ ರಥಾರೂಢರಾಗಿ, ಉತ್ಸವ ಮೂರ್ತಿಯಾಗಿ, ಆರಾಧನೆಯ ಕೇಂದ್ರವಾಗಿ, ಅವರೇ ನಿರ್ಮಿಸಲೆತ್ನಿಸಿದ ವೈಚಾರಿಕ ಜಗತ್ತಿನಲ್ಲಿ ಅಪರಿಚಿತರಂತೆ ಕಾಣುತ್ತಿದ್ದಾರೆ. ಮೈಸೂರಿನ ಕೆಲವು ಸಂಘಟನೆಗಳು ಈ ದಿನದಂದು ಅಂಬೇಡ್ಕರ್ ಪ್ರತಿಮೆಗೆ ಹೆಲಿಕಾಪ್ಟರ್ನಿಂದ ಪುಷ್ಪಾರ್ಚನೆ ಮಾಡಲು ಸಿದ್ಧತೆ ನಡೆಸಿದೆ.

ಆರಾಧನಾ ಸಂಸ್ಕೃತಿಯ ಅತಿಕ್ರಮಣ
ಸಮಕಾಲೀನ ಭಾರತದ ವೈಚಿತ್ರ್ಯ ಎಂದರೆ ಆರಾಧನಾ ಸಂಸ್ಕೃತಿಯನ್ನು ವಿರೋಧಿಸಿದ ಎಲ್ಲ ದಾರ್ಶನಿಕರನ್ನೂ, ಚಿಂತಕರನ್ನೂ ನಾವು ಗುಡಿಗುಂಡಾರಗಳಲ್ಲಿ ಕೂಡಿ ಹಾಕುತ್ತಿದ್ದೇವೆ. ರಾಮಕೃಷ್ಣ ಪರಮಹಂಸ, ವಿವೇಕಾನಂದ, ರಮಣ ಮಹರ್ಷಿ ಈ ಪರಂಪರೆಯಲ್ಲಿ ಬುದ್ಧ-ಬಸವಣ್ಣನನ್ನು ಸೇರಿಕೊಂಡಿದ್ದಾರೆ.
ಕರ್ನಾಟಕದಲ್ಲಿ ವೈಚಾರಿಕತೆಯ ಬೀಜ ಬಿತ್ತಿದ ಕುವೆಂಪು ಅವರನ್ನೂ ಸಹ ಫೋಟೋಗಳಲ್ಲಿ ಗುರುತಿಸಿ, ಧೂಪದೀಪಗಳ ಮೂಲಕ ಆರಾಧಿಸಲು ಫರ್ಮಾನು ಹೊರಡಿಸಲಾಗಿದೆ. ಬಹುಶಃ ಈಗ ಅಂಬೇಡ್ಕರ್ ಸರದಿ. ಕೆಲವು ವರ್ಷಗಳ ಹಿಂದೆ, ವಿಶ್ವ ಇಂಜಿನಿಯರ್ ದಿನವನ್ನು ಘೋಷಿಸಿದ ಸಂದರ್ಭದಲ್ಲಿ ಮಂಡ್ಯದಲ್ಲಿ ಸರ್.ಎಮ್ ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಪಂಚಾಮೃತ ಅಭಿಷೇಕ ಮಾಡಿದ್ದಾಗಿ ಹೇಳಲಾಗುತ್ತದೆ. ಇದೇ ವೈದಿಕ ಪರಂಪರೆಯ ಮತ್ತೊಂದು ಆಯಾಮವನ್ನು ಇದೇ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿಯಲ್ಲಿ ಕಾಣುವ ಭಾಗ್ಯ ನಮ್ಮದು !!!!!.
ಈ ರೀತಿಯ ಆರಾಧನೆ ದಲಿತ ಅಸ್ಮಿತೆಯನ್ನು ದೃಢೀಕರಿಸುವುದಕ್ಕಿಂತಲೂ, ದಲಿತರಲ್ಲಿ ವೈದಿಕ ಆಚರಣೆಗಳ ಪರಂಪರೆಯನ್ನು ನವೀಕರಿಸುವ ಒಂದು ಪ್ರವೃತ್ತಿಯ ಸೂಚನೆಯಾಗಿ ಕಾಣುತ್ತದೆ. ಜಾತಿ ವಿನಾಶದಿಂದ ಮಾತ್ರ ಭಾರತೀಯ ಸಮಾಜದಲ್ಲಿ ಸಮಾನತೆ ಸಾಧ್ಯ ಎಂದು ಘೋಷಿಸಿ, ಹಿಂದೂ ಧರ್ಮದ ತಾರತಮ್ಯಗಳನ್ನು ಧಿಕ್ಕರಿಸಿ, ಬೌದ್ಧ ಧಮ್ಮ ಸ್ವೀಕರಿಸಿದ ಅಂಬೇಡ್ಕರ್ ಅಮೂರ್ತ ರೂಪದಲ್ಲೇ ಕಂಡರೂ, ಏಪ್ರಿಲ್ 14ರ ಮೆರವಣಿಗೆಗಳಲ್ಲಿ ಅವರ ಕಣ್ಣಂಚಿನಲ್ಲಿ ಒಂದೆರಡು ಹನಿಯನ್ನು ಊಹಿಸಿಕೊಳ್ಳಬಹುದು.

ನಿರಂತರ ವಿಘಟನೆಯಿಂದ ಶಾಶ್ವತ ವಿಭಜನೆಯತ್ತ ಸಾಗುತ್ತಿರುವ ದಲಿತ ಚಳುವಳಿ, ಸಂಘಟನಾತ್ಮಕವಾಗಿ ಒಂದಾಗಿ ಕಂಡರೂ, ಆಂತರಿಕವಾಗಿ ಯುವ ತಲೆಮಾರಿನ ಮನಸ್ಸುಗಳಲ್ಲಿ ಬಿತ್ತಲಾಗಿರುವ ವಿಭಜಕ ಮನೋಭಾವದ ಕಾರಣ, ಹಿಂದುತ್ವ ರಾಜಕಾರಣಕ್ಕೆ ಹಸಿರು ಮೇವು ಒದಗಿಸಿದಂತಾಗುತ್ತದೆ.
ನಮ್ಮೊಳಗಿನ ಅಂಬೇಡ್ಕರ್ ಎಲ್ಲಿ ?
ಈ ಅಪಾಯ, ಸಂದಿಗ್ಧತೆ ಮತ್ತು ಅವಕಾಶವಂಚಿತರ ಸಂಕಟಗಳ ನಡುವೆಯೇ ನಾವು ಮತ್ತೊಂದು ಏಪ್ರಿಲ್ 14 ಆಚರಿಸುತ್ತಿದ್ದೇವೆ. ಆದರೆ ದುರದೃಷ್ಟವಶಾತ್ ನಮ್ಮ ನೈತಿಕ ಜವಾಬ್ದಾರಿಯನ್ನು ಮರೆತು ಸಾಗುತ್ತಿದ್ದೇವೆ. ಶೋಷಿತ-ಅವಕಾಶವಂಚಿತ ಜನರ ಸಾಂವಿಧಾನಿಕ ಹಕ್ಕು, ಮೀಸಲಾತಿ, ಇದೇ ಜನರ ನಡುವೆ ಇನ್ನೂ ಕೆಳಸ್ತರದಲ್ಲಿರುವ ಸಮಾಜಗಳ ಪಾಲಿಗೆ ಮತ್ತೊಮ್ಮೆ ಕನಸಾಗುತ್ತಿರುವ ಹೊತ್ತಿನಲ್ಲಿ, ಏಪ್ರಿಲ್ 14ರಂದು ನಾವು ಮಾಡಬೇಕಾದ್ದೇನು ? ಎಲ್ಲ ಭಿನ್ನಭೇದಗಳ ಮರೆತು, ಅಂಬೇಡ್ಕರ್ ಕನಸಿನ ಸಮಾನತೆ, ಸೌಹಾರ್ದತೆ ಮತ್ತು ಭ್ರಾತೃತ್ವದ ಭಾರತವನ್ನು ಮರುಕಟ್ಟಲು ಸಂಕಲ್ಪ ಮಾಡಬೇಕಿತ್ತಲ್ಲವೇ ? ಐವತ್ತು ವರ್ಷಗಳ ಹಿಂದೆ ಈ ಕನಸುಗಳನ್ನು ಕರ್ನಾಟಕದಲ್ಲಿ ಚಿಗುರಿಸಿದ ಹಿರಿಯ ತಲೆಮಾರಿನ ದಲಿತ ನಾಯಕರು, ಸಂವೇದನಾಶೀಲ, ಸಮಾನ ಮನಸ್ಕ ಜನರ ಜೊತೆಗೂಡಿ, ಒಡೆದ ಮನಸುಗಳನ್ನು ಮರುಕಟ್ಟಬೇಕಲ್ಲವೇ ? ಈ ಸಂದರ್ಭದಲ್ಲಿ ಮೌನ ಅಥವಾ ನಿರ್ಲಿಪ್ತತೆ ವ್ಯತಿರಿಕ್ತ ಕ್ರಿಯೆಗಿಂತಲೂ ದೊಡ್ಡ ಅಪರಾಧವಾಗುತ್ತದೆ.
ಅಮೂರ್ತ ಅಂಬೇಡ್ಕರ್ ಅವರ ಪ್ರತಿಮೆಯನ್ನು ಆರಾಧನಾ ಸಂಸ್ಕೃತಿಯ ಸಂಕೋಲೆಗಳಲ್ಲಿ ಬಂಧಿಸುವ ಬದಲು, ಅವರನ್ನು, ಅವರ ಚಿಂತನೆಗಳನ್ನು ಅಂತರೀಕರಣಗೊಳಿಸಿಕೊಂಡು (Internalise) ಅಂತರ್ಗತಗೊಳಿಸಿಕೊಳ್ಳುವ ಮೂಲಕ, ಬಾಬಾ ಸಾಹೇಬ್ ಕಂಡ ಸುಂದರ ಸಮಾಜವನ್ನು ಮರಳಿ ಕಟ್ಟಲು ಮುಂದಾಗುವುದು ಸಾರ್ಥಕ ಎನಿಸುವುದಿಲ್ಲವೇ ? ಇಲ್ಲವಾದರೆ ಸಂವಿಧಾನದ ಪ್ರಸ್ತಾವನೆಯ ಪಠಣ-ಪ್ರಮಾಣೀಕರಣವಾಗಲೀ, ಪುಷ್ಪಾರ್ಚನೆ-ಬಿಲ್ವಾರ್ಚನೆಯಾಗಲೀ ಅರ್ಥಹೀನ ಎನಿಸಿಬಿಡುತ್ತದೆ. ಸಂವಿಧಾನ ಪ್ರಸ್ತಾವನೆಯನ್ನು ಓದುಗಾಗ ಭಾರತದ ಜನಗಳಾದ ʼ ನಾವು ʼ ಎಂಬ ಪದ ತನ್ನ ಅರ್ಥ ಉಳಿಸಿಕೊಂಡರೂ ಅಂತಃಸತ್ವವನ್ನು ಕಳೆದುಕೊಳ್ಳುತ್ತದೆ. ಈ ಎಚ್ಚರದೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ 136ನೆ ಜನ್ಮದಿನವನ್ನು ಆಚರಿಸಬೇಕಿದೆ. ಆಯ್ಕೆ ಮತ್ತು ಆದ್ಯತೆ ಎರಡೂ ನಮ್ಮದೇ ಅಲ್ಲವೇ ?????
-೦-೦-೦-೦-






