ಮಧ್ಯಪೂರ್ವದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯಲ್ಲಿ ಅಮೆರಿಕ ನೀಡಿದ್ದ 15 ಅಂಶಗಳ ಶಾಂತಿ ಪ್ರಸ್ತಾವನೆಗೆ ಇರಾನ್ ಅಧಿಕೃತವಾಗಿ ಪ್ರತಿಕ್ರಿಯಿಸಿದ್ದು, ಅದನ್ನು “ಏಕಪಕ್ಷೀಯ ಹಾಗೂ ಅಸಮತೋಲನ” ಹೊಂದಿದ ಪ್ರಸ್ತಾವನೆ ಎಂದು ತಿರಸ್ಕರಿಸಿದೆ.

ಅಮೆರಿಕವು ಪಾಕಿಸ್ತಾನದ ಮೂಲಕ ಇರಾನ್‌ಗೆ ಈ 15 ಅಂಶಗಳ ಶಾಂತಿ ಯೋಜನೆಯನ್ನು ಕಳಿಸಿದ್ದು, ಯುದ್ಧ ನಿಲ್ಲಿಸುವುದು, ಅಣು ಚಟುವಟಿಕೆಗಳ ನಿಯಂತ್ರಣ ಸೇರಿದಂತೆ ಹಲವು ಕಠಿಣ ಷರತ್ತುಗಳನ್ನು ಒಳಗೊಂಡಿದೆ ಎಂದು ತಿಳಿದುಬಂದಿದೆ.

ಇರಾನ್ ಈ ಪ್ರಸ್ತಾವನೆ ತನ್ನ ಹಿತಾಸಕ್ತಿಗಳನ್ನು ಕಡೆಗಣಿಸುತ್ತಿದೆ ಎಂದು ಹೇಳಿ, ಇದನ್ನು “ಒನ್-ಸೈಡೆಡ್” (ಏಕಪಕ್ಷೀಯ) ಎಂದು ಟೀಕಿಸಿದೆ. ಅಲ್ಲದೆ, ಅಮೆರಿಕ ತನ್ನ ಬೇಡಿಕೆಗಳನ್ನು ಮಾತ್ರ ಒತ್ತಾಯಿಸುತ್ತಿದ್ದು, ಪರಸ್ಪರ ಗೌರವ ಹಾಗೂ ಸಮಾನತೆ ಇಲ್ಲ ಎಂದು ಇರಾನ್ ಅಧಿಕಾರಿಗಳು ಆರೋಪಿಸಿದ್ದಾರೆ.ಇದಕ್ಕೆ ಪ್ರತಿಯಾಗಿ ಇರಾನ್ ಐದು ಅಂಶಗಳ ತನ್ನದೇ ಶಾಂತಿ ಷರತ್ತುಗಳನ್ನು ಮುಂದಿಟ್ಟಿದೆ. ಇದರಲ್ಲಿ ಅಮೆರಿಕ ಮತ್ತು ಇಸ್ರೇಲ್ ದಾಳಿಗಳನ್ನು ನಿಲ್ಲಿಸುವುದು, ಯುದ್ಧ ಹಾನಿಗೆ ಪರಿಹಾರ ನೀಡುವುದು, ಮತ್ತು ಹಾರ್ಮುಜ್ ಜಲಸಂಧಿಯ ಮೇಲೆ ತನ್ನ ಸಾರ್ವಭೌಮತ್ವವನ್ನು ಮಾನ್ಯತೆ ನೀಡುವುದು ಪ್ರಮುಖ ಬೇಡಿಕೆಗಳಾಗಿವೆ.

ಇದೀಗ ಈ ಬೆಳವಣಿಗೆಯಿಂದ ಅಮೆರಿಕ-ಇರಾನ್ ನಡುವಿನ ಮಾತುಕತೆ ಮತ್ತಷ್ಟು ಸಂಕೀರ್ಣವಾಗಿದ್ದು, ನೇರ ಸಂಧಾನಕ್ಕೆ ಬದಲು ಮಧ್ಯವರ್ತಿಗಳ ಮೂಲಕವೇ ಮಾತುಕತೆ ಮುಂದುವರಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಶಾಂತಿ ಮಾತುಕತೆಗಳ ಬದಲು ಮತ್ತಷ್ಟು ಉದ್ವಿಗ್ನತೆ ಹೆಚ್ಚುವ ಸಾಧ್ಯತೆ ವ್ಯಕ್ತವಾಗಿದ್ದು, ಮಧ್ಯಪೂರ್ವದ ಪರಿಸ್ಥಿತಿ ಗಂಭೀರವಾಗಿಯೇ ಮುಂದುವರಿಯುತ್ತಿದೆ.






