ಕರ್ನಾಟ ಕರಾಜ್ಯದಲ್ಲಿ ಶಾಲಾ ಪ್ರವೇಶ ವಯೋಮಿತಿ ಕುರಿತ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನಸಭೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದು, ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.ಇದುವರೆಗೆ ಮೊದಲ ತರಗತಿಗೆ ಸೇರಲು 6 ವರ್ಷ ಪೂರ್ಣಗೊಳ್ಳುವುದು ಕಡ್ಡಾಯವಾಗಿತ್ತು. ಆದರೆ ಇದೀಗ ಸರ್ಕಾರ 60 ದಿನಗಳ ವಿಶೇಷ ವಿನಾಯಿತಿ ನೀಡಲು ತೀರ್ಮಾನಿಸಿದೆ. ಇದರಂತೆ, 6 ವರ್ಷಕ್ಕಿಂತ ಸ್ವಲ್ಪ ಕಡಿಮೆ ಅಥವಾ 6 ವರ್ಷ 2 ತಿಂಗಳೊಳಗಿನ ಮಕ್ಕಳಿಗೂ ಪ್ರವೇಶ ಅವಕಾಶ ದೊರೆಯಲಿದೆ. ಇದರಿಂದ ವಯೋಮಿತಿ ಅಂತರದಿಂದ ಪ್ರವೇಶ ತಪ್ಪಿಸಿಕೊಳ್ಳುತ್ತಿದ್ದ ಮಕ್ಕಳಿಗೆ ದೊಡ್ಡ ಅನುಕೂಲವಾಗಲಿದೆ.

ಈ ನಿರ್ಧಾರವನ್ನು ಕಾನೂನುಬದ್ಧಗೊಳಿಸಲು ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಜೊತೆಗೆ, ಶಾಲಾ ದಾಖಲಾತಿ ಪ್ರಕ್ರಿಯೆಯಲ್ಲಿ ಬಳಸುವ ಆನ್‌ಲೈನ್ ತಂತ್ರಾಂಶದಲ್ಲಿಯೂ ಅಗತ್ಯ ಬದಲಾವಣೆಗಳನ್ನು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಸದನದಲ್ಲಿ ನಡೆದ ಚರ್ಚೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರವೇಶ ಸಂಬಂಧಿತ ಸಮಸ್ಯೆಗಳನ್ನೂ ಪ್ರಸ್ತಾಪಿಸಲಾಯಿತು. ಈ ಹಿನ್ನೆಲೆ, ಪ್ರೀ-ಪ್ರೈಮರಿ ಪ್ರವೇಶ ನಿಯಮಾವಳಿಗಳಲ್ಲೂ ಸ್ಪಷ್ಟತೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ. ಶಾಸಕ ಅರವಿಂದ್ ಬೆಲ್ಲದ ಈ ಸಡಿಲಿಕೆಯನ್ನು ಕಾನೂನುಬದ್ಧಗೊಳಿಸುವಂತೆ ಮನವಿ ಮಾಡಿದರು.ಈ ಹೊಸ ನಿರ್ಧಾರದಿಂದ ಸಾವಿರಾರು ಪೋಷಕರ ಆತಂಕ ಕಡಿಮೆಯಾಗಿದ್ದು, ಮಕ್ಕಳ ಶಿಕ್ಷಣದ ಆರಂಭದಲ್ಲಿ ಎದುರಾಗುತ್ತಿದ್ದ ಪ್ರಮುಖ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ.





