ಐಪಿಎಲ್‌ನ 19ನೇ ಆವೃತ್ತಿ ಆರಂಭಕ್ಕೆ ಕ್ಷಣಗಣನೆ ನಡೆಯುತ್ತಿರುವ ನಡುವೆ Board of Control for Cricket in India ಎಲ್ಲಾ ಫ್ರಾಂಚೈಸಿಗಳಿಗೆ ಮಹತ್ವದ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. ಟೂರ್ನಿಯ ಆರಂಭಕ್ಕೂ ಮುನ್ನವೇ ಅಭ್ಯಾಸ ಅವಧಿ, ಪಿಚ್ ಬಳಕೆ ಹಾಗೂ ಪಂದ್ಯ ದಿನದ ನಿಯಮಗಳ ಕುರಿತು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.

ಹೊಸ ಮಾರ್ಗಸೂಚಿಗಳ ಪ್ರಕಾರ, ಯಾವುದೇ ತಂಡವು ಎದುರಾಳಿ ತಂಡ ಬಳಸುವ ಪಿಚ್ ಅಥವಾ ನೆಟ್‌ಗಳನ್ನು ಬಳಸಲು ಅವಕಾಶವಿರುವುದಿಲ್ಲ. ಪ್ರತಿ ಅಭ್ಯಾಸ ಸೆಷನ್‌ಗಾಗಿ ಹೊಸ ಪಿಚ್‌ಗಳನ್ನು ಸಿದ್ಧಪಡಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಒಂದೇ ಮೈದಾನದಲ್ಲಿ ತಂಡಗಳು ಕ್ರಮವಾಗಿ ಅಭ್ಯಾಸ ಮಾಡಿದರೂ, ಮೊದಲ ತಂಡ ಬಳಸಿದ ನೆಟ್‌ಗಳನ್ನು ಮತ್ತೊಂದು ತಂಡ ಬಳಸುವುದನ್ನು ನಿಷೇಧಿಸಲಾಗಿದೆ.

ಪಂದ್ಯದ ದಿನಗಳಲ್ಲಿ ಯಾವುದೇ ರೀತಿಯ ಅಭ್ಯಾಸ ಅಥವಾ ಫಿಟ್‌ನೆಸ್ ಪರೀಕ್ಷೆಗಳನ್ನು ನಡೆಸಲು ಅನುಮತಿ ಇರುವುದಿಲ್ಲ. ಅಭ್ಯಾಸ ದಿನಗಳಲ್ಲಿ ಮಾತ್ರ ಮಾನ್ಯತೆ ಪಡೆದ ಸಿಬ್ಬಂದಿಗೆ ಡ್ರೆಸ್ಸಿಂಗ್ ರೂಮ್ ಹಾಗೂ ಮೈದಾನ ಪ್ರವೇಶ ನೀಡಲಾಗುತ್ತದೆ. ಆಟಗಾರರ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಅವರು ದೂರದಿಂದ ಅಭ್ಯಾಸ ವೀಕ್ಷಿಸಲು ಮಾತ್ರ ಅವಕಾಶವಿದೆ.

ಇದಲ್ಲದೆ, ಹೆಚ್ಚುವರಿ ಸಹಾಯಕ ಸಿಬ್ಬಂದಿ, ನೆಟ್ ಬೌಲರ್‌ಗಳು ಅಥವಾ ತ್ರೋಡೌನ್ ಸ್ಪೆಷಲಿಸ್ಟ್‌ಗಳ ವಿವರಗಳನ್ನು ಮುಂಚಿತವಾಗಿ BCCIಗೆ ಸಲ್ಲಿಸಬೇಕಾಗಿದೆ. ಅನುಮೋದನೆ ಬಳಿಕವೇ ಅವರಿಗೆ ಪ್ರವೇಶ ನೀಡಲಾಗುತ್ತದೆ. ಆಟಗಾರರು ಅಭ್ಯಾಸಕ್ಕೆ ತಂಡದ ಬಸ್‌ನಲ್ಲೇ ಪ್ರಯಾಣಿಸಬೇಕೆಂಬ ನಿಯಮವೂ ವಿಧಿಸಲಾಗಿದೆ.

ಪಂದ್ಯದ ದಿನದ ನಿಯಮಗಳ ಪ್ರಕಾರ, ಆಟಗಾರರು ಮತ್ತು ಅಧಿಕಾರಿಗಳು ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು. ನಿಯಮ ಉಲ್ಲಂಘನೆ ಮಾಡಿದರೆ ಮೊದಲ ಬಾರಿ ಎಚ್ಚರಿಕೆ, ನಂತರ ದಂಡ ವಿಧಿಸಲಾಗುತ್ತದೆ. ಬಹುಮಾನ ವಿತರಣಾ ಸಮಾರಂಭದಲ್ಲಿ ಆಟಗಾರರು ನಿಗದಿತ ಉಡುಪು ಧರಿಸಬೇಕು; ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ.ಈ ನಡುವೆ ಐಪಿಎಲ್ 19ನೇ ಆವೃತ್ತಿ ಮಾರ್ಚ್ 28ರಂದು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ರಾಯಲ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸ ಹೈದ್ರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣ ನಲ್ಲಿ ಸಂಜೆ 7.30ಕ್ಕೆ ನಡೆಯಲಿದೆ.






