• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಮತೆ ವಾತ್ಸಲ್ಯದ ಹೂರಣ – ಅಮ್ಮನ ನೆನಪು

ಜಗತ್ತೇ ಸಂಭ್ರಮಿಸುತ್ತಿದ್ದರೂ ಮನಸ್ಸು ಖಿನ್ನವಾಗುವುದು ಜೊತೆಗಿಲ್ಲದ  ಹೆತ್ತೊಡಲನು ನೆನೆದಾಗ..

ಪ್ರತಿಧ್ವನಿ by ಪ್ರತಿಧ್ವನಿ
March 19, 2026
in Top Story, ಅಂಕಣ, ಇದೀಗ, ಕರ್ನಾಟಕ, ಜೀವನದ ಶೈಲಿ
0
ಮಮತೆ ವಾತ್ಸಲ್ಯದ ಹೂರಣ – ಅಮ್ಮನ ನೆನಪು
Share on WhatsAppShare on FacebookShare on Telegram

 

ADVERTISEMENT

ವಿಶೇಷ ಲೇಖನ : ನಾ, ದಿವಾಕರ, ಹಿರಿಯ ಲೇಖರು..

 ಹೊಸ ವರ್ಷದ ಆಗಮನವನ್ನು ಸಂಭ್ರಮದಿಂದ ಆಚರಿಸುವ ಸಮಾಜದಲ್ಲಿ ಒಂದು ಮೂಲೆಯಲ್ಲಾದರೂ ಖಿನ್ನತೆ ಆವರಿಸಿದ್ದರೆ ಅದಕ್ಕೆ ಕಾರಣ ಭಾರತೀಯ ಸಮಾಜ ಅಲ್ಲ, ಸಾಮ್ರಾಜ್ಯಶಾಹಿ ದೇಶಗಳ ಯುದ್ಧದಾಹ ಮತ್ತು‌ ಮಹತ್ವಾಕಾಂಕ್ಷೆ. ಇರಾನ್‌ನಲ್ಲಿ ಎಳೆ ಹೆಣ್ಣು ಮಕ್ಕಳ ಶಾಲೆಯ ಮೇಲೆ ಅಮೆರಿಕ ಪ್ರಯೋಗಿಸಿದ ಕ್ಷಿಪಣಿ 160ಕ್ಕೂ ಹೆಚ್ಚು ಹಸುಳೆಗಳನ್ನು ಬಲಿ ತೆಗೆದುಕೊಂಡಿತ್ತು. ಈ ನೋವು ಮರೆವ ಮುನ್ನವೇ ಪಾಕಿಸ್ತಾನವು ಆಫ್ಘಾನಿಸ್ತಾನದ ಆಸ್ಪತ್ರೆಯೊಂದರ ಮೇಲೆ ದಾಳಿ ನಡೆಸಿ 400ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿದೆ. ಈ ದುಸ್ಸಾಹಸಗಳಷ್ಟೇ ಅಲ್ಲದೆ ಕವಿಯುತ್ತಿರುವ ಯುದ್ಧದ ಕಾರ್ಮೋಡ ಮಾನವ ಜಗತ್ತಿನ ಭವಿಷ್ಯವನ್ನೇ ಕರಾಳ ಕೂಪಕ್ಕೆ ದೂಡುವ ಸೂಚನೆಯಾಗಿ ಕಾಣುತ್ತಿದೆ.

ಸಹಜವಾಗಿ ಈ ಘಟನೆಗಳು ಸಮಾಜದ ಸಂವೇದನೆಯನ್ನು ಕಲಕಿದೆ, ಮನಸ್ಸುಗಳನ್ನು ಪ್ರಕ್ಷುಬ್ಧಗೊಳಿಸಿದೆ. ಯುಗಾದಿಯ ಸಂಭ್ರಮವನ್ನು ಘಾಸಿಗೊಳಿಸಿದೆ. ಈ ಗಾಯ ಬಹುಶಃ ಕೆಲವು ದಿನಗಳ ನಂತರ ಶಮನವಾಗಬಹುದು. ಆದರೆ ನನ್ನ ಗಾಯ ಮಾಗುವುದಲ್ಲ ಅಮ್ಮ. 

Happy Birthday Mother Images - AI Generated & Customizable

ಯುಗಾದಿಯ ದಿನವೇ ಹುಟ್ಟಿದ ನೀನು,  ಸದ್ದಿಲ್ಲದೆ ನಿರ್ಗಮಿಸಿ 35 ವರ್ಷಗಳೇ ಕಳೆದರೂ, ಹೊಸ ವರ್ಷದ ತೋರಣ, ಬೇವು ಬೆಲ್ಲಗಳ ನಡುವೆ ನೆನಪಾಗುವುದು ನಿನ್ನ ಮಡಿಲಿನಾಸರೆಯ ಭಾಗ್ಯವನ್ನು ಸವಿದ ನನ್ನ ಬದುಕಿನ ಅಮೂಲ್ಯ ಕ್ಷಣಗಳು. ಯಾವ ಸಿಹಿ ಹೂರಣವೂ ಸರಿಗಟ್ಟಲಾಗದಂತಹ ಜೇನಸಿಹಿಯನ್ನು ನಿನ್ನೊಡಲ ಮಮತೆ ವಾತ್ಸಲ್ಯಗಳಲ್ಲಿ ಸವಿದ ಮಧುರ ಕ್ಷಣಗಳ ನೆನಪು  ನನ್ನ ʼ ಯುಗಾದಿʼಯನ್ನು ಸಾರ್ಥಕಗೊಳಿಸುತ್ತದೆ.

 ಆತ್ಮಸ್ಥೈರ್ಯದ ಚಿಲುಮೆಯಾಗಿ,,,,,

 ಹೌದಲ್ಲವೇ ʼ ಅಮ್ಮ ʼ .  ಬಾಲ್ಯದ ಸುಭಿಕ್ಷ ಕಾಲದಲ್ಲಿ ನಿನ್ನ ಜನ್ಮ ದಿನವನ್ನು ಹಬ್ಬದ ಸಂಭ್ರಮದೊಂದಿಗೆ ಆಚರಿಸುತ್ತಿದ್ದ ದಿನಗಳಷ್ಟೇ ಗಾಢವಾಗಿ ಕಾಡುವುದು ತದನಂತರದ ದುರ್ಭಿಕ್ಷ ಕಾಲದ ಬದುಕಿನಲ್ಲಿ ಎಲ್ಲವನ್ನೂ ಮರೆತು ನಾಳೆಗಳ ಯೋಚನೆಯಲ್ಲಿ ಕಳೆದ ಆ ಭೀಕರ ಕ್ಷಣಗಳು. ನೀನು ಉಪ್ಪರಿಗೆಯನ್ನೂ ಕಂಡವಳು ಪಾತಾಳವನ್ನೂ ಅನುಭವಿಸಿದವಳು. ಹೇಗೆ ಸಾಧ್ಯವಾಯಿತು ಎಂಬ ಜಿಜ್ಞಾಸೆಗೆ ಉತ್ತರಿಸಲು ನೀನೂ ಇಲ್ಲ, ನನಗೆ ಉತ್ತರ ಹೊಳೆಯುವುದೂ ಇಲ್ಲ. ಮತ್ತೊಬ್ಬರ ಕಷ್ಟ ಸುಖಗಳಿಗೆ ಕೂಡಲೇ ಸ್ಪಂದಿಸಿ ಕಣ್ಣೀರು ಒರೆಸುತ್ತಿದ್ದ ನಿನ್ನ ಸೆರಗಿನ ಅಂಚು, ನಿನ್ನ ಕಂಬನಿಧಾರೆಯಲ್ಲೇ ತೊಯ್ದು ತೊಪ್ಪೆಯಾದ ದಿನಗಳೂ ನೆನಪಾಗುತ್ತವೆ.

Free Mother Child Silhouette Image - Mother, Child, Silhouette | Download at StockCake

 ಆದರೆ ನೀನು ಹರಿಸಿದ ಕಂಬನಿ ನಿನ್ನ ಸಂಕಷ್ಟಗಳಿಗಾಗಿ ಅಲ್ಲ. ನಿನ್ನ ಮಡಿಲನ್ನೇ ಆಶ್ರಯಿಸಿದ್ದ ಮಕ್ಕಳಿಗಾಗಿ. ಈ ಕಂಬನಿ ಒರೆಸಬೇಕಿದ್ದ, ನಿನ್ನ ನಗುಮೊಗವನ್ನು ಮತ್ತಷ್ಟು ಅರಳಿಸಿ, ಶಾಶ್ವತಗೊಳಿಸುವ ಜವಾಬ್ದಾರಿ ಹೊತ್ತವರಾದರೂ ಯಾರಮ್ಮಾ ? ಎಲ್ಲರೂ ಜಾರಿಕೊಂಡವರೇ                   ಅಲ್ಲವೇ ? ಆದರೂ ನೀನು ಎದೆಗುಂದಲಿಲ್ಲ. ದೃಢವಾಗಿ ನಿಂತೆ. ಯಾವ ದೇವರಿಗೂ ಹರಕೆ ಸಲ್ಲಿಸಲಿಲ್ಲ. ಯಾವ ದೇವಸ್ಥಾನಕ್ಕೂ ಹೋಗಿ ಬೇಡಲಿಲ್ಲ. ಸುಶ್ರಾವ್ಯ ಕಂಠದಿಂದ ದೇವರನಾಮಗಳನ್ನು ಹಾಡುತ್ತಿದ್ದುದೊಂದೇ ನೆನಪಾಗುತ್ತದೆ. ಬಹುಶಃ ಅದರಲ್ಲೇ ನಿನ್ನ ಸಾಂತ್ವನದ ಶಕ್ತಿ ಅಡಗಿತ್ತೇನೋ ??? ಮನಸ್ಸಿಗೆ ಬಹಳ ನೋವಾದಾಗ “ ಯಾರು ಬದುಕಿದರಯ್ಯ ಹರಿ ನಿನ್ನ ನಂಬಿ,,,,,,,” ದಾಸರ ಪದವನ್ನೂ ಅಷ್ಟೇ ತನ್ಮಯಳಾಗಿ ಹಾಡುತ್ತಿದ್ದೆ.

Page 3 | Mother Crying Stock Photos, Images and Backgrounds for Free Download

 ನಿನ್ನೊಳಗಿನ ಆ ಧೀಶಕ್ತಿ ಅಥವಾ ಆತ್ಮಸ್ಥೈರ್ಯವನ್ನು ಅಣ್ಣ (ಅಪ್ಪ) ಸಾಯುವ ಮುನ್ನವೇ ಕಂಡಿದ್ದವ ನಾನು. ಗೊತ್ತು ಗುರಿಯಿಲ್ಲದ, ನೂರು ಕಿಲೋಮೀಟರ್‌ಗೂ ಹೆಚ್ಚಿನ ದೂರದ ಕುಣಿಗಲ್‌ ಬಳಿಯ ಸಣಬ ಗ್ರಾಮಕ್ಕೆ ನೀವು ದಂಪತಿಗಳಿಬ್ಬರೂ ಹೊರಟಾಗಲೂ ನಿನ್ನಲ್ಲಿ ಆ ಆತ್ಮಸ್ಥೈರ್ಯ ಕಂಡಿದ್ದೆ. ರೈಸ್‌ ಮಿಲ್‌ ಒಂದರಲ್ಲಿ ಲೆಕ್ಕ ಬರೆಯಲು ಹೊರಟ ಗಂಡನ ಹಿಂದೆ ಒಂದು ಮಾತನ್ನೂ ಆಡದೆ ಹೊರಟ ನಿನ್ನ ಮನದಲ್ಲಿದ್ದುದಾದರೂ ಏನು ? ಬಹುಶಃ ಈ ನಿರ್ಗಮನದ ಕೆಲವು ದಿನಗಳ ಮುನ್ನ ನಿನ್ನ ಕಿವಿಗೆ ಅಪ್ಪಳಿಸಿದ, ಹೃದಯ ಛಿದ್ರಗೊಳಿಸುವ ಅಪಮಾನದ ಮಾತುಗಳು ನಿನ್ನ ಮೌನಕ್ಕೆ ಕಾರಣವಿದ್ದಿರಬಹುದು ಅಲ್ಲವೇ ಅಮ್ಮಾ ?

 ಅಣ್ಣನ ಔಷಧಿಗಾಗಿ ದುಡ್ಡು ಕೇಳಿದಾಗ “ ಎಷ್ಟು ಅಂತ ಮಾಡೋಕಾಗುತ್ತದೆ, ಒಣಮರಕ್ಕೆ ನೇಣು ಹಾಕ್ಕೋಳಕ್ಕೆ ಹೇಳು ” ಎಂಬ ಚುಚ್ಚು ಮಾತುಗಳು ಬಂದಿದ್ದು ನಿನ್ನ ಒಡಲ ಕುಡಿಯಿಂದಲೇ ಅಲ್ಲವೇ ? ಅದು ಯಾರು ಎನ್ನುವುದು ಪ್ರಶ್ನೆಯಲ್ಲ. ಅಂತಹ ಕಠೋರ ಉತ್ತರ ಏಕೆ ಬಂದಿತ್ತು ಎನ್ನುವುದು ಪ್ರಶ್ನೆ. ಆ ಕ್ಷಣದಲ್ಲಿ ನಿನ್ನ ಕಣ್ಣು ಹನಿಯಲಿಲ್ಲ ಆದರೆ ಎದೆಯ ಕುದಿತ ಹೆಚ್ಚಾಗಿರಬೇಕು ಅಲ್ಲವೇ ಅಮ್ಮಾ ? ಸಹಜ, ಈ ಮಾತು ಅಪ್ಪನ ಕಿವಿಗೂ ಬಿದ್ದಾಗ ಅವರಾಡಿದ ಮಾತುಗಳು ಮಾತ್ರ ನನ್ನ ಎದೆಯಾಳದಲ್ಲಿ ಸಾಫ್ಟ್‌ವೇರ್‌ ಚಿಪ್‌ನ ಹಾಗೆ ಉಳಿದುಬಿಟ್ಟಿದೆ. ” ಇವರ್ಯಾರ ಸಹವಾಸಾನೇ ಬೇಡ ಶಕುಂತಲ, ಬೋಂಡ ವಡೆ ಮಾಡಿ ನಿನ್ನನ್ನು ಸಾಕ್ತೀನಿ ನಡಿ ಹೋಗೋಣ,,,,,,,“ ಎಂಬ ಅವರ ತಣ್ಣನೆಯ ಮಾತುಗಳಲ್ಲಿ ನಾನು ಕಂಡಿದ್ದಾದರೂ ಏನು ?

 ಜೀವ ಪ್ರೀತಿಯ ಅಲೆಗಳ ನಡುವೆ

 ಆ ದಾಂಪತ್ಯದ ಪ್ರೀತಿ, ವಿಶ್ವಾಸ ಮತ್ತು ಭರವಸೆಯನ್ನಷ್ಟೇ. ಆ ಊರಿನಲ್ಲಿ ಅದು ಸಾಧ್ಯವಾಗುತ್ತಿರಲಿಲ್ಲ ಅಲ್ಲವೇ ? ಎಷ್ಟೋ ಅಂಗಡಿಗಳಿಗೆ ಸಾಲ ಕೊಟ್ಟ ಬ್ಯಾಂಕಿಂಗ್‌ ಕೈಗಳು ಅವು. ಪೆನ್ನು ಹಿಡಿದು ಸಂಸಾರ ನೌಕೆ ಸಾಗಿಸಿದ ಜೀವ ಅದು. ರಸ್ತೆ ಬದಿಯಲ್ಲಿ ಬೋಂಡಾ ವಡೆ ಮಾಡಲು ಸಾಧ್ಯವೇ ? ಆದರೂ ನೀನು ಸಮ್ಮತಿಸಿದ್ದು ನಿನ್ನ ಆತ್ಮಸ್ಥೈರ್ಯಕ್ಕೊಂದು ಜೀವಂತ ಸಾಕ್ಷಿ. ಇದರ ಮುಂದಿನ ಪರಿಣಾಮವೇ ಆ ʼ ಸಣಬ ʼ ಗ್ರಾಮಕ್ಕೆ ಪಯಣ. ರೈಸ್‌ಮಿಲ್‌ ಮೂಲೆಯಲ್ಲೇ ಹೊಂದಿಕೊಂಡಂತೆ ಒಂದು ಕೋಣೆಯ ಪುಟ್ಟ ಮನೆ. ಯಾಸೀನ್‌, ಹಯಾತ್‌ ಎಂಬ ನೌಕರರೊಡನೆ ಆತ್ಮೀಯ ಬಾಂಧವ್ಯ. ಮಾಲೀಕರಾದ ಗೌಡರ ಕುಟುಂಬದ ಪ್ರೀತಿ ವಿಶ್ವಾಸ. ಎಲ್ಲವನ್ನೂ ಸಂಪಾದಿಸಿದೆ.

Emotional photo of a mother and son watching the generative ai | Premium AI-generated image

 ಆದರೆ ಮತ್ತೆ ಪತಿಯ ಅನಾರೋಗ್ಯ ನಿಮ್ಮನ್ನು ತವರಿಗೆ ವಾಪಸ್‌ ತಂದಿತ್ತು. ನಿಮ್ಮನ್ನು ವಾಪಸ್‌ ಬನ್ನಿ, ನಾನು ನೋಡಿಕೊಳ್ಳುತ್ತೇನೆ ಎಂದು ಹೇಳುವ ಮಾನವೀಯ ಧ್ವನಿಯಂತೂ ಕೇಳಿಬರಲಿಲ್ಲ. ನನ್ನ ಹೈಸ್ಕೂಲು ದಿನಗಳಲ್ಲಿ ಕಂಡಂತಹ ಈ ದೃಶ್ಯಗಳು ಮತ್ತು ಪ್ರಹಸನಗಳು ಅಚ್ಚಳಿಯದೆ ಉಳಿದಿವೆ ಅಮ್ಮ. ಆ ಹೊಸ ವಾತಾವರಣದಲ್ಲೂ ನಿನ್ನ ನಗುಮೊಗ ಕಳೆಗುಂದಿರಲಿಲ್ಲ. ವಿಶ್ವಾಸ ತಗ್ಗಿರಲಿಲ್ಲ. ಆದರೆ ಈ ನೈತಿಕ ಸ್ಥೈರ್ಯವೆಲ್ಲವೂ ಒಮ್ಮಲೇ ಘಾಸಿಗೊಳಗಾಗಲು ಹೆಚ್ಚು ಸಮಯವೂ ಬೇಕಾಗಲಿಲ್ಲ. ಒಂದೇ ವರ್ಷದಲ್ಲಿ ನಿನ್ನ ದಾಂಪತ್ಯ ಜೀವನದ ಕೊಂಡಿ ಕಳಚಿತ್ತು. ಈ ಜೀವವನ್ನು ಉಳಿಸಬಹುದಿತ್ತು. ಆದರೆ ಹಾಗೆ ಯೋಚಿಸಿದವರಾರು ?

 ಈಗ್ಗೆ ಹದಿನೈದು ವರ್ಷಗಳ ಹಿಂದೆ ದೊಡ್ಡಣ್ಣ ಮುಂಬೈನಿಂದ ಬಂದಿದ್ದಾಗ “ ದಿವಿ, ಆ ಸಮಯದಲ್ಲಿ ನಾನು ದೊಡ್ಡ ತಪ್ಪು ಮಾಡಿಬಿಟ್ಟೆ ಕಣೋ ಆ ಗಿಲ್ಟ್‌ ಕಾಡುತ್ತಿದೆ ” ಎಂದಾಗ ನನ್ನ ಉಸಿರುಕಟ್ಟಿತ್ತು. ಪ್ರಾಯಶ್ಚಿತ್ತ ಪಶ್ಚಾತ್ತಾಪಗಳು ವರ್ತಮಾನಕ್ಕೆ ಮುಲಾಮು ಹಚ್ಚುತ್ತವೆ ಆದರೆ ಸವೆದು ಹೋದ ಹಾದಿಗಳಲ್ಲಿ ಅನುಭವಿಸಿದ ಯಾತನೆಗಳನ್ನು ಹೇಗೆ ಸ್ಪರ್ಶಿಸಲು ಸಾಧ್ಯ  ಅಲ್ಲವೇನಮ್ಮಾ ? ಆ ಸಮಯದ ನಿನ್ನ ಕಂಬನಿಗಳನ್ನು ಊಹಿಸುವುದೂ ಅವನಿಗೆ ಕಷ್ಟವಾಗುತ್ತಿತ್ತು. ನೇರವಾಗಿ ಕಂಡಿದ್ದರೆ ತಾನೇ ? ಗತ ಜೀವನದ ದುರ್ಭಿಕ್ಷದ ದಿನಗಳನ್ನು ನೆನೆಯುವಾಗ ಈ ಅರ್ಥಹೀನ ಪ್ರಲಾಪಗಳೂ ನೆನಪಾಗುತ್ತವೆ. ನೀನೇ ಕಲಿಸಿದ ಸಂಯಮ, ತಾಳ್ಮೆ ಇಂತಹ ಅಪಭ್ರಂಶಗಳೆಲ್ಲವನ್ನೂ ಸಹಿಸಿಕೊಂಡೇ ನಡೆಯುತ್ತಿದ್ದೇನೆ.

Podcast with UPSC Topper Kiran kamate : ಕೋಚಿಂಗ್ ಇಲ್ಲದೆ ಐಎಎಸ್ ಪಾಸ್ ಆಗೋದು ಹೇಗೆ..? #pratidhvani

 ಪುತ್ರ ವಾತ್ಸಲ್ಯದ ಅಮೂಲ್ಯ ಚಹರೆ

 ನಿನ್ನ ಹುಟ್ಟುಹಬ್ಬದ ದಿನ ನೆನಪಾಗುವುದು ನನ್ನ ಮೇಲೆ ನಿನಗಿದ್ದ ವಾತ್ಸಲ್ಯವನ್ನು ಸಾಕ್ಷೀಕರಿಸುವಂತಹ ಕೆಲವು ಪ್ರಸಂಗಗಳು. 1982 ಚಿಂತಾಮಣಿ ಬಳಿಯ ಕೈವಾರದಲ್ಲಿದ್ದಾಗ, ನಾಳೆಯ ಚಿಂತೆಯಲ್ಲೇ ಕಳೆದರೂ ಸಹ ಆ ನಾಳೆ ಬೆಳಕು ಕಂಡೇ ಕಾಣುತ್ತದೆ ಎಂಬ ಭರವಸೆ ಮೂಡಿದ್ದಕ್ಕೆ ಕಾರಣ ನಿನ್ನಲ್ಲಿದ್ದ ಆ ಆತ್ಮವಿಶ್ವಾಸ ಮತ್ತು ಬದುಕುವ ಛಲ. ನನ್ನ ಚಿಂತಾಕ್ರಾಂತ ಮುಖವನ್ನು ನೋಡಿದಾಗಲೆಲ್ಲಾ ನೀನು ಹೇಳುತ್ತಿದ್ದುದು ಒಂದೇ ಮಾತು,  “ ಮಗೂ ಯೋಚಿಸಿದರೆ ಫಲವಿಲ್ಲ ಏನಾದರೂ ಮಾಡಿದರಾಗುತ್ತೆ, ಧೈರ್ಯವಾಗಿರು” ಇಂತಹ ಭರವಸೆಯ ಮಾತುಗಳು ಸಾಕಾರಗೊಂಡು ನನಗೆ ಬ್ಯಾಂಕ್‌ ನೌಕರಿಯ ಆದೇಶ ಪತ್ರ ಕೈ ತಲುಪಿದಾಗ ನಿನ್ನ ಕಣ್ಣಿಂದ ಹೊರಸೂಸಿದ ಆನಂದ ಬಾಷ್ಪವನ್ನು ಹೇಗೆ ಮರೆಯಲಿ ಅಮ್ಮ ?

Mother and Son

 ಸಂಜೆ ಮನೆಗೆ ಬಂದ ಕೂಡಲೇ ಈ ಸಂತೋಷದ ವಿಚಾರ ನೀನು ಹೇಳಿದ್ದೆ. ನಾನು ಮಾಡಿದ ಮೊದಲ ಕೆಲಸ ನಿನ್ನ ಪಾದಸ್ಪರ್ಶ ಮಾಡಿ ನಮಿಸಿದ್ದು. “ ಈಗಲಾದರೂ ದೇವರಿಗೆ ಕೈ ಮುಗಿಬಾರ್ದಾ ಕರೂ,,,,,” ಎಂಬ ನಿನ್ನ ಮಾತುಗಳೂ ನೆನಪಿವೆ. ನಾನು ಸ್ಪರ್ಶಿಸಿ ನಮಿಸಿದ್ದು ಇನ್ನಾರಿಗೆ ಎಂದುಕೊಂಡೆ ಎಂದು ಹೇಳಿದಾಗ ನಿನ್ನ ಕಂಗಳು ಮತ್ತೊಮ್ಮೆ ಒದ್ದೆಯಾಗಿದ್ದವು. ಈ ಕ್ಷಣಗಳು ಈಗ ನೆನಪಾಗುವುದಾದರೂ ಏಕೆಂದುಕೊಂಡೆ ? ನನ್ನ ವರ್ತಮಾನದ ಬದುಕಿನಲ್ಲಿ ದುಃಖ ದುಮ್ಮಾನಗಳಿಗರಲಿ, ಹರ್ಷೋಲ್ಲಾಸದ ಕ್ಷಣಗಳಿಗರಲಿ ಆ ರೀತಿಯ ʼ ಆನಂದಬಾಷ್ಪ ʼ ಕಾಣುವುದು ಸಾಧ್ಯವೇ ಇಲ್ಲ. ಹಂಚಿಕೊಳ್ಳುವ ಜೀವಗಳೇ ಇಲ್ಲವಲ್ಲಾ ! ! !

ಇಂತಹ ಕ್ಷಣಗಳಲ್ಲಿ ನೀನು ಬಹಳವೇ ಕಾಡುತ್ತೀಯ. ಬ್ಯಾಂಕಿನಲ್ಲಿದ್ದಾಗಲೂ ಸಹ, ಆಫೀಸಿನಿಂದ ಬರುವುದು ಅರ್ಧಗಂಟೆ ತಡವಾದರೆ “ ನನ್ನ ಮಗು ಯಾಕೋ ಇನ್ನೂ ಬರಲಿಲ್ವೇ ……” ಎಂದು ಬಾಗಿಲ ಬಳಿಯೋ, ಗೇಟಿನ ಬಳಿಯೋ ನಿಂತುಕೊಂಡಿರುವ ನಿನ್ನ ಆ ವಾತ್ಸಲ್ಯ ಇನ್ನಾರಲ್ಲಿ ಕಾಣಲು ಸಾಧ್ಯ. ದಾವಣಗೆರೆಯಲ್ಲಿದ್ದಾಗ ಒಮ್ಮೆ ಮನೆಗೆ ಪರಿಚಯಸ್ಥರು ಬಂದಿದ್ದಾರೆ.

ನಾನು ಹಳ್ಳಿಯಿಂದ ವಾಪಸ್‌ ಬರುವುದು ಸಹಜವಾಗಿ ತಡವಾಯಿತು. ಆಗ ನೀನು ” ನಮ್ಮ ಕರು ಯಾಕೋ ಬಂದಿಲ್ವೇ ,,,,,“ ಎಂದು ಮೂರ್ನಾಲ್ಕು ಬಾರಿ ಪರಿತಪಿಸಿದ್ದನ್ನು ಗಮನಿಸಿದ್ದ ಅತಿಥಿಗಳು, ನಾನು ಬಂದ ಕೂಡಲೇ “ ಅಮ್ಮಾ ಬಂತು ನೋಡಿ ನಿಮ್ಮ ಕರು, ಕಲಗಚ್ಚು ಇಡಿ,,,,,” ಎಂದು ತಮಾಷೆ ಮಾಡಿದ್ದರು.ಈ ಪ್ರಸಂಗಗಳೆಲ್ಲವೂ ಕಣ್ಣಮುಂದೆ ಹಾದು ಹೋಗುತ್ತವೆ ಅಮ್ಮ.

Generative ai with a mother and son at the window | Premium AI-generated image

ತಾಯ ಪ್ರೀತಿ ಸಹಜ, ನಿಜ. ಆದರೆ ಆ ಪ್ರೀತಿಯಲ್ಲಿ ಅಡಗಿದ್ದ ಆತಂಕ, ದುಗುಡ, ದುಃಖ ಎಲ್ಲವನ್ನೂ ಸರಿದೂಗಿಸಿಕೊಂಡು, ಸಂಕಟದ ಸಮಯದಲ್ಲಿ ಸಾಂತ್ವನ ನೀಡುತ್ತಾ, ಎಳೆ ಹಸುಳೆಯನ್ನು ಸಂತೈಸುವ ರೀತಿ ಮಾತನಾಡುತ್ತಿದ್ದ ನಿನ್ನ ತಾಯ್ಮಮತೆ ನನಗೆ ವಿಶೇಷವಾಗಿಯೇ ಕಾಣುತ್ತದೆ. ಮನೆಗೆ ಬಂದ ಅತಿಥಿಗಳೊಡನೆ ಮಾತನಾಡುವಾಗ “ ನಮ್ಮ ಕರು ಹೆಚ್ಚು ಮಾತನಾಡೋದೇ ಇಲ್ಲ,,,,,” ಎಂದು ನೀನು ಹೇಳುತ್ತಿದ್ದುದು ಸಾಮಾನ್ಯ ಸಂಗತಿ. ಈ ಪ್ರಸಂಗಗಳು 25 ವರ್ಷಗಳ ಹಿಂದೆ ಅಗಲಿದ ಅಣ್ಣ ನಾಗರಾಜನ್ನೂ ನೆನಪಿಸುತ್ತವೆ. “ ನಿಂದೇ ಅಲ್ಲ, ಯಾವ ಕರೂನೂ ಮಾತಾಡಲ್ಲ,,,,,”  ಇದು ಅವನ ಹಾಸ್ಯಮಿಶ್ರಿತ ಉತ್ತರವಾಗಿರುತ್ತಿತ್ತು. ಈಗ ಅವನೂ ಇಲ್ಲ, ನೀನೂ ಇಲ್ಲ.

 ನೆನಪುಗಳ ಹಾಯಿದೋಣಿಯಲ್ಲಿ,,,,,,

 ನೆನಪುಗಳ ಕಡಾಯಿಯಲ್ಲಿ ಬೇಯುತ್ತಲೇ ಸಾಗುತ್ತಿದ್ದೇನೆ. ಆದರೆ ನೀನು ಬಿತ್ತಿರುವ ಧೈರ್ಯದ ಬೀಜ ಮೊಳೆತು ಗಿಡವಾಗಿದೆ. ಬದುಕನ್ನು ಎದುರಿಸುವ  ಆತ್ಮಸ್ಥೈರ್ಯ ನಿನ್ನಿಂದ ಪಡೆದಿದ್ದೇನೆ. ನಿನ್ನ ಸ್ವಾಭಿಮಾನಿ ಬದುಕಿನ ಪ್ರತಿಯೊಂದು ಕ್ಷಣವೂ ನೆನಪಾಗುತ್ತದೆ.

ಮನುಜ ಸಂಬಂಧಗಳು ಸೂಕ್ಷ್ಮತೆಯನ್ನೇ ಕಳೆದುಕೊಳ್ಳುತ್ತಿರುವ ಈ ಕ್ಷಣದಲ್ಲಿ, ತೊರೆದ ಸಂಬಂಧಗಳಿಗೆ ಮರುಗದೆ ಭವಿಷ್ಯದೆಡೆಗೆ ನಡೆಯುವ ಮನೋಭಾವಕ್ಕೆ ನಿನ್ನ ಸ್ವಾಭಿಮಾನದ ನಡೆಯೇ ಸ್ಪೂರ್ತಿ. “ ಯಾರೇ ದೂರವಾಗಲಿ ನಾನು ಬದುಕುತ್ತೇನೆ ” ಎಂಬ ನಿನ್ನ ಅಚಲ ನಿರ್ಧಾರ ನಿನ್ನನ್ನು ಹೆಚ್ಚು ಕಾಲ ಬದುಕಿಸಿತ್ತು. ಈ ಸ್ಫೂರ್ತಿಯೇ ನನ್ನನ್ನೂ ಬದುಕಿಸಿದೆ. ಇನ್ನೆಷ್ಟು ವರ್ಷವೋ ಗೊತ್ತಿಲ್ಲ.

A Charcoal Portrait Print of a Traditional Indian Woman Embracing Her

 ಒಂದು ಮಾತು ಹೇಳಲೇಬೇಕಿದೆ ಅಮ್ಮ. ನಿನ್ನ ಮಡಿಲಲ್ಲಿ 30 ವರ್ಷಗಳನ್ನು ಕಳೆದೆ, ನೀನಿಲ್ಲದೆ 35 ವರ್ಷಗಳನ್ನು ಕಳೆದಿದ್ದೇನೆ. ಯುಗಾದಿಯ ದಿನ ಹೋಳಿಗೆಯ ಹೂರಣ ಎಷ್ಟೇ ಸಿಹಿಯಾಗಿದ್ದರೂ, ನಿನ್ನ ಹುಟ್ಟಿದ ದಿನವಾಗಿ ಇದು ನನ್ನೊಳಗಿನ ಬಾಳ ಹೂರಣವನ್ನು ಹೊರಗೆಳೆದುಬಿಡುತ್ತದೆ. ಸಿಹಿ-ಕಹಿ ಮಿಶ್ರಿತ ಜೀವನದ ದುರ್ಗಮ ಹೆಜ್ಜೆಗಳು, ಹರ್ಷದ ಕ್ಷಣಗಳು ಮನದಾಳದಲ್ಲಿ ಸುಳಿದಾಡುತ್ತವೆ. ಈ ನೆನಪುಗಳೇ ನಾಳೆಯ ಭರವಸೆಯ ಕ್ಷಣಗಳನ್ನು ರೂಪಿಸುತ್ತವೆ. ಆದರೂ ನಿನ್ನ ವಾತ್ಸಲ್ಯದ ಮಡಿಲು ನೆನಪಾಗಿ ಕಾಡಿದಾಗ, ಕಣ್ಣುಗಳು ಶುಷ್ಕವಾಗಿರುವುದು ಸಾಧ್ಯವೇ ಇಲ್ಲ.

 ಒಂದೆರಡು ಕಂಬನಿಯ ಹನಿ ನೆಲ ಕಾಣಲಿ ಬಿಡು. 60 ವರ್ಷಗಳ ಹಳೆಯ ಭಾವಚಿತ್ರದ ಹೊರತು,  ಆ ಹನಿಗಳಲ್ಲಿ ನಿನ್ನ ನಗುಮೊಗವನ್ನು ಕಾಣುತ್ತೇನೆ. ಇನ್ನೇನು ಮಾಡಲು ಸಾಧ್ಯ ಹೇಳಮ್ಮಾ ?

-೦-೦-೦-೦-

Tags: affectionBrotherChintamani KaivaraEmotional MomentsFamily SystemfatherHappy birth day motherMemoriesMother lifeMother LoveMother SentimentNa Divakar ArticlePratidhvaniSacrificed LifeSisterSon wishes MotherSpecial ArticleUgadi Festival
Previous Post

ಯುಗದ ಆದಿ ಹೊಸ ಬದುಕಿಗೆ ಹಾದಿ :  ಹಳೆಯ ನೋವು ಮರೆಸಿ, ಹೊಸ ಆಶಯಗಳ ತುಂಬುವ ಹಬ್ಬ..

Next Post

ಯುಗಾದಿ ಹಬ್ಬದಲ್ಲಿ ಏನು ಮಾಡಬೇಕು? ಏನು ಮಾಡಬಾರದು?

Related Posts

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ
ಅಂಕಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

by ಪ್ರತಿಧ್ವನಿ
May 21, 2026
0

(ದಿನಾಂಕ 15 ಮೇ 2026ರಂದು ಡಾ ಬಿ.ಆರ್.‌ ಅಂಬೇಡ್ಕರ್‌ ಜಯಂತಿಯ ಪ್ರಯುಕ್ತ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಉಪನ್ಯಾಸದ ಲೇಖನ ರೂಪ...

Read moreDetails
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

May 21, 2026
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

May 20, 2026
Next Post
ಯುಗಾದಿ ಹಬ್ಬದಲ್ಲಿ ಏನು ಮಾಡಬೇಕು? ಏನು ಮಾಡಬಾರದು?

ಯುಗಾದಿ ಹಬ್ಬದಲ್ಲಿ ಏನು ಮಾಡಬೇಕು? ಏನು ಮಾಡಬಾರದು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada