
ನಾ ದಿವಾಕರ
21ನೆ ಶತಮಾನದಲ್ಲಿ ಮುದ್ರಣ ಮಾಧ್ಯಮ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಡಿಜಿಟಲ್ ಯುಗದ ಬಂಡವಾಳಶಾಹಿ ಮಾರುಕಟ್ಟೆ ಸಂಪೂರ್ಣವಾಗಿ ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗೆ ಪೂರಕವಾಗಿ ಕಾರ್ಯನಿರ್ವವಹಿಸುತ್ತಿದ್ದು, ಪತ್ರಿಕಾ ಮಾಧ್ಯಮಗಳ ಅಳಿವು-ಉಳಿವು ಈ ಮಾರುಕಟ್ಟೆಯ ಆದ್ಯತೆ ಮತ್ತು ಅವಕಾಶಗಳನ್ನೇ ಅವಲಂಬಿಸುವಂತಾಗಿದೆ. ರಾಜ್ಯಮಟ್ಟದ-ಪ್ರಾದೇಶಿಕ ಪತ್ರಿಕೆಗಳು ತೆವಳುತ್ತಾ ಸಾಗುವ ಸಂಕಟಗಳನ್ನು ಅನುಭವಿಸುತ್ತಲೇ, ಜಾಹೀರಾತು ಮಾರುಕಟ್ಟೆ ಇಲ್ಲದೆ ತಮ್ಮ ಅಸ್ತಿತ್ವವನ್ನು ಊಹಿಸಿಕೊಳ್ಳಲೂ ಸಾಧ್ಯವಾಗದ ಸಂದಿಗ್ಧತೆ ಎದುರಿಸುತ್ತಿವೆ. ಸರ್ಕಾರಿ ಜಾಹೀರಾತುಗಳು ಪತ್ರಿಕಾ ಮಾಧ್ಯಮವನ್ನು ಆಳ್ವಿಕೆಯ ಹಿತಾಸಕ್ತಿಗಳ ಸಂಕೋಲೆಯಲ್ಲಿ ಬಂಧಿಸಿದರೆ, ಖಾಸಗಿ ಮಾರುಕಟ್ಟೆ ಇದನ್ನು ಪೋಷಕತ್ವದ ಸರಪಳಿಗಳಲ್ಲಿ ಬಂಧಿಸುತ್ತದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒಂದು ಮುದ್ರಿತ ಪತ್ರಿಕೆಯನ್ನು ಹೊರತರುವುದು ಎಷ್ಟು ಕಷ್ಟಕರವೋ ಅಷ್ಟೇ ತ್ರಾಸದಾಯಕವಾದ ಮತ್ತೊಂದು ಕೆಲಸ ಎಂದರೆ ನಿಯತಕಾಲಿಕವಾಗಿ, ಸಂಪಾದಕರ ಆಶಯ-ಗುರಿ ಮತ್ತು ತಾತ್ವಿಕ ನೆಲೆಗಳಿಗೆ ಪೂರಕವಾದ ಸಮಾಜಮುಖಿ ಸಂಪಾದಕೀಯ ಬರೆಯುವುದು. ಟ್ಯಾಬ್ಲಾಯ್ಡ್ ಪತ್ರಿಕೆ ಎಂದಾಕ್ಷಣ ವಕ್ರದೃಷ್ಟಿಯಿಂದ ನೋಡುವ ಸಮಾಜದ ಧೋರಣೆಯನ್ನು ಬದಲಿಸಿದ ಲಂಕೇಶ್ ಪತ್ರಿಕೆ, ಈ ಮಾದರಿಯನ್ನೇ ಒಂದು ಪರಂಪರೆಯಾಗಿ ಬೆಳೆಸಿರುವುದು ವಾಸ್ತವ. ಇದನ್ನು ಆತ್ಮರತಿಯ ನೆಲೆಯಲ್ಲಿ ನೋಡದೆ, ವಸ್ತುನಿಷ್ಠವಾಗಿ ನೋಡಿದಾಗ, ಕೆಲವೇ ಟ್ಯಾಬ್ಲಾಯ್ಡ್ ಪತ್ರಿಕೆಗಳು ತಮ್ಮ ಸಮಾಜಮುಖಿ ಲಕ್ಷಣಗಳನ್ನು ಉಳಿಸಿಕೊಂಡಿರುವುದು ಕಟು ವಾಸ್ತವ.

ಜಟಿಲ ಸವಾಲುಗಳ ನಡುವೆ
ಡಿಜಿಟಲ್ ಯುಗದಲ್ಲಿ ಮಾಧ್ಯಮ ಜಗತ್ತು ಸೃಷ್ಟಿಸಿರುವ ಕೆಲವು ಮಿಥ್ಯೆಗಳನ್ನು ಒಡೆಯುತ್ತಲೇ ತಮ್ಮ ಪ್ರಸಾರ ಮತ್ತು ಪ್ರಸರಣ ವ್ಯಾಪ್ತಿಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಈ ಪತ್ರಿಕೆಗಳ ಮೇಲಿರುತ್ತದೆ. ಇಂತಹ ಸಂದಿಗ್ಧತೆಯ ನಡುವೆ ಪತ್ರಿಕಾ ಸಂಪಾದಕರೊಬ್ಬರಿಗೆ ಸಾಮಾಜಿಕ-ಆರ್ಥಿಕ-ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಸರ್ಕಾರದ, ಸಮಾಜದ, ಸಂಘಟನೆಗಳ ಹಾಗೂ ರಾಜಕೀಯ ನಾಯಕರ ಒಳಹೊರಗುಗಳನ್ನು ಅವಲೋಕಿಸಿ, ಜನಜಾಗೃತಿಗೆ ಪೂರಕವಾಗುವಂತಹ ಅಂಕಣಗಳನ್ನು ಬರೆಯುವುದು ಸುಲಭಸಾಧ್ಯವಲ್ಲ. ವಿಷಯದ ಸೂಕ್ಷ್ಮಗ್ರಹಿಕೆ ಇರುವಷ್ಟೇ ಆಳವಾಗಿ ಸಮಾಜದ ಸೂಕ್ಷ್ಮಗ್ರಹಿಕೆಯೂ ಇರಬೇಕಾಗುತ್ತದೆ. ಈ ಸೂಕ್ಷ್ಮತೆಯನ್ನೇ ಮೈಗೂಡಿಸಿಕೊಂಡು ಪತ್ರಿಕಾ ಮಾಧ್ಯಮದಲ್ಲಿ ಛಾಪು ಮೂಡಿಸಿರುವ ವಾರ ಪತ್ರಿಕೆ ತುರುವನೂರು ಮಂಜುನಾಥ್ ಸಂಪಾದಕತ್ವದ ” ಕೆಂಧೂಳಿ “
ʼಕೆಂಧೂಳಿʼ ಸಂಪಾದಕರಾದ ತುರುವನೂರು ಮಂಜುನಾಥ್ ಪತ್ರಿಕೋದ್ಯಮದ ಜೊತೆಗೇ ರೂಢಿಸಿಕೊಂಡಿರುವ ಸಾಹಿತ್ಯಿಕ ಪ್ರಜ್ಞೆ ಮತ್ತು ರಾಜಕೀಯ ಸೂಕ್ಷ್ಮತೆ ಅವರ ಬರಹಗಳಲ್ಲಿ ಎದ್ದು ಕಾಣುವಂತಿರುತ್ತದೆ. ಸಮಾಜವನ್ನು ವಿಮರ್ಶಾತ್ಮಕವಾಗಿ ನೋಡುವ, ದೇಶದ ರಾಜಕೀಯ ಬೆಳವಣಿಗೆಗಳನ್ನು ಶ್ರೀಸಾಮಾನ್ಯರ ದೃಷ್ಟಿಯಿಂದ ಗಮನಿಸಿ, ಸರ್ಕಾರಗಳ ತಪ್ಪು ಹೆಜ್ಜೆಗಳನ್ನು ನೇರನುಡಿಗಳಲ್ಲಿ ಖಂಡಿಸುವ ಮಂಜುನಾಥ ಅವರ ಬರಹಗಳು ಪತ್ರಿಕೆಯ ಸಂಪಾದಕೀಯ ರೂಪದಲ್ಲಿ ಪ್ರಕಟವಾಗುತ್ತಿವೆ. ಇಂತಹ 32 ಲೇಖನಗಳ ಒಂದು ಗುಚ್ಛವನ್ನು ಮಂಜುನಾಥ್ “ಅಂತರ್ಮಿಡಿತ” ಎಂಬ ಸಂಕಲನದ ಮೂಲಕ ಓದುಗರ ಮುಂದಿಟ್ಟಿದ್ದಾರೆ. ಸಾಮಾನ್ಯವಾಗಿ ಅಂಕಣ ಬರಹಗಳು (ಸಂಪಾದಕೀಯ ಆಗಿದ್ದರೂ ಸಹ) ಲೇಖಕರ ಸಾಂದರ್ಭಿಕವಾದ ಅಭಿವ್ಯಕ್ತಿಗಳಾಗಿರುತ್ತವೆ. ಸಮಾಜದಲ್ಲಿ ನಡೆಯುವ ವ್ಯತ್ಯಯಗಳನ್ನು ಒಳಹೊಕ್ಕು ನೋಡಿ ವಿಮರ್ಶಿಸುವ ಒಂದು ಕ್ಷಮತೆ ಬರಹಗಳನ್ನು ಓದುಗರ ಕಣ್ತೆರೆಸುವ ಸೇತುವೆಗಳನ್ನಾಗಿಸುತ್ತದೆ. ಈ ದೃಷ್ಟಿಯಿಂದ ʼಅಂತರ್ಮಿಡಿತ ʼ ದ ಲೇಖನಗಳು ಸಮಾಜದ ನಾಡಿಮಿಡಿತವನ್ನು ಗ್ರಹಿಸಿ ಸುಪ್ತ ಪ್ರಜ್ಞೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಸಫಲವಾಗುತ್ತವೆ.

ವೈವಿಧ್ಯತೆಯ ಸೂಕ್ಷ್ಮ ಪದರಗಳು
ಲೇಖಕರು ಸಂಕಲನದಲ್ಲಿ ವಿಚಾರ, ಧರ್ಮ ಮತ್ತು ರಾಜಕೀಯ ಎಂದು ವರ್ಗೀಕರಿಸಿ 32 ಲೇಖನಗಳನ್ನು ಪ್ರಕಟಿಸಿದ್ದಾರೆ. ವರ್ತಮಾನದ ಭಾರತದಲ್ಲಿ ಈ ಮೂರೂ ಸಹ ಸದಾಕಾಲ ಹೊಸೆದುಕೊಂಡೇ ಇರುತ್ತವೆ. ತಮ್ಮ ಮುನ್ನುಡಿಯಲ್ಲಿ ಬರಗೂರು ರಾಮಚಂದ್ರಪ್ಪ ಅವರು ಹೇಳಿರುವಂತೆ ಮೂರೂ ವಿಭಾಗಗಳಲ್ಲಿ ಅಂತರ್ಗತವಾಗಿ ಹರಿಯುವ ಚಿಂತನಾ ಕ್ರಮ ಒಂದೇ ಆಗಿದೆ.
ʼವಿಚಾರʼ ವಿಭಾಗದಲ್ಲಿರುವ ಲೇಖನಗಳೆಲ್ಲವೂ ಸಾರ್ವಜನಿಕ ಪ್ರಜ್ಞೆ ಮತ್ತು ಸೂಕ್ಷ್ಮತೆಯನ್ನು ಬಡಿದೆಬ್ಬಿಸುವ ಹಾದಿಯಲ್ಲೇ ಸಾಗುತ್ತವೆ. ʼ ರಸಿಕರ ಕಂಗಳ ,,,,ʼ ಎಂಬ ಕಾವ್ಯೋಕ್ತಿಯ ನೆಲೆಯಲ್ಲೇ ಇರುವ ಲೇಖನದಲ್ಲಿ ಕಾಣುವ ಹತಾಶೆ, ಆಕ್ರೋಶ ಸಹಜಾಭಿವ್ಯಕ್ತಿಯೂ ಹೌದು. ಮತೀಯ ರಾಜಕಾರಣ ಯುವ ಸಮೂಹದಲ್ಲಿ ಅಸಹನೆಯನ್ನು ಹೆಚ್ಚಿಸುತ್ತಿರುವುದು, ತಳಸಮಾಜದಲ್ಲಿ ದ್ವೇಷಾಸೂಯೆಗಳಿಗೆ ಮುಕ್ತ ಅವಕಾಶ ಕಲ್ಪಿಸಿದಂತಾಗಿದೆ. ಲೇಖಕರು ಇದನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. . ವ್ಯಕ್ತಿ, ವ್ಯಕ್ತಿತ್ವ, ಚಹರೆಯಲ್ಲಿ ವ್ಯತ್ಯಯಗಳಾದರೆ ಸರಿಪಡಿಸಬಹುದು ಆದರೆ ಮನಸ್ಥಿತಿಯೇ ಭ್ರಷ್ಟವಾದರೆ ? ಈ ಪ್ರಶ್ನೆಯೊಂದಿಗೇ ಮಂಜುನಾಥ್ ʼಗಾಂಧಿ ಅಹಿಂಸೆ,,,,ʼ ಲೇಖನವನ್ನು ಮಂಡಿಸುತ್ತಾರೆ. ಗಾಂಧಿ ಇಂದು ಪ್ರಸ್ತುತ ಎನಿಸುವುದೇ ಈ ಮೌಲ್ಯಗಳ ಕುಸಿತದ ಕಾರಣದಿಂದ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಜಾತಿ ವಿನಾಶದ ಕರೆ ಹಾಳೆಗಳಲ್ಲೇ ಉಳಿದು, ಜಾತಿ ಪ್ರಜ್ಞೆ ಮನಮನದಲ್ಲಿ ಬೇರೂರುತ್ತಿರುವ ಪರಿಸ್ಥಿತಿಗೆ ಭಾರತ ಎದುರಾಗಿದೆ. ಜಾತಿ ವ್ಯವಸ್ಥೆಯನ್ನು ಕೊನೆಗೊಳಿಸುವ ರಾಜಕೀಯ ನಾಯಕರ ಘೋಷಣೆಗಳು ಬೂಟಾಟಿಕೆಯಾಗಿ ಕಾಣುವುದು, ಇದೇ ನಾಯಕರು ಪೋಷಿಸುವ, ಸಲಹುವ ಜಾತಿ ಕೇಂದ್ರಿತ ಗುಂಪುಗಳಲ್ಲಿ. ಮಂಜುನಾಥ್ ಅವರ “ ಜಾತಿಯೆಂಬ ಭೂತಕ್ಕೆ,,,,,,, ” ಲೇಖನ ಇದನ್ನು ತೆರೆದಿಡುತ್ತದೆ. ಒಂದು ಕಡೆ ದಮನಕಾರಿ ಪ್ರಭುತ್ವ ಮತ್ತೊಂದೆಡೆ ಲಾಭದಾಯಕ ಮಾರುಕಟ್ಟೆ ಇವುಗಳ ನಡುವೆ ಸಿಲುಕಿರುವ ಮಾಧ್ಯಮ ಲೋಕ ತನ್ನ ವೃತ್ತಿಧರ್ಮವನ್ನು ಕಳೆದುಕೊಳ್ಳುತ್ತಿರುವುದನ್ನು ಕಳಕಳಿಯಿಂದ ಕಾಣುವ ಮಂಜುನಾಥ್ “ ಪಿ ಲಂಕೇಶ್ ಮತ್ತು ,,,,,” ಲೇಖನದಲ್ಲಿ ಲಂಕೇಶ್ ಅವರ ದಿಟ್ಟ ಪತ್ರಿಕೋದ್ಯಮದ ಔಚಿತ್ಯ ಮತ್ತು ಪ್ರಸ್ತುತತೆಯನ್ನು ಓದುಗರಿಗೆ ಮನದಟ್ಟುಮಾಡಿದ್ದಾರೆ. ಸ್ವತಃ ಪತ್ರಕರ್ತರಾಗಿದ್ದು ತಮ್ಮ ಸಹೋದ್ಯೋಗಿಗಳ ಮನಸ್ಥಿತಿ-ಕಾರ್ಯವೈಖರಿಯನ್ನು ವಿಮರ್ಶಾತ್ಮಕವಾಗಿ ನೋಡುವ ಮಂಜುನಾಥ್ ʼ ಪತ್ರಕರ್ತರು ನಿಜವಾಗಿಯೂ,,,,,ʼ ಲೇಖನದ ಕೊನೆಯಲ್ಲಿ “ ನಿಜವಾದ ಪತ್ರಕರ್ತ ಈಗ ಬೀದಿಪಾಲಾಗಿದ್ದಾನೆ ” ಎಂದು ಹೇಳುವುದು ನೋವಿನ ದನಿಯಾದರೂ ಕಟು ವಾಸ್ತವ. ಎಲ್ಲವೂ ಅಧೋಗತಿಗಿಳಿಯುತ್ತಿರುವ ಈ ವಿಷಮ ಸಂದರ್ಭದಲ್ಲಿ ಪತ್ರಿಕೋದ್ಯಮಿ ಮತ್ತು ಲೇಖಕರಾಗಿರುವ ವ್ಯಕ್ತಿಯಲ್ಲಿ ಈ ಭಾವನೆ ಸಹಜ. ತಮ್ಮ ಸಾಹಿತ್ಯಿಕ ಸೂಕ್ಷ್ಮ ಪ್ರಜ್ಞೆಯನ್ನೂ ಮಂಜುನಾಥ್ ಎಚ್‌ಎಸ್‌ವಿ ಕುರಿತ ಲೇಖನದಲ್ಲಿ ಹೊರಗೆಡಹಿರುವುದು ಸ್ತುತ್ಯಾರ್ಹ.

ಧರ್ಮ-ಕಾರಣದ ವೈಪರೀತ್ಯಗಳು
ಕೃತಿಯ ಎರಡನೆ ಹೆಜ್ಜೆಯಲ್ಲಿ ʼ ಧರ್ಮ ʼ ಮತ್ತು ಧಾರ್ಮಿಕ ಆಲೋಚನೆಗಳು ಹೇಗೆ ಭಾರತದ ರಾಜಕಾರಣವನ್ನು ದಾರಿತಪ್ಪಿಸುತ್ತಿದೆ ಎಂದು ವಿಭಿನ್ನ ಆಯಾಮಗಳಲ್ಲಿ ಚರ್ಚಿಸುತ್ತಾರೆ. ಬಿಜೆಪಿಯ ಹಿಂದುತ್ವ ರಾಜಕಾರಣ ಸುಡು ವಾಸ್ತವವೇ ಆದರೂ, ತಳಮಟ್ಟದ ಸಾಮಾಜಿಕ ನೆಲೆಯಲ್ಲಿ ನೋಡಿದಾಗ ಈ ಸಿದ್ಧಾಂತ ಬೃಹತ್ ಸಂಖ್ಯೆಯ ಜನರನ್ನು ಭ್ರಮಾಧೀನಗೊಳಿಸಿರುವುದು ಸತ್ಯ. ಇದನ್ನು ಮಂಜುನಾಥ್ “ ಹಿಂದುತ್ವ ಎನ್ನುವ ಭ್ರಮೆಯಿಂದ,,,,,,” ಲೇಖನದಲ್ಲಿ ವ್ಯಾಖ್ಯಾನಿಸುತ್ತಾರೆ. . ಧರ್ಮ ಮತ್ತು ಧಾರ್ಮಿಕ ಸ್ಥಾವರಗಳೆಲ್ಲವೂ ಬಂಡವಾಳಹೂಡಿಕೆಯ ಮತ್ತು ಲಾಭ-ಅವಕಾಶಗಳನ್ನು ಪಡೆದುಕೊಳ್ಳುವ ಸಂಸ್ಥೆಗಳಾಗಿರುವ ಹೊತ್ತಿನಲ್ಲಿ ಮಂಜುನಾಥ್ ಅವರ ʼ ಧರ್ಮ ಮತ್ತು ರಾಜಕೀಯ ನಡುವಿನ ಸಂಬಂಧ ʼ ಮತ್ತು ʼ ಸನ್ಯಾಸತ್ವದ ಅರ್ಥ,,,,, ʼ ಲೇಖನಗಳು, ಮತೀಯ ರಾಜಕಾರಣದ ಭದ್ರಕೋಟೆಯನ್ನು ಭೇದಿಸುವ ಅಕ್ಷರಾಸ್ತ್ರಗಳಾಗಿ ಕಾಣುತ್ತವೆ.
ಭಾರತೀಯ ಸಮಾಜವನ್ನು ಪಾರಂಪರಿಕವಾಗಿ ಆವರಿಸಿರುವ ನಂಬಿಕೆ ಮತ್ತು ಶ್ರದ್ಧೆ ಎಂಬ ಮನಸ್ಥಿತಿ ಆರಾಧನೆಯಲ್ಲಿ ಪರಿಸಮಾಪ್ತಿಯಾಗುವ ಮೂಲಕ ಹೇಗೆ ದೇಶದ ಯುವ ಸಮೂಹವನ್ನು, ಸುಶಿಕ್ಷಿತರನ್ನೂ ಸಹ ಅಂಧಾಭಿಮಾನಕ್ಕೆ ನೂಕುತ್ತಿದೆ ಎನ್ನುವುದನ್ನು “ ನಂಬಿಕೆ ಎನ್ನುವ,,,,,,” ಲೇಖನದಲ್ಲಿ ವ್ಯಾಖ್ಯಾನಿಸಿದ್ದಾರೆ. ಪ್ರತಿಮಾ ರಾಜಕಾರಣ, ಪುರಾಣ ಮತ್ತು ಇತಿಹಾಸಗಳ ಸಮೀಕರಣ, ವೈದಿಕ ಪರಂಪರೆಯ ಹುನ್ನಾರ, ದೈವ ನಂಬಿಕೆಯ ಹೆಸರಿನಲ್ಲಿ ಪರಿಸರ ನಾಶ ಹೀಗೆ ಹಲವು ವೈವಿಧ್ಯಮಯ ವಿಚಾರಗಳನ್ನು ಲೇಖಕರು ಈ ವಿಭಾಗದಲ್ಲಿ ಮನಮುಟ್ಟುವ ಹಾಗೆ ವಿಶ್ಲೇಸಿದ್ದಾರೆ. “ ಪುರಾಣವನ್ನು ಇತಿಹಾಸವನ್ನಾಗಿಸುವ,,,,, ” ಲೇಖನವು ಸಂಘಪರಿವಾರ-ಬಿಜೆಪಿಯ ಧರ್ಮಕಾರಣದ ಒಳಸುಳಿಗಳನ್ನು, ಸಾಹಿತ್ಯಿಕ ನೆಲೆಯಲ್ಲೂ ಚರ್ಚಿಸುತ್ತದೆ. ಪುರಾಣ ಮತ್ತು ಇತಿಹಾಸವನ್ನು ಸಮೀಕರಿಸಿ, ಮಿಥ್ಯೆಗಳನ್ನು ಸತ್ಯ ಮಾಡುವ ಸೈದ್ಧಾಂತಿಕ ನೆಲೆಗಳ ಅಪಾಯವನ್ನು ಈ ಲೇಖನ ಸ್ಪಷ್ಟವಾಗಿ ಗುರುತಿಸುತ್ತದೆ.
ಅಧಿಕಾರ ರಾಜಕಾರಣದ ವಕ್ರಸುಳಿ
ವರ್ತಮಾನದ ರಾಜಕಾರಣವನ್ನು ಕುರಿತು ಎಷ್ಟು ಬರೆದರೂ ಸಾಲದು. ಮೊಗೆದಷ್ಟೂ ನೀರು ಎನ್ನುವಂತೆ ಇಲ್ಲಿ ಬಗೆದಷ್ಟೂ ಅಪಸವ್ಯಗಳು, ಅನಿಷ್ಠಗಳು, ಅವ್ಯವಹಾರಗಳನ್ನು ಉತ್ಖನನ ಮಾಡುತ್ತಲೇ ಹೋಗಬಹುದು. ಲೇಖಕ ಮಂಜುನಾಥ್ ತಮ್ಮ ವೃತ್ತಿ ಸೂಕ್ಷ್ಮತೆಯ ನೆಲೆಯಲ್ಲಿ ವರ್ತಮಾನದ ರಾಜಕಾರಣವನ್ನು ವಿಭಿನ್ನ ಆಯಾಮಗಳಲ್ಲಿ ವಿಶ್ಲೇಷಿಸುತ್ತಾರೆ. ವರ್ತಮಾನದ ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನೇ ತಿದ್ದುವ ಬಿಜೆಪಿಯ ರಾಜಕೀಯ ಮಾದರಿ ರಂಗಭೂಮಿಯನ್ನೂ ಆವರಿಸಿರುವ ದುರಂತ ಸನ್ನಿವೇಶವನ್ನು “ ಇತಿಹಾಸವನ್ನು ತಿದ್ದುವ,,,,” ಲೇಖನದಲ್ಲಿ ಮಂಜುನಾಥ್ ವಿಶ್ಲೇಷಣೆಗೊಳಪಡಿಸುತ್ತಾರೆ. ರಂಗಭೂಮಿಯ ಸೃಜನಶೀಲತೆಯನ್ನು ಕೊಲ್ಲುವ ಈ ಬೆಳವಣಿಗೆ ಅಪಾಯಕಾರಿಯಾದುದು.

ವೈದ್ಯಕೀಯ ಶಿಕ್ಷಣದ ಅಯೋಮಯ ಸ್ಥಿತಿ, ಪ್ರಗತಿಪರ ದನಿಗಳನ್ನ ಅಡಗಿಸುವ ನೀತಿಗಳು ಈ ಗಂಭೀರ ವಿಚಾರಗಳನ್ನು ನಿಕಷಕ್ಕೊಡ್ಡುತ್ತಲೇ ಲೇಖಕರು ʼಶಾಂತಿಯ ನೆಲದಲ್ಲಿ,,,,,ʼ ಲೇಖನದಲ್ಲಿ ದ್ವೇಷ ರಾಜಕಾರಣದ ಒಳಸುಳಿಗಳನ್ನು ತೆರೆದಿಡುತ್ತಾರೆ. ಮೌಲ್ಯಾಧಾರಿತ ರಾಜಕಾರಣ ಎಂಬ ಪರಿಕಲ್ಪನೆಯೇ ಈಗ ಚರಿತ್ರೆಯ ಪಳೆಯುಳಿಕೆಯಂತೆ ಕಾಣುತ್ತಿದೆ. ಇದರ ಸ್ಥಾನವನ್ನು ದ್ವೇಷಾಸೂಯೆಗಳು ಆಕ್ರಮಿಸಿರುವುದನ್ನು “ ಶಾಂತಿಯ ನೆಲದಲ್ಲಿ,,,,,,” ಲೇಖನ ಪ್ರಭಾವಶಾಲಿಯಾಗಿ ಬಿಂಬಿಸುತ್ತದೆ. ಡಾ. ಅಂಬೇಡ್ಕರ್ ಅವರ ಮುನ್ನೆಚ್ಚರಿಕೆಯ ಮಾತುಗಳು ಮರೆತೇ ಹೋಗಿರುವ ಭಾರತದ ರಾಜಕೀಯ ವಲಯ ವ್ಯಕ್ತಿ ಆರಾಧನೆಯನ್ನೇ ಪ್ರಧಾನ ಶಕ್ತಿಯನ್ನಾಗಿ ಪರಿವರ್ತಿಸಿರುವುದು ದುರಂತವೆ ಸರಿ. ಈ ಆಯಾಮವನ್ನು ʼ ಪ್ರಜಾಪ್ರಭುತ್ವ ಮತ್ತು ವ್ಯಕ್ತಿಪೂಜೆ,,,, ʼ ಲೇಖನದಲ್ಲಿ ಚರ್ಚಿಸಿರುವ ಮಂಜುನಾಥ್ ಕಣ್ಣೆದುರಿನ ಸತ್ಯವನ್ನು
ಅನಾವರಣಗೊಳಿಸುತ್ತಾರೆ.

ಸಮಾಜಮುಖಿ ಬರಹಗಳ ಗುಚ್ಛ
ತುರುವನೂರು ಮಂಜುನಾಥ ಅವರ ವೃತ್ತಿ ಧರ್ಮ, ಸಾಹಿತ್ಯಿಕ ಬದ್ಧತೆ, ಸಾಮಾಜಿಕ ನಿಷ್ಠೆ ಮತ್ತು ಎಲ್ಲಿಯೂ ಸಭ್ಯತೆ ಸೌಜನ್ಯದ ಗಡಿ ಮೀರದಂತಹ ಸಂಯಮದ ಭಾಷಾ ಬಳಕೆ ಸಂಪಾದಕೀಯ ಬರಹಗಳಿಗೆ ಮೆರುಗು ನೀಡುತ್ತದೆ. ಈ ಬರಹಗಳು ಕಳಕಳಿ ಇರುವ ಪ್ರಜೆಯಿಂದ ಮೂಡಿದ ಅಭಿವ್ಯಕ್ತಿಯಾಗಿರುವುದರಿಂದಲೇ ಎಲ್ಲ ಲೇಖನಗಳಲ್ಲೂ ಸಾಮಾಜಿಕ ಚಿಂತನೆ ಮತ್ತು ಭವಿಷ್ಯದ ಆತಂಕ ಸೂಕ್ಷ್ಮವಾಗಿಯಾದರೂ ವ್ಯಕ್ತವಾಗುತ್ತದೆ. ಪತ್ರಿಕಾ ಮಾಧ್ಯಮಗಳಲ್ಲೂ ಜನರ ನಾಡಿಮಿಡಿತವನ್ನು ಅರಿತು ಅಕ್ಷರ ರೂಪದಲ್ಲಿ ಪ್ರತಿಕ್ರಿಯಿಸುವ ಒಂದು ಬೌದ್ಧಿಕ ಪ್ರಕ್ರಿಯೆ ಸಾಪೇಕ್ಷವಾಗಿರುವ ಹೊತ್ತಿನಲ್ಲಿ, ತಳಸಮಾಜದ ತಳಮಳಗಳನ್ನು ನೇರವಾಗಿ ಮಂಡಿಸುವ ಆತ್ಮಸ್ಥೈರ್ಯ ಮತ್ತು ವೃತ್ತಿಪರತೆ ತುರುವನೂರು ಮಂಜುನಾಥ್ ಅವರಲ್ಲಿ , ಅವರ ಬರಹಗಳಲ್ಲಿ ಕಾಣುತ್ತದೆ.
ಸಮಾಜದ ಸಂಕಟಗಳಿಗೆ ತುಡಿಯುವ ಜೀವದಿಂದ ಸೃಜಿಸುವ ಮಾತುಗಳಾಗಿ ತುರುವನೂರು ಮಂಜುನಾಥ್ ಅವರ ಈ ಲೇಖನಗಳನ್ನೂ ನೋಡಬೇಕಿದೆ. ಯುವ ತಲೆಮಾರಿನಲ್ಲಿ ಅರಿವು ಮತ್ತು ಜಾಗೃತಿ ಒಟ್ಟೊಟ್ಟಿಗೇ ಮೂಡಿಸುವ ನಿಟ್ಟಿನಲ್ಲಿ ಸಕಾಲಿಕ ಬರಹಗಳನ್ನು ಓದುಗರ ಮುಂದಿಟ್ಟಿರುವ ತುರುವನೂರು ಮಂಜುನಾಥ್ ಅವರ ಅಭಿನಂದನಾರ್ಹ ಪರಿಶ್ರಮವನ್ನು ಮೆಚ್ಚಲೇಬೇಕು.

ಸಾಮಾಜಿಕ-ಸಾರ್ವಜನಿಕ-ಸಾಂವಿಧಾನಿಕ ಪ್ರಜ್ಞೆಯನ್ನು ಜಾಗೃತಾವಸ್ಥೆಯಲ್ಲಿರಿಸುವ ಒಂದು ಕೃತಿ ʼ ಅಂತರ್ಮಿಡಿತ ʼ.






