ಬೆಂಗಳೂರು: ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಅಧ್ಯಯನ ಮತ್ತು ಜಾಗೃತಿ ಅಗತ್ಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ನಿಮ್ಹಾನ್ಸ್ ಅಡಿಟೋರಿಯಂನಲ್ಲಿ ಆಯೋಜಿಸಿದ್ದ ಮೊತ್ತಮೊದಲ ಕ್ಲಿನಿಕಲ್ ನ್ಯೂರೋ ಸೈಕೋಲಾಜಿ ಮತ್ತು ಕಾಗ್ನಿಟಿವ್ ನ್ಯೂರೋ ವಿಜ್ಞಾನ ಅಂತರಾಷ್ಟ್ರೀಯ ಸಮ್ಮೇಳನ (CNCNC-2026) ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನ ಅತ್ಯಂತ ಮಹತ್ವದ್ದಾಗಿದೆ. ಇಂದಿನ ಒತ್ತಡದ ಜೀವನಶೈಲಿಯಲ್ಲಿ ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಅಧ್ಯಯನ ಹಾಗೂ ಅರಿವು ಮೂಡಿಸುವುದು ಅಗತ್ಯವಾಗಿದೆ. ಭಾರತಂಥ ಹೆಚ್ಚಿನ ಜನಸಂಖ್ಯೆಯ ದೇಶಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.

ಅನೇಕ ಜನರಿಗೆ ತಮಗೆ ಮಾನಸಿಕ ಆರೋಗ್ಯ ಸಮಸ್ಯೆ ಇದೆ ಎಂಬುದೇ ತಿಳಿಯುವುದಿಲ್ಲ. ಇಂದಿನ ಸಮಾಜ ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಮಾನಸಿಕ ಆರೋಗ್ಯವೂ ಒಂದಾಗಿದೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಸುವಲ್ಲಿ ನಿಮ್ಹಾನ್ಸ್ ಮುಂಚೂಣಿಯಲ್ಲಿರುವುದು ಸಂತಸದ ವಿಚಾರ ಎಂದು ಅವರು ಹೇಳಿದರು.
ನಮ್ಮ ಇಲಾಖೆಯು ಗೃಹ ಆರೋಗ್ಯ ಕಾರ್ಯಕ್ರಮದಡಿ ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಿ, ಮಾನಸಿಕ ಆರೋಗ್ಯ ಪರೀಕ್ಷೆ ನಡೆಸುವ ಕೆಲಸ ಮಾಡುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ತಜ್ಞರ ಲಭ್ಯತೆ ಇರುವಂತೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಂಕೋಚಪಡದೆ ಸಮಸ್ಯೆ ಕಂಡುಬಂದಾಗ ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಸಲಹೆ ನೀಡಿದರು.
ಚಿಕ್ಕ ಮಕ್ಕಳಲ್ಲಿ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯನ್ನು ನಿಯಂತ್ರಿಸುವ ಕುರಿತು ಮುಖ್ಯಮಂತ್ರಿಗಳು ತಜ್ಞರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು. ಇಂತಹ ಕಾರ್ಯಕ್ರಮಗಳ ಮೂಲಕ ನಿಮ್ಹಾನ್ಸ್ ಸಾರ್ವಜನಿಕರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ DRDO ನ ನಿಕಟಪೂರ್ವ ಡೈರೆಕ್ಟರ್ ಜನರಲ್ ಡಾ. ಸುಬ್ರತ ರಕ್ಷಿತ್, ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ಹಿರಿಯ ವೈದ್ಯರು, ನಿಕಟಪೂರ್ವ ನಿರ್ದೇಶಕರು ಹಾಗೂ ವಿವಿಧ ದೇಶಗಳ ಮಾನಸಿಕ ಆರೋಗ್ಯ ತಜ್ಞರು ಉಪಸ್ಥಿತರಿದ್ದರು.





