ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಟಿಯರು ಕಾಣಿಸಿಕೊಂಡಾಗ ಕ್ಯಾಮೆರಾಗಳನ್ನು ಅನಗತ್ಯವಾಗಿ ಜೂಮ್ ಮಾಡಿ, ಅವರ ದೇಹವನ್ನು ಅಸಭ್ಯವಾಗಿ ಚಿತ್ರೀಕರಿಸುವ ‘ಪಾಪರಾಜಿ’ (Paparazzi) ಸಂಸ್ಕೃತಿಯ ವಿರುದ್ಧ ಸ್ಯಾಂಡಲ್‌ವುಡ್‌ನಲ್ಲಿ ಇದೀಗ ದೊಡ್ಡ ಮಟ್ಟದ ಆಕ್ರೋಶ ಭುಗಿಲೆದ್ದಿದೆ. ಈ ಕುರಿತು ಇದೀಗ ನಟ ಶಿವರಾಜಕುಮಾರ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಬರೆದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಟಿಯರ ಫೋಟೋ ಮತ್ತು ವಿಡಿಯೋ ಚಿತ್ರೀಕರಿಸುವಾಗ ಎಚ್ಚರಿಕೆ ಹಾಗೂ ಘನತೆ ಇರಲಿ. ಅನವಶ್ಯಕವಾಗಿ ಕ್ಯಾಮೆರಾಗಳನ್ನು ಜೂಮ್ ಮಾಡಿ ಶೂಟ್ ಮಾಡುವುದನ್ನು ದಯವಿಟ್ಟು ನಿಲ್ಲಿಸಿ. ನಾವು ಕಲಾವಿದರು, ದಯವಿಟ್ಟು ನಮ್ಮ ಕಲೆಯನ್ನು ಗುರುತಿಸಿ, ನಮ್ಮ ದೇಹವನ್ನಲ್ಲ ಎಂದು ಖಡಕ್ ಆಗಿ ವಿನಂತಿಸಿದ್ದರು.ಈ ಹೋರಾಟಕ್ಕೆ ಇದೀಗ ಇಡೀ ಕನ್ನಡ ಚಿತ್ರರಂಗ ಬೆಂಬಲ ಸೂಚಿಸಿದೆ. ಮಹಿಳಾ ಕಲಾವಿದೆಯರ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಲವು ನಟ-ನಟಿಯರು ಸಪ್ತಮಿ ಅವರ ಮಾತಿಗೆ ದನಿಗೂಡಿಸಿದ್ದಾರೆ.
ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ.ದಯವಿಟ್ಟು ಆತ್ಮಸಾಕ್ಷಿಯಿಟ್ಟು ಕೊಂಡು ಕೆಲಸ ಮಾಡಿ.ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ.ಎಂದು ನಟ ಶಿವರಾಜಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಈ ಕುರಿತು ಪ್ರಮುಖವಾಗಿ ನಟಿಯರಾದ ‘ಕ್ರೇಜಿ ಕ್ವೀನ್’ ರಕ್ಷಿತಾ ಪ್ರೇಮ್, ಆಶಿಕಾ ರಂಗನಾಥ್, ಮಾಳವಿಕಾ ಅವಿನಾಶ್, ಐಶಾನಿ ಶೆಟ್ಟಿ ಹಾಗೂ ನಟರಾದ ‘ದುನಿಯಾ’ ವಿಜಯ್, ಯುವರಾಜ್‌ಕುಮಾರ್ ಸೇರಿದಂತೆ ಅನೇಕರು ಈ ವಿಚಾರವಾಗಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.






