ಬೆಂಗಳೂರು : ಒಳ ಮೀಸಲಾತಿಯನ್ನೂ ಪರಿಗಣಿಸಿ ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡಬೇಕು. ನ್ಯಾಯಾಲಯದ ಕುಂಟುನೆಪ ಕೊಡಬಾರದು. ಇಲ್ಲವಾದರೆ ಬಿಜೆಪಿ ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾದೀತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೀಸಲಾತಿ ಪ್ರಮಾಣವನ್ನು ಶೇ 50ರಿಂದ ಶೇ 56ಕ್ಕೆ ಏರಿಸಿದ್ದಾರೆ. ನೀವು 50 ಸಾವಿರ ಖಾಲಿ ಹುದ್ದೆ ಭರ್ತಿ ಮಾಡುತ್ತೀರಾ, ಅಥವಾ 1 ಲಕ್ಷ ಹುದ್ದೆ ಭರ್ತಿ ಮಾಡುವಿರಾ ಎಂಬುದು ನಿಮಗೆ ಬಿಟ್ಟದ್ದು. ಎಲ್ಲ ಖಾಲಿ ಹುದ್ದೆ ಭರ್ತಿ ಮಾಡಿ ಎಂಬ ಆಗ್ರಹ ನಮ್ಮದು. ಶೇ 56 ಒಳ ಮೀಸಲಾತಿ ನೀಡಿ ಬಿಜೆಪಿ ಸರಕಾರವು ಎಲ್ಲ ಸಮುದಾಯಗಳಿಗೆ ನ್ಯಾಯ ಕೊಡುವ ಕೆಲಸ ಮಾಡಿದೆ. ಅದರ ಆಧಾರದಡಿ ಶೋಷಿತ- ಪೀಡಿತ ಸಮುದಾಯಗಳಿಗೆ ಒಳ ಮೀಸಲಾತಿ ಪರಿಗಣಿಸಿ ಈ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳೇ ಪದೇಪದೇ ಈ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದೀರಿ. ಪರಿಶಿಷ್ಟ ಜಾತಿ- ಪಂಗಡಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ರಾಜ್ಯ ನ್ಯಾಯಾಲಯದ ಕುಂಟುನೆಪ ಹೇಳದೇ ಉದ್ಯೋಗ ನೀಡಿ ನ್ಯಾಯ ಕೊಡಿ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ- ಪಂಗಡಗಳ ಯುವಜನತೆ ಸೇರಿ ಎಲ್ಲ ವರ್ಗಗಳ ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಿ. ಅದನ್ನು ಬಿಟ್ಟು ಈ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿಗಳು ತೊಟ್ಟಿಲು ತೂಗುವ ಜೊತೆಗೇ ಮಗುವನ್ನು ಚಿವುಟುವ ಕೆಲಸ ಮಾಡುತ್ತಿದೆ ಇದು ಅಕ್ಷಮ್ಯ ಅಪರಾಧ ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ : ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್ ನ್ಯೂಸ್..!
ಹಳೆಯ ಮೀಸಲಾತಿ ಪ್ರಮಾಣದಡಿ ನೇಮಕಾತಿಗೆ ಮುಂದಾಗಿರುವ ರಾಜ್ಯ ಸರ್ಕಾರವು ರಾಜ್ಯದಲ್ಲಿ ಬೆಂಕಿ ಹಚ್ಚಲು ಹೊರಟಂತಿದೆ. ನೀವೆಷ್ಟು ದಿನ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುತ್ತೀರೆಂಬುದು ನಮಗೆ ತಿಳಿದಿಲ್ಲ. ಆದರೆ, ಯಾವ ಅಹಿಂದ ಸಮುದಾಯದ ಅಧಿಕಾರ ಹಿಡಿದ ಮುಖ್ಯಮಂತ್ರಿಗಳೇ ಆ ಸಮುದಾಯದ ತಾಳ್ಮೆಯನ್ನು ಪರೀಕ್ಷೆ ಮಾಡದಿರಿ. ಶೋಷಿತ- ಪೀಡಿತ ಸಮುದಾಯಗಳನ್ನು ಕೆಣಕದಿರಿ. ಒಳ ಮೀಸಲಾತಿ ಜಾರಿ ಮಾಡದೇ ಖಾಲಿ ಹುದ್ದೆ ಭರ್ತಿ ಮಾಡುವ ಕೆಲಸ ಮಾಡಿದರೆ, ರಾಜ್ಯದಲ್ಲಿ ಮುಂದೆ ಆಗುವ ಘಟನೆಗಳಿಗೆ ತಾವೇ ಹೊಣೆ ಹೊರಬೇಕಾಗುತ್ತದೆ ಎಂದು ವಿಜಯೇಂದ್ರ ಗುಡುಗಿದ್ದಾರೆ.
ಇದೆಲ್ಲವನ್ನು ಪರಿಗಣಿಸಿ ಸಮರ್ಪಕ ನಿರ್ಧಾರವನ್ನು ಮುಖ್ಯಮಂತ್ರಿಗಳು ಮಾಡಬೇಕು. ಯುವಜನತೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ವಯೋಮಿತಿ ಮೀರುತ್ತಿದೆ. ಅವರ ಸಹನೆಯ ಕಟ್ಟೆ ಒಡೆದು ಹೋಗಿದೆ. ಇದನ್ನು ಕೂಡ ಪರಿಗಣಿಸಿ ನ್ಯಾಯ ಕೊಡುವ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ತಮ್ಮ ಗೌರವ ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ…
ಇದೇ 6ರಂದು ಅಧಿವೇಶನ ಆರಂಭ ಆಗುತ್ತಿದೆ. ಸರಣಿ ಪ್ರತಿಭಟನೆಗಳು ಬೆಂಗಳೂರಿನಲ್ಲಿ ಪ್ರಾರಂಭ ಆಗಲಿದೆ. ನುಡಿದಂತೆ ನಡೆದ ಸರ್ಕಾರ ಯಾವುದೇ ಭರವಸೆಯನ್ನೂ ಈಡೇರಿಸಿಲ್ಲ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹೋರಾಟ ಪ್ರಾರಂಭ ಮಾಡಲಿದ್ದಾರೆ. ಅತಿಥಿ ಉಪನ್ಯಾಸಕರ ಆಶ್ವಾಸನೆಯನ್ನೂ ಸರಕಾರ ಈಡೇರಿಸಿಲ್ಲ. ಅವರೂ ಬೀದಿಗಿಳಿದು ಹೋರಾಟ ಮಾಡುವ ಸಂದರ್ಭ ಸೃಷ್ಟಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೆಎಸ್ಆರ್ಟಿಸಿ – ಬಿಎಂಟಿಸಿ ನೌಕರರಿಗೆ ಪಿಎಫ್- ಗ್ರಾಚ್ಯುಟಿ ಕೊಡದೇ ಅನ್ಯಾಯ ಮಾಡುತ್ತಿದ್ದು, ಅವರೂ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಮತ್ತೊಂದು ಕಡೆ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರೂ ಬೀದಿಗಿಳಿಯಲಿದ್ದಾರೆ. ಮತ್ತೊಂದೆಡೆ 108 ಆಂಬುಲೆನ್ಸ್ ಕೆಟ್ಟು ನಿಂತು ನೌಕರರಿಗೆ ಸಂಬಳ ಕೊಟ್ಟಿಲ್ಲ. 34 ತಿಂಗಳಿನಿಂದ ಸಣ್ಣಪುಟ್ಟ ಗುತ್ತಿಗೆದಾರರು ಸೇರಿಸಿಕೊಂಡು ಸುಮಾರು 40- 45 ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ. ಈಗಾಗಲೇ ಆತ್ಮಹತ್ಯೆ ಪ್ರಕರಣಗಳೂ ನಡೆದಿವೆ ಎಂದು ಸರ್ಕಾರದ ವೈಫಲ್ಯಗಳ ವಿರುದ್ಧ ಹರಿಹಾಯ್ದಿದ್ದಾರೆ.
ಬೆಂಗಳೂರಿನ ಕಸದ ಸಮಸ್ಯೆ ಇದ್ದೆ ಇದೆ , ಪೌರಕಾರ್ಮಿಕರ ಹೋರಾಟವೂ ನಡೆಯಲಿದ್ದು, ಸರಣಿ ಹೋರಾಟಗಳು ಪ್ರಾರಂಭ ಆಗಲಿವೆ. ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.
ಆಡಳಿತ ಪಕ್ಷವಾದ ಕಾಂಗ್ರೆಸ್ಸಿನ ಶಾಸಕರನ್ನು ಸಮಾಧಾನಪಡಿಸಲು ನೀವು ವಿದೇಶ ಪ್ರವಾಸ ಕಲ್ಪಿಸಿ ಕೊಟ್ಟಿದ್ದೀರೆಂದರೆ, ರಾಜ್ಯದ ಆಡಳಿತ ಸಂಪೂರ್ಣ ಕುಸಿದಿದೆ; ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಅಭಿವೃದ್ಧಿಯಿಂದ ಕರ್ನಾಟಕವು ವಂಚಿತವಾಗಿದೆ. ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ. ಇದು ವಾಸ್ತವಿಕ ಸತ್ಯ. ಆದ್ದರಿಂದ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರವನ್ನು ದೂರುವುದನ್ನು ಬಿಟ್ಟು ಇವೆಲ್ಲ ವಿಚಾರಗಳನ್ನು ಪರಿಗಣಿಸಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.






