ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ, ಅಧಿಕಾರ ಹಸ್ತಾಂತರ ಹಾಗೂ ಸಂಪುಟ ವಿಸ್ತರಣೆ ವಿಚಾರಗಳು ಚರ್ಚೆಯಲ್ಲಿರುವಾಗಲೇ ಕೆಲ ಶಾಸಕರು ದೆಹಲಿ ಹಾಗೂ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ ಎಂದಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼ ನನಗೆ ಶಾಸಕರು ದೆಹಲಿಗೆ ಹೋಗುವುದೂ ಗೊತ್ತಿಲ್ಲ. ಫಾರಿನ್‌ಗೆ ಹೋಗುವುದೂ ಗೊತ್ತಿಲ್ಲ. ಈ ಬಗ್ಗೆ ನನ್ನನ್ನು ಯಾರೂ ಕೇಳಿಯೂ ಇಲ್ಲ, ಈ ವಿಚಾರದಲ್ಲಿ ನಾನು ಬಾಯಿ ಹಾಕುವುದೂ ಇಲ್ಲ ಎಂದು ಹೇಳಿದ್ದಾರೆ.

ನನ್ನ ಅಣ್ಣನ ಹಣೆಬರಹದಲ್ಲಿ ಬರೆದಿದ್ದರೆ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಸಹೋದರ ಡಿ.ಕೆ.ಸುರೇಶ್ ಮಾತಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಅದೇ ರೀತಿ ಹೇಳುತ್ತಾರೆ. ನಾನೇನು ಆ ಸುದ್ದಿಯನ್ನು ಮಾತನಾಡಿಲ್ಲವಲ್ಲ. 139 ಜನ ಶಾಸಕರು ಸೇರಿ ಮುಖ್ಯಮಂತ್ರಿಯವರು ನನ್ನ ಬೆಂಬಲಕ್ಕೆ ಇದ್ದೇ ಇದ್ದಾರೆ ಎಂದು ಹೇಳಿದರು.







