ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ವಿರುದ್ಧ ಎಸಿಪಿ ಚಂದನ್ ಹಾಗೂ ಇನ್ಸ್‌ಪೆಕ್ಟರ್ ಗಿರೀಶ್ ನಾಯಕ್ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

ಈ ಆರೋಪದ ಹಿನ್ನೆಲೆದಲ್ಲಿ ಎಸಿಪಿ ಚಂದನ್ ಮತ್ತು ಇನ್ಸ್‌ಪೆಕ್ಟರ್ ಗಿರೀಶ್ ನಾಯಕ್ ಅವರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಮಾರ್ಚ್ 11ರಂದು ಬುಧವಾರ ಬೆಳಿಗ್ಗೆ 11.30ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ಭಾರೀ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಈ ಪ್ರತಿಭಟನೆಗೆ ಕರ್ನಾಟಕ ಸಂಘಟನೆಗಳ ಕನ್ನಡ ಒಕ್ಕೂಟ ಕರೆ ನೀಡಿದ್ದು, ರಾಜ್ಯದ ವಿವಿಧ ಕನ್ನಡ ಪರ ಸಂಘಟನೆಗಳು ಭಾಗವಹಿಸುವ ಸಾಧ್ಯತೆ ಇದೆ. ಸಂಘಟನೆಯ ಮುಖಂಡ ನಟರಾಜ್ ಬೊಮ್ಮಸಂದ್ರ ಈ ಕುರಿತು ಮಾಹಿತಿ ನೀಡಿದ್ದು, ಚಿತ್ರನಟ ದರ್ಶನ್ ತಪ್ಪೇ ಮಾಡಿದ್ದರೆ, ಕಾನೂನಿನಡಿಯಲ್ಲಿ ಶಿಕ್ಷೆಯಾಗಲಿ..ಆದರೆ ಪೋಲಿಸ್ ಅಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ನಡೆಸದೆ..ಅವರ ವಿರುದ್ದ ಸುಳ್ಳು ದಾಖಲೆ ಸೃಷ್ಟಿಸಿದ ಎಸಿಪಿ ಚಂದನ್ ಹಾಗೂ ಇನ್ಸ್‌ಪೆಕ್ಟರ್ ಗಿರೀಶ್ ನಾಯಕ್ ಅಮಾನತಿಗೆ ಆಗ್ರಹಿಸಿ ಮಾರ್ಚ್ 11ರಂದು ಬುಧವಾರ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣದ ತನಿಖೆಯ ಪ್ರಾಮಾಣಿಕತೆ ಕುರಿತು ಹಲವು ಪ್ರಶ್ನೆಗಳು ಎದ್ದಿವೆ. ನಟ ದರ್ಶನ್ ವಿರುದ್ಧ ಸಾಕ್ಷ್ಯಗಳನ್ನು ತಿರುಚಲಾಗಿದೆ ಎಂಬ ಆರೋಪ ಗಂಭೀರವಾಗಿದ್ದು, ಈ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂಬ ಬೇಡಿಕೆ ಕೂಡ ಕೇಳಿಬಂದಿದೆ.







