ಬಾಗಲಕೋಟೆ: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಮೆರವಣಿಗೆ ವೇಳೆ ನಡೆದ ಸಂಘರ್ಷದ ಬಳಿಕ ಬಾಗಲಕೋಟೆ (Bagalkote) ನಗರದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ.

ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ ಬೆನ್ನಲ್ಲೇ ನಿನ್ನೆ ನಗರದ ಮಟನ್ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಇಬ್ಬರು ಹಿಂದೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಅಶೋಕ್ ಬಾರಕೇರ (22) ಮತ್ತು ಸಂದೀಪ ಘೆರಡೆ (38) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಆರೋಪಿಗಳ ವಿರುದ್ಧ ಗಲಭೆ ಎಬ್ಬಿಸುವ ಉದ್ದೇಶ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಕಲ್ಲು ತೂರಾಟದ ವಿಡಿಯೋ ಮತ್ತು ಫೋಟೋ ಸಾಕ್ಷಿಗಳ ಆಧಾರದಲ್ಲಿ ಬಂಧಿಸಲಾಗಿದೆ ಎನ್ನಲಾಗಿದೆ.

ಶಿವಾಜಿ ಮಹಾರಾಜರ ಜಯಂತೋತ್ಸವ ಆಚರಣೆ ವೇಳೆ ನಡೆದ ಕಲ್ಲು ತೂರಾಟ, ಚಪ್ಪಲಿ ಎಸೆತ ಘಟನೆಗೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಬಾಗಲಕೋಟೆ ಜಿಲ್ಲೆ ಎಸ್‌ಪಿ ಸಿದ್ಧಾರ್ಥ್ ಗೋಯೆಲ್ ಈಗಾಗಲೇ ತಿಳಿಸಿದ್ದಾರೆ. ಒಟ್ಟಾರೆ ಬಾಗಲಕೋಟೆ ನಗರದಲ್ಲಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.






