ಬೆಂಗಳೂರು: ಸಾರ್ವಜನಿಕ ಸಾರಿಗೆಗಾಗಿ ಬೆಂಗಳೂರು ಜನರ ಮೊದಲ ಆಯ್ಕೆ ನಮ್ಮ ಮೆಟ್ರೋ. ಸದ್ಯ ಟಿಕೆಟ್ ದರ ಏರಿಕೆ ವಿಚಾರದಿಂದ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿರುವ ನಮ್ಮ ಮೆಟ್ರೋ ಇದೀಗ ಪ್ರಯಾಣಿಕರಿಗೆ ಅದರಲ್ಲೂ ವಿಶೇಷವಾಗಿ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ.

ನಮ್ಮ ಮೆಟ್ರೋದಲ್ಲಿ ಕೆಲವೊಂದು ನಿಮಯಗಳಿದ್ದು, ಇವುಗಳಲ್ಲಿ ಪ್ರಮುಖವಾಗಿ ಮೆಟ್ರೋ ಪ್ರಯಾಣದ ವೇಳೆ ಮದ್ಯದ ಬಾಟಲಿಗಳು ಸೇರಿದಂತೆ ಕೆಲವು ವಸ್ತುಗಳನ್ನು ಸಾಗಿಸುವಂತಿಲ್ಲ. ಇದೀಗ ಈ ನಿಯಮವನ್ನು ಸಡಿಲಗೊಳಿಸಲು ಬಿಎಂಆರ್‌ಸಿಎಲ್ (BMRCL) ಚಿಂತನೆ ನಡೆಸಿದ್ದು, ಮೆಟ್ರೋದಲ್ಲಿ ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗುವ ಕುರಿತು ಇರುವ ಸಂಪೂರ್ಣ ನಿಷೇಧವನ್ನು ಸಡಿಲಿಸಲು ಮುಂದಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

ಈಗಾಗಲೇ ದೆಹಲಿ ಮೆಟ್ರೋದಲ್ಲಿ ಅದರಲ್ಲೂ ವಿಮಾನ ನಿಲ್ದಾಣಕ್ಕೆ ಹತ್ತಿರ ಇರುವ ಮೆಟ್ರೋದಲ್ಲಿ ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿದೆ. ಇದೇ ಮಾದರಿಯನ್ನು ಬೆಂಗಳೂರಿನಲ್ಲೂ ಜಾರಿಗೆ ತರಲು ಚರ್ಚೆಗಳು ನಡೆದಿವೆ ಎನ್ನಲಾಗಿದೆ.

ಕೇವಲ ಸೀಲ್ ಮಾಡಿರುವ ಬಾಟಲಿಗಳಿಗೆ ಮಾತ್ರ ಅನುಮತಿ. ಮೆಟ್ರೋ ರೈಲು ಅಥವಾ ನಿಲ್ದಾಣದಲ್ಲಿ ಮದ್ಯಪಾನಕ್ಕೆ ಕಟ್ಟುನಿಟ್ಟಿನ ನಿಷೇಧ.ಒಬ್ಬ ವ್ಯಕ್ತಿ ಸಾಗಿಸಬಹುದಾದ ಮದ್ಯದ ಪ್ರಮಾಣಕ್ಕೆ ಮಿತಿ ಸೇರಿದಂತೆ ವಿವಿಧ ಷರತ್ತುಗಳು ಇರಲಿದೆ. ಸದ್ಯ ಈ ಪ್ರಸ್ತಾಪ ಇನ್ನೂ ಚರ್ಚೆಯ ಹಂತದಲ್ಲಿದೆ. ಅಧಿಕೃತ ಆದೇಶ ಹೊರಬಂದ ಬಳಿಕವೇ ನಿಯಮ ಜಾರಿಗೆ ಬರಲಿದೆ.







