ನವದೆಹಲಿ: ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಆದರೆ ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ಕಾರ್ಯಕ್ರಮದಲ್ಲಿ ಅವರ ಭಾಗವಹಿಸುವಿಕೆಯನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕರಾದ ಗೇಟ್ಸ್ ಅವರು ನಿನ್ನೆ ಆಂಧ್ರ ಪ್ರದೇಶಕ್ಕೂ ಭೇಟಿ ನೀಡಿದ್ದರು. ನವದೆಹಲಿಯಲ್ಲಿ ನಡೆಯುತ್ತಿರುವ ಕೃತಕ ಬುದ್ಧಿಮತ್ತೆ (Artificial Intelligence) ಕುರಿತ ಮಹತ್ವದ ಶೃಂಗಸಭೆಯಲ್ಲಿ ಅವರು ಅತಿಥಿಯಾಗಿ ಭಾಗವಹಿಸುವ ನಿರೀಕ್ಷೆ ಇತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರ ಹೆಸರು ಅತಿಥಿಗಳ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.

ವಿವಾದಕ್ಕೆ ಕಾರಣ ಏನು?
ಇತ್ತೀಚೆಗೆ ಬಿಡುಗಡೆಯಾದ ದಾಖಲೆಗಳಲ್ಲಿ ಅಮೆರಿಕದ ವಿವಾದಿತ ವ್ಯಕ್ತಿ ಜೆಫ್ರಿ ಎಪ್ಸ್ಟೀನ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಗಣ್ಯರ ಹೆಸರುಗಳು ಉಲ್ಲೇಖವಾಗಿವೆ. ಆ ಪಟ್ಟಿಯಲ್ಲಿ ಬಿಲ್ ಗೇಟ್ಸ್ ಅವರ ಹೆಸರು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ. ಈ ಹಿನ್ನೆಲೆ ಅವರ ಭಾಗವಹಿಸುವಿಕೆ ಬಗ್ಗೆ ಚರ್ಚೆ ಮತ್ತು ವಿವಾದ ತೀವ್ರಗೊಂಡಿದೆ.

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರಲ್ಲಿ ದೇಶ-ವಿದೇಶಗಳ ತಂತ್ರಜ್ಞಾನ ತಜ್ಞರು, ನೀತಿ ರೂಪಕಾರರು ಮತ್ತು ಕೈಗಾರಿಕಾ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಕೃತಕ ಬುದ್ಧಿಮತ್ತೆಯ ಬಳಕೆ, ಭವಿಷ್ಯದ ತಂತ್ರಜ್ಞಾನ, ಡಿಜಿಟಲ್ ಆರ್ಥಿಕತೆ ಮತ್ತು ಸ್ಟಾರ್ಟ್‌ಅಪ್ ಪರಿಸರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಬಿಲ್ ಗೇಟ್ಸ್ ಔಟ್ ಭಾಗವಹಿಸುವಿಕೆ ರದ್ದಾಗಿರುವ ಬಗ್ಗೆ ಆಯೋಜಕರು ಅಧಿಕೃತ ಪ್ರಕಟಣೆ ನೀಡಿಲ್ಲ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾದ ಪ್ರತಿಕ್ರಿಯೆಗಳ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆ ತಂತ್ರಜ್ಞಾನ ಮತ್ತು ರಾಜಕೀಯ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.






