ಚಿನ್ನದ ಬೆಲೆ ಏರಿಕೆ ಜೊತೆಗೆ 2026ರ ಆರಂಭದಲ್ಲೇ ಕ್ರಿಪ್ಟೋ(crypto )ಹೂಡಿಕೆದಾರರಿಗೆ ಬಿಟ್ಕಾಯಿನ್(Bitcoin) ಭಾರಿ ಶಾಕ್ ನೀಡಿದೆ. ಒಂದು ಬಿಟ್ಕಾಯಿನ್ ಮೌಲ್ಯ 1.2 ಲಕ್ಷ ಡಾಲರ್ನಿಂದ 66 ಸಾವಿರ ಡಾಲರ್ಗೆ ಕುಸಿದಿದೆ.

ಅಕ್ಟೋಬರ್ ತಿಂಗಳಲ್ಲಿ ಒಂದು ಬಿಟ್ಕಾಯಿನ್ ಮೌಲ್ಯ ಸುಮಾರು 1.14 ಕೋಟಿ ರೂಪಾಯಿ ಇತ್ತು. ಆದರೆ ಕಳೆದ ನಾಲ್ಕು ತಿಂಗಳಲ್ಲಿ ಬಿಟ್ಕಾಯಿನ್ ಮೌಲ್ಯ ಶೇಕಡಾ 46ರಷ್ಟು ಕುಸಿದಿದೆ. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ನಂತರ ಇದು ಬಿಟ್ಕಾಯಿನ್ ಕಂಡ ಅತಿ ದೊಡ್ಡ ಮೌಲ್ಯ ಕುಸಿತವಾಗಿದೆ. ಕಳೆದ 24 ಗಂಟೆಗಳಲ್ಲಿ ಮಾತ್ರ ಬಿಟ್ಕಾಯಿನ್ನಲ್ಲಿ ಹೂಡಿಕೆ ಮಾಡಿದ್ದವರಿಗೆ ಶಾಕ್ ಆಗಿದ್ದು, ಸುಮಾರು 1 ಬಿಲಿಯನ್ ಡಾಲರ್ ಮೌಲ್ಯದ ಹಣ ನಷ್ಟವಾಗಿದೆ.

ಬಿಟ್ಕಾಯಿನ್ ಮೌಲ್ಯ ಕುಸಿತಕ್ಕೆ ಕಾರಣವೇನು..?
ಅಂತರಾಷ್ಟ್ರೀಯ ಬಿಕ್ಕಟ್ಟುಗಳು ಹಾಗೂ ಬದಲಾದ ಅಧಿಕಾರ ಹಾಗೂ ಯುದ್ಧಗಳು ಬಿಟ್ಕಾಯಿನ್ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿವೆ. ಅಮೆರಿಕದ ಆರ್ಥಿಕ ನೀತಿಗಳಲ್ಲಿನ ಪದೇಪದೇ ಬದಲಾವಣೆಗಳು ಹೂಡಿಕೆದಾರರಲ್ಲಿ ಆತಂಕ ತಂದಿವೆ. ಚಿನ್ನ ಮತ್ತು ಬೆಳ್ಳಿ ಕಡೆ ಹೂಡಿಕೆದಾರರ ಒಲವು ಹೆಚ್ಚಾಗಿದೆ.

ಕಳೆದ ವರ್ಷ ಭಾರೀ ಹೂಡಿಕೆ ಕಂಡಿದ್ದ ETFಗಳಿಂದ ಹಣ ಹೊರಹರಿವು ಹೆಚ್ಚಾಗಿದೆ. ನಾಸ್ಡಾಕ್ನಂತಹ ತಂತ್ರಜ್ಞಾನ ಆಧಾರಿತ ಷೇರು ಮಾರುಕಟ್ಟೆ ಕುಸಿತದ ಪರಿಣಾಮ ಬಿಟ್ಕಾಯಿನ್ ಮೇಲೂ ಬಿದ್ದಿದೆ. ಜಪಾನ್ನ ಆರ್ಥಿಕ ನೀತಿ ಬದಲಾವಣೆ ಹಾಗೂ Yen Carry Trade ಬಿಕ್ಕಟ್ಟು ಕೂಡ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಬಿಟ್ಕಾಯಿನ್ನಿಂದ ಹಣ ಹಿಂತೆಗೆದುಕೊಂಡಿದ್ದಾರೆ. ಬಿಟ್ಕಾಯಿನ್ನ ಈ ಕುಸಿತ ಮುಂದಿನ ದಿನಗಳಲ್ಲಿ ಕ್ರಿಪ್ಟೋ ಮಾರುಕಟ್ಟೆ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.






