ಬೆಳಗಾವಿ: ರಾಜಕೀಯದ ಒತ್ತಡಗಳನ್ನು ಕೆಲ ಸಮಯ ಬದಿಗಿಟ್ಟು, ಬೆಳಗಾವಿಯ ಪ್ರಭಾವಿ ಕಾಂಗ್ರೆಸ್ ನಾಯಕರು ಇಂದು ಮೈದಾನದಲ್ಲಿ ಕ್ರಿಕೆಟ್ ಆಡಿ ಎಲ್ಲರ ಗಮನ ಸೆಳೆದಿದ್ದಾರೆ.

ಬೆಳಗಾವಿ ನಗರದ ಬಾಲಭವನ ವತಿಯಿಂದ ನಿರ್ಮಿಸಲಾದ ನೂತನ ಬಾಕ್ಸ್ ಕ್ರಿಕೆಟ್ ಮೈದಾನದ ಉದ್ಘಾಟನೆ ಕಾರ್ಯಕ್ರಮ ಇಂದು ನಡೆದಿದೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್(Minister Lakshmi Hebbalkar) ಕ್ರಿಕೆಟ್ ಆಡುವ ಮೂಲಕ ಅಧೀಕೃತವಾಗಿ ಚಾಲನೆ ನೀಡಿದ್ದಾರೆ.

ಉದ್ಘಾಟನಾ ಪಂದ್ಯದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಬ್ಯಾಟಿಂಗ್ ಮಾಡಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೌಲಿಂಗ್ ನಡೆಸಿದರು. ವಿಶೇಷವೆಂದರೆ, ಲಕ್ಷ್ಮೀ ಹೆಬ್ಬಾಳಕರ್ ಅವರ ಎಸೆತಕ್ಕೆ ಸತೀಶ್ ಜಾರಕಿಹೊಳಿ ಕ್ಲೀನ್ ಬೋಲ್ಡ್ ಆಗಿದ್ದು, ಮೈದಾನದಲ್ಲಿ ನೆರೆದಿದ್ದವರು ಶಿಳ್ಳೆ, ಚಪ್ಪಾಳೆ ಮೂಲಕ ಸಂಭ್ರಮಿಸಿದರು.

ನಂತರ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬ್ಯಾಟಿಂಗ್‌ಗೆ ಇಳಿದರು. ಅವರ ಸಹೋದರ ಹಾಗೂ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಬೌಲಿಂಗ್ ಮಾಡಿದರು. ಈ ವೇಳೆ ಸಚಿವ ಸತೀಶ್ ಜಾರಕಿಹೊಳಿ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡರು. ಹೆಬ್ಬಾಳಕರ್ ಅವರು ಉತ್ತಮವಾಗಿ ಬ್ಯಾಟ್ ಬೀಸಿದರು.

ಶಾಸಕ ಆಸೀಫ್ ಸೇಠ್ ಕೂಡ ಫೀಲ್ಡಿಂಗ್ ಮಾಡುತ್ತಾ ಆಟಕ್ಕೆ ಸಾಥ್ ನೀಡಿದರು. ರಾಜಕೀಯದಲ್ಲಿ ಗಂಭೀರವಾಗಿ ಕಾಣಿಸಿಕೊಳ್ಳುವ ನಾಯಕರು ಇಂದು ಕ್ರಿಕೆಟ್ ಆಡಿ ಖುಷಿ ಪಟ್ಟರು. ನಾಯಕರ ಈ ಆಟವನ್ನು ಕಂಡ ಜನರು ಸಂತಸ ವ್ಯಕ್ತಪಡಿಸಿದರು.






