ಬೆಂಗಳೂರು : ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್(Ajit Pawar) ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಬಳಿಕ ಎನ್ ಸಿಪಿ (ರಾಷ್ಟ್ರವಾದಿ ಕಾಂಗ್ರೆಸ್) ಹಾಗೂ ಮಹಾ ರಾಜಕೀಯದಲ್ಲಿ ಸೃಷ್ಟಿಯಾಗಿದ್ದ ದೊಡ್ಡ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.

ಅಜಿತ್ ಪವಾರ್ ಸದ್ಯದಲ್ಲೇ ಜರುಗಲಿರುವ ಜಿಲ್ಲಾ ಪಂಚಾಯತಿ ಹಾಗೂ ತಾಲೂಕಾ ಪಂಚಾಯತಿ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಹೊಸ ರಾಜಕೀಯ ಸಮೀಕರಣ ರಚಿಸಿದ್ದರು. ಚುನಾವಣೆಯ ಬಳಿಕ ಅಜಿತ್ ಪವಾರ್ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ರಾಷ್ಟ್ರವಾದಿ ಎಸ್‌ಪಿ, ಮತ್ತು ಎಪಿಎನ್‌ಸಿಪಿ ಪಕ್ಷಗಳನ್ನು ವಿಲೀನಗೊಳಿಸುವ ಕುರಿತು ಅಧಿಕೃತ ನಿರ್ಧಾರ ಘೋಷಣೆ ಮಾಡುವ ಲಕ್ಷಣಗಳು ದಟ್ಟವಾಗಿದ್ದವು. ಈ ಕುರಿತು ಮಾತುಕತೆಗಳೂ ಸಹ ಅಂತಿಮ ಘಟ್ಟದಲ್ಲಿದ್ದವು ಎಂದು ಶರದ್ ಪವಾರ್ ಬಣದ ನಾಯಕ ಜಯಂತ್ ಪಾಟೀಲ್ ತಿಳಿಸಿದ್ದಾರೆ.

ಆದರೆ ಇದಕ್ಕೂ ಮುನ್ನವೇ ಈ ರೀತಿಯ ಆಘಾತಕಾರಿ ಘಟನೆ ನಡೆದಿದ್ದು, ಇಡೀ ಪಕ್ಷದ ಲೆಕ್ಕಾಚಾರವೇ ತಲೆ ಕೆಳಗಾಗುವಂತಾಗಿದೆ. ಅಜಿತ್ ಪವಾರ್ ಬಳಿಕ ಎನ್ ಸಿಪಿಯ ಮುಂದಿನ ಸಾರಥ್ಯ ಯಾರ ಹೆಗಲಿಗೆ ಎಂಬ ಪ್ರಶ್ನೆ ಮಹಾರಾಷ್ಟ್ರ ರಾಜಕೀಯದಲ್ಲಿ ಚರ್ಚೆಯಲ್ಲಿತ್ತು. ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲೂ ಈ ವಿಚಾರ ಸಾಕಷ್ಟು ಗೊಂದಲ ಮೂಡಿಸಿತ್ತು. ಅಜಿತ್ ಪವಾರ್ ಬಣದ ನಾಯಕರಾದ, ಪ್ರಫುಲ್ಲ ಪಟೇಲ್, ಛಗನ್ ಭುಜಬಲ್ ಹಾಗೂ ಸುನೀಲ್ ತಟ್ಕರೆ ಇವರಲ್ಲಿ ಯಾರಾದರೂ ಆ ಸ್ಥಾನವನ್ನು ತುಂಬಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದವು. ಅಲ್ಲದೇ ಇದಕ್ಕಾಗಿ ಲಾಬಿಯೂ ನಡೆದಿತ್ತು.
ಶರದ್ ಪವಾರ್ ಮೇಲಿತ್ತು ನಿರೀಕ್ಷೆ..!
ಆದರೆ ಅಜಿತ್ ಪವಾರ್ ಚಿಕ್ಕಪ್ಪ ಅಥವಾ ಸಂಸದೆ ಸುಪ್ರಿಯಾ ಸುಳೆ ಇವರೇ ಈ ಬಗ್ಗೆ ತೀರ್ಮಾನ ಮಾಡಬಹುದು ಎಂಬ ನಿರೀಕ್ಷೆಗಳು ಹೆಚ್ಚಾಗಿದ್ದವು. ಆದರೆ ಸದ್ಯ ಮಹಾರಾಷ್ಟ್ರ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಅಜಿತ್ ಪವಾರ್ ಬಳಿಕ ಅವರ ಪತ್ನಿ ರಾಜ್ಯಸಭಾ ಸದಸ್ಯೆ ಸುನೇತ್ರಾ ಪವಾರ್ ಅವರಿಗೆ ಮಹಾ ಡಿಸಿಎಂ ಪಟ್ಟ ಕಟ್ಟಿ ಗಂಡನ ಜವಾಬ್ದಾರಿ ವಹಿಸುವ ಮಹತ್ವದ ತೀರ್ಮಾನ ಹೊರಬಿದ್ದಿದ್ದು, ಸ್ವತಃ ಶರದ್ ಪವಾರ್ ಅವರೇ ಶಾಕ್!ಆಗಿದ್ದಾರೆ.

ನಿನ್ನೆ ರಾತೋರಾತ್ರಿ ಸುನೇತ್ರಾ ಪವಾರ್ ಮುಂಬೈಗೆ ತೆರಳಿದ್ದಾರೆ. ಅಲ್ಲಿಂದ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಈ ಬಗ್ಗೆ ಖುದ್ದು ಅಚ್ಚರಿ ವ್ಯಕ್ತಪಡಿಸಿರುವ ಎನ್ ಸಿಪಿ ವರಿಷ್ಠ ಶರದ್ ಪವಾರ್, ಸುನೇತ್ರಾ ನಮ್ಮ ಗಮನಕ್ಕೆ ಬಾರದೇ ನಿರ್ಧಾರ ಮಾಡಿದ್ದಾರೆ. ಅದಕ್ಕೂ ನಮಗೂ ಸಂಬಂಧವಿಲ್ಲ. ನಮ್ಮ ಸಲಹೆ ಕೇಳಿದ್ದರೆ ಹೇಳುತ್ತಿದ್ದೇವು ಡಿಸಿಎಂ ವಿಚಾರದ ಬಗ್ಗೆ ನನಗೇನೂ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಅಜಿತ್ ಪವಾರ್ ಬಣದ ಸಚಿವರಾದ ಛಗನ್ ಭುಜಬಲ್ ಮತ್ತು ಪ್ರಫುಲ್ ಪಟೇಲ್ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಮಹತ್ವದ ಸಭೆ ನಡೆಸಿದ್ದರು. ಸಭೆಯ ಬಳಿಕ ಡಿಸಿಎಂ ಹುದ್ದೆಗೆ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಭುಜಬಲ್ ಹೇಳಿದ್ದರು.

ಉಲ್ಟಾ ಹೊಡೆದ ಎನ್‌ಸಿಪಿ ನಾಯಕರ ಲೆಕ್ಕಾಚಾರ..?
ಇದರಿಂದ ಹಿರಿಯ ನಾಯಕರಲ್ಲಿ ಒಬ್ಬರಿಗೆ ಈ ಹುದ್ದೆ ಸಿಗಲಿದೆ ಎಂಬ ನಿರೀಕ್ಷೆ ಗಟ್ಟಿಯಾಗಿತ್ತು. ಆದರೆ ಈ ಎಲ್ಲ ಊಹಾಪೋಹಗಳ ನಡುವೆಯೇ, ಸುನೇತ್ರಾ ಪವಾರ್ ಅವರ ಹೆಸರು ದಿಢೀರ್ ಮುಂಚೂಣಿಗೆ ಬಂದಿದ್ದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಪ್ರಮುಖವಾಗಿ ಈ ನಿರ್ಧಾರದ ಹಿಂದೆ ಅಜಿತ್ ಪವಾರ್ ಅವರ ರಾಜಕೀಯ ಸಲಹೆಗಾರರಾಗಿದ್ದ ನರೇಶ್ ಅರೋರಾ ಪ್ರಮುಖ ಪಾತ್ರ ವಹಿಸಿರುವುದನ್ನು ಅಲ್ಲಗಳೆಯುವಂತಿಲ್ಲ.
ಎನ್ ಸಿಪಿಯ ರಾಜಕೀಯ ತಂತ್ರಗಾರಿಕೆ ಹೆಣೆಯುವ ಅರೋರಾ ಸುನೇತ್ರಾ ಪವಾರ್ ಅವರನ್ನು ಸಂಪರ್ಕಿಸಿ ಪಕ್ಷದ ಹಿತದೃಷ್ಟಿಯಿಂದ ನಿಮ್ಮ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದ ಕೆಲವೇ ನಿಮಿಷಗಳಲ್ಲಿ ಮಹಾರಾಷ್ಟ್ರದ ಮೊದಲ ಮಹಿಳಾ ಡಿಸಿಎಂ ಆಯ್ಕೆಯ ಮಹತ್ವದ ನಿರ್ಧಾರ ಹೊರಬಿದ್ದಿದೆ.

ಈ ದುಖಃದ ಸಮಯದಲ್ಲಿ ಈ ಬಗ್ಗೆ ಯೋಚಿಸಲಾರೆ, ರಾಜನೇ ಹೋದ ಮೇಲೆ ಇನ್ನೇನು..? ಎಂಬ ಭಾವುಕ ಮಾತುಗಳನ್ನಾಡಿದ್ದಾರೆ. ಆದರೆ ಅಂತಿಮವಾಗಿ ಸುನೇತ್ರಾ ಮನವೊಲಿಸುವಲ್ಲಿ ನರೋರಾ ಯಶಸ್ವಿಯಾಗಿದ್ದು, ಸುನೇತ್ರಾ ಅವರು ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಕ್ಷಣಗಣನೆ ಆರಂಭವಾಗಿದೆ. ಇಂದು ಸಂಜೆ 5 ಗಂಟೆಗೆ ಮುಂಬೈನಲ್ಲಿ ಪ್ರಮಾಣ ವಚನ ಸ್ವೀಕಾರಕ್ಕೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ.

ಯಾರು ಈ ಅರೋರಾ..?
ಅಜಿತ್ ಪವಾರ್ ಅವರ ರಾಜಕೀಯ ಸಲಹೆಗಾರರಾಗಿ ವಿಧಾನಸಭೆಯಲ್ಲಿ ಕೆಲಸ ಮಾಡಿದ್ದ ಪಂಜಾಬ್ ಮೂಲದ ಪಾಲಿಟಿಕಲ್ ಮಾಸ್ಟರ್ ಮೈಂಡ್ ನರೇಶ್ ಅರೋರಾ ಅವರ ಪಾತ್ರ ಪ್ರಮುಖವಾಗಿದೆ ಎಂಬ ಮಾಹಿತಿ ಬಯಲಾಗಿದೆ. ನರೇಶ್ ಅರೋರಾಗೂ ಮತ್ತು ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ.
ಹೌದು, ಕಳೆದ 2023ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೂಡ ನರೇಶ್ ಅರೋರಾ ಮುಖ್ಯ ಪಾತ್ರ ವಹಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ ಅವರಿಗೆ 2019 ರಿಂದ 2024 ರವರೆಗೆ ರಾಜಕೀಯ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಇವರಷ್ಟೇ ಅಲ್ಲದೆ, ರಾಜ್ಯದ ಬೇರೆ ಬೇರೆ ರಾಜಕೀಯ ನಾಯಕರಿಗೂ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಅರೋರಾ ಮಾಡಿದ್ದ ಚುನಾವಣಾ ಸ್ಟ್ರಾಟಜಿಗಳೂ ಸಾಕಷ್ಟು ಕೆಲಸ ಮಾಡಿದ್ದು, ಅರೋರಾ ಹೆಣೆದಿದ್ದ ಅನೇಕ ರಾಜಕೀಯ ತಂತ್ರಗಳೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ಬೂಸ್ಟ್ ನೀಡಿವೆ ಎನ್ನಲಾಗಿದೆ.











