ಬೆಂಗಳೂರು: ರಾಜ್ಯ ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ (85) ಇಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಂಜೆ ವಿಜಯನಗರದ ತಮ್ಮ ಮನೆಯಿಂದ ಹೊರಗಡೆ ಬಂದಿದ್ದ ಸುಬ್ಬರಾವ್ ಗೆ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಅನಂತ್ ಸುಬ್ಬರಾವ್ ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನವರು. 85 ವರ್ಷದ ಅನಂತ್ ಸುಬ್ಬರಾವ್ ರಾಜ್ಯ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿದ್ದರು. ಕಳೆದ ಐದು ದಶಕಗಳಿಂದ ಸಾರಿಗೆ ನೌಕರರ ಪರ ಹೋರಾಟ ಮಾಡಿಕೊಂಡು ಬಂದಿದ್ದರು. ನಾಳೆಯೂ ಸಾರಿಗೆ ನೌಕರರ ಬೆಂಗಳೂರು ಚಲೋಗೆ ಕರೆ ನೀಡಿದ್ದರು. ಆದರೆ ಸುಬ್ಬರಾವ್ ನಿಧನದಿಂದಾಗಿ ಬೆಂಗಳೂರು ಚಲೋ ಮುಂದೂಡಿಕೆಯಾಗಿದ್ದು, ಎಂದಿನಂತೆ ಬಸ್ ಸಂಚಾರ ಇರಲಿದೆ.





