ಬೆಂಗಳೂರು: ಅಬಕಾರಿ ಲೈಸೆನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಬಕಾರಿ ಡಿಸಿ, ಸೂಪರಿಂಟೆಂಡೆಂಟ್, ಡ್ರೈವರ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಲಕ್ಷ್ಮಿ ನಾರಾಯಣ್ ಎಂಬುವರು ತಮ್ಮ ಮಗನಿಗಾಗಿ ಬಾರ್ ಓಪನ್ ಮಾಡಲು ಮುಂದಾಗಿದ್ರು. ಇದಕ್ಕಾಗಿ CL7 ಮತ್ತು ಮೈಕ್ರೋ ಬ್ರೈವರಿ ಲೈಸೆನ್ಸ್ ಗೆ ಸರ್ಕಾರಿ ಶುಲ್ಕ 21 ಲಕ್ಷ ರೂ. ಕೂಡ ಪಾವತಿಸಿದ್ದರು. ಆದರೆ ಈ ಎರಡು ಲೈಸೆನ್ಸ್ ಗಳನ್ನ ನೀಡಲು ಬೆಂಗಳೂರು ನಗರ ಅಬಕಾರಿ ಡಿಸಿ ಜಗದೀಶ್ ನಾಯ್ಕ್ ಒಟ್ಟು 2.30 ಕೋಟಿ ರೂ. ಲಂಚ ಕೇಳಿದ್ದರು.
ಅಬಕಾರಿ ಡಿಸಿ ಲಂಚ ಬೇಡಿಕೆ ಇಟ್ಟಿದ್ದ ಹಿನ್ನೆಲೆ ಲಕ್ಷ್ಮೀನಾರಾಯಣ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಒಂದು ಲೈಸೆನ್ಸ್ ವಿಚಾರವಾಗಿ ಲೋಕಾಯುಕ್ತ ಪೊಲೀಸರು ಕೇಸ್ ದಾಖಲಿಸಿದ್ದರು. ಬಳಿಕ ಲೋಕಾಯುಕ್ತ ಎಸ್ ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದ ತಂಡ ಬ್ಯಾಟರಾಯನಪುರದಲ್ಲಿರುವ ಅಬಕಾರಿ ಭವನದಲ್ಲೇ 25 ಲಕ್ಷ ಹಣ ಅಡ್ವಾನ್ಸ್ ಸ್ವೀಕರಿಸುತ್ತಿದ್ದ ಡಿಸಿ ಜಗದೀಶ್ ನಾಯ್ಕ್, ಸೂಪರಿಂಟೆಂಡೆಂಟ್ ತಮ್ಮಣ್ಣ, ಡ್ರೈವರ್ ಲಕ್ಕಪ್ಪನನ್ನ ರೆಡ್ ಹ್ಯಾಂಡ್ ಆಗಿ ಹಿಡಿದು ಮೂವರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಲೋಕಾಯುಕ್ತ ಪೊಲೀಸರ ದಾಳಿ ವೇಳೆ ಹಣ ಸ್ವೀಕರಿಸಿದ್ದ ಸೂಪರಿಂಟೆಂಡೆಂಟ್ ಮತ್ತು ಡ್ರೈವರ್ ಲಕ್ಕಪ್ಪ ಪರಾರಿಯಾಗಲು ಯತ್ನಿಸಿದರು. ಆದರೆ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದರು. ಸದ್ಯ ಮೂವರು ಆರೋಪಿಗಳನ್ನ ಬಂಧಿಸಿರೋ ಲೋಕಾಯುಕ್ತ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ.











