ದಕ್ಷಿಣ ಕನ್ನಡ: ಮಂಗಳೂರು(Mangalore) ನಗರದಲ್ಲಿ ಬಾಂಗ್ಲಾದೇಶದ(Bangladesh) ಅಕ್ರಮ ವಲಸಿಗರ ಕುರಿತು ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ 70 ವರ್ಷದ ಹಿರಿಯ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನುವ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ(Social Media) ಹರಿದಾಡುತ್ತಿದೆ.

ಧರ್ಮಪಾಲ ಶೆಟ್ಟಿ (70) ಎಂಬ ವ್ಯಕ್ತಿ, ಮಂಗಳೂರಿನಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಇದ್ದಾರೆ ಎಂದು ವ್ಯಕ್ತಿಯೊಬ್ಬರು ವ್ಯಾಪಾರ ಮಾಡುವ ಅಂಗಡಿ ಬಗ್ಗೆ ಸುಳ್ಳು ಸಂದೇಶವನ್ನು ಫಾರ್ವರ್ಡ್ ಮಾಡಿದ್ದರು ಎನ್ನಲಾಗಿದೆ. ಯಾರೋ ನೀಡಿದ್ದ ಸುಳ್ಳು ಮಾಹಿತಿಯನ್ನು ಧರ್ಮಪಾಲ ಶೆಟ್ಟಿ ಬೇರೆಯವರಿಗೆ ಕಳುಹಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: ಸಿಎಂ ತವರು ಜಿಲ್ಲೆಯಲ್ಲೇ ಫ್ಲೆಕ್ಸ್ ಗಲಾಟೆ: ಕುಮಾರಸ್ವಾಮಿ ಬ್ಯಾನರ್ ಕಿತ್ತೆಸೆದು ವ್ಯಕ್ತಿ ಆಕ್ರೋಶ
ಇನ್ನು ಪ್ರಕರಣದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು, ʼಆರೋಪಿತ ಅಂಗಡಿ ಮಾಲೀಕರ ಕುಟುಂಬದ ಹಿನ್ನೆಲೆ ಪರಿಶೀಲನೆ ನಡೆಸಲಾಗಿದೆ. ಅವರ ಹೆಸರಿನಲ್ಲಿ 2014ರಲ್ಲಿ ಖರೀದಿಸಲಾದ ಆಸ್ತಿ ಇದೆ. ಅವರು ಭಾರತೀಯರಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲʼ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಈ ಆರೋಪ ಸಂಪೂರ್ಣವಾಗಿ ಸುಳ್ಳು ಹಾಗೂ ಆಧಾರರಹಿತ ಎಂಬುದು ತನಿಖೆಯಲ್ಲಿ ದೃಢಪಡಿಸಿದ್ದಾರೆ.

ಸಮಾಜಕ್ಕೆ ಆತಂಕ ತಂದಿರುವ ‘ಡಿಜಿಟಲ್ ಚಟ’
ಈ ಪ್ರಕರಣ ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಲ್ಲ, ಬದಲಾಗಿ ನಮ್ಮ ಸಮಾಜದಲ್ಲಿ ವಿಶೇಷವಾಗಿ ಹಿರಿಯ ನಾಗರಿಕರಲ್ಲಿ ಕಂಡುಬರುತ್ತಿರುವ ‘ಕಂಡದ್ದನ್ನೆಲ್ಲ ನಂಬಿ ಫಾರ್ವರ್ಡ್ ಮಾಡುವ ಡಿಜಿಟಲ್ ಚಟ’ದ ಭಯಾನಕ ಮುಖವನ್ನು ತೋರಿಸುತ್ತದೆ. ಸತ್ಯಾಸತ್ಯತೆ ಪರಿಶೀಲಿಸದೇ ಧರ್ಮ, ದೇಶ, ಭದ್ರತೆ ಎಂಬ ಭಾವನಾತ್ಮಕ ವಿಷಯಗಳ ಹೆಸರಿನಲ್ಲಿ ಸಂದೇಶಗಳನ್ನು ಫಾರ್ವರ್ಡ್ ಮಾಡುವುದು, ಮುಗ್ಧತೆಯಲ್ಲ. ಅದು ಕಾನೂನು ಅಪರಾಧಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುವುದು ಗಂಭೀರ ವಿಚಾರವಾಗಿದೆ.

ಈ ಬಗ್ಗೆ ಜಿತೇಂದ್ರ ಕುಂದೇಶ್ವರ ಎನ್ನುವವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇಲ್ಲಿ ಪ್ರಶ್ನೆ ಕೇವಲ ಒಬ್ಬ ವ್ಯಕ್ತಿಯದ್ದಲ್ಲ, ಬದಲಾಗಿ ನಮ್ಮ ಹಿರಿಯರು ಯಾವ ರೀತಿಯ ಮಾಹಿತಿಗಳನ್ನು ಕುರುಡಾಗಿ ನಂಬುತ್ತಿದ್ದಾರೆ ಎಂಬ ಆತಂಕದ್ದು. ಇಲ್ಲಿ ಕೇವಲ ಮುಗ್ಧತೆಯಷ್ಟೇ ಅಲ್ಲ, ಅಸಲಿ-ನಕಲಿ ತಿಳಿಯದ ಅವಿವೇಕ ಮತ್ತು ಕಂಡದ್ದನ್ನೆಲ್ಲ ಹಂಚುವ ‘ಡಿಜಿಟಲ್ ಚಟ’ ಎದ್ದುಕಾಣುತ್ತಿದೆ. ನಿಮಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ನೇರವಾಗಿ ಪೊಲೀಸ್ ಕಮಿಷನರ್ ಅವರ ವಾಟ್ಸಪ್ ನಂಬರ್‌ಗೆ ಅಥವಾ ಕಂಟ್ರೋಲ್ ರೂಮಿಗೆ ಕರೆ ಮಾಡಿ ತಿಳಿಸಬಹುದು ಅವರು ಖಂಡಿತ ವಿಚಾರಣೆ ನಡೆಸಿ ಶೋಧನೆ ನಡೆಸಿ ಸತ್ಯಾಸತ್ಯತೆಯನ್ನು ಹೊರಗೆ ತೆಗೆಯುತ್ತಾರೆ.

ಅದು ಬಿಟ್ಟು ಅಮಾಯಕರು ಯಾರು ಅಂಗಡಿ ಮಾಡುತ್ತಿರುತ್ತಾರೆ. ಇನ್ಯಾರೋ ತಳ್ಳು ಗಾಡಿ ಅಂಗಡಿ ನಡೆಸುತ್ತಿದ್ದರೆ, ಕೆಲವೊಮ್ಮೆ ಜೊತೆಯಲ್ಲೇ ಇದ್ದವರೇ ಹೊಟ್ಟೆ ಉರಿಯಿಂದ ಜಾಲತಾಣಗಳಲ್ಲಿ ಹರಿಬಿಡುತ್ತಾರೆ. ಯಾವನೋ ಅಮಾಯಕ ಜನ ಶೇರ್ ಮಾಡಿ ಕ್ರಿಮಿನಲ್ ಪ್ರಕರಣ ಎದುರಿಸುವಂತ ಪರಿಸ್ಥಿತಿಯು ಬರಬಹುದು. ಹಾಗಾಗಿ ಜಾಲತಾಣದಲ್ಲಿ ಫಾರ್ವರ್ಡ್ ಮಾಡುವ ಮುನ್ನ ಎಚ್ಚರ.
ಇಲ್ಲಿ ಗಮನಿಸಬೇಕಾದ ಅಂಶಗಳೆಂದರೆ ವಿವೇಚನೆಯ ಕೊರತೆ: ದೇಶ ಅಥವಾ ಧರ್ಮದ ಹೆಸರಿನಲ್ಲಿ ಬರುವ ಸಂದೇಶಗಳನ್ನು ಕಂಡ ತಕ್ಷಣ, ಅವುಗಳ ಸತ್ಯಾಸತ್ಯತೆ ಪರಿಶೀಲಿಸದೆ ಹಂಚುವುದು ರಾಷ್ಟ್ರ ಸೇವೆಯಲ್ಲ, ಬದಲಾಗಿ ಅಕ್ಷಮ್ಯ ಅಪರಾಧ. ಸುಳ್ಳು ಸುದ್ದಿಯ ಭ್ರಮೆ: ವೃತ್ತಿಪರ ಮಾಧ್ಯಮಗಳಿಗಿಂತ ಜಾಲತಾಣದ ಸುಳ್ಳುಗಳನ್ನೇ ಸತ್ಯವೆಂದು ನಂಬುವ ಹಿರಿಯರು, ಸಮಾಜ ರಕ್ಷಣೆ ಮಾಡುತ್ತಿದ್ದೇವೆಂಬ ಭ್ರಮೆಯಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದಾರೆ.

ಕಾನೂನಿನ ಪೆಟ್ಟು: ಪೊಲೀಸರು ಇಂದು ತಂತ್ರಜ್ಞಾನದ ಮೂಲಕ ಸುಳ್ಳಿನ ಮೂಲವನ್ನು ಸುಲಭವಾಗಿ ಪತ್ತೆಹಚ್ಚುತ್ತಾರೆ. ವಯಸ್ಸಿನ ಗೌರವವನ್ನೂ ಮರೆತು ಹಂಚುವ ದ್ವೇಷದ ಸಂದೇಶಗಳು ನೇರವಾಗಿ ಜೈಲು ಪಾಲಾಗುವಂತೆ ಮಾಡುತ್ತವೆ. ಜಾಗೃತಿ ಸಂದೇಶ: ಮಾಧ್ಯಮಗಳು ಸುದ್ದಿ ಮಾಡುವ ಮೊದಲು ಮೂಲಗಳನ್ನು ನೂರಾರು ಬಾರಿ ಪರಿಶೀಲಿಸುತ್ತವೆ. ಆದರೆ ಕೇವಲ ಮೊಬೈಲ್ ಇದೆ ಎಂಬ ಕಾರಣಕ್ಕೆ ಸಿಕ್ಕ ಸಿಕ್ಕ ಮೆಸೇಜ್ ಫಾರ್ವರ್ಡ್ ಮಾಡುವುದು ನಿಮ್ಮ ವ್ಯಕ್ತಿತ್ವಕ್ಕೆ ಹಾಗೂ ಸಮಾಜಕ್ಕೆ ಅಪಾಯಕಾರಿ. ನೆನಪಿಡಿ: ನಿಮ್ಮ ಒಂದು ‘Forward’ ಕ್ಲಿಕ್ ಮಾಡುವ ಮುನ್ನ ವಿವೇಚನೆ ಬಳಸಿ. ಸತ್ಯ ತಿಳಿಯದ ಪ್ರಚಾರ ದೇಶಪ್ರೇಮವಲ್ಲ, ಅದು ಸಮಾಜಕ್ಕೆ ಮಾಡುವ ದ್ರೋಹ ಎಂದು ಜಿತೇಂದ್ರ ಕುಂದೇಶ್ವರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.











