ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಮಹತ್ವದ ಬೆಳವಣಿಗೆಯೊಂದರಲ್ಲಿ ಡಿಸಿಎಂ ಡಿಕೆ ಶಿವಕುಮಾರ್(DCM DK Shivakumar) ದೆಹಲಿಗೆ ಹಾರಿದ್ದಾರೆ. ಸಂಕ್ರಾಂತಿಯ ಬಳಿಕ ರಾಜ್ಯ ರಾಜಕಾರಣದಲ್ಲಿ ಸಂಚಲನಕಾರಿ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ಕಳೆದೆರಡು ದಿನಗಳ ಹಿಂದಷ್ಟೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು(Rahul Gandhi) ಭೇಟಿಯಾಗಿದ್ದ ಸಿಎಂ ಸಿದ್ದರಾಮಯ್ಯ(Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ಚರ್ಚಿಸಿದ್ದರು.

ಸಿದ್ದರಾಮಯ್ಯ ಜೊತೆಯಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಡಿಕೆ ಶಿವಕುಮಾರ್ ಅವರನ್ನು ಸ್ವಲ್ಪ ದೂರ ಕರೆದುಕೊಂಡು ರಹಸ್ಯ ಮಾತುಕತೆ ನಡೆಸಿದ್ದರು. ಈ ವೇಳೆ ನೀವು ಯಾವುದಕ್ಕೂ ಚಿಂತೆ ಪಡುವ ಅವಶ್ಯಕತೆಯಿಲ್ಲ. ನಾನು ನಿಮ್ಮನ್ನು ಶೀಘ್ರದಲ್ಲೇ ದೆಹಲಿಗೆ ಬರುವಂತೆ ತಿಳಿಸುತೇನೆ ಎಂದು ರಾಹುಲ್ ಗಾಂಧಿ ಡಿಸಿಎಂಗೆ ಅಭಯ ನೀಡಿದ್ದರು.

ಹೀಗಾಗಿಯೇ ರಾಹುಲ್ ಗಾಂಧಿ ಬುಲಾವ್ ಮೇರೆಗೆ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿರುವುದು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಅದರಲ್ಲೂ ಡಿಕೆಶಿ ಬಣದಲ್ಲಿ ಆಶಾಭಾವ ಮೂಡಲು ಕಾರಣವಾಗಿದೆ. ಡಿಕೆ ಶಿವಕುಮಾರ್ ಅವರನ್ನು ಅಸ್ಸಾಂ ಚುನಾವಣೆ ಹಿನ್ನೆಲೆಯಲ್ಲಿ ಹಿರಿಯ ಚುನಾವಣಾ ವೀಕ್ಷಕರಾಗಿ ಕಾಂಗ್ರೆಸ್ ನೇಮಕ ಮಾಡಿದೆ. ಈ ಮೂಲಕ ಡಿಕೆಶಿ ಸಂಘಟನಾ ಚತುರತೆ ಹಾಗೂ ರಾಜಕಾರಣದ ಅನುಭವವನ್ನು ಬಳಸಿಕೊಳ್ಳುವ ಪ್ಲ್ಯಾನ್ ರೂಪಿಸಿದೆ.

ಚುನಾವಣಾ ವೀಕ್ಷಕರ ಜೊತೆ ರಾಹುಲ್ ಗಾಂಧಿ ಸಭೆಯ ನೆಪದಲ್ಲಿ ದೆಹಲಿಯಲ್ಲಿ ಡಿಕೆ ಶಿವಕುಮಾರ್ ಹೈಕಮಾಂಡ್ ನಾಯಕರಿಗೆ ಸ್ಪಷ್ಟ ಸಂದೇಶ ನೀಡುತ್ತಾರಾ ಎಂಬ ಪ್ರಶ್ನೆ ಮೂಡುತ್ತಿದೆ.
ಇದನ್ನೂ ಓದಿ: BJP: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಚುನಾವಣೆಗೆ ಮೂಹರ್ತ ಫಿಕ್ಸ್
ಈಗಾಗಲೇ ಹಲವು ದಿನಗಳಿಂದಲೂ ಸಿಎಂ ಕನಸು ಹೊತ್ತಿರುವ ಡಿಕೆ ಶಿವಕುಮಾರ್ ಸಂಕ್ರಾಂತಿಯ ಬಳಿಕ ಶುಭ ಸುದ್ದಿಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಇತ್ತ ಕಡೆ ಸಿಎಂ ಸಿದ್ದರಾಮಯ್ಯ ಅವರನ್ನು ಮುಂದಿನ ಹಂತಗಳಲ್ಲಿ ದೆಹಲಿಗೆ ಬರುವಂತೆ ಸೂಚಿಸಿ ನಾಯಕತ್ವ ಬದಲಾವಣೆಯ ವಿಚಾರ ಚರ್ಚಿಸುವ ಸಾಧ್ಯತೆಗಳಿವೆ. ಬಜೆಟ್ ಬಳಿಕ ಈ ನಾಯಕತ್ವದ ಗೊಂದಲಕ್ಕೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ.

ಇನ್ನೂ ತಮ್ಮ ದೆಹಲಿ ಭೇಟಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ಇಂದು ಅಸ್ಸಾಂ ಚುನಾವಣೆ ಸಂಬಂಧ ಹೈಕಮಾಂಡ್ ನಾಯಕರ ಜತೆ ಸಭೆ ಇದೆ, ಈ ಸಭೆಯ ಯೋಜನೆಗಳನ್ನು ಹಾಗೂ ನಮ್ಮ ಪಕ್ಷದ ಪ್ಲ್ಯಾನ್‌ಗಳನ್ನು ಬಹಿರಂಗಪಡಿಸಲು ಹೇಗೆ ಸಾಧ್ಯ? ಇದನ್ನು ಪಕ್ಷದ ಮಟ್ಟದಲ್ಲಿ ಮಾತ್ರ ಚರ್ಚಿಸಲಾಗುವುದೇ ಹೊರತು ಸಾರ್ವಜನಿಕವಾಗಿ ಅಲ್ಲ. ಏನಾದರೂ ಮಾಹಿತಿ ನೀಡುವುದಿದ್ದರೆ, ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳಿದ್ದಾರೆ ಅವರು ನೀಡುತ್ತಾರೆ. ಆದರೆ ನಾನು ಪಕ್ಷದ ನಾಯಕರನ್ನು ಭೇಟಿ ಮಾಡುವ ಉದ್ದೇಶದಿಂದಲೇ ದೆಹಲಿಗೆ ಬಂದಿದ್ದೇನೆ ಕಾದು ನೋಡಿ ಎನ್ನುವ ಮೂಲಕ ಡಿಕೆಶಿ ತಮ್ಮ ಮುಂದಿನ ನಡೆಯ ಬಗ್ಗೆ ಸಂಚಲನ ಸೃಷ್ಟಿಸಿದ್ದಾರೆ.

ಈಗಾಗಲೇ ಸಂಕ್ರಾಂತಿಯು ಮುಗಿದಿದ್ದು, ಇನ್ನು ಮುಂದೆ ಹಂತ ಹಂತವಾಗಿ ರಾಜ್ಯ ರಾಜಕಾರಣದಲ್ಲಿ ಬೆಳವಣಿಗೆಗಳು ಇನ್ನಷ್ಟು ವೇಗ ಪಡೆಯಲಿವೆ. ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ದಾಖಲೆ ಮುರಿದಿರುವ ಸಂತಸದಲ್ಲಿದ್ದಾರೆ. ದೀರ್ಘಕಾಲ ಆಡಳಿತ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ದಾಖಲೆಯ 17 ನೇ ಬಜೆಟ್ ಮಂಡನೆಗೂ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಡಿಕೆ ಶಿವಕುಮಾರ್ ವಿಚಾರದಲ್ಲಿ ರಾಹುಲ್ ಗಾಂಧಿ ಯಾವ ನಿಲುವನ್ನು ತಾಳುತ್ತಾರೆ ಎನ್ನುವುದು ಕಾಂಗ್ರೆಸ್ ಪಾಳಯದಲ್ಲಿನ ಚರ್ಚೆಯಾಗಿದೆ. ದೆಹಲಿಯಿಂದ ಕನಕಪುರದ ಜನತೆಗೆ ಹಾಗೂ ಅಭಿಮಾನಿಗಳಿಗೆ ಡಿಕೆ ಶಿವಕುಮಾರ್ ಯಾವ ಸಂದೇಶ ಹೊತ್ತು ಮರಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.












