ಬೆಂಗಳೂರು : ಭಾರತೀಯ ಸೇನಾಧಿಕಾರಿ, ಕನ್ನಡತಿ ಸ್ವಾತಿ ಶಾಂತಕುಮಾರ್ ಅವರು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಭಾರತದ ಹಿರಿಮೆಯನ್ನ ಹೆಚ್ಚಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶ್ಲಾಘಿಸಿದ್ದಾರೆ.
ದಕ್ಷಿಣ ಸುಡಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯೊಂದಿಗೆ “ಸಮಾನ ಪಾಲುದಾರರು, ಶಾಶ್ವತ ಶಾಂತಿ” ಎಂಬ ಯೋಜನೆಗಾಗಿ ನಮ್ಮ ಬೆಂಗಳೂರಿನ ಯುವತಿ ಭಾರತೀಯ ಸೇನಾಧಿಕಾರಿ ಮೇಜರ್ ಸ್ವಾತಿ ಶಾಂತಕುಮಾರ್ ಅವರು, 2025ರ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಪ್ರಶಸ್ತಿಯನ್ನು ಗೆದ್ದು ದೇಶದ ಜತೆಗೆ ಕನ್ನಡ ನಾಡಿನ ಹೆಮ್ಮೆಯ ನಾರಿಯಾಗಿ ಹೊರ ಹೊಮ್ಮಿದ್ದಾರೆ ಎಂದು ಜೋಶಿ ಪ್ರಶಂಸಿದ್ದಾರೆ.
ಸಂಘರ್ಷ ಪೀಡಿತ ದೇಶದಲ್ಲಿ ಸುಮಾರು 5000 ಕ್ಕೂ ಹೆಚ್ಚು ಮಹಿಳೆಯರಿಗೆ ಸುರಕ್ಷಿತೆ ಒದಗಿಸಿ, ಲಿಂಗ ಭೇದ ಶಾಂತಿಪಾಲನೆಯನ್ನು ಮುನ್ನಡೆಸಿದ್ದು, ಮಹಿಳೆಯರನ್ನು ಸಬಲೀಕರಣಗೊಳಿಸಿದ್ದಾರೆ. ಕೆಲವು ಅತ್ಯಂತ ಸವಾಲಿನ ಪರಿಸ್ಥಿತಿಗಳಲ್ಲಿ ಸಮುದಾಯದ ನಂಬಿಕೆಯನ್ನು ಬಲಪಡಿಸಲಾಗಿದೆ. ಜಾಗತಿಕ ವೇದಿಕೆಯಲ್ಲಿ ಮಹಿಳೆಯರ ನೇತೃತ್ವದಲ್ಲಿ ಧೈರ್ಯ, ಬದ್ಧತೆ ಮತ್ತು ಶಾಂತಿ ನಿರ್ಮಾಣಕ್ಕೆ ಇದು ಸಾಕ್ಷಿಯಾಗಿದೆ ಎಂದು ಪ್ರಲ್ಹಾದ್ ಜೋಶಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನೂ ಕಳೆದ ರವಿವಾರವಷ್ಟೇ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಈ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದರು. ಸಂಘರ್ಷ ಪೀಡಿತ ದಕ್ಷಿಣ ಸೂಡನ್‌ನಲ್ಲಿ ಮಹಿಳೆಯರ ರಕ್ಷಣೆ, ಸಮುದಾಯದ ನೆಮ್ಮದಿಗಾಗಿ ನಡೆಸಿದ ಕಾರ್ಯಕ್ರಮಗಳಿಗಾಗಿ ಮೇಜರ್ ಸ್ವಾತಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ‘ಸಮಾನ ಪಾಲುದಾರಿಕೆ ಶಾಶ್ವತ ಶಾಂತಿ’ ಎಂಬುದು ಸ್ವಾತಿ ಅವರ ಧ್ಯೇಯವಾಗಿದೆ. ಅವರು ಶಾಂತಿ ರಕ್ಷಣಾ ಕಾರ್ಯಾಚರಣೆಗಳ ಮುಂದಾಳತ್ವದಲ್ಲಿ ಲಿಂಗ ಸಮಾನತೆಗೆ ಒತ್ತು ನೀಡಿದ್ದಾರೆ ಎಂದು ಗುಟೆರೆಸ್ ಕೂಡ ಕನ್ನಡತಿಯ ಕಾರ್ಯವನ್ನು ಮನಸಾರೆ ಹೊಗಳಿದ್ದಾರೆ.












