ಬೆಂಗಳೂರು: ಮೈಸೂರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DCM DK Shivakumar) ಭೇಟಿ ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲ ಮೂಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ನಾನು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವುದು ಹೊಸತೇನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ದೆಹಲಿಗೆ ಹೋದಾಗ ಎಲ್ಲಾ ನಾಯಕರು ಅಲ್ಲೇ ಇರುತ್ತಾರೆ. ಭೇಟಿ ಮಾಡುತ್ತೇನೆ. ಅವರು ನಮ್ಮ ಪಕ್ಷದ ನಾಯಕರು. ನಮ್ಮ ಪಕ್ಷದ ನಾಯಕರನ್ನು, ಅಧ್ಯಕ್ಷರನ್ನು ಭೇಟಿ ಮಾಡುವುದು, ಕರೆ ಮೂಲಕ ಚರ್ಚೆ ಮಾಡುವುದು ಸಹಜ ಪ್ರಕ್ರಿಯೆ. ಅವುಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ತಮ್ಮ ಟ್ವೀಟ್ ವಿವಾದದ ಬಗ್ಗೆ ಮಾತನಾಡಿದ ಅವರು, ಕರ್ನಾಟಕ ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ನಾನು ಟ್ವೀಟ್ ಮಾಡಿದ್ದನ್ನು ಕೆಲವು ಮಾಧ್ಯಮಗಳು ವಿವಿಧ ರೀತಿ ವ್ಯಾಖ್ಯಾನ ಮಾಡುತ್ತಿವೆ. ಕಾವೇರಿ ಆರತಿಯ ಪ್ರಾರ್ಥನೆಗೆ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ. ಮೇಕೆದಾಟು ಯೋಜನೆ ತಾಂತ್ರಿಕ ಅಂಶವನ್ನು ಕೇಂದ್ರ ಜಲ ಆಯೋಗವೇ ತೀರ್ಮಾನ ಮಾಡಬೇಕು ಎಂದು ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ನಾನು ಈ ಮಾತನ್ನು ಹೇಳುತ್ತಾ ಬಂದಿದ್ದೇನೆ. ಇದನ್ನು ಬೇರೆ ರೀತಿ ವ್ಯಾಖ್ಯಾನ ಮಾಡಿದರೆ ಅರ್ಥವಿಲ್ಲ ಎಂದು ಹೇಳಿದರು.












