ಬಾಗಲಕೋಟೆ: ಬಾಗಲಕೋಟೆ(Bagalkot) ಜಿಲ್ಲೆಯ ಜಗದಾಳ ಗ್ರಾಮದಲ್ಲಿ 80 ವರ್ಷದ ವೃದ್ಧೆ ದಾನಜ್ಜಿ ಅಲಿಯಾಸ್ ಚಂದ್ರವ್ವ ನೀಲಗಿ ಅವರನ್ನು ಆಸ್ತಿಗಾಗಿ ಸಂಬಂಧಿಗಳೇ ಕೊಲೆ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. 11 ಎಕರೆ ಜಮೀನು ವಿವಾದವೇ ಈ ಅಮಾನವೀಯ ಕೃತ್ಯಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೇರದಾಳ ಹಾಗೂ ರಬಕವಿ–ಬನಹಟ್ಟಿ ಭಾಗದಲ್ಲಿ ದಾನಜ್ಜಿ ಎಂದೇ ಪ್ರಸಿದ್ಧರಾಗಿದ್ದ ಚಂದ್ರವ್ವ ನೀಲಗಿ ಅವರ ಹತ್ಯೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

ದಾನಜ್ಜಿ ಅವರು ಕಳೆದ 60 ವರ್ಷಗಳಿಂದ ತೇರದಾಳದ ಪ್ರಭುಲಿಂಗೇಶ್ವರ ದೇವಸ್ಥಾನದ ಸಮೀಪ ತರಕಾರಿ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕಷ್ಟಪಟ್ಟು ಕೂಡಿಟ್ಟ ಹಣವನ್ನು ಸಮಾಜ ಸೇವೆಗೆ ಬಳಸುತ್ತಿದ್ದ ಅವರು, ಅನೇಕ ದಾನ ಕಾರ್ಯಗಳಿಗೆ ಹೆಸರಾಗಿದ್ದರು.

2022ರಲ್ಲಿ ಪ್ರಭುಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಗೆ 20 ಕೆಜಿ ತೂಕದ, ಸುಮಾರು ₹16 ಲಕ್ಷ ಮೌಲ್ಯದ ಬೆಳ್ಳಿ ಬಾಗಿಲು ದಾನ ಮಾಡಿದ್ದರು. ಜೊತೆಗೆ ₹3 ಲಕ್ಷ ವೆಚ್ಚದಲ್ಲಿ ದೇವಸ್ಥಾನಕ್ಕೆ ಕೊಠಡಿ ನಿರ್ಮಿಸಿಕೊಟ್ಟಿದ್ದರು. ಈ ಕಾರಣಕ್ಕೇ ಜನರು ಪ್ರೀತಿಯಿಂದ ಅವರನ್ನು ದಾನಜ್ಜಿ ಎಂದು ಕರೆಯುತ್ತಿದ್ದರು.
ಕಾಲುವೆಗೆ ತಳ್ಳಿ ಕೊಲೆ ಮಾಡಲು ಯತ್ನ
ಜನವರಿ 13ರಂದು ಹೊಲದ ಸರ್ವೆಗಾಗಿ ಅಧಿಕಾರಿಗಳು ಬಂದಿದ್ದ ವೇಳೆ, ದಾನಜ್ಜಿ ಘಟಪ್ರಭಾ ಕಾಲುವೆಯ ಪಕ್ಕ ನಡೆದುಕೊಂಡು ಹೋಗುತ್ತಿದ್ದಾಗ ಅವರನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಲು ಆರೋಪಿಗಳು ಯತ್ನಿಸಿದ್ದಾರೆ. ನಂತರ ಅವರನ್ನು ಉಳಿಸಿದಂತೆ ನಾಟಕವಾಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾಡಯ್ಯ ಬನಹಟ್ಟಿ ಆಸ್ಪತ್ರೆಗೆ ಕರೆದುಕೊಂಡು ಬಂದ ಬಳಿಕ, ಗೋಕಾಕ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ಮಾರ್ಗ ಮಧ್ಯೆ ವೃದ್ಧೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೊಲೆ ಬಳಿಕ ಆರೋಪಿಗಳು ಶವವನ್ನು ತುರ್ತಾಗಿ ಅಂತ್ಯಸಂಸ್ಕಾರ ಮಾಡಲು ಯತ್ನಿಸಿದ್ದಾರೆ. ಗೋಡೆಗೆ ಒರಗಿಸಿ ಶೃಂಗಾರ ಮಾಡಿಸಿ ಶವವನ್ನು ಸಾಗಿಸಲು ಮುಂದಾದಾಗ ಸ್ಥಳೀಯರಿಗೆ ಅನುಮಾನ ಮೂಡಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪರಿಶೀಲನೆಯ ವೇಳೆ ಕೊಲೆ ಪ್ರಕರಣ ಬಯಲಾಗಿದ್ದೆ. ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.













