ಬೆಂಗಳೂರು: ನಮ್ಮ ಪಕ್ಷದ ನಾಯಕರ ಜೊತೆಗಿನ ಮಾತುಕತೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಧ್ಯಮಗಳಿಗೆ ನೇರವಾಗಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೆಪಿಸಿಸಿ ಅಧ್ಯಕ್ಷ, ರಾಹುಲ್ ಗಾಂಧಿ ಅವರು ಲೋಕಸಭೆ ವಿರೋಧ ಪಕ್ಷದ ನಾಯಕ. ಶಿಷ್ಟಾಚಾರದ ಮೂಲಕ ಅವರನ್ನು ನಾನು ಸ್ವಾಗತಿಸಿ, ಭೇಟಿ ಮಾಡಿದ ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡಲು ಸಾಧ್ಯವೇ? ನೀವುಗಳು ನಿಮಗೆ ಇಚ್ಛೆ ಬಂದಂತೆ ಗೊಂದಲ ಸೃಷ್ಟಿಸಿಕೊಳ್ಳುತ್ತಿದ್ದೀರಿ ಎಂದು ಹೇಳಿದರು.

ನಾವು ಯಾವ ಸಂದೇಶವನ್ನು ಕೊಟ್ಟಿಲ್ಲ. ನಮಗೂ ಯಾವ ಸಂದೇಶವನ್ನೂ ಕೊಟ್ಟಿಲ್ಲ. ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ, ಇದನ್ನೇ ಮುಂದುವರಿಸಿಕೊಂಡು ಹೋಗಿ ಎಂದು ನಮ್ಮ ನಾಯಕರು ಹೇಳಿದ್ದಾರೆ. ನರೇಗಾ ವಿಚಾರವಾಗಿ ನಾವು ಮಾಡುತ್ತಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದ್ದೇನೆ. ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವ ರಾಜಕಾರಣ ಚರ್ಚೆ ಮಾಡಿದ್ದೇವೆ ಎಂದರು.

ಇನ್ನು ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬ ಟ್ವೀಟ್ ಬಗ್ಗೆ ಮಾತನಾಡಿದ ಅವರು, ನಾನು ಹೊಸದಾಗಿ ಈ ಮಾತನ್ನು ಹೇಳುತ್ತಿಲ್ಲ. ಒಕ್ಕಲಿಗ ಉದ್ಯಮಿ ಕಾರ್ಯಕ್ರಮಕ್ಕೆ ಹೋಗಿದ್ದಾಗ ನಾನು ಅಲ್ಲಿನ ಉದ್ಯಮಿಗಳ ಜೊತೆ ನನ್ನ ಅನುಭವದ ಮಾತುಗಳನ್ನು ಹೇಳಿಕೊಂಡಿದ್ದೇನೆ. 16 ರಂದು ದೆಹಲಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು.












