ಬೆಂಗಳೂರು : ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆಗಳು ಮತ್ತೆ ಜೋರಾಗಿವೆ. ಕಳೆದ ಜನವರಿ 6ರಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಸಿಎಂ ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿ, ರಾಜ್ಯದ ದೀರ್ಘಕಾಲದ ಆಡಳಿತ ನಡೆಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನವೆಂಬರ್ ಕ್ರಾಂತಿಯ ಚರ್ಚೆಗಳು ನಡೆಯುತ್ತಿದ್ದ ಕಾಂಗ್ರೆಸ್ ಪಾಳಯದಲ್ಲಿ ಇದೀಗ ಸಂ ಕ್ರಾಂತಿಯ ಮಾತುಗಳು ಕೇಳಿ ಬರುತ್ತಿವೆ.

ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯಬೇಕೆಂಬುದು ಡಿಸಿಎಂ ಡಿಕೆ ಶಿವಕುಮಾರ್ ಬಣದ ವಾದವಾಗಿದೆ. ಇದಕ್ಕೆ ಸಿದ್ದರಾಮಯ್ಯ ಅವರೇ ಮುಂದುವರೆಯಬೇಕೆಂದು ಅವರ ಆಪ್ತ ಬಳಗ ಪಟ್ಟು ಹಿಡಿದಿದೆ. ಹೀಗಾಗಿ ಬ್ರೇಕ್ ಫಾಸ್ಟ್ ಮೀಟಿಂಗ್ ಮೂಲಕ ಎಲ್ಲ ಭಿನ್ನಮತ ತಣಿಸಬೇಕೆಂದು ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ನಾಯಕರು ಯೋಚಿಸಿದ್ದರು. ಅದರಂತೆ ಉಭಯ ನಾಯಕರೂ ಕೂಡ ಎರಡು ಪರಸ್ಪರರ ಮನೆಗೆ ತೆರಳಿ ಬೆಳಗಿನ ಉಪಹಾರ ಸವಿದಿದ್ದರು.

ಆದರೆ ತಾತ್ಕಾಲಿಕವಾಗಿ ಶಮನವಾಗಿದ್ದ ಭಿನ್ನಮತದ ಹೇಳಿಕೆಗಳು ನಿಲ್ಲುವಂತೆ ಕಾಣುತ್ತಿಲ್ಲ. ಕ್ರಾಂತಿಯ ಬಳಿಕ ಸಂಕ್ರಾಂತಿಯ ಹೊತ್ತಲ್ಲಿಯೇ ಕೈ ಪಾಳಯದಲ್ಲಿ ಒಳಗೊಳಗೆ “ಸಂ” ಕ್ರಾಂತಿಯ ಚಟುವಟಿಕೆಗಳು ನಡೆಯುತ್ತಿವೆ ಎನ್ನಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಹಾಗೂ ಡಿಸಿಎಂ ಅವರ ಜೊತೆ ರಹಸ್ಯ ಮಾತುಕತೆ ನಡೆಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕವಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

“ನೀವು ಯಾವುದಕ್ಕೂ ಚಿಂತೆ ಮಾಡಬೇಡಿ, ಆದಷ್ಟು ಬೇಗನೇ ನಿಮ್ಮನ್ನು ದೆಹಲಿಗೆ ಬರುವಂತೆ ಹೇಳುತ್ತೇನೆ” ಎಂದು ರಾಹುಲ್ ಗಾಂಧಿ ಡಿಕೆ ಶಿವಕುಮಾರ್‌ಗೆ ಹೇಳಿರುವ ಚರ್ಚೆ ನಡೆಯುತ್ತಿದೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರ ಬಳಿಯೂ ರಾಹುಲ್ ಸಮಾಲೋಚನೆ ನಡೆಸಿದ್ದಾರೆ. ರಾಜಕಾರಣದಲ್ಲಿ ಈ ಭೇಟಿಗೆ ಹಲವು ಆಯಾಮಗಳಲ್ಲಿ ವಿಶ್ಲೇಷಣೆಗಳು ಮುಂದುವರೆದಿವೆ.

ಇನ್ನೂ ರಾಹುಲ್ ಭೇಟಿಯ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾರ್ಮಿಕ ಪೋಸ್ಟ್ ಹಂಚಿಕೊಂಡಿರುವುದು ಸಂಚಲನ ಮೂಡಿಸಿದೆ. ಪ್ರಯತ್ನ ವಿಫಲವಾದರೂ, ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬ ಪೋಸ್ಟರ್ ಸದ್ದು ಮಾಡುತ್ತಿದೆ. ರಾಹುಲ್ ಗಾಂಧಿ ಡಿಕೆ ಶಿವಕುಮಾರ್ ಅವರಿಗೆ ಅಭಯ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಸಹ ಈ ಪೋಸ್ಟ್‌ನ ಹಿಂದಿನ ಮರ್ಮವೇನು ಎಂಬ ಪ್ರಶ್ನೆಯೂ ಮೂಡುತ್ತಿದೆ.

ಆದರೆ ಇಬ್ಬರೂ ನಾಯಕರನ್ನೂ ದೆಹಲಿಗೆ ಕರೆಯಿಸಿ ಹೈಕಮಾಂಡ್ ನಾಯಕರು ಚರ್ಚೆ ನಡೆಸಲಿದ್ದಾರೆ. ಇದಕ್ಕೆ ಪೂರಕವಾಗಿಯೇ ಜನವರಿ 16 ರಂದು ಡಿಕೆ ಶಿವಕುಮಾರ್ ಅವರ ದೆಹಲಿ ಪ್ರವಾಸ ನಿಗದಿಯಾಗಿದೆ. ಒಂದು ವೇಳೆ ಸಿದ್ದರಾಮಯ್ಯ ಕೂಡ ದೆಹಲಿ ವಿಮಾನ ಹತ್ತಿದರೆ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ ಎಂದು ಸಿಎಂ ಭಾವಿಸಿದ್ದಾರೆ. ಈ ನಡುವೆ ಹೈಕಮಾಂಡ್ ಮುಂದಿನ ದಿನಗಳಲ್ಲಿ ಯಾವೆಲ್ಲ ರಾಜಕೀಯ ತಂತ್ರಗಾರಿಕೆಗಳನ್ನು ರೂಪಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.












