ಬೆಂಗಳೂರು: ಬಳ್ಳಾರಿ ಬ್ಯಾನರ್ ಗಲಾಟೆ ಬೆನ್ನಲ್ಲೇ ಮಾಜಿ ಸಚಿವ ಹಾಗೂ ಹಾಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ(MLA Janardhana Reddy) ಮತ್ತೆ ಗಣಿ ಸಂಕಷ್ಟ ಎದುರಾಗುವ ಲಕ್ಷಣಗಳು ಕಾಣಿಸಿಕೊಂಡಿವೆ. ಕರ್ನಾಟಕ–ಆಂಧ್ರಪ್ರದೇಶ ಗಡಿ ಭಾಗದಲ್ಲಿ ಸರ್ಕಾರಿ ಜಾಗ ಮತ್ತು ರಾಜ್ಯ ಗಡಿಯನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸಿರುವ ಗಂಭೀರ ಆರೋಪಗಳು ಮತ್ತೆ ಮುನ್ನೆಲೆಗೆ ಬಂದಿವೆ.

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನೇಮಕಗೊಂಡಿದ್ದ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಸುಧಾಂಶು ಧುಲಿಯಾ ನೇತೃತ್ವದ ವಿಶೇಷ ತನಿಖಾ ತಂಡ ನಡೆಸಿದ ಸಮಗ್ರ ಸರ್ವೇಯಲ್ಲಿ, ಜನಾರ್ದನ ರೆಡ್ಡಿ ಒಡೆತನದ ಗಣಿಗಳಿಂದ ರಾಜ್ಯ ಗಡಿ ಉಲ್ಲಂಘನೆ ಹಾಗೂ ಅಕ್ರಮ ಗಣಿಗಾರಿಕೆ ನಡೆದಿರುವುದು ಪ್ರಾಥಮಿಕವಾಗಿ ಸಾಬೀತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸರ್ವೇ ವರದಿಯಲ್ಲಿ, ಆಂಧ್ರ–ಕರ್ನಾಟಕ ಗಡಿಯಲ್ಲಿರುವ ಸುಂಕಲಮ್ಮ ದೇವಸ್ಥಾನದ ಸಮೀಪ ಅಕ್ರಮ ಮೈನಿಂಗ್ ನಡೆದಿರುವುದು ಪ್ರಮುಖ ಅಂಶವಾಗಿ ದಾಖಲಾಗಿದೆ. ಸರ್ವೇ ವೇಳೆ ಸಿದ್ಧಪಡಿಸಿದ ನಕ್ಷೆಗಳು, ದೇವಸ್ಥಾನದ ಮೂಲ ಸ್ಥಳದ ನಕ್ಷೆ ಮತ್ತು ಡ್ರೋನ್ ಮೂಲಕ ಪಡೆದ ಚಿತ್ರಣಗಳು ಅಕ್ರಮ ಗಣಿಗಾರಿಕೆಯ ಸಾಕ್ಷಿಯಾಗಿ ಲಭ್ಯವಾಗಿವೆ ಎನ್ನಲಾಗಿದೆ.

ಅಕ್ರಮ ಗಣಿಗಾರಿಕೆ, ಅದಿರು ಸಾಗಣೆ, ಪರಿಸರ ಹಾನಿ, ಹಾಗೂ ಕರ್ನಾಟಕ–ಆಂಧ್ರ ರಾಜ್ಯಗಳ ಪರ್ಮಿಟ್ ದುರ್ಬಳಕೆ ಕುರಿತು ತನಿಖೆ ನಡೆಸಲು ಡ್ರೋನ್ ಸರ್ವೇ, ಜಿಪಿಎಸ್ ಮ್ಯಾಪಿಂಗ್, ಉಪಗ್ರಹ ಚಿತ್ರಗಳು ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದೆ. ಈ ಸರ್ವೇ ಕಾರ್ಯ ಕಳೆದ ತಿಂಗಳು ಪೂರ್ಣಗೊಂಡಿದೆ.

ಸುಪ್ರೀಂ ಕೋರ್ಟ್ ಆದೇಶಿತ ಪ್ರದೇಶಗಳಾದ OMC–1 (ಒಬಳಾಪುರಂ ಮೈನಿಂಗ್ ಕಂಪನಿ): 25.98 ಹೆಕ್ಟೇರ್, OMC–2: 39.59 ಹೆಕ್ಟೇರ್, OMC–3: 68.52 ಹೆಕ್ಟೇರ್, AMC (ಅನಂತಪುರಂ ಮೈನಿಂಗ್ ಕಂಪನಿ): 6.50 ಹೆಕ್ಟೇರ್, ಬಳ್ಳಾರಿ ಐರನ್ ಓರ್ ಪ್ರೈವೇಟ್ ಲಿಮಿಟೆಡ್: 27.12 ಹೆಕ್ಟೇರ್, ವೈ.ಎಂ. & ಸನ್ಸ್ ಕಂಪನಿ: 20.24 ಹೆಕ್ಟೇರ್, ಇವುಗಳಲ್ಲಿ ವಿಶೇಷವಾಗಿ OMC–3 ಗಣಿಯಲ್ಲಿ ಅತಿಹೆಚ್ಚು ಪ್ರಮಾಣದ ಅಕ್ರಮ ಗಣಿಗಾರಿಕೆ ನಡೆದಿರುವುದಾಗಿ ಸಿಬಿಐ ಈಗಾಗಲೇ ವರದಿ ಸಲ್ಲಿಸಿದೆ.

ಆಂಧ್ರಪ್ರದೇಶ ಗಡಿಯಲ್ಲಿರುವ ಎಲ್ಲಾ ಗಣಿಗಳ ಅಕ್ರಮಕ್ಕೆ ಸಂಬಂಧಿಸಿದಂತೆ ಆಂಧ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ, ಮತ್ತೊಮ್ಮೆ ಸರ್ವೇ ನಡೆಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ಸರ್ವೇ ವರದಿಯನ್ನು ಜನವರಿ ಮೊದಲ ವಾರದಲ್ಲೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕಾಗಿತ್ತು. ಆದರೆ ಜನಾರ್ದನ ರೆಡ್ಡಿ ಅವರು ತಮ್ಮ ಪರವಾಗಿ ವಿವರಣೆ ನೀಡಲು ಜನವರಿ 20ರವರೆಗೆ ಸಮಯಾವಕಾಶ ಕೋರಿದ್ದರಿಂದ, ಇದೀಗ ಜನವರಿ ಕೊನೆ ಭಾಗದಲ್ಲಿ ವರದಿ ಸಲ್ಲಿಕೆ ಆಗುವ ಸಾಧ್ಯತೆ ಇದೆ. ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಕೆಯಾದ ತಕ್ಷಣ, ಜನಾರ್ದನ ರೆಡ್ಡಿಗೆ ವಿರುದ್ಧವಾಗಿ ಕಠಿಣ ಕಾನೂನು ಕ್ರಮ, ಗಣಿಗಳ ಮೇಲಿನ ನಿರ್ಬಂಧ, ಹಾಗೂ ರಾಜಕೀಯ ಪರಿಣಾಮಗಳೂ ಎದುರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.







