ವಾಷಿಂಗ್ಟನ್: ಸಿರಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ (ISIS) ಉಗ್ರ ಸಂಘಟನೆಯ ವಿರುದ್ಧ ಅಮೆರಿಕ ಭಾರೀ ಮಿಲಿಟರಿ ಕಾರ್ಯಾಚರಣೆಗೆ ಕೈಹಾಕಿದೆ. ಅಮೆರಿಕದ ಕೇಂದ್ರೀಯ ಕಮಾಂಡ್ (CENTCOM) ನೇತೃತ್ವದಲ್ಲಿ ನಡೆಸಲಾದ ‘ಆಪರೇಷನ್ ಹಾಕೈ ಸ್ಟ್ರೈಕ್’ ಅಡಿಯಲ್ಲಿ 35 ಕ್ಕೂ ಹೆಚ್ಚು ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭೀಕರ ಏರ್‌ಸ್ಟ್ರೈಕ್‌ಗಳನ್ನು ನಡೆಸಲಾಗಿದೆ.

ಅಮೆರಿಕ ಕಾಲಮಾನ ಪ್ರಕಾರ ಮಧ್ಯಾಹ್ನ ಸುಮಾರು 12:30ರ ವೇಳೆಗೆ ಈ ದಾಳಿಗಳು ಆರಂಭವಾಗಿದ್ದು, ಸಿರಿಯಾದ ವಿವಿಧ ಪ್ರದೇಶಗಳಲ್ಲಿನ ISIS ಶಿಬಿರಗಳು, ಶಸ್ತ್ರಾಗಾರಗಳು ಹಾಗೂ ಕಾರ್ಯಾಚರಣಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿವೆ. ಈ ಕಾರ್ಯಾಚರಣೆಯಲ್ಲಿ 90ಕ್ಕೂ ಹೆಚ್ಚು ಅತ್ಯಾಧುನಿಕ ಆಯುಧಗಳನ್ನು ಬಳಸಲಾಗಿದ್ದು, ಅನೇಕ ಉಗ್ರ ನೆಲೆಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು CENTCOM ಮಾಹಿತಿ ನೀಡಿದೆ.

ಸಿರಿಯಾದಲ್ಲಿ ಪುನರ್ ಸಂಘಟನೆಯಾಗುತ್ತಿದ್ದ ಉಗ್ರರ ಜಾಲವನ್ನು ಸಂಪೂರ್ಣವಾಗಿ ಕುಸಿತಗೊಳಿಸುವ ಉದ್ದೇಶದಿಂದ ಈ ದಾಳಿಗಳನ್ನು ನಡೆಸಲಾಗಿದೆ. ಉಗ್ರರು ಭವಿಷ್ಯದಲ್ಲಿ ಅಮೆರಿಕ ಹಾಗೂ ಅದರ ಮಿತ್ರ ಪಡೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಸೇನಾ ಮೂಲಗಳು ಸ್ಪಷ್ಟಪಡಿಸಿವೆ. ಈ ದಾಳಿ ಭಯೋತ್ಪಾದನೆ ವಿರುದ್ಧ ಅಮೆರಿಕ ನೀಡಿರುವ ಸ್ಪಷ್ಟ ಮತ್ತು ಕಠಿಣ ಸಂದೇಶವಾಗಿದೆ.

ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅಮೆರಿಕ ಬದ್ಧವಾಗಿದೆ. ನಮ್ಮ ಪಡೆಗಳು ಹಾಗೂ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಯತ್ನಿಸುವವರನ್ನು ಎಲ್ಲಿಯೇ ಇದ್ದರೂ ಹುಡುಕಿ ನಾಶಮಾಡಲಾಗುತ್ತದೆ ಎಂದು CENTCOM ಎಚ್ಚರಿಕೆ ನೀಡಿದೆ. ಈ ಕಾರ್ಯಾಚರಣೆಯ ಪ್ರಮುಖ ಗುರಿ ಭವಿಷ್ಯದ ಭಯೋತ್ಪಾದಕ ಬೆದರಿಕೆಗಳನ್ನು ತಡೆಗಟ್ಟುವುದು, ಪ್ರಾದೇಶಿಕ ಭದ್ರತೆಯನ್ನು ಬಲಪಡಿಸುವುದು ಹಾಗೂ ಉಗ್ರರ ಪುನರ್ ಸಂಘಟನೆಗೆ ಕಡಿವಾಣ ಹಾಕುವುದಾಗಿದೆ ಅಮೆರಿಕ ತಿಳಿಸಿದೆ.

ಇನ್ನು ಡಿಸೆಂಬರ್ 13, 2025ರಂದು ಸಿರಿಯಾದ ಐತಿಹಾಸಿಕ ನಗರ ಪಾಲ್ಮಿರಾದಲ್ಲಿ ನಡೆದ ISIS ದಾಳಿಯಲ್ಲಿ ಇಬ್ಬರು ಅಮೆರಿಕನ್ ಸೈನಿಕರು ಹಾಗೂ ಒಬ್ಬ ಅಮೆರಿಕನ್ ನಾಗರಿಕರು ಮೃತಪಟ್ಟಿದ್ದರು. ಈ ಘಟನೆಗೆ ಪ್ರತಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ದೇಶನದ ಮೇರೆಗೆ ಡಿಸೆಂಬರ್ 19, 2025ರಂದು ಆಪರೇಷನ್ ಹಾಕೈ ಸ್ಟ್ರೈಕ್ ನಡೆಸಿದೆ.











