ನಾ ದಿವಾಕರ
ಅಭಿವೃದ್ಧಿ ಮತ್ತು ಪ್ರಗತಿಯ ಹಾದಿಯಲ್ಲಿರುವ ದೇಶಗಳು ತಮ್ಮ ಒಟ್ಟು ಸಂಪತ್ತು ಮತ್ತು ಉತ್ಪಾದನೆಯ ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಸೂಕ್ತ ಆರ್ಥಿಕ ನೀತಿಗಳನ್ನು ರೂಪಿಸುವುದು ಸಹಜ. ಸಂಪತ್ತು ಎನ್ನುವುದು ಕೇವಲ ಬಂಡವಾಳ, ಮಾರುಕಟ್ಟೆ ಸರಕು ಮತ್ತು ಅದರ ಸುತ್ತಲೂ ಕಟ್ಟಿಕೊಳ್ಳುವ ಹಣಕಾಸು ಕೇಂದ್ರಿತ ಮಾರುಕಟ್ಟೆ ವಲಯಕ್ಕೆ ಸೀಮಿತವಲ್ಲ. ನಿಸರ್ಗ ಮತ್ತು ಮಾನವ ಸಂಪನ್ಮೂಲಗಳ (Human Resourse) ಜೊತೆಗೆ ನೆಲ, ಜಲ ಮತ್ತು ಅರಣ್ಯ ಸಂಪನ್ಮೂಲಗಳೂ ಸಹ ಇದರ ಒಂದು ಭಾಗವಾಗುತ್ತದೆ. ಹಾಗಾಗಿ ದೇಶದ ಆರ್ಥಿಕ ವ್ಯವಸ್ಥೆ ಊರ್ಧ್ವಮುಖ ಚಲನೆಯಲ್ಲಿರುವಾಗ, ಸರಕು ಮತ್ತು ಹಣಕಾಸು ಮಾರುಕಟ್ಟೆಯನ್ನು ನಿರ್ದೇಶಿಸುವ ನೀತಿಗಳೊಂದಿಗೇ, ಈ ಮೂಲ ಸಂಪನ್ಮೂಲಗಳನ್ನು ರಕ್ಷಿಸುವುದು ಮತ್ತು ಭವಿಷ್ಯದ ಸಮಾಜಕ್ಕಾಗಿ ಕಾಪಾಡುವುದು ಸಹ ಆಳುವ ವರ್ಗಗಳ ಆದ್ಯತೆಯಾಗಬೇಕಾಗುತ್ತದೆ.
ಆದರೆ ಬಂಡವಾಳಶಾಹಿ ಅಭಿವೃದ್ಧಿಯ ಮಾದರಿಯಲ್ಲಿ ನಿಸರ್ಗ ಸಂಪತ್ತನ್ನು ಮತ್ತು ಸಸ್ಯ-ಪ್ರಾಣಿ ಸಂಪತ್ತನ್ನು ಪ್ರಗತಿಯ ಕಚ್ಚಾವಸ್ತುಗಳಂತೆ ಪರಿಗಣಿಸುವುದು ಚಾರಿತ್ರಿಕವಾಗಿ ಕಾಣಬಹುದಾದ ಲಕ್ಷಣ. ಮಾನವ ಸಮಾಜಕ್ಕೆ ಅಗತ್ಯವಾದ ಎಲ್ಲ ರೀತಿಯ ಸಂಪನ್ಮೂಲಗಳನ್ನೂ ಪ್ರಕೃತಿ ಒದಗಿಸುತ್ತದೆ. ಅದನ್ನು ವ್ಯವಸ್ಥಿತವಾಗಿ ಬಳಸುವುದಕ್ಕೂ, ಬಳಕೆಯ ಹೆಸರಿನಲ್ಲಿ ಪ್ರಕೃತಿಯ ಒಡಲಲ್ಲಿರುವ ಎಲ್ಲ ವಸ್ತುಗಳನ್ನೂ ಮಾರುಕಟ್ಟೆಯ ಸರಕಿನಂತೆ ಪರಿಗಣಿಸಿ, ಸಮಾಜದ ಅಭಿವೃದ್ಧಿಗಾಗಿ ಶೋಷಣೆ ಮಾಡುವುದಕ್ಕೂ ಅಪಾರ ಅಂತರವಿದೆ. ವಿಪರ್ಯಾಸವೆಂದರೆ ಇಡೀ ಜಗತ್ತು ಒಪ್ಪಿಕೊಂಡಿರುವ ಮತ್ತು ಆಧುನಿಕ ಮಾನವ ಸಮಾಜವೂ ರೂಢಿಸಿಕೊಂಡಿರುವ ʼ ಅಭಿವೃದ್ಧಿʼಯ ಕಲ್ಪನೆ ಮತ್ತು ಮಾದರಿಯಲ್ಲಿ ಈ ಅಂತರವನ್ನು ಪರಿಗಣಿಸುವುದೇ ಇಲ್ಲ.

ಬಂಡವಾಳ ಹೂಡಿಕೆ ಮತ್ತು ಹೆಚ್ಚಿನ ಲಾಭ ಗಳಿಕೆ ಮಾರುಕಟ್ಟೆಯ ಮೂಲ ಸೂತ್ರವಾಗುವುದರಿಂದ, ಪ್ಪ್ರಾಕೃತಿಕ ಸಂಪತ್ತಿನ ಬಳಕೆಗಾಗಿ ಹೂಡುವ ಬಂಡವಾಳದ ಮೂಲ ಉದ್ದೇಶವೇ ಹೆಚ್ಚಿನ ಬಳಕೆ ಮತ್ತು ಲಾಭ ಆಗಿರುತ್ತದೆ. ನವ ಉದಾರವಾದ ಈ ಮಾದರಿಯನ್ನು ಮತ್ತಷ್ಟು ವಿಸ್ತರಿಸಿದ್ದು, ಪ್ರಕೃತಿಯ ಸಂಪನ್ಮೂಲಗಳೆಲ್ಲವನ್ನೂ ಸಹ ಜಾಗತಿಕವಾಗಿ ವಿನಿಮಯಕ್ಕೊಳಗಾಗುವಂತೆ ಮಾಡಿದೆ. ಭಾರತದಲ್ಲಿ ಈ ಆರ್ಥಿಕ ಕಲ್ಪನೆ 1980ರಲ್ಲಿ ಗರಿಗೆದರಿ, 21ನೆ ಶತಮಾನದಲ್ಲಿ ಸಂಪೂರ್ಣವಾಗಿ ಅನುಷ್ಠಾನಗೊಂಡರೂ, ವಸಾಹತು ಆಳ್ವಿಕೆಯಲ್ಲೇ ಆರಂಭವಾದ ಬಂಡವಾಳಶಾಹಿ ಆರ್ಥಿಕತೆಯ ನಿಯಮಗಳನ್ನೇ ಸ್ವತಂತ್ರ ಭಾರತವೂ ಅನುಸರಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ.
ಪರಿಸರದ ಕೂಗು ಅಭಿವೃದ್ಧಿಯ ಏಣಿ
ಈ ವಾತಾವರಣದಲ್ಲೇ 1970ರ ದಶಕದಲ್ಲಿ ಭಾರತದಲ್ಲಿ ವ್ಯಾಪಕವಾಗಿ ವ್ಯಕ್ತವಾದ ಪರಿಸರ ರಕ್ಷಣೆಯ ಕೂಗು ಸರ್ಕಾರಗಳ ದೃಷ್ಟಿಯಲ್ಲಿ ʼಅಭಿವೃದ್ಧಿ ವಿರೋಧಿʼ ಯಾಗಿ ಕಾಣತೊಡಗಿತ್ತು. ಅಭಿವೃದ್ಧಿಯ ಫಲಾನುಭವಿಗಳಿಗೂ, ಈ ಹಾದಿಯಲ್ಲಿ ನಷ್ಟ ಅನುಭವಿಸುವ ಜನಸಮುದಾಯಗಳಿಗೂ ನಡುವೆ ಇರುವ ಅಂತರ ಮತ್ತು ವೈರುಧ್ಯಗಳನ್ನು ಗಂಭೀರವಾಗಿ ಪರಾಮರ್ಶಿಸುವ ವಿವೇಕವನ್ನೇ ಕಳೆದುಕೊಂಡಿರುವ ಬಂಡವಾಳಶಾಹಿ ವ್ಯವಸ್ಥೆಯ ಮೂಲ ಲಕ್ಷಣವೇ ಇದು. ಯಾರ ವೆಚ್ಚದಲ್ಲಿ ಎಷ್ಟು ವೆಚ್ಚದಲ್ಲಿ ಅಬಿವೃದ್ಧಿ (Development at What & Whoʼ s Cost) ಎಂಬ ಪ್ರಶ್ನೆ ನಾಗರಿಕ ಸಮಾಜವನ್ನು ಕಾಡತೊಡಗಿದ್ದು ಈ ಹಂತದಲ್ಲೇ. ಪರಿಸರ ರಕ್ಷಣೆ ಮತ್ತು ಆರ್ಥಿಕ-ಕೈಗಾರಿಕಾ ಅಭಿವೃದ್ಧಿ ಎರಡನ್ನೂ ಸಮತೋಲನದಿಂದ ಪರಾಮರ್ಶಿಸುವ ಒಂದು ಔದಾತ್ಯ, ಬಂಡವಾಳಶಾಹಿಯಲ್ಲಿ ಇರುವುದಿಲ್ಲ. ನವ ಉದಾರವಾದಿ ಆರ್ಥಿಕ ನೀತಿಗಳು ಆಕ್ರಮಿಸಿದ ನಂತರ, ಈ ಅಭಿವೃದ್ಧಿಯ ಪ್ರಮುಖ ಸಾಧನಗಳಾಗಿ ಕಂಡುಬಂದಿದ್ದು ಪ್ರವಾಸೋದ್ಯಮ.

1960-70ರ ದಶಕದಿಂದಲೇ ಭಾರತದಲ್ಲಿ ಪ್ರವಾಸೋದ್ಯಮವನ್ನು ಆದಾಯದ ದೃಷ್ಟಿಯಿಂದ ನೋಡುವ ಆಡಳಿತ ಪರಂಪರೆ ಆರಂಭವಾಗಿತ್ತು. ಕಳೆದ ಐದು ದಶಕಗಳಲ್ಲಿ ಇದು ಮತ್ತಷ್ಟು ವ್ಯಾಪಕವಾಗಿ ಬೇರೂರಿದ್ದು, ಆಡಳಿತಾರೂಢ ಪಕ್ಷಗಳು, ಪಕ್ಷಾತೀತವಾಗಿ ಇದೇ ಮಾದರಿಯನ್ನು ಅನುಸರಿಸುತ್ತಿವೆ. ಕೈಗಾರಿಕಾ ಅಭಿವೃದ್ಧಿಗಾಗಿ ಗಂಗೆ-ಯಮುನೆಯ ಜಲಸಂಪನ್ಮೂಲಗಳು ಬಲಿಯಾಗುತ್ತಿದ್ದರೆ, ಗಣಿಗಾರಿಕೆಯ ಪ್ರಗತಿಗೆ ಅರಣ್ಯಗಳು ಬೋಳಾಗುತ್ತಿದ್ದರೆ, ಪ್ರವಾಸೋದ್ಯಮದ ಹೆಸರಿನಲ್ಲಿ ಹಿಮಾಲಯ ತಪ್ಪಲಿನ ಚಾರ್‌ಧಾಮ್ ಯಾತ್ರಾಸ್ಥಳಗಳಿಂದ ಮೈಸೂರಿನ ಚಾಮುಂಡಿ ಬೆಟ್ಟದವರೆಗೂ, ಬೆಟ್ಟಗುಡ್ಡಗಳು ಅರಣ್ಯ ಸಂಪತ್ತು ಮತ್ತು ನಿಸರ್ಗದ ಮೂಲ ಸಂಪನ್ಮೂಲಗಳು ಕೇವಲ ಆದಾಯ ಮತ್ತು ಲಾಭಗಳಿಕೆಯ ಸೇತುವೆಗಳಾಗಿ ಬಳಸಲ್ಪಡುತ್ತಿವೆ.
ಈಶಾನ್ಯದಿಂದ ದಕ್ಷಿಣದ ತುದಿಯವರೆಗೂ ಭಾರತದ ನಿಸರ್ಗ ಸಂಪತ್ತು ಈಗ ಔದ್ಯಮಿಕ ವಲಯದ ಉನ್ನತಿಗಾಗಿ ಬಳಸಲ್ಪಡುವ ಕಚ್ಚಾ ಸಾಮಗ್ರಿಯಾಗಿರುವುದು ರಾಜ್ಯ ಹಾಗೂ ಕೇಂದ್ರಗಳ ಆರ್ಥಿಕ ನೀತಿಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಉತ್ತರ ಭಾರತದ ಅರಾವಳಿಯಾಗಲೀ, ಮೈಸೂರಿನ ಚಾಮುಂಡಿ ಬೆಟ್ಟವಾಗಲೀ, ಹಿಮಾಲಯದ ತೀರ್ಥಕ್ಷೇತ್ರಗಳಾಗಲೀ ಎಲ್ಲವೂ ಸಹ ಬಂಡವಾಳ ಮತ್ತು ಕಾರ್ಪೋರೇಟ್ ಮಾರುಕಟ್ಟೆಯ ಅಗತ್ಯತೆಗಳಿಗೆ ಅನುಸಾರವಾಗಿ ಬಳಸಲ್ಪಡುತ್ತಿವೆ. ಇದಕ್ಕೆ ಪೂರಕವಾದ ಪ್ರವಾಸೋದ್ಯಮ ನೀತಿಗಳನ್ನು, ಪಕ್ಷಾತೀತವಾಗಿ ಎಲ್ಲ ಸರ್ಕಾರಗಳು ರೂಪಿಸುತ್ತಲೇ ಬಂದಿವೆ. ಕರ್ನಾಟಕದ ಹೆಮ್ಮೆಯ ಚಾಮುಂಡಿ ಬೆಟ್ಟ ಎದುರಿಸುತ್ತಿರುವ ಅಪಾಯವನ್ನೂ ಈ ದೃಷ್ಟಿಯಿಂದಲೇ ನೋಡಬೇಕಿದೆ.
ಚಾಮುಂಡಿ ಬೆಟ್ಟದ ಸಂಕಟಗಳು
11 ಕಿಲೋಮೀಟರ್ ಪರಿಧಿಯನ್ನು ಮತ್ತು 17 ಕಿಮೀ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುವ ಮೈಸೂರಿನ ಇತಿಹಾಸ ಪ್ರಸಿದ್ಧ ಚಾಮುಂಡಿ ಬೆಟ್ಟ, ಅಲ್ಲಿ ಶತಮಾನಗಳ ಹಿಂದೆ ಕಟ್ಟಲಾಗಿರುವ ಚಾಮುಂಡೇಶ್ವರಿ ದೇವಸ್ಥಾನದ ವತಿಯಿಂದ ತನ್ನ ಹೆಸರನ್ನೂ ಪಡೆದಿದೆ. ಕೆಲವು ಜನಪದೀಯ ಮತ್ತು ಹಿಂದೂ ಧಾರ್ಮಿಕ ಐತಿಹ್ಯಗಳಿಗೆ ನೆಲೆಯಾಗಿರುವ ಚಾಮುಂಡಿ ಬೆಟ್ಟವು ಪರಿಸರವಾದಿಗಳ ದೃಷ್ಟಿಯಲ್ಲಿ ಮೈಸೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ನೈಸರ್ಗಿಕ ರಕ್ಷಾ ಕವಚವೂ ಆಗಿದೆ. ಲಕ್ಷಾಂತರ ಸಂಖ್ಯೆಯ ಭಕ್ತ ವೃಂದವನ್ನು ಹೊಂದಿರುವ ಚಾಮುಂಡೇಶ್ವರಿ ದೇವಿ ,ಪಾರಂಪರಿಕವಾಗಿ ಮೈಸೂರಿನ ಸಾಂಸ್ಕೃತಿಕ ಜೀವನದ ಒಂದು ಭಾಗವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ.
ಆದರೆ ಈ ಶ್ರದ್ಧಾ ಭಕ್ತಿಗಳ ನಡುವೆ, ಇಲ್ಲಿಗೆ ಪ್ರತಿನಿತ್ಯ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯನ್ನೂ ಗಮನಿಸಿದಾಗ , ಈ ಬೆಟ್ಟವು ಕರ್ನಾಟಕದ ಪ್ರಮುಖ ಪ್ರವಾಸೋದ್ಯಮ ತಾಣಗಳಲ್ಲಿ ಒಂದಾಗಿ ಕಾಣುತ್ತದೆ. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ 2014-15ರಲ್ಲಿ ರೂಪಿಸಿದ ಪ್ರಸಾದ್ (PRASHAD) ಯೋಜನೆಗೆ (ಯಾತ್ರಾಸ್ಥಳದ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ ಪರಂಪರೆಯ ಅಭಿವೃದ್ಧಿ ಯೋಜನೆ) ಚಾಮುಂಡಿ ಬೆಟ್ಟವನ್ನು ಪ್ರಶಸ್ತ ತಾಣ ಎಂದು ಸರ್ಕಾರಗಳು ತೀರ್ಮಾನಿಸಿವೆ. ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು , ತನ್ಮೂಲಕ ಸರ್ಕಾರಗಳಿಗೆ ಹೆಚ್ಚಿನ ಆದಾಯವನ್ನು ಸೃಷ್ಟಿಸುವ ಸಲುವಾಗಿ , ಇಲ್ಲಿಗೆ ಭೇಟಿ ನೀಡುವ ಭಕ್ತಾದಿಗಳಿಗೆ ಹಾಗೂ ಪ್ರವಾಸಿಗರಿಗೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನೂ ಕಲ್ಪಿಸುವ ಒಂದು ಉದ್ದೇಶವನ್ನು ಪ್ರಸಾದ್ ಯೋಜನೆಯಲ್ಲಿ ಕಾಣಬಹುದು.

ಮಾಹಿತಿ ಕೇಂದ್ರಗಳು, ಪೊಲೀಸ್ ಬೂತ್‌ಗಳು, ಶೌಚಾಲಯಗಳು, ಕುಳಿತುಕೊಳ್ಳಲು ಆಸನಗಳು ಇವೆಲ್ಲವೂ ಅಗತ್ಯವಾದ ಸೌಕರ್ಯಗಳಾಗಿದ್ದು ಯಾವುದೇ ಆಕ್ಷೇಪ ಇರುವುದಿಲ್ಲ. ಆದರೆ 46 ಕೋಟಿ ರೂ ವೆಚ್ಚದ ಪ್ರಸಾದ್ ಯೋಜನೆಯನ್ನು ನಿರ್ವಹಿಸುವುದು ಒಂದು ಕಾರ್ಪೋರೇಟ್ ಸಂಸ್ಥೆ. ಇದರಲ್ಲಿ ಕೇಂದ್ರ ಸರ್ಕಾರ 30 ಕೋಟಿ ರೂಗಳನ್ನು ಒದಗಿಸುತ್ತದೆ. ಪಾರಂಪರಿಕ ದೇವಸ್ಥಾನಗಳನ್ನು ನವೀಕರಿಸಿ, ಅಭಿವೃದ್ಧಿಪಡಿಸುವ ಈ ಯೋಜನೆಯ ಸಮಸ್ಯೆ ಇರುವುದು ಬೆಟ್ಟದ ಮೇಲಿನ ಅರಣ್ಯ ಸಂಪತ್ತು, ಜೀವ ವೈವಿಧ್ಯ ಮತ್ತು ಪರಿಸರದ ರಕ್ಷಣೆಯಲ್ಲಿ. ಏಕೆಂದರೆ ಆಧುನಿಕತೆ ಮತ್ತು ಬಂಡವಾಳಶಾಹಿ ಮಾರುಕಟ್ಟೆಯ ಮೈತ್ರಿಯಲ್ಲಿ ಜನಾನುಕೂಲಗಳನ್ನು ಕಲ್ಪಿಸುವುದು ಎಂದರೆ ಕಾಂಕ್ರೀಟ್ ಸ್ಥಾವರಗಳನ್ನು ನಿರ್ಮಿಸುವುದೇ ಆಗಿರುತ್ತದೆ. ಕಾಂಕ್ರೀಟೀಕರಣ ಹೆಚ್ಚಾದಷ್ಟೂ ಬೆಟ್ಟದ ಮೇಲಿನ ಪರಿಸರ ವಿನಾಶದತ್ತ ಸಾಗುತ್ತಲೇ ಹೋಗುತ್ತದೆ.
ವಾಣಿಜ್ಯೀಕರಣದ ನೀಲ ನಕ್ಷೆ
ಪ್ರಸಾದ್ ಯೋಜನೆಯು ಚಾಮುಂಡಿ ಬೆಟ್ಟದ ದೇವಾಲಯದ ಸುತ್ತಮುತ್ತಲಿನ ಆರು ಪ್ರಮುಖ ಸ್ಥಳಗಳಲ್ಲಿ ಸಮಗ್ರ ಮೂಲಸೌಕರ್ಯ ಮತ್ತು ಸೌಂದರ್ಯದ ವರ್ಧನೆಯ ಕಾಮಗಾರಿಗಳೂ ಸೇರಿದ್ದು, ಇದರಲ್ಲಿ ಮಹಿಷಾಸುರ ಪ್ರತಿಮೆ ಪ್ಲಾಜಾ ಕೂಡ ಸೇರಿದೆ. ಇದಲ್ಲದೆ ಪ್ರವಾಸಿಗರನ್ನು ಆಕರ್ಷಿಸುವ ಫೌಂಟೇನ್, ಮಹಿಷಾಸುರ ಪ್ರತಿಮೆಯ ಸುತ್ತಲೂ ಆಲಂಕಾರಿಕ ವಿದ್ಯುತ್ ದೀಪದ ಸರಪಳಿ, ದೇವಾಲಯದ ಪ್ರವೇಶದಲ್ಲಿ ಕಲ್ಲಿನ ಕಮಾನು, ಮಹಿಷ ಪ್ರತಿಮೆಯಿಂದ ದೇವಸ್ಥಾನದವರೆಗೆ ಸಾಂಪ್ರದಾಯಿಕ ಮಂಟಪಗಳ ಸಾಲು , ಅದರೊಳಗೆ ಆಸನಗಳು, ದೇವಾಲಯಕ್ಕೆ ಹೋಗುವ ಐತಿಹಾಸಿಕ ಮೆಟ್ಟಿಲುಗಳ ನವೀಕರಣ, ದೇವಿಕೆರೆಯ ಪ್ರವೇಶದಲ್ಲಿ ಕಲ್ಲಿನ ಪ್ರವೇಶ ದ್ವಾರ, ಬೆಟ್ಟದ ವಿವಿಧೆಡೆಗಳಲ್ಲಿ ಉದ್ಯಾನಗಳು ಇವೆಲ್ಲವೂ ಮೂಲ ಸೌಕರ್ಯಗಳ ಹೆಸರಿನಲ್ಲಿ ನಿರ್ಮಾಣವಾಗುತ್ತವೆ.

ಈ ಎಲ್ಲ ಸ್ಥಾವರಗಳ ಅಂತಿಮ ಫಲಾನುಭವಿಗಳು ಯಾರು ? ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಲು ಬರುವ ಭಕ್ತಾದಿಗಳೇ ? ಜೊತೆಗೇ ದೇವಿ ದರ್ಶನ ಮತ್ತು ಪ್ರವಾಸದ ಸವಿ ಅನುಭವಕ್ಕಾಗಿ ದೂರದ ಊರುಗಳಿಂದ ಬರುವ ಸಾಮಾನ್ಯರ ಕುಟುಂಬಗಳೇ ? ಪ್ರವಾಸದ ಹೆಸರಿನಲ್ಲಿ ಮೋಜು ಮಸ್ತಿ ಮಾಡಲು ಬೆಟ್ಟ-ಅರಣ್ಯ ತಾಣಗಳನ್ನೇ ಬಯಸುವ ಮೇಲ್ವರ್ಗದ ಅಥವಾ ಹಿತವಲಯದ ಜನರೇ ? ಅಥವಾ ತಮ್ಮ ವಿರಾಮ ಮತ್ತು ವಿಶ್ರಾಂತಿಗಾಗಿ ಇಂತಹ ರಮ್ಯತಾಣಗಳನ್ನೇ ಆಶ್ರಯಿಸುವ ಐಷಾರಾಮಿ ಸಿರಿವಂತರೇ ? ಈ ವರ್ಗಗಳ ಪೈಕಿ ಮೊದಲನೆ ಮತ್ತು ಎರಡನೆ ವರ್ಗಕ್ಕೆ ಬೆಟ್ಟದ ತಾಣ ಒಂದು ತೀರ್ಥಯಾತ್ರೆಯಾಗಿ ಕಾಣುವುದರಿಂದ, ಅವರ ಇನ್ನಿತರ ಅಪೇಕ್ಷೆ, ಬಯಕೆಗಳು ಅನುಷಂಗಿಕ (Secondary) ಆದ್ಯತೆಯಾಗಿರುತ್ತದೆ. ಮಕ್ಕಳ ಖುಷಿಗಾಗಿ ಬೆಟ್ಟದ ಮೇಲೆ ಸಮಯ ಕಳೆಯುವ ಕುಟುಂಬಗಳು ತಮ್ಮ ಕೈಗೆಟುಕುವ ಬೆಲೆಯ ಸೌಕರ್ಯಗಳನ್ನಷ್ಟೇ ಬಯಸುತ್ತವೆ. ಇವರಿಗೆ ಪ್ರವಾಸ ಎನ್ನುವುದು ಔದ್ಯಮಿಕ ವಲಯದ ಒಂದು ಭಾಗವಾಗಲಿ ಎಂಬ ನಿರೀಕ್ಷೆ ಇರುವುದಿಲ್ಲ.
ಇನ್ನುಳಿದಂತೆ ಮೂರನೆ ವರ್ಗಕ್ಕೆ ಬೆಟ್ಟದ ತಾಣದಲ್ಲಿ ದೇವಸ್ಥಾನ ಅಥವಾ ದೇವಿ ದರ್ಶನ ನೆಪಮಾತ್ರವಾಗುತ್ತದೆ. ತಮ್ಮ ಬಿಡುವಿನ ವೇಳೆ ಕಳೆಯಲು ಇಂತಹ ರಮ್ಯ ತಾಣಗಳನ್ನು ಬಯಸುವ ಹಿತವಲಯದ ಜನರಿಗೆ ಐಷಾರಾಮಿ ಸೌಕರ್ಯಗಳೇನೂ ಅಗತ್ಯ ಎನಿಸುವುದಿಲ್ಲ. ಆದರೆ ಇದ್ದರೆ ಬಳಸುವ ಸಾಮರ್ಥ್ಯ ಇರುವ ಕೆಲವರಿಗಾದರೂ ಇದು ಸ್ವಾಗತಾರ್ಹ ಎನಿಸುತ್ತದೆ. ಕೊನೆಯದಾಗಿ ನಾಲ್ಕನೆಯ ವರ್ಗದ ಜನರಿಗೆ ದೇವಿಯ ದರ್ಶನಕ್ಕಿಂತಲೂ ಹೆಚ್ಚಾಗಿ ಅತ್ಯಾಧುನಿಕ ಕಾರುಗಳಲ್ಲಿ ಬಂದು, ರೆಸಾರ್ಟ್‌ಗಳಲ್ಲಿ ತಂಗಿದ್ದು, ಕೆಲವು ದಿನಗಳ ಕಾಲ ತಮ್ಮ ಜೀವನ ಜಂಜಾಟದಿಂದ ಮುಕ್ತಿ ಹೊಂದುವುದು ಮುಖ್ಯವಾಗಿರುತ್ತದೆ. ಈ ಅಲ್ಪಸಂಖ್ಯೆಯ ಜನರ ಸಲುವಾಗಿ ಪ್ರವಾಸೋದ್ಯಮವೂ ಸಹ ಸೌಂದರ್ಯೀಕರಣ ಮತ್ತು ಆಧುನಿಕ ಕಾಂಕ್ರೀಟೀಕರಣದ ಕಡೆಗೆ ಗಮನ ಹರಿಸುತ್ತದೆ.

ತೀರ್ಥಕ್ಷೇತ್ರಗಳು ಮತ್ತು ಪರಿಸರ ಸೂಕ್ಷ್ಮತೆ
ಈಗಾಗಲೇ ಭಾರತದ ಬದರಿ, ಕೇದಾರವನ್ನೊಳಗೊಂಡ ಚಾರ್ ಧಾಮ್ ಮತ್ತಿತರ ಯಾತ್ರಾ ಕ್ಷೇತ್ರಗಳು ಇದರ ಅನುಭವ ಪಡೆದು, ಅಪಾಯದ ತೂಗುಗತ್ತಿಯ ಕೆಳಗೆ ನಿಂತಿವೆ. ಈ ಪ್ರದೇಶದ ಜೋಷಿ ಮಠ ಪ್ರತಿ ವರ್ಷ ಭೂಕುಸಿತ ಎದುರಿಸುತ್ತಿದ್ದು, ಭೂ ವಿಜ್ಞಾನಿಗಳು 1976ರಿಂದಲೂ ಇಲ್ಲಿ ನಡೆಯುತ್ತಿರುವ ರಸ್ತೆ, ಸೇತುವೆ ಮತ್ತಿತರ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣವನ್ನು ಸ್ಥಗಿತಗೊಳಿಸಲು ಎಚ್ಚರಿಸುತ್ತಲೇ ಇದ್ದಾರೆ. ಇಲ್ಲವಾದರೆ ಇನ್ನು ಕೆಲವೇ ವರ್ಷಗಳಲ್ಲಿ ಜೋಷಿಮಠ ಭೂಗರ್ಭದಲ್ಲಿ ಸೇರಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಹಿಮಾಲಯ ಪ್ರದೇಶದ ಪರಿಸರಸೂಕ್ಷ್ಮ ಪ್ರದೇಶಗಳಲ್ಲಿ ನಿರ್ಮಾಣಗಳ ಬಗ್ಗೆ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ, ಮೇ 2025ರಲ್ಲಿ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಮತ್ತು ನ್ಯಾ. ಆರ್. ಮಹದೇವನ್, “ ಅನಿರ್ಬಂಧಿತ ಹಾಗೂ ಅವೈಜ್ಞಾನಿಕ ನಿರ್ಮಾಣ ಕಾರ್ಯಗಳು, ಅರಣ್ಯ ನಾಶ ಮತ್ತು ಪರಿಸರ ಮಾಲಿನ್ಯ ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಹಿಮಾಚಲ ಪ್ರದೇಶ ಭೂಪಟದಿಂದಲೇ ಅದೃಶ್ಯವಾಗುವ ಸಾಧ್ಯತೆಗಳಿವೆ” ಎಂದು ಎಚ್ಚರಿಸಿದ್ದಾರೆ.
ಹಿಮಾಲಯದಲ್ಲಿ ಅಜಾಗರೂಕ ನಿರ್ಮಾಣದ ವಿರುದ್ಧ ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿ ಅವರು ಸಹ ಸರ್ಕಾರವನ್ನು ಎಚ್ಚರಿಸಿದ್ದಾರೆ, ವಿಶೇಷವಾಗಿ ಚಾರ್ ಧಾಮ್ ಯೋಜನೆಗಾಗಿ ರಸ್ತೆಗಳ ಅಗಲೀಕರಣವನ್ನು ಟೀಕಿಸುತ್ತಾ, ಇದು ಭೂಕುಸಿತ ಮತ್ತು ಪರಿಸರ ಹಾನಿಯನ್ನುಂಟುಮಾಡುತ್ತದೆ ಎಂದು ಹೇಳಿರುವ ಈ ನಾಯಕ, “ಹಿಮಾಲಯವನ್ನು ಉಳಿಸುವುದು ಗಡಿಗಳನ್ನು ಉಳಿಸುವಷ್ಟೇ ಮುಖ್ಯ” ಎಂದು ಹೇಳಿದ್ದಾರೆ. ಭಾಗೀರಥಿ ಪರಿಸರ ಸೂಕ್ಷ್ಮ ವಲಯ ಮತ್ತು ಗಡಿ ರಸ್ತೆಗಳ ಮೇಲಿನ ಕಾಳಜಿ ವ್ಯಕ್ತಪಡಿಸುತ್ತಾ ಈ ಅಗಲವಾದ ರಸ್ತೆಗಳಿಗೆ ಅನುಮತಿ ನೀಡಿದ 2021 ರ ತೀರ್ಪನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವಲ್ಲಿ ಅವರು ಇತರ ಪರಿಸರ ವಾದಿಗಳಿಗೆ ಬೆಂಬಲ ನೀಡಿದ್ದಾರೆ. ದುರ್ಬಲವಾದ ಪರಿಸರವನ್ನು ರಕ್ಷಿಸದಿದ್ದರೆ ಅಭಿವೃದ್ಧಿ ನಾಶವಾಗುತ್ತದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಖ್ಯಾತ ಪರಿಸರವಾದಿ ಮ್ಯಾಗೆಸ್ಸೆ ಪ್ರಶಸ್ತಿ ವಿಜೇತ ಡಾ. ರಾಜೇಂದ್ರ ಸಿಂಗ್ , ಅರಾವಳಿ ಪರ್ವತ ಶ್ರೇಣಿಯ ಬಗ್ಗೆ ಮಾತನಾಡುತ್ತಾ, ಮುಂದಿನ ದಿನಗಳಲ್ಲಿ ಸಹ್ಯಾದ್ರಿಗೂ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿರುವುದನ್ನು ಗಮನಿಸಬೇಕಿದೆ.
ಚಾಮುಂಡಿ ಒಡಲಿನ ಪರಿಸರ ಸೂಕ್ಷ್ಮತೆ
ಮೈಸೂರಿನ ಚಾಮುಂಡಿ ಬೆಟ್ಟವೂ ಸಹ ಒಂದು ರೀತಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೇ ಆಗಿದೆ. ಚಾಮುಂಡಿ ಬೆಟ್ಟದ ವ್ಯಾಪ್ತಿಯಲ್ಲಿ 153 ಜಾತಿಯ ಚಿಟ್ಟೆಗಳು, 44 ಕುಟುಂಬಗಳಿಗೆ ಸೇರಿದ 193 ಜಾತಿಯ ಪಕ್ಷಿಗಳು ಮತ್ತು 134 ಸ್ಥಳೀಯ ಪಕ್ಷಿ ಪ್ರಭೇದಗಳನ್ನು ಗುರುತಿಸಲಾಗಿದೆ. ದಾಖಲಿಸಲಾದ ಸಸ್ತನಿಗಳಲ್ಲಿ ಬಾನೆಟ್ ಮಕಾಕ್, ಸಾಮಾನ್ಯ ಚಿರತೆ, ಚುಕ್ಕೆ ಬೆಕ್ಕು, ಸಣ್ಣ ಭಾರತೀಯ ಸಿವೆಟ್, ಪ್ಯಾಂಗೋಲಿನ್, ಕಪ್ಪು-ನೇಪ್ಡ್ ಮೊಲ ಇತ್ಯಾದಿ ಸೇರಿವೆ. ಈ ಬೆಟ್ಟ ಪ್ರದೇಶದಲ್ಲಿ ವಾಹನ ಸಂಚಾರ ಹೆಚ್ಚಾಗುವುದು ಇಲ್ಲಿನ ಭೂ ಪ್ರದೇಶದ ಧಾರಣಾ ಶಕ್ತಿಯನ್ನು ಮೀರಿದ್ದು ಇತ್ತೀಚೆಗೆ ಎರಡು ಕಡೆ ಭೂ ಕುಸಿತ ಸಂಭವಿಸಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ವಾಣಿಜ್ಯ ಚಟುವಟಿಕೆಗಳು ಮತ್ತು ಕಾಂಕ್ರೀಟ್ ಕಟ್ಟಡಗಳು ಹೆಚ್ಚಾದಷ್ಟೂ ಇಲ್ಲಿನ ಜೀವ ವೈವಿಧ್ಯತೆಗೆ ಕಂಟಕ ಹೆಚ್ಚಾಗುತ್ತದೆ.
ಭಕ್ತಾದಿಗಳಿಗೆ ಮತ್ತು ಪ್ರವಾಸಿಗರಿಗೆ ಅನುಕೂಲಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ವಾಣಿಜ್ಯ ಸಂಕೀರ್ಣವನ್ನೂ ಒಳಗೊಂಡಂತೆ, ನೂರಾರು ಅಂಗಡಿ ಮುಗ್ಗಟ್ಟುಗಳಿಗೆ ಅವಕಾಶ ನೀಡಲಾಗಿದೆ. ಈ ವಾಣಿಜ್ಯೀಕರಣ ಪ್ರಕ್ರಿಯೆ ಮಾರುಕಟ್ಟೆ ಆರ್ಥಿಕತೆಯ ಒಂದು ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ಆಧುನಿಕ-ಐಷಾರಾಮಿ ರೆಸಾರ್ಟ್ ಮತ್ತು ಹೋಟೆಲುಗಳಿಗೂ ಮುಕ್ತ ಅವಕಾಶ ದೊರೆಯುತ್ತದೆ. ವಾಣಿಜ್ಯ ಚಟುವಟಿಕೆಗಳಿಗೆ ಬೆಟ್ಟದ ತಪ್ಪಲಲ್ಲೇ ವ್ಯಾಪಾರಿ ವಲಯವನ್ನು ರೂಪಿಸುವ ಮೂಲಕ ಬೆಟ್ಟದ ಮೇಲಿನ ಚಟುವಟಿಕೆಗಳನ್ನು ನಿಯಂತ್ರಿಸುವ ಸಲಹೆಯನ್ನು ಪರಿಸರವಾದಿಗಳು ನೀಡುತ್ತಲೇ ಬಂದಿದ್ದಾರೆ. ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವ ನೆಪದಲ್ಲಿ ಕಾರ್ಪೋರೇಟ್ ಮಾರುಕಟ್ಟೆಗೆ ಲಾಭಕರವಾದ ಕಾಂಕ್ರೀಟೀಕರಣಕ್ಕೆ ಉತ್ತೇಜನ ನೀಡುವುದು ಅಪಾಯಕಾರಿಯಾಗುತ್ತದೆ.

ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ಅಂತರ್ಗತವಾಗಿರುವ ಭಕ್ತಿ-ಭಾವಗಳ ಕಲ್ಪನೆ ಮತ್ತು ದೈವೀಕ ಶಕ್ತಿಯ ಕಲ್ಪನೆಗಳು ಸಾವಿರಾರು ಪರ್ವತಗಳನ್ನು, ಬೆಟ್ಟಗಳನ್ನು ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಮಾಡಿವೆ. ಒಂದು ಸಣ್ಣ ಗುಡಿಯೂ ದಿನಗಳು ಕಳೆದಂತೆ ಬೃಹತ್ ಯಾತ್ರಾಸ್ಥಳವಾಗುವ ಒಂದು ಪರಂಪರೆ ಇಲ್ಲಿ ಶತಮಾನಗಳಿಂದಲೂ ಚಾಲ್ತಿಯಲ್ಲಿದೆ. ಪರಿಸರವನ್ನು ಕಾಪಾಡುವ ದೃಷ್ಟಿಯಿಂದ ಈ ಭಕ್ತ ವೃಂದದ ಭಾವನೆಗಳಿಗೆ ಧಕ್ಕೆಯಾಗುವಂತಹ ಉಪಕ್ರಮಗಳನ್ನು ಕೈಗೊಳ್ಳಲಾಗುವುದಿಲ್ಲ. ಬದಲಾಗಿ ಶ್ರದ್ಧಾ ಕೇಂದ್ರಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಮೂಲಕ ಪರಿಸರ ನಾಶ ಮಾಡುವ ಚಟುವಟಿಕೆಗಳನ್ನು ನಿಗ್ರಹಿಸುವುದು, ನಿಯಂತ್ರಿಸುವುದು ಸರ್ಕಾರಗಳ ಆದ್ಯತೆಯಾಗಬೇಕಿದೆ. ಈ ಆದ್ಯತೆಗೆ ಅಡ್ಡಿಯಾಗುವುದು ಮಾರುಕಟ್ಟೆ ಮತ್ತು ಬಂಡವಾಳದ ಹಿತಾಸಕ್ತಿ ಹಾಗೂ ಔದ್ಯಮಿಕ ಪ್ರಗತಿಯ ಮಹತ್ವಾಕಾಂಕ್ಷೆ. ಈ ಲಾಭಕೋರತನಕ್ಕೆ ಈಗಾಗಲೇ ಭಾರತದ ಪಾರಂಪರಿಕ ಪರ್ವತ ಶ್ರೇಣಿಗಳು ತಮ್ಮ ಅಂತಃಶಕ್ತಿಯನ್ನು ಕಳೆದುಕೊಳ್ಳುತ್ತಿವೆ.
ಮಾರುಕಟ್ಟೆ ಚಿಂತನೆ-ಸರ್ಕಾರದ ಯೋಜನೆ
ಪ್ರಸಾದ್ (PRASHAD) ಯೋಜನೆ ಸರ್ಕಾರದ ಚಿಂತನೆಯೇ ಆದರೂ ಇದರ ಹಿಂದಿರುವುದು ಕಾರ್ಪೋರೇಟ್ ಮಾರುಕಟ್ಟೆ ಮತ್ತು ಪ್ರವಾಸೋದ್ಯಮದ ಬಂಡವಾಳ ಹೂಡಿಕೆದಾರರು. ಈ ಮಾರುಕಟ್ಟೆ ಚಿಂತನೆಯಲ್ಲಿ ಬೆಟ್ಟಗಳ ಮೇಲಿರುವ ದೈವ ಅಥವಾ ದೇವಸ್ಥಾನ, ತಮ್ಮ ಔದ್ಯಮಿಕ ಸಾಮ್ರಾಜ್ಯ ವಿಸ್ತರಣೆಗೆ ಆಕರಗಳಾಗುತ್ತವೆ. ಈ ಅಪಾಯವನ್ನು ಮನಗಂಡೇ ಮೈಸೂರಿನ ಪರಿಸರವಾದಿ ಸಂಘಟನೆಗಳು, ಪ್ರಗತಿಪರ ಚಿಂತಕರು ಮತ್ತು ಸಮಾಜಮುಖಿ ಸಂಘಗಳು ಚಾಮುಂಡಿ ಬೆಟ್ಟದ ರಕ್ಷಣೆಗಾಗಿ ಕಂಕಣತೊಟ್ಟು ನಿಂತಿವೆ. ಜನವರಿ 4 ರಂದು ನಡೆಯಲಿರುವ ಕಾಲ್ನಡಿಗೆ ಜಾಥಾ ಈ ದೃಷ್ಟಿಯಿಂದ ಸ್ವಾಗತಾರ್ಹ ಎನ್ನಬಹುದು. ಚಾಮುಂಡಿ ಬೆಟ್ಟಕ್ಕೆ ಬರುವ ಲಕ್ಷಾಂತರ ಜನರು ಇಲ್ಲಿನ ಸಣ್ಣ ವ್ಯಾಪಾರಿಗಳ ಜೀವನೋಪಾಯದ ಆಧಾರವೂ ಆಗಿರುವುದನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರ ತನ್ನ ಅಭಿವೃದ್ಧಿಯ ಹಾದಿಯನ್ನು ಆಯ್ಕೆ ಮಾಡಬೇಕಿದೆ.

ಪರಿಸರಕ್ಕಾಗಲೀ, ನಾಗರಿಕ ಜೀವನಕ್ಕಾಗಲೀ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಸಣ್ಣ ವ್ಯಾಪಾರವನ್ನೇ ನಂಬಿಕೊಂಡು ಬದುಕು ಸವೆಸುವ ಶ್ರಮಿಕರ ಹಿತಾಸಕ್ತಿಯನ್ನು ಬಲಿಕೊಡುವುದೂ ಮಾನವೀಯ ಲಕ್ಷಣವಲ್ಲ. ನಗರ ಪ್ರದೇಶಗಳಲ್ಲಿರುವ ಬೀದಿ ಬದಿ, ತಳ್ಳುಗಾಡಿ ವ್ಯಾಪಾರಿಗಳನ್ನೂ ಇದೇ ದೃಷ್ಟಿಯಿಂದ ನೋಡಬೇಕಿದೆ. ಈ ವ್ಯಾಪಾರಿ ಜಗತ್ತು ಸಾವಿರಾರು ಜನರ ಜೀವನಾಡಿಯಾಗಿರುತ್ತದೆ. ಅದನ್ನು ಹಿಸುಕಿ ಹಾಕಿ ಅಭಿವೃದ್ಧಿ ಅಥವಾ ಸೌಂದರ್ಯೀಕರಣದ ಚಿಂತನೆ ಮಾಡುವುದೇ ಅಮಾನವೀಯ ಧೋರಣೆಯಾಗುತ್ತದೆ. ಈ ಸಮತೋಲನವನ್ನು ಕಾಪಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಮಾನವ ಸಮಾಜದ ಪ್ರಕೃತಿಯೊಡನೆ ಬದುಕಬೇಕು ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ಜವಾಬ್ದಾರಿಯೊಂದಿಗೆ ಸಮಾಜವನ್ನು ಕಟ್ಟಬೇಕು, ಈ ಸಮಾಜದಲ್ಲಿರುವ ಶ್ರಮಜೀವಿಗಳ ಜೀವನೋಪಾಯದ ಮಾರ್ಗಗಳಿಗೆ ಧಕ್ಕೆಯಾಗದಂತೆ ಅಭಿವೃದ್ಧಿಯ ಕನಸುಗಳನ್ನು ಕಟ್ಟಬೇಕು.
ಈ ಸಾಮಾಜಿಕ ಸೂಕ್ಷ್ಮಪ್ರಶ್ನೆ ಇದ್ದರೆ ಜನಪ್ರತಿನಿಧಿಗಳು, ಸರ್ಕಾರಗಳು ವಿವೇಕಯುತ ತೀರ್ಮಾನಗಳನ್ನು ಕೈಗೊಳ್ಳಬಹುದು. ಕಾರ್ಪೋರೇಟ್ ಮಾರುಕಟ್ಟೆಯ ಜಗುಲಿಯಲ್ಲಿ ಶ್ರಮಿಕರ ಬದುಕನ್ನೂ, ನಿಸರ್ಗದ ಒಡಲನ್ನೂ ಇಟ್ಟು , ಎಲ್ಲವನ್ನೂ ವಿನಿಮಯ ಮಾಡಬಹುದಾದ ಸರಕುಗಳಂತೆ ಪರಿಗಣಿಸುವ ನವ ಉದಾರವಾದದ ಆರ್ಥಿಕತೆಯಲ್ಲಿ, ಈ ಉದಾತ್ತ ಚಿಂತನೆಯೇ ಪ್ರಕೃತಿಯನ್ನೂ ರಕ್ಷಿಸುತ್ತದೆ, ನೈಸರ್ಗಿಕ ಸಂಪನ್ಮೂಲಗಳನ್ನೂ ರಕ್ಷಿಸುತ್ತದೆ ಮತ್ತು ಭವಿಷ್ಯದ ಸಮಾಜವನ್ನು ಕಟ್ಟುವ ಶ್ರಮಜೀವಿಗಳನ್ನೂ ರಕ್ಷಿಸುತ್ತದೆ. ಈ ಅರಿವಿನೊಂದಿಗೆ ಮುಂದೆ ನಡೆಯೋಣ. ಬೌದ್ಧಿಕವಾಗಿ ಈ ನಡಿಗೆ ಚಾಮುಂಡಿಯಿಂದ ಅರಾವಳಿವರೆಗೆ ವಿಸ್ತರಿಸುವುದು ವರ್ತಮಾನದ ತುರ್ತು.
-೦-೦-೦-









