ಬೆಂಗಳೂರು: ಬಳ್ಳಾರಿಯಲ್ಲಿ(Ballari) ನಡೆದ ಗಂಭೀರ ಘಟನೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಘಟನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ ಬಳ್ಳಾರಿ ಕಾಂಗ್ರೆಸ್ ನಾಯಕರ ವಿರುದ್ಧ ಕೋಪಗೊಂಡಿದ್ದು, ʼಇದೆಲ್ಲಾ ಬೇಕಿತ್ತಾ? ಅನಗತ್ಯ ಗಲಾಟೆ ಏಕೆ?ʼ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟಿರುವುದು ತಪ್ಪು ನಡೆ ಎಂದು ಅಭಿಪ್ರಾಯ ಪಟ್ಟಿರುವ ಸಿಎಂ ಸಿದ್ದರಾಮಯ್ಯ, ರಾಜಕೀಯ ಲಾಭಕ್ಕಾಗಿ ಇಂತಹ ಘಟನೆಗಳು ನಡೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಪಕ್ಷದಲ್ಲಿ ಶಿಸ್ತು ಕಾಪಾಡಬೇಕೆಂದು ನಾಯಕರಿಗೆ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಇನ್ನು ಜಮೀರ್ ಅಹ್ಮದ್ ಬಳ್ಳಾರಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಜೊತೆ ದೂರವಾಣಿ ಮೂಲಕ ಸಿಎಂ ಮಾತನಾಡಿಸುವಂತೆ ಯತ್ನಿಸಿದ್ದಾರೆ. ಆದರೆ, ನಾನು ಭರತ್ ರೆಡ್ಡಿ ಜೊತೆ ಮಾತನಾಡುವುದಿಲ್ಲ ಎಂದು ನಿರಾಕರಿಸಿರುವ ಸಿದ್ದರಾಮಯ್ಯ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಹಾಗೂ ಕಂಪ್ಲಿ ಶಾಸಕ ಗಣೇಶ್ ಅವರೊಂದಿಗೆ ಮಾತ್ರ ಮಾತನಾಡಿದ್ದಾರೆ ಎನ್ನಲಾಗಿದೆ.

ಇನ್ನು ಈ ಘಟನೆಯ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ʼಈ ಪ್ರಕರಣದಲ್ಲಿ ಸಂಪೂರ್ಣ ತನಿಖೆ ನಡೆಯಬೇಕು. ಬುಲೆಟ್ ಯಾರ ಗನ್‌ನಿಂದ ಬಂದಿದೆ ಅನ್ನೋದು ಗೊತ್ತಾಗಬೇಕು. ಬಿಜೆಪಿಯವರ ಗನ್‌ನಿಂದಾ ಅಥವಾ ಕಾಂಗ್ರೆಸ್‌ನವರ ಗನ್‌ನಿಂದಾ ಅನ್ನೋದನ್ನ ಸ್ಪಷ್ಟಪಡಿಸಬೇಕು. ಅದಕ್ಕಾಗಿಯೇ ತನಿಖೆಗೆ ಆದೇಶ ನೀಡಿದ್ದೇನೆ. ಈ ಘಟನೆ ರಾಜಕೀಯ ವಿವಾದಕ್ಕೆ ತಿರುಗಬಾರದ. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ತನಿಖೆ ಪೂರ್ಣಗೊಂಡ ಬಳಿಕ ಸತ್ಯ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.











