ಬೆಂಗಳೂರು : 2025ರ ವರ್ಷವೂ ರಾಜಕೀಯ, ಸಿನಿಮಾ, ಔದ್ಯೋಗಿಕ ಕ್ಷೇತ್ರದಲ್ಲಿ ಸಾಕಷ್ಟು ಗಮನ ಸೆಳೆದಂತೆ ಕ್ರೀಡಾಲೋಕದಲ್ಲೂ ಹೆಚ್ಚಿನ ಸದ್ದು ಮಾಡಿರುವ ವರ್ಷವಾಗಿದೆ. ಅದರಲ್ಲೂ ಕ್ರಿಕೆಟ್ ಪಂದ್ಯದಲ್ಲಿ ಶಕ್ತಿ ಪ್ರದರ್ಶನದ ಜೊತೆಗೆ ರಾಷ್ಟ್ರಮಟ್ಟದ ಮನ್ನಣೆಗೆ ಕಾರಣವಾಗಿದೆ. ಮುಖ್ಯವಾಗಿ ಭಾರತಿಯ ಮಹಿಳಾ ಕ್ರಿಕೆಟ್ ತಂಡವು ಮೊದಲ ಫೈನಲ್ ವಿಶ್ವಕಪ್ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದೆ. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಅಲ್ಲದೆ ಇತಿಹಾಸ ನಿರ್ಮಿಸುವ ಮೂಲಕ ಅಂಧರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಶ್ರೀಲಂಕಾದ ಕೊಲಂಬೊದ ಪಿ ಸಾರಾ ಓವಲ್ ಮೈದಾನದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ಭಾರತ ತಂಡವು ಗೆಲುವಿನ ನಗೆ ಬೀರಿತು.
ಇನ್ನೂ ನ್ಯೂಜಿಲೆಂಡ್ ತಂಡಕ್ಕೆ ನಾಲ್ಕು ವಿಕೆಟ್ ಅಂತರದಿಂದ ಸೋಲಿನ ರುಚಿ ತೋರಿಸಿದ ಭಾರತದ ಪುರುಷರ ಕ್ರಿಕೆಟ್ ತಂಡವು ಮೂರನೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಅಲ್ಲದೆ ಭಾರತ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ತಂಡವಾಯಿತು. ಭಾರತವು ಟೂರ್ನಿಯುದ್ದಕ್ಕೂ ಅಜೇಯವಾಗಿ ಉಳಿಯಿತು.
ಟ್ರೋಫಿ ತನ್ನ ಬಳಿಯೇ ಇಟ್ಟುಕೊಂಡ ಪಾಕ್..
ಏಷ್ಯಾಕಪ್ ಪ್ರಶಸ್ತಿಯನ್ನೂ ಸಹ ಪಡೆದುಕೊಳ್ಳುವಲ್ಲಿ ಭಾರತ ಹಿಂದೆ ಬೀಳಲಿಲ್ಲ. ದುಬೈನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಮಣ್ಣು ಮುಕ್ಕಿಸುವ ಮೂಲಕ ಗೆಲುವಿನ ಕೇಕೆ ಬಾರಿಸಿತ್ತು. ಕೇವಲ 146 ರನ್‌ಗಳಿಗೆ ಪಾಕಿಗಳನ್ನು ಕಟ್ಟಿ ಹಾಕುವಲ್ಲಿ ಸಫಲವಾಗಿದ್ದ ಭಾರತ ಕ್ರೀಡಾ ತಂತ್ರಗಾರಿಕೆಯು ಗೆಲುವಿನ ದಡ ಸೇರುವಲ್ಲಿ ಕೈ ಹಿಡಿಯಿತು. ಪಂದ್ಯದುದ್ದಕ್ಕೂ ಭಾರತ ಅಜೇಯ ಪ್ರದರ್ಶನ ನೀಡಿತು. ಆದರೆ ಭಾರತದ ಗೆಲುವನ್ನು ಅರಗಿಸಿಕೊಳ್ಳಲಾಗದ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಪಡೆಯಲು ಭಾರತ ತಂಡ ಹಿಂದೇಟು ಹಾಕಿತು. ಹೀಗಾಗಿ ಟ್ರೋಫಿ ಪಾಕ್ ಬಳಿಯೇ ಇದೆ.
ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 52 ಏಕದಿನ ಶತಕಗಳೊಂದಿಗೆ ಸಚಿನ್ ತೆಂಡೂಲ್ಕರ್ ಅವರ ಒಂದೇ ಸ್ವರೂಪದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಹಿಂದಿಕ್ಕಿದರು ಮತ್ತು ಸಚಿನ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಮುರಿದರು.
ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್..
ಕ್ರಿಕೆಟ್‌ನ ರನ್ ಮಷೀನ್ ಎಂದೇ ಖ್ಯಾತಿಯಾಗಿರುವ ವಿರಾಟ್ ಕೊಹ್ಲಿಯವರು ಕೂಡ 2025ರಲ್ಲಿ ಸಾಕಷ್ಟು ಗಮನ ಸೆಳೆದರು. ವಿಜಯ್ ಹಜಾರೆ ಟೂರ್ನಿಯಲ್ಲಿ ಆಂಧ್ರ ವಿರುದ್ಧದ ಪಂದ್ಯಕ್ಕೂ ಮುನ್ನ ಏಕದಿನ ಕ್ರಿಕೆಟ್ನಲ್ಲಿ 15999 ಕೊಹ್ಲಿ ರನ್ಗಳಿಸಿದ್ದರು. ಒಂದು ರನ್ಗಳಿಸುವ ಮೂಲಕ 16 ಸಾವಿರ ರನ್ಗಳ ಸಾಧನೆ ಮಾಡಿದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 16000 ರನ್ಗಳಿಸಿದ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಈ ಸಾಧನೆಗೆ ಹೆಸರಾಗಿದ್ದರು. ತೆಂಡೂಲ್ಕರ್ ಲಿಸ್ಟ್ ಎ ಕ್ರಿಕೆಟ್ನಲ್ಲಿ 391 ಇನಿಂಗ್ಸ್ಗಳ ಮೂಲಕ 16000 ರನ್ ಪೂರೈಸಿದ್ದರು. ಈ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು.
ಬಿಹಾರದಲ್ಲಿ ನಡೆದ 2025 ರ ಹಾಕಿ ಏಷ್ಯಾಕಪ್ ಫೈನಲ್‌ನಲ್ಲಿ ಹರ್ಮನ್ಪ್ರೀತ್ ಸಿಂಗ್ ನಾಯಕತ್ವದ ಭಾರತ ಹಾಕಿ ತಂಡವು, ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಈ ಟೂರ್ನಿಯಲ್ಲಿ ಅಜೇಯ ತಂಡವಾಗಿ ಫೈನಲ್ ಪ್ರವೇಶಿಸಿದ್ದ ಭಾರತ ತಂಡ ನಾಲ್ಕನೇ ಬಾರಿಗೆ ಏಷ್ಯಾಕಪ್ ಗೆದ್ದ ಸಾಧನೆ ಮಾಡಿದೆ.
ಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದ ಆರ್‌ಸಿಬಿ..
ಇನ್ನೂ ಐಪಿಎಲ್ ವಿಚಾರಕ್ಕೆ ಬಂದರೆ ಐತಿಹಾಸಿಕವಾಗಿ ಸತತ ಹೋರಾಟದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಪ್ ಗೆಲ್ಲುವಲ್ಲಿ ಯಶಸ್ವಿಯಾಯಿತು. ಈ ಮೂಲಕ 2025 ಆರ್‌ಸಿಬಿ ಪಾಲಿಗೆ ಅತ್ಯಂತ ಮಹತ್ವದ ವರ್ಷವಾಗಿತ್ತು. ಆದರೆ ಚಿನ್ನಸ್ವಾಮಿಯ ಕಾಲ್ತುಳಿತ ದುರಂತ ಈ ಗೆಲುವಿನ ಸಂಭ್ರಮಕ್ಕೆ ಸೂತಕ ತಂದಿಟ್ಟಿತು.
ಹೀಗೆ 2025ರ ವರ್ಷವೂ ಕ್ರೀಡಾ ಕ್ಷೇತ್ರದಲ್ಲಿ ಹತ್ತು ಹಲವು ಸಾಧನೆಗಳಿಗೆ ಪ್ರಮುಖವಾಗಿದೆ. ವರ್ಷದ ಅಂತಿಮ ದಿನಗಳಲ್ಲಿ ಇಡೀ ಕ್ರೀಡಾ ಕ್ಷೇತ್ರದಲ್ಲಿ ಏನೆಲ್ಲ ಆಯಿತು ಎನ್ನುವುದನ್ನು ಮೆಲುಕು ಹಾಕುವ ವೇಳೆ ಜಾಗತಿಕವಾಗಿ ಭಾರತವೂ ತನ್ನ ಪ್ರದರ್ಶನವನ್ನು ಉತ್ತಮವಾಗಿಯೇ ನೀಡಿ ಎನ್ನುವುದು ಸುಳ್ಳಲ್ಲ..












