ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್(Darshan) ಸಿನಿಮಾ ಕೆರಿಯರ್ ಮುಗಿದೇ ಹೋಯ್ತು ಎಂದುಕೊಂಡವರಿಗೆ ಬಿಗ್ ಸಪ್ರೈಸ್ ಎನ್ನುವಂತೆ ಡೆವಿಲ್ ಸೂಪರ್ ಹಿಟ್ ಆಯ್ತು. ದರ್ಶನ್ ಅನುಪಸ್ಥಿತಿಯಲ್ಲೇ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು, ಗೆಲುವಿನ ನಾಗಾಲೋಟ ಮುಂದುವರಿಸಿದೆ. ಒಂದು ಲೆಕ್ಕದಲ್ಲಿ ದರ್ಶನ್ ಸಿನಿಮಾ ಜೀವನಕ್ಕೆ ಹೊಸ ತಿರುವನ್ನೇ ತಂದುಕೊಟ್ಟಿತ್ತು.

ನಟ ದರ್ಶನ್ ಒಪ್ಪಿಕೊಂಡಿದ್ದ, ಅಭಿಮಾನಿಗಳಿಗೆ ಪ್ರಾಮಿಸ್ ಮಾಡಿದ್ದ ಡೆವಿಲ್ ಚಿತ್ರ ಈಗಾಗಲೇ ತೆರೆ ಕಂಡಿದ್ದು, ದರ್ಶನ್ ಮುಂದಿನ ಸಿನಿಮಾ ಯಾವುದು..? ಜಾಮೀನು ಸಿಕ್ಕಿ ಜೈಲಿನಿಂದ ಹೊರ ಬಂದ ಬಳಿಕ ದರ್ಶನ್ ಮತ್ತೆ ಸಿನಿಮಾ ಮಾಡುತ್ತಾರಾ..? ಅಥವಾ ಚಿತ್ರರಂಗದಿಂದ ದೂರ ಉಳಿಯುತ್ತಾರಾ..? ರಾಜಕೀಯಕ್ಕೆ ಬರುತ್ತಾರಾ ಎನ್ನುವ ಹತ್ತಾರು ಪ್ರಶ್ನೆಗಳು ಅಭಿಮಾನಿಗಳಲ್ಲಿದೆ. ಆದರೆ ಈ ಯಾವುದೇ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರ ಇಲ್ಲ. ಆದರೆ ದಾಸನ ಅಭಿಮಾನಿಗಳು ಮಾತ್ರ ದರ್ಶನ್ ಮುಂದಿನ ಸಿನಿಮಾ ಯಾವುದಿರಬಹುದು..? ಆ ಸಿನಿಮಾವನ್ನು ಹೇಗೆ ಗೆಲ್ಲಿಸಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.

ದರ್ಶನ್ ಜೈಲಿಗೆ ಹೋಗುವ ಮೊದಲು ಕೆವಿಎನ್ ಜೊತೆಗೆ ಒಂದು ಸಿನಿಮಾ ಅನೌನ್ಸ್ ಮಾಡಿದ್ದರು. ಆ ಸಿನಿಮಾನ ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದ ಸಂದರ್ಭದಲ್ಲಿ ಸೂರಪ್ಪ ಬಾಬು ಅವರಿಗೆ ಸಿನಿಮಾದ ಹಣವನ್ನು ಹಿಂತಿರುಗಿಸಿದ್ದಾರೆ ಅಲ್ಲದೇ ಕೆವಿಎನ್ ಜೊತೆಗೆ ಸಿನಿಮಾ ಮಾಡುವುದಿಲ್ಲ ಎನ್ನುವ ವಿಚಾರವನ್ನೂ ಕೂಡ ತಿಳಿಸಿದ್ದಾರೆ ಎನ್ನಲಾಗಿದೆ. ಹಾಗಾದರೆ ದರ್ಶನ್ ಜೈಲಿನಿಂದ ಹೊರಗೆ ಬಂದ ಬಳಿಕ ಯಾರ ಜೊತೆ ಸಿನಿಮಾ ಮಾಡಬಹುದು ಎನ್ನುವ ಪ್ರಶ್ನೆಗೆ ಒಂದು ಉತ್ತರ ಈಗ ಎಲ್ಲೆಡೆ ಹರಿದಾಡುತ್ತಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜಾಮೀನು ಪಡೆದು ಹೊರಗೆ ಬಂದರೆ ತನ್ನ ಆತ್ಮೀಯ ಗೆಳತಿ ರಕ್ಷಿತಾ ಪ್ರೇಮ್ ನಿರ್ಮಾಣದಲ್ಲಿ, ಜೋಗಿ ಪ್ರೇಮ್ ನಿರ್ದೇಶನದಲ್ಲಿ ಸಿನಿಮಾ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ನಟಿ ರಕ್ಷಿತಾ ಎಲ್ಲಿಯೂ ದರ್ಶನ್ ಅವರನ್ನು ಬಿಟ್ಟುಕೊಡದ, ಅವರ ಸ್ನೇಹವನ್ನು ಬಿಟ್ಟುಕೊಡದ ಕಾರಣ ಎರಡೂ ಕುಟುಂಬಗಳ ಮಧ್ಯೆ ಒಳ್ಳೆ ಬಾಂಧವ್ಯವಿದ್ದು, ರಕ್ಷಿತಾ ಪ್ರೇಮ್ ಬಂಡವಾಳ ಹಾಕುವ ಸಿನಿಮಾಗೆ ದರ್ಶನ್ ಹೀರೋ ಆಗುತ್ತಾರೆ ಎನ್ನುವ ಮಾತುಗಳು ಸ್ಯಾಂಡಲ್‌ವುಡ್ ಅಂಗಳದಲ್ಲಿ ಹರಿದಾಡುತ್ತಿದೆ.












