ಸಂದಿಗ್ಧ ಸಮಯದಲ್ಲಿ, ಸಂಕಟದ ಹೊತ್ತಿನಲ್ಲಿ ಜೀವ ರಕ್ಷಕ ಅವಕಾಶವಾಗಿ ತನ್ನ ಪಯಣ ನಡೆಸಿದ್ದ MNREGA (ನರೇಗಾ) ಯೋಜನೆಯನ್ನು ಅಕಾಲಿಕ ಸಾವಿಗೀಡುಮಾಡಿರುವುದು, ಭಾರತದ ಅತ್ಯಂತ ಕೆಳಸ್ತರದ ಶ್ರಮಜೀವಿಗಳ ಪಾಲಿಗೆ ಕರಾಳ ಭವಿಷ್ಯವನ್ನು ತೆರೆದಂತಾಗಿದೆ. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ 2015ರ ಬಜೆಟ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ “ ನರೇಗಾ ಯೋಜನೆಯು ಕಾಂಗ್ರೆಸ್ ಆಳ್ವಿಕೆಯ ವೈಫಲ್ಯಕ್ಕೆ ಸ್ಮಾರಕವಾಗಲಿದೆ ” ಎಂದು ಭವಿಷ್ಯ ನುಡಿದಿದ್ದರು. ವಿಶ್ವದಾದ್ಯಂತ ಅರ್ಥಶಾಸ್ತ್ರಜ್ಞರ ಕಣ್ಣಲ್ಲಿ ಒಂದು ಕ್ರಾಂತಿಕಾರಿ ಸುಧಾರಣಾ ಕ್ರಮವಾಗಿ ಕಂಡಿದ್ದ ನರೇಗಾ, ನವ ಭಾರತದ ಆಳ್ವಿಕೆಯಲ್ಲಿ ಅಪಹಾಸ್ಯಕ್ಕೀಡಾಗಿತ್ತು. ಆದರೆ ಕೋವಿದ್ 19ರ ಸಂಕಟಗಳ ನಡುವೆ, ಬದುಕುಳಿಯಲು ಹೋರಾಡುತ್ತಿದ್ದ ಲಕ್ಷಾಂತರ ಜನರಿಗೆ ಆಕ್ಸಿಜನ್ ಒದಗಿಸಲು ಸರ್ಕಾರಗಳು ವಿಫಲವಾದರೂ, ಭಾರತದ ಶ್ರಮಿಕ ವರ್ಗಗಳಿಗೆ , ವಿಶೇಷವಾಗಿ ಗ್ರಾಮೀಣ ಕಾರ್ಮಿಕರಿಗೆ ಆಮ್ಲಜನಕದಂತೆ ಮರುಜೀವ ಕೊಟ್ಟಿದ್ದು ಇದೇ MNREGA , ನರೇಗಾ ಯೋಜನೆ.

ಈಗ ಕೇಂದ್ರ ಸರ್ಕಾರ ಜಾರಿಗೊಳಿಸಿರುವ “ ವಿ ಬಿ ಜಿ-ರಾಮ್-ಜಿ ” (ವಿಕಸಿತ ಭಾರತ – ಉದ್ಯೋಗ ಮತ್ತು ಅಜೀವಿಕಾ ಮಿಷನ್ ಗ್ಯಾರಂಟಿ ಯೋಜನೆ) ನರೇಗಾ ಯೋಜನೆಯನ್ನು ಅಂತ್ಯಗೊಳಿಸಿದೆ. ಇಲ್ಲಿ ಮಹಾತ್ಮ ಗಾಂಧಿ ಸ್ಥಾನವನ್ನು ರಾಮ ಗಳಿಸಿದ್ದರೂ, ಇದು ಗಾಂಧಿ vs ರಾಮನ ಪ್ರಶ್ನೆಯಲ್ಲ. ಗ್ರಾಮೀಣ ಭಾರತದ ಶ್ರಮಜೀವಿಗಳ ಪಾಲಿಗೆ ಉದ್ಯೋಗಶೀಲತೆ vs ಉದ್ಯೋಗಹೀನತೆಯ ಪ್ರಶ್ನೆ. ಸಂವಿಧಾನದ ಅನುಚ್ಛೇದ 21 ಜನರ ಬದುಕುವ ಹಕ್ಕನ್ನು ಖಾತರಿಪಡಿಸುತ್ತದೆ. ದೇಶದ ಪ್ರಜೆಗಳಿಗೆ ಉದ್ಯೋಗದ ಹಕ್ಕು ಮತ್ತು ಸಮರ್ಪಕ ಜೀವನೋಪಾಯ ಸಾಧನಗಳನ್ನು ಒದಗಿಸುವ ಬಾಧ್ಯತೆ ಸರ್ಕಾರಗಳ ಮೇಲಿರುವುದರಿಂದ, ಜನರ ಬದುಕುವ ಹಕ್ಕಿನ ಪ್ರಶ್ನೆ ಬಂದಾಗ, ಜೀವನೋಪಾಯ-ಉದ್ಯೋಗದ ರಕ್ಷಣೆಯೂ ಬಾಧ್ಯತೆಯಾಗುತ್ತದೆ ಎಂದು ಸುಪ್ರೀಂಕೋರ್ಟ್ ಒಂದು ತೀರ್ಪಿನಲ್ಲಿ ಹೇಳಿದೆ.

ನರೇಗಾ vs ಜಿ ರಾಮ್ ಜಿ
ನರೇಗಾ ಯೋಜನೆ ಇತರ ಬಡತನ ನಿವಾರಣೆಯ ಯೋಜನೆಗಳಂತೆ ಅಲ್ಲ. ಮೂಲತಃ ಇದು ಹಕ್ಕು ಆಧಾರಿತ ಕಾಯ್ದೆ (Rights based Law). ಸರ್ಕಾರದ ವಿವೇಚನೆಗೆ ಒಳಪಟ್ಟ ಕಲ್ಯಾಣ ಯೋಜನೆಯಂತಲ್ಲ. ಈ ಕಾಯ್ದೆಯು, ಉದ್ಯೋಗಕ್ಕಾಗಿ ಆಗ್ರಹಿಸುವ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ, ನಿಗದಿತ ಸಮಯದ ಒಳಗಾಗಿ ಕನಿಷ್ಠ ನೂರು ದಿನಗಳ ಉದ್ಯೋಗ ಮತ್ತು ಕೂಲಿಯನ್ನು ನೀಡಲು ಸರ್ಕಾರದ ಮೇಲೆ ಬಾಧ್ಯತೆಯನ್ನು ಹೇರುತ್ತದೆ. ಒಂದು ವೇಳೆ ಉದ್ಯೋಗ ನೀಡಲಾಗದಿದ್ದರೆ ನಿರುದ್ಯೋಗ ಭತ್ಯೆ ನೀಡುವಂತೆ ಒತ್ತಾಯಿಸುತ್ತದೆ. ಈ ಯೋಜನೆಯ ಹಣಕಾಸು ಜವಾಬ್ದಾರಿಯನ್ನು, ಮುಖ್ಯವಾಗಿ ವೇತನ ಪಾವತಿಯನ್ನು, ಕೇಂದ್ರ ಸರ್ಕಾರ ನಿಭಾಯಿಸಬೇಕಾಗುತ್ತದೆ. ಹಾಗಾಗಿ ಯಾವುದೇ ರಾಜ್ಯ ಸರ್ಕಾರ ಹಣಕಾಸಿನ ಕೊರತೆಯ ನೆಪದಲ್ಲಿ ಉದ್ಯೋಗ ನಿರಾಕರಿಸಲಾಗುವುದಿಲ್ಲ. ಈ ಕಾರಣದಿಂದಲೇ ನರೇಗಾ ಕೆಲವೇ ವರ್ಷಗಳಲ್ಲಿ, ಬರಗಾಲ, ಪ್ರವಾಹ, ಆರ್ಥಿಕ ಹಿಂಜರಿತ, ಕೋವಿದ್ ಸಾಂಕ್ರಾಮಿಕ ಮೊದಲಾದ ಸಂದರ್ಭಗಳಲ್ಲಿ ಗ್ರಾಮ ಭಾರತದ ಜೀವನಾಡಿಯಾಗಿ ರೂಪುಗೊಂಡು, ವಿಶ್ವದ ಅತ್ಯಂತ ದೊಡ್ಡ ಉದ್ಯೋಗ ಕಾರ್ಯಕ್ರಮ ಎಂದು ಖ್ಯಾತಿ ಪಡೆದಿತ್ತು.

ಇಂತಹ ಒಂದು ಯೋಜನೆಯನ್ನು ರದ್ದುಪಡಿಸಿ ಕೇಂದ್ರ ಸರ್ಕಾರ ʼ ವಿಬಿ ಜಿ-ರಾಮ್-ಜಿ ʼ ಯೋಜನೆಯನ್ನು ಶಾಸನಬದ್ಧಗೊಳಿಸಿದೆ. ಈ ಯೋಜನೆಯ ಮರುನಾಮಕರಣ ಮತ್ತು ವರ್ಷಕ್ಕೆ 125 ದಿನಗಳ ಉದ್ಯೋಗವನ್ನು ಘೋಷಿಸಿರುವುದು ಕೇವಲ ತೋರಿಕೆಯಾಗಿ ಕಾಣುತ್ತದೆ , “ಇದರ ಬದಲು ಸರ್ಕಾರ ತನ್ನ ಆದ್ಯತೆ ಇರುವುದು ಬುಲೆಟ್ ಟ್ರೈನ್ ಮತ್ತು ಹೆದ್ದಾರಿ ನಿರ್ಮಾಣಗಳಿಗೇ ಹೊರತು, ಬಡಜನರ ಉದ್ಯೋಗಕ್ಕೆ ಅಲ್ಲ ಎಂದು ನೇರವಾಗಿ ಹೇಳಬಹುದಿತ್ತು ”ಎನ್ನುತ್ತಾರೆ ನರೇಗಾ ಯೋಜನೆಯನ್ನು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯ ನಿಖಿಲ್ ಡೇ. (Rediffl) ̤ ಕೇಂದ್ರ ಸರ್ಕಾರದ ಈ ಕ್ರಮವನ್ನು ಕೇವಲ ಮರುನಾಮಕರಣ ಎಂದು ಪರಿಗಣಿಸಲಾಗುವುದಿಲ್ಲ. ನರೇಗಾ ಯೋಜನೆಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.

ಈ ನೂತನ ಕಾಯ್ದೆಯು ಉದ್ಯೋಗವನ್ನು ಖಾತರಿಪಡಿಸುವುದಿಲ್ಲ. ನರೇಗಾ ಯೋಜನೆಯನ್ನು ಶಾಸನಬದ್ಧವಾಗಿ ಖಾತರಿಪಡಿಸಿದ್ದ ಎಲ್ಲ ನಿಯಮಗಳನ್ನೂ ತೆಗೆದುಹಾಕಲಾಗಿದೆ. ಮೂಲತಃ ನರೇಗಾ ಬೇಡಿಕೆ ಆಧಾರಿತ ಯೋಜನೆ. ಉದ್ಯೋಗಕ್ಕಾಗಿ ಬೇಡಿಕೆ ತಳಮಟ್ಟದಿಂದ ಬರುತ್ತಿತ್ತು, ಇದನ್ನು ಪೂರೈಸುವುದು ಸರ್ಕಾರದ ಕಾನೂನುಬದ್ಧ ಬಾಧ್ಯತೆಯಾಗಿತ್ತು. ಜಿ-ರಾಮ್-ಜಿ ಕಾಯ್ದೆಯಡಿ ಉದ್ಯೋಗ ಹಂಚಿಕೆಯಾಗುತ್ತದೆ. ಹೊಸ ಕಾಯ್ದೆಯ ಸೆಕ್ಷನ್ 4 (5)ರ ಅಡಿಯಲ್ಲಿ ಕೇಂದ್ರ ಸರ್ಕಾರ ಪ್ರತಿವರ್ಷ ರಾಜ್ಯಾವಾರು ಹಂಚಿಕೆಯನ್ನು ನಿರ್ಧರಿಸುತ್ತದೆ. ಇದಕ್ಕೆ ಸೂಕ್ತವಾದ ಮಾನದಂಡಗಳನ್ನು ಸರ್ಕಾರವೇ ನಿಗದಿಪಡಿಸುತ್ತದೆ. ಗ್ರಾಮೀಣ ಉದ್ಯೋಗದ ಬೇಡಿಕೆ ಹೆಚ್ಚಾದಂತೆಲ್ಲಾ ಬಜೆಟ್‌ನಲ್ಲಿ ಹಣಕಾಸು ಲಭ್ಯತೆಯನ್ನು ಹೆಚ್ಚಿಸುವ ನರೇಗಾ ಯೋಜನೆಯ ನಿಬಂಧನೆ, ಹೊಸ ಕಾಯ್ದೆಯಡಿ ಇಲ್ಲವಾಗುತ್ತದೆ. ಸರಬರಾಜು ಆಧಾರಿತ ನೀತಿಯಾಗಿ ಜಿ-ರಾಮ್-ಜಿ ಕಾಯ್ದೆ ಉದ್ಯೋಗ ಖಾತರಿಯ ಕಲ್ಪನೆಯನ್ನೇ ಕೊನೆಗೊಳಿಸುತ್ತದೆ.

ಮತ್ತೊಂದು ಮುಖ್ಯ ಅಂಶವೆಂದರೆ, ನರೇಗಾ ದೇಶವ್ಯಾಪಿಯಾಗಿ ಅನ್ವಯಿಸಿತ್ತು. ಹೊಸ ಕಾಯ್ದೆಯ ಸೆಕ್ಷನ್ 5(1) ಪ್ರಕಾರ ಯಾವ ರಾಜ್ಯಗಳಿಗೆ ಈ ಯೋಜನೆ ಅನ್ವಯಿಸುತ್ತದೆ ಎನ್ನುವುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಕೆಲವು ಜಿಲ್ಲೆಗಳಿಗೆ ಅಥವಾ ಬ್ಲಾಕ್‌ಗಳಿಗೂ ಸೀಮಿತಗೊಳಿಸಬಹುದು. ಹಾಗಾಗಿ ಇದು ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆಯಾಗಿ ಕಾಣುವುದಿಲ್ಲ. ಹೊಸ ಕಾಯ್ದೆಯ ಮತ್ತೊಂದು ಗಮನಾರ್ಹ ನಿಯಮ ಹಣಕಾಸು ನಿಧಿಯನ್ನು ಒದಗಿಸುವ ಅನುಪಾತದಲ್ಲಿ ಕಾಣಬಹುದು. ನರೇಗಾ ಯೋಜನೆಯಡಿ ಶೇಕಡಾ 100ರಷ್ಟು ಕೂಲಿಯ ಪ್ರಮಾಣವನ್ನು ಕೇಂದ್ರ ಸರ್ಕಾರ ಭರಿಸಬೇಕಿತ್ತು. ಹಾಗಾಗಿ ಯಾವ ರಾಜ್ಯವೂ ಉದ್ಯೋಗ ನಿರಾಕರಿಸಲು ಅಥವಾ ಹಣಕಾಸು ಕೊರತೆಯ ನೆಪ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಹೊಸ ಕಾಯ್ದೆಯು ಈಗ 60:40ರ ಅನುಪಾತವನ್ನು ನಿಗದಿಪಡಿಸಿದ್ದು, ಕೇಂದ್ರದ ಶೇಕಡಾ 60ರ ಪಾಲಿಗೆ ರಾಜ್ಯದ ಶೇಕಡಾ 40ರಷ್ಟು ಪಾಲು ಕಡ್ಡಾಯವಾಗುತ್ತದೆ. ಭೌತಿಕ ಅವಶ್ಯಕತೆಗಳ ವೆಚ್ಚದಲ್ಲಿ 75:25ರ ಅನುಪಾತ ನಿಗದಿಯಾಗಿತ್ತು.

ನೂತನ ಜಿ ರಾಮ್ ಜಿ ಕಾಯ್ದೆಯಡಿ ರಾಜ್ಯ ಸರ್ಕಾರಗಳಿಗೆ ತಮ್ಮ ಪಾಲು ಭರಿಸಲು ಸಾಧ್ಯವಾಗದೆ ಹೋದರೆ, ಕೇಂದ್ರದಿಂದ ಯಾವುದೇ ಅನುದಾನ ಬಿಡುಗಡೆಯಾಗುವುದಿಲ್ಲ. ತತ್ಪರಿಣಾಮವಾಗಿ ಅನೇಕ ಪ್ರದೇಶಗಳಲ್ಲಿ ಈ ಕಾಯ್ದೆ ಅಲಭ್ಯವಾಗಿಬಿಡುತ್ತದೆ. ಈ ಮುನ್ನ ಕಾರ್ಮಿಕರು ವರ್ಷದ ಯಾವ ಸಮಯದಲ್ಲಾದರೂ ದುಡಿಮೆಗೆ ಹೋಗಬಹುದಿತ್ತು. ಈಗ ಕೃಷಿ ಚಟುವಟಿಕೆಗಳ ಕಾರಣ ಎರಡು ತಿಂಗಳು ನಿರ್ಬಂಧಿಸಲಾಗುತ್ತದೆ. ದುಡಿಮೆಯ ದಿನಗಳನ್ನು 100 ರಿಂದ 125ಕ್ಕೆ ಹೆಚ್ಚಿಸಿರುವುದನ್ನೇ ಕ್ರಾಂತಿಕಾರಕ ಹೆಜ್ಜೆ ಎನ್ನಲಾಗುತ್ತಿದೆ. ಆದರೆ ಕೂಲಿ ಪಾವತಿ ಮಾಡಲು ಹಣವೇ ಇಲ್ಲವಾದರೆ, ಈ ದಿನಗಳ ಹೆಚ್ಚಳದ ಪ್ರಸ್ತುತತೆ ಏನು ? ಕೇಂದ್ರ ಸರ್ಕಾರ ಆಯ್ಕೆ ಮಾಡಿದ ಪ್ರದೇಶಗಳಲ್ಲಿ ಈ ನಿಗದಿತ ದಿನಗಳನ್ನು ರಾಜ್ಯ ಸರ್ಕಾರಗಳು ನಿರ್ಧರಿಸುತ್ತವೆ. ಆಗಲೂ ಪಾವತಿಯು 60:40 ಅನುಪಾತದಲ್ಲೇ ನಡೆಯುತ್ತದೆ. ಹಾಗಾಗಿ ನರೇಗಾ ಯೋಜನೆಯನ್ನು ವಿಸ್ತರಿಸಲಾಗಿದೆ ಎಂಬ ಪ್ರತಿಪಾದನೆಯನ್ನು ಒಪ್ಪಲಾಗುವುದಿಲ್ಲ.

ಹೊಸ ಕಾಯ್ದೆಯ ಆತಂಕಗಳು
ನರೇಗಾ ಯೋಜನೆಯಲ್ಲೂ ಸಹ ಅನೇಕ ಕಾರ್ಮಿಕರಿಗೆ ಕೂಲಿ ಮತ್ತಿತರ ಭತ್ಯೆಗಳು ಪಾವತಿಯಾಗಿಲ್ಲದ ಪ್ರಸಂಗಗಳಿದ್ದವು. ಆದರೆ ಅವರು ಹೋರಾಡುವ ಮೂಲಕ ಅದನ್ನು ಪಡೆದುಕೊಳ್ಳುವ ಕಾನೂನಾತ್ಮಕ ಹಕ್ಕು ಹೊಂದಿದ್ದರು. ಅನೇಕರು ಹೀಗೆ ಪಡೆದಿರುವುದೂ ಉಂಟು. ಪ್ರಸ್ತುತ ಜಿ-ರಾಮ್-ಜಿ ಕಾಯ್ದೆಯಲ್ಲಿ ಈ ಕಾನೂನಾತ್ಮಕ ಹಕ್ಕು ಇಲ್ಲವಾಗಿದೆ. ಒಂದು ವೇಳೆ ರಾಜ್ಯಗಳಲ್ಲಿ ವೆಚ್ಚವು ನಿಗದಿತ ಪ್ರಮಾಣವನ್ನು ಮೀರಿದರೆ ಅದನ್ನು ಆಯಾ ಸರ್ಕಾರಗಳೇ ಭರಿಸುವುದು ನೂತನ ಕಾಯ್ದೆಯ ನಿಯಮವಾಗಿದೆ. ಸೆಕ್ಷನ್ 5(1) ಅನುಸಾರ ಕೇಂದ್ರ ಸರ್ಕಾರದ ಅಧಿಸೂಚನೆಯಲ್ಲಿ ನಮೂದಿಸಿರುವ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಈ ಕಾಯ್ದೆ ಅನ್ವಯವಾಗುತ್ತದೆ. ಇಲ್ಲವಾದಲ್ಲಿ ಆ ಗ್ರಾಮಗಳ ಜನರಿಗೆ ಉದ್ಯೋಗದ ಹಕ್ಕು ಇರುವುದಿಲ್ಲ. ಇದು ಇಡೀ ಯೋಜನೆಯ ಸಾರ್ವತ್ರಿಕ ಸ್ವರೂಪವನ್ನೇ ಬದಲಾಯಿಸುತ್ತದೆ.

ನರೇಗಾ ಯೋಜನೆಯಲ್ಲಿ ಉದ್ಯೋಗದ ಬೇಡಿಕೆ ಇದ್ದಲ್ಲಿ 15 ದಿನಗಳ ಒಳಗಾಗಿ ಅದನ್ನು ಒದಗಿಸಬೇಕಿತ್ತು. ನೂತನ ಕಾಯ್ದೆಯು ಸರಬರಾಜು ಪ್ರೇರಿತವಾಗಿರುವುದರಿಂದ (Supply Driven) ಇಂತಹ ಬೇಡಿಕೆಗಳು ಬಂದಾಗ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸಬೇಕಾಗುತ್ತದೆ. ಇಲ್ಲವಾದಲ್ಲಿ ದುಡಿಮೆಗಾರರು ಆದಾಯ ವಂಚಿತರಾಗುತ್ತಾರೆ. ಈ ವ್ಯತ್ಯಯಗಳ ನಡುವೆಯೂ ಕೇಂದ್ರ ಸರ್ಕಾರ ನರೇಗಾ ಯೋಜನೆಯನ್ನು ರದ್ದುಪಡಿಸಿ, ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೊಳಿಸಿದೆ. ನರೇಗಾ ಅನುಷ್ಠಾನವಾದ ಸಂದರ್ಭದಲ್ಲಿ ಈ ಯೋಜನೆಗೇ ತೀವ್ರ ವಿರೋಧ ವ್ಯಕ್ತಪಡಿಸಿದ್ದ ನವ ಉದಾರವಾದದ ಸಮರ್ಥಕರು, ಕಾರ್ಪೋರೇಟ್ ಬಂಡವಾಳಿಗರು ಮತ್ತು ಮುಖ್ಯವಾಹಿನಿ ಮಾಧ್ಯಮಗಳು, ಈಗ ತಮ್ಮ ಆಗ್ರಹಗಳು ಸಾಕಾರಗೊಂಡಿರುವುದನ್ನು ಸ್ವಾಗತಿಸುತ್ತಿವೆ.

ನರೇಗಾ ಯೋಜನೆಯ ಸಾರ್ವತ್ರಿಕ ಅನ್ವಯಿಕೆ ಮತ್ತು ನೌಕರಿಯ ಕಾನೂನಾತ್ಮಕ ಹಕ್ಕು ದೇಶಾದ್ಯಂತ ಕೋಟ್ಯಂತರ ಶ್ರಮಿಕರಿಗೆ ಜೀವನೋಪಾಯದ ಮಾರ್ಗವನ್ನು ಒದಗಿಸಿತ್ತು. ಇದು ಕೇವಲ ಕಲ್ಯಾಣ ಯೋಜನೆಯಾಗಿರದೆ, ಕಾರ್ಮಿಕರು ಸರ್ಕಾರಗಳ ಮೇಲೆ ಒತ್ತಡ ಹೇರಿ ಗಳಿಸಬಹುದಾದ ಶಾಸನಾತ್ಮಕ ಹಕ್ಕು ಆಗಿತ್ತು. ಅಧಿಕೃತ ದತ್ತಾಂಶಗಳೇ ನಿರೂಪಿಸುವಂತೆ ಕಳೆದ ಹದಿನೈದು ವರ್ಷಗಳಲ್ಲಿ ನರೇಗಾ ಆರ್ಥಿಕ ಉತ್ಪಾದನೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದ್ದು, ಗ್ರಾಮೀಣ ಕೂಲಿಯ ಪ್ರಮಾಣವೂ ಹೆಚ್ಚಾಗಿದೆ, ಉದ್ಯೋಗ ದಕ್ಷತೆಯೂ ಉತ್ತಮವಾಗಿದೆ. ಈ ಕಾಯ್ದೆಯ ಮೂಲಕ ಕೇಂದ್ರ ಎನ್‌ಡಿಎ ಸರ್ಕಾರ ಮಾರುಕಟ್ಟೆ ಅವಶ್ಯಕತೆಗೆ ಅನುಗುಣವಾಗದ ಹಾಗೂ ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗೆ ಪೂರಕವಾದ ಉದ್ಯೋಗಾವಕಾಶಗಳ ವಾತಾವರಣವನ್ನು ಸೃಷ್ಟಿಸಿದೆ. ಸಂಸತ್ತಿನಲ್ಲಿ ಸರ್ವಾನುಮತದಿಂದ ಅನುಮೋದನೆ ಪಡೆದಿದ್ದ ನರೇಗಾ ಈಗ ಅಂತ್ಯವಾಗಿದ್ದು, ಕೆಲವೇ ದಿನಗಳಲ್ಲಿ ಸಂಸತ್ ಕಲಾಪದ ಚರ್ಚೆಯೂ ಇಲ್ಲದೆ ಮಸೂದೆಯನ್ನು ಮಂಡಿಸಿ, ಅನುಮೋದಿಸಿ ಅಧಿಕೃತ ಕಾಯ್ದೆಯನ್ನಾಗಿ ಜಿ ರಾಮ್ ಜಿ ಜಾರಿಗೊಳಿಸಿರುವುದು ರಾಜಕೀಯ ಹಾಗೂ ಸಾಮಾಜಿಕ ವ್ಯತ್ಯಯಗಳಿಗೂ ಕಾರಣವಾಗಬಹುದು.
ಕಳೆದುಕೊಂಡ ಸಾರ್ವತ್ರಿಕ ಲಕ್ಷಣ
ಸಾಮಾಜಿಕ ಹಾಗೂ ಆರ್ಥಿಕ ತಜ್ಞರು, ವಿಶ್ಲೇಷಕರು ಹೇಳುವಂತೆ ನರೇಗಾ ಯೋಜನೆಯ ಐದು ಪ್ರಮುಖ ಸಕಾರಾತ್ಮಕ ಅಂಶಗಳೆಂದರೆ, ಅದು ಸಾರ್ವತ್ರಿಕತೆಯನ್ನು ಪಡೆದಿತ್ತು , ನಿರ್ದಿಷ್ಟವಾಗಿ ಗುರುತಿಸಿದ ಸಮುದಾಯ, ಗ್ರಾಮಗಳು ಇರಲಿಲ್ಲ. ಎರಡನೆಯದಾಗಿ ಈ ಯೋಜನೆಯ ಪರಿಣಾಮವಾಗಿ ಗ್ರಾಮೀಣ ಆದಾಯದಲ್ಲಿ ಹೆಚ್ಚಳವಾಗಿತ್ತು. ಮೂರನೆಯದಾಗಿ ಜಾತಿ ಮತ್ತು ಲಿಂಗತ್ವ ಅಸಮಾನತೆಗಳನ್ನು ಎದುರಿಸಲು ಒಂದು ಅಸ್ತ್ರವಾಗಿತ್ತು ನಾಲ್ಕನೆಯದಾಗಿ ಉತ್ತಮ ಗುಣಮಟ್ಟದ ಆಸ್ತಿ/ಉತ್ಪನ್ನವನ್ನು ಗುರುತಿಸಬಹುದಿತ್ತು, ಕೊನೆಯದಾಗಿ ಸಮುದಾಯಗಳ ಸಬಲೀಕರಣಕ್ಕೆ ಒಂದು ಮಾರ್ಗವಾಗಿತ್ತು. ಹಲವು ಸಮೀಕ್ಷೆಗಳಲ್ಲಿ ನಿರೂಪಿಸಿರುವಂತೆ ನರೇಗಾ ಪರಿಣಾಮವಾಗಿ ಗ್ರಾಮಗಳಲ್ಲಿ ಶಾಲಾ ದಾಖಲಾತಿ ಹೆಚ್ಚಾಗಿತ್ತು , ಒಟ್ಟಾರೆ ಬಡತನದ ಪ್ರಮಾಣದಲ್ಲಿ ಕುಸಿತ ದಾಖಲಾಗಿತ್ತು.

ಭಾರತೀಯ ಮಾನವ ಅಭಿವೃದ್ಧಿ ಸಮೀಕ್ಷೆಯ ಅನುಸಾರ ನರೇಗಾ ಪರಿಣಾಮವಾಗಿ ಗ್ರಾಮೀಣ ಭಾರತದಲ್ಲಿ ಖಾಸಗಿ ಲೇವಾದೇವಿಗಾರರ ಪ್ರಭಾವ ಶೇಕಡಾ 21ರಷ್ಟು ಕಡಿಮೆಯಾಗಿತ್ತು. ನರೇಗಾ ಜಾರಿಯಾಗುವ ಮುನ್ನ ಗ್ರಾಮ ಭಾರತದ ಶೇಕಡಾ 45ರಷ್ಟು ಮಹಿಳೆಯರು ಸ್ವಂತ ಮನೆಗಳಲ್ಲಿ ಅಥವಾ ಹೊಲಗದ್ದೆಗಳಲ್ಲಿ ಆದಾಯವಿಲ್ಲದೆ ದುಡಿಯುತ್ತಿದ್ದರು. ನರೇಗಾ ಪ್ರಭಾವದಿಂದ ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣ ಶೇಕಡಾ 58ಕ್ಕೆ ಏರಿತ್ತು. ಈ ಪುರಾವೆಗಳ ಫಲವಾಗಿಯೇ 2009ರಲ್ಲಿ ನರೇಗಾ ಯೋಜನೆಯನ್ನು “ ಅಭಿವೃದ್ಧಿಗೆ ಮಾರಕ ” ಎಂದು ವಿಶ್ಲ಼ೇಸಿಸಿದ್ದ ವಿಶ್ವಬ್ಯಾಂಕ್ ಸಹ 2014ರಲ್ಲಿ ನರೇಗಾ ಯೋಜನೆ “ ಗ್ರಾಮೀಣಾಭಿವೃದ್ಧಿಗೆ ಅತ್ಯುತ್ತಮ ನಿದರ್ಶನ ” ಎಂದು ಅಧಿಕೃತವಾಗಿ ಘೋಷಿಸಿತ್ತು.
ಆಧರೆ ನರೇಗಾ ಯೋಜನೆಯ ಅಂತ್ಯಕ್ಕೆ ನಾಂದಿ ಹಾಡಿ ಹಲವು ವರ್ಷಗಳೇ ಕಳೆದಿರುವುದನ್ನು 10 ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ಗುರುತಿಸಬಹುದು. ವಾರ್ಷಿಕ ಬಜೆಟ್‌ಗಳಲ್ಲಿ ನರೇಗಾ ಯೋಜನೆಗೆ ಮೀಸಲಿರಿಸಲಾಗುವ ಅನುದಾನದಲ್ಲಿ ಸತತ ಕುಸಿತವನ್ನು 2015ರಿಂದಲೇ ಕಾಣಬಹುದು. ಆದರೆ ನರೇಗಾ ಯೋಜನೆಯ ಫಲಾನುಭವಿಗಳತ್ತ ನೋಡಿದಾಗ ಈ ಕಾಯ್ದೆಯ ಸಕಾರಾತ್ಮಕ ಕೊಡುಗೆ ಸ್ಪಷ್ಟವಾಗುತ್ತದೆ. ಇತ್ತೀಚಿನ ಸಮೀಕ್ಷೆಗಳ ಅನುಸಾರ 12 ಕೋಟಿ 61 ಲಕ್ಷ ಕಾರ್ಮಿಕರು ಈ ಯೋಜನೆಯನ್ನು ಅವಲಂಬಿಸಿದ್ದಾರೆ. ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಹಿಳೆಯರಿದ್ದಾರೆ. ಜಿ ರಾಮ್ ಜಿ ಕಾಯ್ದೆಯಿಂದ ತೀವ್ರ ಹೊಡೆತ ಬೀಳುವುದು ಗ್ರಾಮೀಣ ಮಹಿಳಾ ಕಾರ್ಮಿಕರ ಮೇಲೆ. ಏಕೆಂದರೆ ಕೌಶಲ್ಯಾಧಾರಿತ ಆರ್ಥಿಕತೆಯ ಪರಿಣಾಮವಾಗಿ ಹೆಚ್ಚಾಗುವ ವಲಸೆ ಕಾರ್ಮಿಕರ ಪೈಕಿ ಪುರುಷರೇ ಪ್ರಧಾನವಾಗಿರುತ್ತಾರೆ. ತಮ್ಮ ಕುಟುಂಬಗಳನ್ನು ಗ್ರಾಮದಲ್ಲೇ ಉಳಿಸಿ ಈ ಕಾರ್ಮಿಕರು ನಗರೀಕರಣದ ಸೇವೆಯಲ್ಲಿ ತೊಡಗಬೇಕಾಗುತ್ತದೆ.

ಕಾರ್ಪೋರೇಟ್ ಮಾರುಕಟ್ಟೆಯ ನಡಿಗೆ
ಡಿಜಿಟಲ್ ಮಾರುಕಟ್ಟೆಗೆ ಅಗತ್ಯವಾದ ಕೌಶಲ್ಯ ಹೊಂದಿದ್ದರೂ, ಕೌಟುಂಬಿಕ ನಿರ್ಬಂಧಗಳು, ಮಕ್ಕಳ ಲಾಲನೆ ಪೋಷಣೆ ಮತ್ತು ಸಾಂಸಾರಿಕ ಜವಾಬ್ದಾರಿಗಳ ಕಾರಣ ಹೆಚ್ಚಿನ ಮಹಿಳೆಯರು ನಗರಗಳಿಗೆ ವಲಸೆ ಹೋಗುವುದು ದುಸ್ತರವಾಗುತ್ತದೆ. ಮತ್ತೊಂದೆಡೆ ಜಿ ರಾಮ್ ಜಿ ಅನ್ವಯಿಸದ ಗ್ರಾಮಗಳಲ್ಲಿ ಅಗ್ಗದ ಕೂಲಿಯ ಶ್ರಮಿಕರಾಗಿ ಅಥವಾ ಕೂಲಿ ರಹಿತ ಕಾರ್ಮಿಕರಾಗಿ ಮಹಿಳೆಯರು ಉಳಿಯಬೇಕಾಗುತ್ತದೆ. ತತ್ಪರಿಣಾಮವಾಗಿ ಗ್ರಾಮಗಳಲ್ಲೇ ಉಳಿಯುವ ಮಹಿಳಾ ಕಾರ್ಮಿಕರ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತದೆ, ನೂತನ ಕಾಯ್ದೆಯ ಅನುಸಾರ ಗ್ರಾಮಗಳಲ್ಲಿ ಕೇಂದ್ರ ಸರ್ಕಾರ ಉದ್ಯೋಗಗಳನ್ನು ಸೃಷ್ಟಿಸದೆ ಹೋದರೆ ಅಥವಾ ಹಣಕಾಸು ಕೊರತೆಯಿಂದ ರಾಜ್ಯ ಸರ್ಕಾರಗಳು ಹಿಮ್ಮೆಟ್ಟಿದರೆ, ಮಹಿಳೆಯರು ಪುನಃ ಆದಾಯವಿಲ್ಲದ ಗೃಹ ಕೃತ್ಯಗಳಿಗೆ ಅಥವಾ ಕೃಷಿ ಚಟುವಟಿಕೆಗಳಿಗೆ ಸೀಮಿತವಾಗುತ್ತಾರೆ. ಮಹಿಳಾ ಸಬಲೀಕರಣದ ಒಂದು ಆರ್ಥಿಕ ಆಯಾಮವನ್ನು ಜಿ ರಾಮ್ ಜಿ ಕಾಯ್ದೆ ಇಲ್ಲವಾಗಿಸುತ್ತದೆ.

ಭಾರತದ ಸಂವಿಧಾನದಲ್ಲಿ ಉದ್ಯೋಗದ ಹಕ್ಕು ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿಲ್ಲ. ಬದಲಾಗಿ ಸಂವಿಧಾನದ ನಿರ್ದೇಶಕ ತತ್ವಗಳಲ್ಲಿ ಅಳವಡಿಸಲಾಗಿದೆ. ಹಾಗಾಗಿ ಈ ಹಕ್ಕನ್ನು ಕಾನೂನಾತ್ಮಕವಾಗಿ ನ್ಯಾಯಾಲಯಗಳ ಮೂಲಕ ಪಡೆದುಕೊಳ್ಳಲಾಗುವುದಿಲ್ಲ. ಚುನಾಯಿತ ಸರ್ಕಾರಗಳ ಆರ್ಥಿಕ ನೀತಿ ಮತ್ತು ಅದರನ್ವಯ ಅಳವಡಿಸಲಾಗುವ ಕಲ್ಯಾಣ ಯೋಜನೆಗಳ ಅನುಸಾರ ಉದ್ಯೋಗದ ಹಕ್ಕು ಭಿನ್ನವಾಗಿ ನಿರ್ವಚನೆಗೊಳಗಾಗುತ್ತದೆ. ಸಂವಿಧಾನದ ಅನುಚ್ಛೇದ 41ರಲ್ಲಿ ಉದ್ಯೋಗದ ಹಕ್ಕು ಪ್ರಸ್ತಾಪವಾಗಿದ್ದರೂ, ಇದರನ್ವಯ ಪ್ರಭುತ್ವ/ಸರ್ಕಾರಗಳು ಶಿಕ್ಷಣ, ಉದ್ಯೋಗ ಮತ್ತು ವೃದ್ಧಾಪ್ಯ ನಿರುದ್ಯೋಗ ಮತ್ತು ವಿಕಲಾಂಗತೆಯ ಸಂದರ್ಭಗಳಲ್ಲಿ ಸಾರ್ವಜನಿಕ ನೆರವಿನ ನಿಯಮಗಳನ್ನು ರೂಪಿಸಬಹುದು ಎಂದಿದೆ. ಆದರೆ ಇದಾವುದೂ ಪ್ರಜೆಗಳ ಸಂಪೂರ್ಣ ಹಕ್ಕು (Absolute Right ) ಎಂದು ನಿರ್ವಚಿಸಲಾಗಿಲ್ಲ. ಭಾರತ ವಿಕಸಿತವಾಗುವತ್ತ ಧಾವಿಸುತ್ತಿರುವ ಹಾದಿಯಲ್ಲಿ, ಕಲ್ಯಾಣ ಆರ್ಥಿಕತೆ (Welfare Economy) ಕೇವಲ ಚುನಾವಣಾ ಕೇಂದ್ರಿತವಾಗುವುದರಿಂದ, ನವ ಉದಾರವಾದಿ, ಕಾರ್ಪೋರೇಟ್ ಬಂಡವಾಳಶಾಹಿ ಆರ್ಥಿಕತೆಯು ದೇಶದ ಅರ್ಥವ್ಯವಸ್ಥೆಯನ್ನು ನಿರ್ದೇಶಿಸುವ ಪ್ರಧಾನ ತತ್ವವಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.

ಈ ದೃಷ್ಟಿಯಿಂದ MNREGA ಕಾಯ್ದೆಯು ಇತಿಹಾಸದ ಪುಟಗಳನ್ನು ಸೇರಿರುವುದನ್ನು, G Ram G ಕಾಯ್ದೆ ಶಾಸನಬದ್ಧವಾಗಿ ಜಾರಿಯಾಗಿರುವುದನ್ನು ಬದಲಾಗುತ್ತಿರುವ ಭಾರತದ ಲಕ್ಷಣ ಎಂದು ಪರಿಗಣಿಸಬಹುದು. ಈ ಹೊಸ ಉದ್ಯೋಗ ನೀತಿಯಲ್ಲಿ ಗ್ರಾಮೀಣ ಉದ್ಯೋಗ ಎಂಬ ಕಲ್ಪನೆ ಮರೀಚಿಕೆಯಾಗಿದ್ದು, ಮಹಾತ್ಮಗಾಂಧಿಯ ಔದಾತ್ಯವೂ ಇಲ್ಲದ ರಾಮನ ಔದಾರ್ಯವೂ ಇಲ್ಲದ ಒಂದು ಮಾರುಕಟ್ಟೆ ತಂತ್ರವಾಗಿ ಕಾಣುತ್ತದೆ. ಈ ಪರಿವರ್ತನೆಯ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಗಾಂಧಿಯ ಹೆಸರನ್ನು ಅಳಿಸಿಹಾಕುವುದರೊಂದಿಗೇ ಗ್ರಾಮ ಭಾರತದ ದುಡಿಯುವ ವರ್ಗಗಳಿಗೆ ಉದ್ಯೋಗಾವಕಾಶಗಳನ್ನೂ ಬಹುಮಟ್ಟಿಗೆ ಅಳಿಸಿಹಾಕಿದೆ. ಈ ಹೊಸ ಕಾಯ್ದೆಯ ವಿರುದ್ಧ ಅಸಂಘಟಿತ ವಲಯದ ಕಾರ್ಮಿಕರ ಹೋರಾಟಕ್ಕೆ ಚಾಲನೆ ದೊರೆತಿರುವುದು ಸ್ವಾಗತಾರ್ಹ.

ಈ ಜನಾಂದೋಲನಕ್ಕೆ ಎಡಪಕ್ಷಗಳು, ಮಹಿಳಾ ಸಂಘಟನೆಗಳು, ರೈತ-ಕಾರ್ಮಿಕ -ದಲಿತ ಸಂಘಟನೆಗಳು ಹಾಗೂ ಎಲ್ಲ ಪುರೋಗಾಮಿ ಮನಸ್ಸುಗಳು ಸ್ಪಂದಿಸುವುದು ಕಾಲದ ಅನಿವಾರ್ಯವಾಗಿದೆ. ನವ ಉದಾರವಾದದ ವಿರುದ್ಧ ಸೊಲ್ಲೆತ್ತದ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ಮುಂದಿನ ಹೆಜ್ಜೆಯನ್ನು ನಿರೀಕ್ಷಿಸಬಹುದು. ಆದರೆ ಶ್ರಮಜೀವಿಗಳ ಹಿತಾಸಕ್ತಿಯನ್ನು ಪ್ರತಿನಿಧಿಸುವ ಮತ್ತು ಹಕ್ಕುಗಳನ್ನು ಸಂರಕ್ಷಿಸುವ ಜವಾಬ್ದಾರಿ ಹೊತ್ತಿರುವ ನಾಗರಿಕ ಜಗತ್ತು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗುವುದಿಲ್ಲ. ಕಾರ್ಮಿಕ ಕಾನೂನುಗಳನ್ನು ಸಂಹಿತೆಗಳನ್ನಾಗಿ ಪರಿವರ್ತಿಸಿ ನಗರಕೇಂದ್ರಿತ ಸಂಘಟಿತ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಿದ ನಂತರ ಈಗ ಗ್ರಾಮೀಣ ನೌಕರರ ಮೇಲೆ ಮಾರುಕಟ್ಟೆ ಆರ್ಥಿಕತೆಯ ದಾಳಿ ನಡೆದಿದೆ. ಇದನ್ನು ಎದುರಿಸಿ ಹೋರಾಡುವ ಹೊಣೆಗಾರಿಕೆ ಇಡೀ ಸಮಾಜದ ಮೇಲಿದೆ.
( ಈ ಲೇಖನದ ಮಾಹಿತಿ ದತ್ತಾಂಶಗಳನ್ನು, ನೂತನ ಕಾಯ್ದೆಯ ಮಾಹಿತಿಯನ್ನು Rediff ಬ್ಲಾಗ್‌ನಲ್ಲಿ ನಿಖಿಲ್ ಡೇ ಅವರ ಸಂದರ್ಶನದಿಂದ, ದ ಹಿಂದೂ ಪತ್ರಿಕೆಯ Death knell for the rural job scheme-Rajendra Narayan , Why does Govt wants to replace MNREGA –Shobhana K Nair ಮತ್ತು The deliberate unmasking of Indiaʼs right to work –Zoya Hasan ಈ ಲೇಖನಗಳಿಂದ ಸಂಗ್ರಹಿಸಲಾಗಿದೆ.












