ಬೆಂಗಳೂರು : ಬಾಂಗ್ಲಾ ದೇಶದಲ್ಲಿ(Bangladesh) ಹಿಂದೂ ಯುವಕನ ಹತ್ಯೆಯ ಕುರಿತು ಭಾರತದಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ಇದೀಗ ಕೆಲ ನಟಿಯರು ಹಿಂದೂ ವಿರೋಧಿ ಮನಸ್ಥಿತಿಯ ಬಾಂಗ್ಲಾ ವಿರುದ್ಧ ಸಿಡಿದೆದ್ದಿದ್ದಾರೆ. ಸಮಾನತೆಯಿಂದ ಬಾಳುವುದನ್ನು ಬಿಟ್ಟು ಹಿಂದೂಗಳನ್ನು ಗುರಿಯಾಗಿಸಿ ನಡೆಯುತ್ತಿರುವ ಈ ರೀತಿಯ ಅಮಾನವೀಯ ಘಟನೆಗಳು ನಿಲ್ಲಲಿ ಎಂದು ಒತ್ತಾಯಿಸಿದ್ದಾರೆ.

ಹಿಂದೂ ಯುವಕ ದೀಪು ದಾಸ್ ಹತ್ಯೆ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಹಿಂದೂ ಎನ್ನುವ ಕಾರಣಕ್ಕೆ ದೀಪು ದಾಸ್ ಹತ್ಯೆಯನ್ನು ಖಂಡಿಸಿರುವ ನಟಿ ಜಾಹ್ನವಿ ಕಪೂರ್(Jhanvi kapoor), ಬಾಂಗ್ಲಾದೇಶದಲ್ಲಿ ಹಿಂದೈಗಳ ಮೇಲೆ ಮುಂದುವರೆಯುತ್ತಿರುವ ಹಿಂಸಾಚಾರದ ಬಗ್ಗೆ ಮೌನ ವಹಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ದೀಪು ದಾಸ್ ಹತ್ಯೆಯ ಕುರಿತು ಪೋಸ್ಟ್ ಹಂಚಿಕೊಳ್ಳುವ ಮೂಲಕ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವುದು ಅನಾಗರಿಕ. ಇದು ಕೇವಲ ಒಂದು ಘಟನೆಯಲ್ಲ, ಇದೊಂದು ಹತ್ಯಾಕಾಂಡ. ದೀಪು ದಾಸನ ಅಮಾನವೀಯ ಗುಂಪಿನಲ್ಲಿ ಹತ್ಯೆ ಮಾಡಿರುವುದು ನಿಮಗೆ ತಿಳಿದಿಲ್ಲದಿದ್ದರೆ, ಅದರ ಬಗ್ಗೆ ಓದಿ, ವೀಡಿಯೊಗಳನ್ನು ನೋಡಿ, ಪ್ರಶ್ನೆಗಳನ್ನು ಕೇಳಿ ಎಂದು ಬಾಂಗ್ಲಾ ವಿರುದ್ಧ ಕೆಂಡವಾಗಿದ್ದಾರೆ.

ಇಷ್ಟೆಲ್ಲಾ ನಡೆಯುತ್ತಿದ್ದರೂ ನಮಗೆ ಕೋಪ ಬರದಿದ್ದರೆ, ನಮಗೆ ತಿಳಿಯುವ ಮುನ್ನವೇ ನಮ್ಮನ್ನು ನಾವೇ ನಾಶ ಮಾಡಿಕೊಂಡ ಬೂಟಾಟಿಕೆ ಎಂದು ಜರಿದಿದ್ದಾರೆ. ನಮ್ಮ ಸ್ವಂತ ಸಹೋದರ ಸಹೋದರಿಯರು ಸುಟ್ಟು ಕರಕಲಾಗುತ್ತಿದ್ದಾರೆ. ಹೀಗಿರುವಾಗ ನಾವು ಜಗತ್ತಿನ ಅರ್ಧದಷ್ಟು ವಿಷಯಗಳ ಬಗ್ಗೆ ಅಳುತ್ತಲೇ ಇರುತ್ತೇವೆ. ನಾವು ಸಂತ್ರಸ್ತರಾಗಲಿ ಅಥವಾ ಅಪರಾಧಿಗಳಾಗಲಿ, ಯಾವುದೇ ರೂಪದಲ್ಲಿ ಕೋಮು ತಾರತಮ್ಯ ಮತ್ತು ಉಗ್ರವಾದವನ್ನು ನಮ್ಮ ಮಾನವೀಯತೆಯನ್ನು ಮರೆಯುವ ಮೊದಲೇ ಧಿಕ್ಕರಿಸಬೇಕು ಎಂದು ಹೇಳಿದ್ದಾರೆ.

ನಾವು ಅದೃಶ್ಯ ರೇಖೆಯ ಎರಡೂ ಬದಿಗಳಲ್ಲಿ ವಾಸಿಸುತ್ತಿದ್ದೇವೆ ಎಂದು ನಂಬುವ ಮೂರ್ಖರಾಗಿದ್ದೇವೆ. ಇದನ್ನು ಗುರುತಿಸಿ. ಮತ್ತು ಈ ಕೋಮು ಘರ್ಷಣೆಯಲ್ಲಿ ನಿರಂತರವಾಗಿ ಕಳೆದುಹೋಗುವ ಮತ್ತು ಭಯಭೀತರಾಗುವ ಮುಗ್ಧ ಜೀವಗಳ ಪರವಾಗಿ ನಿಲ್ಲಲು ಜ್ಞಾನದಿಂದ ನಮ್ಮನ್ನು ನಾವು ಸಜ್ಜುಗೊಳಿಸಿಕೊಳ್ಳೋಣ ಎಂದು ಜಾಹ್ನವಿ ಹಿಂದೂ ಯುಕನ ಕೊಲೆಯ ವಿರುದ್ಧ ಧ್ವನಿ ಎತ್ತಿದ್ದಾರೆ.












