ಬೆಂಗಳೂರು: ದೇಶದಲ್ಲಿ ಹಣ ದುಬ್ಬರ ಗ್ರಾಹಕ ಬೆಲೆ ಸೂಚ್ಯಂಕ(Retail Inflation (CPI) ನವೆಂಬರ್ 2025ರಲ್ಲಿ ಶೇ. 0.7ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ದಾಖಲಾಗಿದ್ದ ಶೇ. 5.5ರ ಹೋಲಿಕೆಯಲ್ಲಿ ಅಧಿಕ ಕುಸಿತ ಕಂಡಿದೆ. ಆಹಾರ ವಸ್ತುಗಳ ಬೆಲೆಗಳ ತೀವ್ರ ಇಳಿಕೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗುತ್ತಿದೆ.

ಬ್ಯಾಂಕ್ ಆಫ್ ಬರೋಡಾದ ಒಂದು ಅಂದಾಜಿನ ಪ್ರಕಾರ, 2026ರ ಮೂರನೇ ತಿಂಗಳಲ್ಲಿ ಹಣ ದುಬ್ಬರ ಶೇ 0.4 ಇರಲಿದೆ. ಇದು ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿಧಿಸಿದ್ದ 0.6 ಅಂದಾಜಿಗಿಂತ ಕಡಿಮೆಯಾಗಿದೆ.
ಆಹಾರ ಪದಾರ್ಥಗಳ ಬೆಲೆ ಇಳಿಕೆ
ಕಳೆದ ನವೆಂಬರ್‌ನಲ್ಲಿ ಆಹಾರ ಪದಾರ್ಥಗಳ ಬೆಲೆಯಲ್ಲಿ ಶೇ. 3.9 ವರ್ಷದ ಆಧಾರದಲ್ಲಿ ದಾಖಲಾಗಿದ್ದು, ಇದು ನೇರ ಬೆಲೆ ಕುಸಿತವನ್ನು ತಿಳಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಬೆಲೆಗಳ ಏರಿಳಿತ ಶೇ. 4.05, ನಗರ ಪ್ರದೇಶಗಳಲ್ಲಿ ಶೇ. 3.60 ಆಗಿದೆ. ತರಕಾರಿ ಮತ್ತು ಧಾನ್ಯ ಬೆಲೆಗಳು ಇಳಿಕೆಯಾಗಿದ್ದರೂ, ಟೊಮ್ಯಾಟೊ ಬೆಲೆ ಮಾತ್ರ ಕಳೆದ ವರ್ಷಕ್ಕಿಂತ ಶೇ. 5.5% ಹೆಚ್ಚಾಗಿವೆ ಎಂದು ಅಂಕಿ ಅಂಶಗಳು ತಿಳಿಸಿವೆ. ನವೆಂಬರ್ 2025ರಲ್ಲಿ ಆಹಾರ ಮತ್ತು ಪಾನೀಯಗಳ ವಿಭಾಗದಲ್ಲಿ ಬೆಲೆಗಳು ಶೇ. 2.8ರಷ್ಟು ಇಳಿಕೆ ಕಂಡಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಆಹಾರ ಹಣದುಬ್ಬರವು ಶೇ. 8.2ರಷ್ಟು ಇತ್ತು. ಅಂದರೆ ಅಧಿಕವಾಗಿತ್ತು.

ಆರ್‌ಬಿಐ ಬಡ್ಡಿದರ ಕಡಿತ
ಹಣ ದುಬ್ಬರದ ಹಿನ್ನೆಲೆಯಲ್ಲಿ, ಆರ್‌ಬಿಐನ ಹಣಕಾಸು ನೀತಿ ಸಮಿತಿ ಡಿಸೆಂಬರ್ 2025ರಲ್ಲಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ ಕಡಿತ ಮಾಡಿ ಶೇ. 5.25%ಕ್ಕೆ ಇಳಿಸಿದೆ. ಇದೇ ವೇಳೆ 26ರ ಆರ್ಥಿಕ ವರ್ಷದಲ್ಲಿ ಏರಿಳಿತದ ಅಂದಾಜನ್ನು ಶೇ. 2.6 ರಿಂದ ಶೇ.2ಕ್ಕೆ ಇಳಿಸಲಾಗಿದ್ದು, ಸುಧಾರಿತ ಆಹಾರ ಪೂರೈಕೆ ಮತ್ತು ಜಾಗತಿಕ ಮಟ್ಟದ ಒಳ್ಳೆಯ ವಾತಾವರಣವು ಇದಕ್ಕೆ ಕಾರಣವೆಂದು ಆರ್‌ಬಿಐ ಹೇಳಿದೆ. ಗಮನಾರ್ಹವಾಗಿ, ಆರ್‌ಬಿನ ಶೇ. 2ರಷ್ಟು ಕನಿಷ್ಠ ಮಿತಿಗಿಂತ ನಿರಂತರ ಮೂರು ತಿಂಗಳುಗಳ ಕಾಲ ಮುಂದುವರೆದಿದೆ.

ಅಲ್ಲದೇ ಡಿಸೆಂಬರ್‌ನಲ್ಲಿ ಖಾಸಗಿ ವಲಯದ ಬೆಳವಣಿಗೆ 10 ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದರ ಪರಿಣಾಮ ಉದ್ಯೋಗ ನೇಮಕಾತಿ ಬಹುತೇಕ ಸ್ಥಗಿತಗೊಂಡಿದೆ. ಆರ್ಥಿಕ ಚಟುವಟಿಕೆಗಳು ಕ್ಷೀಣಿಸುತ್ತಿವೆ, ಹಣ ದುಬ್ಬರದ ಒತ್ತಡ ಕಡಿಮೆಯಾಗುತ್ತಿದೆ.

ಹಣ ದುಬ್ಬರ ಗ್ರಾಹಕ ಸೂಚ್ಯಂಕದ ಕಡಿಮೆಯಾದ ಪರಿಣಾಮ ಆಹಾರ ಬೆಲೆಗಳಲ್ಲಿ ಇಳಿಕೆಯಾಗಿ ಮನೆಮಂದಿಯ ಖರ್ಚು, ಒತ್ತಡ ತಗ್ಗಿದೆ. ಬಡ್ಡಿದರ ಕಡಿತದಿಂದ ಸಾಲದ ವೆಚ್ಚ ಇಳಿದು, ಹೂಡಿಕೆ ಮತ್ತು ಉದ್ಯಮ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಮುಖ್ಯವಾಗಿ ಕಡಿಮೆ ಹಣ ದುಬ್ಬರದ ಈ ಹಂತದಲ್ಲಿ, ಬೆಲೆ ನಿಯಂತ್ರಣಕ್ಕಿಂತ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವತ್ತ ಆರ್‌ಬಿಐಗೆ ಹೆಚ್ಚಿನ ಸ್ವಾತಂತ್ರ್ಯ ದೊರೆತಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.











