ಬೆಳಗಾವಿ: ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ, ಗೃಹಲಕ್ಷ್ಮಿ ಯೋಜನೆ(Gruhalakshmi Scheme) ಈ ಬಾರಿಯ ಬೆಳಗಾವಿ ಅಧಿವೇಶನದ ಕಾವು ಹೆಚ್ಚಿಸಿದೆ.

ಗೃಹಲಕ್ಷ್ಮಿ ಯೋಜನೆ ಹಣ ಮನೆಯ ಯಜಮಾನಿಗೆ ತಲುಪದಿರುವ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar ) ವಿಷಾದ ವ್ಯಕ್ತಪಡಿಸಿದ್ದಾರೆ. ಅಧಿವೇಶನದಲ್ಲಿ ಈ ಹಿಂದೆ ತಪ್ಪು ಮಾಹಿತಿ ನೀಡಿ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ಹಣ ಪಾವತಿಯಲ್ಲಿ ವಿಳಂಬವಾಗಿರುವುದನ್ನು ಒಪ್ಪಿಕೊಂಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳಿಗೆ ಇನ್ನೂ 2 ತಿಂಗಳ ಹಣ ನೀಡುವುದು ಬಾಕಿ ಇದೆ. ನನ್ನ ಮಾಹಿತಿ ಪ್ರಕಾರ ಕೊಟ್ಟಿದ್ದೇವೆ ಅಂತ ಇತ್ತು. ಆದರೆ 2 ತಿಂಗಳ ಹಣ ನೀಡಿಲ್ಲ. ನನಗೆ ಜವಾಬ್ದಾರಿಯ ಅರಿವಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ. ನಾನು ವಿಪಕ್ಷ ನಾಯಕರಿಗೂ ಮನವಿ ಮಾಡುತ್ತೇನೆ. ಗೃಹಲಕ್ಷ್ಮಿ ಯೋಜನೆಯ ಹಣ ಬಹುತೇಕ ತಲುಪಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಸದನದಲ್ಲಿ ಮಾತು ಮುಂದುವರಿಸಿದ ಅವರು, ತಪ್ಪು ಮಾಹಿತಿ ನೀಡಿ ಸದನವನ್ನು ದಾರಿ ತಪ್ಪಿಸುವ ಕೆಲಸ ಮಾಡುವುದಿಲ್ಲ. ಈ ಬಗ್ಗೆ ಆರ್ಥಿಕ ಇಲಾಖೆ ಜೊತೆ ಮಾತನ್ನಾಡುತ್ತೇನೆ. ಮಹಿಳೆಯರಿಗೆ ಬಾಕಿ ಇರುವ ಹಣವನ್ನು ಖಾತೆಗೆ ಜಮಾ ಮಾಡುವಂತೆ ಹೇಳುತ್ತೇನೆ. ಹಾಗಂತ ಯೋಜನೆಯಲ್ಲಿ ಅಕ್ರಮ ನಡೆದಿದೆ. ಹಣ ಬೇರೆ ಕಡೆ ಹೋಗಿದೆ ಅಂತಲ್ಲ. ಇನ್ನೂ ಎರಡು ತಿಂಗಳು ಹಣ ಮಹಿಳೆಯರ ಖಾತೆಗೆ ಹೋಗಿಲ್ಲ ಅಷ್ಟೇ ಎಂದು ಸದನದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿವರಿಸಿದರು. ಈ ವೇಳೆ ವಿಪಕ್ಷ ಸದಸ್ಯರು ಸಚಿವರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಸದನದಲ್ಲಿ ಚರ್ಚೆ ಮುಂದುವರಿದಿದೆ.












