ಅಮೆರಿಕ ಸರ್ಕಾರವು ಹೊಸ H-1B ವೀಸಾಗೆ $100,000 (ಸುಮಾರು ₹83 ಲಕ್ಷ) ಶುಲ್ಕ ವಿಧಿಸುವ ನಿರ್ಧಾರ ತೆಗೆದುಕೊಂಡಿದೆ. ಈ ನಿಯಮದಿಂದ ಟಾಟಾ (TCS), ಇನ್ಫೋಸಿಸ್(Infosis), ಕಾಗ್ನಿಜೆಂಟ್ (Cognigent) ಮುಂತಾದ ಭಾರತೀಯ ಐಟಿ ಕಂಪನಿಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಏಕೆಂದರೆ ಈ ಕಂಪನಿಗಳ ಹೆಚ್ಚಿನ ಉದ್ಯೋಗಿಗಳು ಭಾರತದಿಂದಲೇ ಅಮೆರಿಕಕ್ಕೆ ಹೋಗುತ್ತಾರೆ. ಹೊಸ ಶುಲ್ಕದಿಂದ ಕಂಪನಿಗಳ ವೆಚ್ಚ ತುಂಬಾ ದುಬಾರಿಯಾಗುತ್ತದೆ.

2020ರಿಂದ 2024ರ ನಡುವೆ ಟಾಟಾ(Tata), ಇನ್ಫೋಸಿಸ್ ಮತ್ತು ಕಾಗ್ನಿಜೆಂಟ್ ಸಂಸ್ಥೆಗಳ(Infosis and Cognigent) ಬಹುತೇಕ ಹೊಸ H-1B ಉದ್ಯೋಗಿಗಳು ಅಮೇರಿಕದ ಹೊರಗಿನಿಂದಲೇ ವೀಸಾ ಪಡೆದಿದ್ದರು. ಹೊಸ ನಿಯಮದ ಪ್ರಕಾರ, ಇಂತಹ ವೀಸಾಗಳಿಗೆ $100,000 ಶುಲ್ಕ ಅನ್ವಯವಾಗುತ್ತದೆ. ಇದು ಭಾರತೀಯ ಐಟಿ ಕಂಪನಿಗಳ ಆರ್ಥಿಕ ಹೊರೆಯನ್ನು ಇನ್ನಷ್ಟು ಹೆಚ್ಚಿಸಲಿದೆ.

ಇನ್ಫೋಸಿಸ್ ಸಂಸ್ಥೆಯ ಸುಮಾರು 93% ಹೊಸ ನೇಮಕಾತಿಗಳು ಈ ನಿಯಮದ ಪರಿಣಾಮಕ್ಕೆ ಒಳಗಾಗುವ ಸಾಧ್ಯತೆ ಇದೆ. ಇದರಿಂದ ಕಂಪನಿಗೆ $1 ಬಿಲಿಯನ್‌ಗಿಂತ ಹೆಚ್ಚು ವೆಚ್ಚ ಆಗಬಹುದು. ಟಾಟಾ ಸಂಸ್ಥೆಯ ಸುಮಾರು 82% ಹೊಸ ನೇಮಕಾತಿಗಳು ಈ ನಿಯಮದ ಪರಿಣಾಮಕ್ಕೆ ಒಳಗಾಗುತ್ತವೆ ಹಾಗೂ ಕಾಗ್ನಿಜೆಂಟ್ ಸುಮಾರು 89% ಉದ್ಯೋಗಿಗಳು ಈ ಹೆಚ್ಚುವರಿ ಶುಲ್ಕಕ್ಕೆ ಒಳಗಾಗುವ ಸಾಧ್ಯತೆ ಇದೆ.

ಅಮೆರಿಕ ಸರ್ಕಾರದ ಈ ನಿಯಮವು ಭಾರತೀಯ ಐಟಿ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದ್ದು, ಸಂಸ್ಥೆಗಳು ಆರ್ಥಿಕ ಹೊರೆಯಿಂದ ಪಾರಾಗಲು ಈಗ ಅಮೆರಿಕದಲ್ಲೇ ಸ್ಥಳೀಯ ನೇಮಕಾತಿ ಅಥವಾ ಆಫ್‌ಶೋರಿಂಗ್ (ಭಾರತದಲ್ಲೇ ಕೆಲಸ ಮಾಡಿಸುವುದು) ಕಡೆ ಹೆಚ್ಚು ಗಮನ ಹರಿಸುವ ಸಾಧ್ಯತೆ ಇದೆ. ಇದರಿಂದ ಹೊಸ H-1B ವೀಸಾ ಅರ್ಜಿಗಳ ಸಂಖ್ಯೆ ಕೂಡ ಕಡಿಮೆಯಾಗಬಹುದಾಗಿದೆ.

ಇನ್ನು H-1B ವೀಸಾ ಶುಲ್ಕ ಈಗಾಗಲೇ ಅಮೆರಿಕದಲ್ಲಿರುವ H-1B ವೀಸಾ ಇರುವವರಿಗೆ ಅನ್ವಯಿಸುವುದಿಲ್ಲ. ಈ ನಿಯಮವನ್ನು ಪ್ರಶ್ನಿಸಿ ಅಮೆರಿಕದ ಹಲವು ಉದ್ಯಮ ಸಂಸ್ಥೆಗಳು ಕೋರ್ಟ್ ಮೆಟ್ಟಿಲೇರಿವೆ, ಏಕೆಂದರೆ ಇಂತಹ ದೊಡ್ಡ ಶುಲ್ಕವು ಭಾರತೀಯ ಐಟಿ ಕ್ಷೇತ್ರದ ಮೇಲೆ ಮಾತ್ರವಲ್ಲದೇ ಅಮೆರಿಕ ಸಂಸ್ಥೆಗಳ ಮೇಲೂ ಪರಿಣಾಮ ಬೀರಲಿದೆ.

H-1B ವೀಸಾ ಎಂದರೇನು..?
H-1B ಎನ್ನುವುದು ಅಮೆರಿಕದಲ್ಲಿ ಕೆಲಸ ಮಾಡಲು ವಿದೇಶಿ ವ್ಯಕ್ತಿಗಳಿಗೆ ನೀಡುವ ಕೆಲಸದ ವೀಸಾವಾಗಿದ್ದು, ಇದು ಐಟಿ(IT-BT), ಸಾಫ್ಟ್‌ವೇರ್(Software), ಎಂಜಿನಿಯರಿಂಗ್(Engineering), ವೈದ್ಯಕೀಯ(Medical), ಡೇಟಾ ಸೈನ್ಸ್ (Data Science) ಮುಂತಾದ ವೃತ್ತಿಗಳಿಗೆ ನೀಡಲಾಗುತ್ತದೆ. ಈ ವೀಸಾವನ್ನು ಅಮೆರಿಕದ ಕಂಪನಿಯೇ ಉದ್ಯೋಗಿಗಾಗಿ ಅರ್ಜಿ ಹಾಕಬೇಕು. ಸಾಮಾನ್ಯವಾಗಿ ಇದು 3 ವರ್ಷಗಳ ಕಾಲ ಮಾನ್ಯತೆ ಇರುತ್ತದೆ. ನಂತರ ಮತ್ತೆ 3 ವರ್ಷ ವಿಸ್ತರಿಸಬಹುದು. ಅಮೆರಿಕದಲ್ಲಿ ಕೆಲಸ ಮಾಡಲು ಬಯಸುವ ವಿದೇಶಿಗರಿಗೆ ಇದು ಉಪಯೋಗವಾಗುತ್ತದೆ. ವಿಶೇಷವಾಗಿ ಭಾರತೀಯ ಐಟಿ ವೃತ್ತಿಪರರು ಈ ವೀಸಾವನ್ನು ಹೆಚ್ಚು ಬಳಸುತ್ತಾರೆ










