ಬೆಂಗಳೂರು: ದಾವಣಗೆರೆ ಸಾಹುಕರ್ ಎಂದೇ ಖ್ಯಾತರಾಗಿದ್ದ ಶಾಮನೂರು ಶಿವಶಂಕರಪ್ಪ ಇಂದು ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ರಾಜಕೀಯ ಮುತ್ಸದಿಯಾಗಿದ್ದ ಶಾಮನೂರು ಶಿವಶಂಕರಪ್ಪ ಇಳಿವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿ ದಾವಣಗೆರೆ ಜಿಲ್ಲೆಯನ್ನ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು.
ಬದುಕು..
ಶಿವಶಂಕರಪ್ಪ ಶಾಮನೂರು ಕಲ್ಲಪ್ಪ-ಸಾವಿತ್ರಮ್ಮ ದಂಪತಿ ಪುತ್ರರಾಗಿ 1931ರ ಜೂನ್ 16ರಂದು ಜನಿಸಿದರು. ತಂದೆಯ ‘ಶಾಮನೂರು ಕಲ್ಲಪ್ಪ ಅಂಡ್ ಸನ್ಸ್’ ಅಂಗಡಿಯಲ್ಲಿ ಅಕ್ಕಿ ವ್ಯಾಪಾರ, ಉದ್ಯಮಿಯಾಗಿ ಬೆಳೆದವರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಪಡೆದಿದ್ದ ಶಿವಶಂಕರಪ್ಪ, DRM ಸೈನ್ಸ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದಿದ್ದರು.
1954ರಲ್ಲಿ ಚನ್ನಗಿರಿ ತಾಲ್ಲೂಕಿನ ವಡ್ನಾಳ್ ಗ್ರಾಮದ ಪಾರ್ವತಮ್ಮ ಅವರೊಂದಿಗೆ ವಿವಾಹವಾಗಿದ್ದ ಶಿವಶಂಕರಪ್ಪಗೆ ಗಣಿ ಮತ್ತು ಭೂವಿಜ್ಞಾನ ಸಚಿವ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಎಸ್.ಎಸ್ ಬಕ್ಕೇಶ್, ಎಸ್.ಎಸ್ ಗಣೇಶ್, ಡಾ.ಮಂಜುಳಾ ಶಿವಶಂಕರ್, ಸುಧಾ ಪಾಟೀಲ್, ಡಾ.ಶೈಲಜಾ ಭಟ್ಟಾಚಾರ್ಯ, ಮೀನಾ ಡಾ.ಶರಣ್ ಪಾಟೀಲ್
ಸೇರಿ ಅಪಾರ ಬಂಧು ಬಳಗವನ್ನಗಲಿದ್ದಾರೆ.
ರಾಜಕೀಯ…
1969ರಲ್ಲಿ ನಗರಸಭೆ ಮೂಲಕ ರಾಜಕೀಯ ಪ್ರವೇಶಿಸಿದ ಶಿವಶಂಕರಪ್ಪ ಇಲ್ಲೇ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. 1971 ರಲ್ಲಿ ನಗರಸಭಾ ಸದಸ್ಯರಾಗಿ ಪುನರಾಯ್ಕೆಯಾಗಿದರು. 1972ರಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ, 1971ರಿಂದ 73ರವರೆಗೆ ದಾವಣಗೆರೆ ನಗರಸಭೆ ಅಧ್ಯಕ್ಷರಾಗಿ, 1978-80 ಕಾಂಗ್ರೆಸ್ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.
1994ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿ ಆಯ್ಕೆಯಾದರು. ಆಗ ಅವರಿಗೆ 63 ವರ್ಷ ವಯಸ್ಸಾಗಿತ್ತು. ಬಳಿಕ 1998-99 ದಾವಣಗೆರೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. 1999 ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಮತ್ತೆ ವಿಧಾನಸಭೆ ಪ್ರವೇಶಿದರು. 2003 ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗದರು.
ಬಳಿಕ 2008, 2013 ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ತೋಟಗಾರಿಕೆ, ಎಪಿಎಂಸಿ ಸಚಿವರಾಗಿದ್ದರು.
ಮತ್ತೆ 2018, 2023ರಲ್ಲಿ ಅದೇ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ದಶಕಗಳ ಕಾಲ ರಾಜ್ಯ ಕಾಂಗ್ರೆಸ್ ಸಮಿತಿಯ ಖಜಾಂಚಿಯಾಗಿ ಸೇವೆ ಸಲ್ಲಿಸಿದ ಶಿವಶಂಕರಪ್ಪ, ಕಾಂಗ್ರೆಸ್ ಕಟ್ಟಾಳು.
ಇನ್ನು ಸಮಾಜದ ವೀರಶೈವ ಲಿಂಗಾಯತ ಸಮಾಜದ ಹಿರಿಯ ನಾಯಕರಾಗಿದ್ದ ಶಿವಶಂಕರಪ್ಪ, ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿದ್ದರು.
ಶಿವಶಂಕರಪ್ಪ ರಾಜಕೀಯ ಹೊರತಾಗಿ ದಾವಣಗೆರೆಯ ಅಂಗವಿಕಲರ ಆಶಕಿರಣ ಟ್ರಸ್ಟ್,
ದಾವಣಗೆರೆ ಕ್ರಿಕೆಟ್ ಕ್ಲಬ್ ಮತ್ತು ದಾವಣಗೆರೆ ಸ್ಪೋರ್ಟ್ಸ್ ಕ್ಲಬ್‍ನ ಅಧ್ಯಕ್ಷ, ಅಖಿಲ ಭಾರತ ವೀರಶಿವ ಮಹಾಸಭೆಯ ಅಧ್ಯಕ್ಷ, ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಮತ್ತು ಹಲವಾರು ವೃತ್ತಿಪರ ಶಿಕ್ಷಣ ಸಂಸ್ಥೆ ಹಾಗೂ ಬಾಪುಜಿ ಎಂಜಿನಿಯರಿಂಗ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದರು.











