
“ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸುವ ಅಗತ್ಯವಿರಲಿಲ್ಲ. ನಮಗೆ ಕಿರುಕುಳ ನೀಡಲು ಈ ಸಮನ್ಸ್ ನೀಡಲಾಗಿದೆ. ಇದು ಸರಿಯಲ್ಲ, ನಾನು ಖಂಡಿಸುತ್ತೇನೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಹಾಗೂ ಹಾಸನದಲ್ಲಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳ ವಿಭಾಗದ ದೆಹಲಿ ಪೊಲೀಸರು ಸಮನ್ಸ್ ನೀಡಿರುವ ಬಗ್ಗೆ ಕೇಳಿದಾಗ, “ಇದು ನಮಗೆ ಆಘಾತ ತಂದಿದೆ. ನನಗೆ ಹಾಗೂ ಸಹೋದರ ಸುರೇಶ್ ಅವರಿಗೆ ನೋಟೀಸ್ ನೀಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈ ಹಿಂದೆ ಇಡಿ ನಮಗೆ ಸಮನ್ಸ್ ನೀಡಿತ್ತು. ನಾವು ಮೊದಲಿನಿಂದಲೂ ಇಡಿ ತನಿಖೆಗೆ ಸಹಕಾರ ನೀಡಿ ಎಲ್ಲಾ ದಾಖಲೆಗಳನ್ನು ಒದಗಿಸಿದ್ದೇವೆ. ಇದು ನಮ್ಮ ಪಕ್ಷದ ಸಂಸ್ಥೆ, ಕಾಂಗ್ರೆಸಿಗರಾಗಿ ಆ ಸಂಸ್ಥೆಗೆ ಬೆಂಬಲ ನೀಡಲು ದೇಣಿಗೆ ನೀಡುವುದರಲ್ಲಿ ತಪ್ಪಿಲ್ಲ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಈ ಸಂಸ್ಥೆ ಕಷ್ಟಕಾಲದಲ್ಲಿದ್ದಾಗ ನಮ್ಮ ಟ್ರಸ್ಟ್ ಗಳಿಂದ ನೆರವು ನೀಡಿದ್ದು, ನನ್ನಂತೆ ಅನೇಕರು ದೇಣಿಗೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಇಡಿ ಚಾರ್ಜ್ ಶೀಟ್ ಹಾಕಿದ್ದು, ಅದರಲ್ಲಿ ನಮ್ಮ ಹೆಸರನ್ನು ಸೇರಿಸಿರಲಿಲ್ಲ. ನಮ್ಮ ಬಳಿ ಹೇಳಿಕೆ ಪಡೆದು, ಬಿಟ್ಟಿದ್ದರು. ಹೀಗಿರುವಾಗ ದೆಹಲಿ ಪೊಲೀಸರು ಪ್ರಕರಣ ದಾಖಲಿಸುವ ಅಗತ್ಯ ಇರಲಿಲ್ಲ. ನಮ್ಮ ಎಲ್ಲಾ ವ್ಯವಹಾರ ಪಾರದರ್ಶಕವಾಗಿದೆ. ನಾವು ನ್ಯಾಯಲಯದಲ್ಲಿ ಹೋರಾಟ ಮುಂದುವರೆಸುತ್ತೇವೆ. ನಾವು ಸರಿಯಾಗಿ ತೆರಿಗೆ ಕಟ್ಟಿದ್ದು, ನಮ್ಮ ಹಣವನ್ನು ನಾವು ಇಷ್ಟಪಡುವ ಯಾರಿಗೆ ಬೇಕಾದರೂ ನೀಡಬಹುದು” ಎಂದರು.

ನನ್ನ ವಿರುದ್ಧ ಪಿಎಎಲ್ಎ ಪ್ರಕರಣ ದಾಖಲಿಸಿ, ಆರೋಪ ಪಟ್ಟಿ ಸಲ್ಲಿಸಿದ್ದರು. ಇಷ್ಟಾದ ಮೇಲೂ ಯಾವ ಕಾರಣಕ್ಕೆ ಸಮನ್ಸ್ ನೀಡಿದ್ದಾರೆ? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೆಂಬಲಿಗರಿಗೆ ಕಿರುಕುಳ ನೀಡುವುದು, ಗೊಂದಲ ಮೂಡಿಸುವುದು ಇದರ ಉದ್ದೇಶ ” ಎಂದು ತಿಳಿಸಿದರು.

ನನ್ನನ್ನು ಬೆದರಿಸುವ ಪ್ರಯತ್ನ ಮಾಡಿದರೆ, ನಾನು ಬಗ್ಗುವುದಿಲ್ಲ
“ನನಗೆ ಶುಕ್ರವಾರ ನೋಟೀಸ್ ಸಿಕ್ಕಿದ್ದು, ಇದನ್ನು ವಕೀಲರ ಜತೆ ಚರ್ಚೆ ಮಾಡುತ್ತೇನೆ. ನನ್ನ ಸಹೋದರ ಕೂಡ ಸಂಸದನಾಗಿದ್ದಾಗ ಈ ಸಂಸ್ಥೆಗೆ ದೇಣಿಗೆ ನೀಡಿದ್ದ. ದೆಹಲಿ ಪೊಲೀಸರು ಡಿ.19 ರ ಒಳಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ. ನಾನು ಸಮಯ ನೋಡಿಕೊಂಡು ಒಂದು ದಿನ ಹೋಗಿ, ಅವರ ನೋಟೀಸ್ ಗೆ ಯಾವ ರೀತಿ ಉತ್ತರ ನೀಡಬೇಕೋ ನೀಡುತ್ತೇನೆ. ಅವರು ನನ್ನನ್ನು ಬೆದರಿಸುವ ಪ್ರಯತ್ನ ಮಾಡಿದರೆ ನಾನು ಬಗ್ಗುವುದಿಲ್ಲ” ಎಂದು ಹೇಳಿದರು.





