ಹೈದರಾಬಾದ್: ತೆಲಂಗಾಣ (Telangana) ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ಹಿಂದೂ ದೇವತೆಗಳ ಬಗ್ಗೆ ನೀಡಿರುವ ಹೇಳಿಕೆ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಹಿಂದೂ ಸಂಪ್ರದಾಯಗಳನ್ನು ಅವಹೇಳನ ಮಾಡಲು ಹಾಗೂ ಭಕ್ತಾದಿಗಳನ್ನು ಅವಮಾನಿಸಬೇಕು ಎಂದು ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ(BJP) ಕಿಡಿಕಾರಿದೆ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ʼಹಿಂದೂಗಳು ಮೂರು ಕೋಟಿ ದೇವರುಗಳನ್ನು ನಂಬುತ್ತಾರೆ? ? ಇಷ್ಟೊಂದು ದೇವರುಗಳು ಯಾಕೆ ಬೇಕು? ಬ್ರಹ್ಮಚಾರಿಗಳಿಗೆ ಹನುಮಂತ ದೇವರಿದ್ದಾರೆ. ಎರಡು ಬಾರಿ ಮದುವೆಯಾಗುವವರಿಗೆ ಬೇರೆ ದೇವರು ಇರುತ್ತಾರೆ. ಕುಡಿಯುವವರಿಗೆ ಬೇರೆ ದೇವರು ಇರುತ್ತಾರೆ. ಕೋಳಿ ಬಲಿ ನೀಡುವವರಿಗೆ ಬೇರೆ ದೇವರು ಇರುತ್ತಾರೆ. ಬೇಳೆ ಮತ್ತು ಅನ್ನ ತಿನ್ನುವವರಿಗೆ ಬೇರೆ ದೇವರು ಇರುತ್ತಾರೆ. ಪ್ರತಿಯೊಂದು ಗುಂಪಿಗೂ ತನ್ನದೇ ಆದ ದೇವರು ಇರುತ್ತದೆʼ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ಎಲ್ಲೆಡೆ ವೈರಲ್ ಆದ ಬೆನ್ನಲ್ಲೇ ರೇವಂತ್ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಿಎಂ ಕ್ಷಮೆ ಕೇಳಬೇಕು ಎನ್ನುವ ಆಗ್ರಹ ಜೋರಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ʼರೇವಂತ್ ರೆಡ್ಡಿ ಅವರು ಸಾರ್ವಜನಿಕ ವೇದಿಕೆಯಲ್ಲಿ ಹಿಂದೂ ದೇವತೆಗಳನ್ನು ಅಗೌರವದಿಂದ ಅಪಹಾಸ್ಯ ಮಾಡಿರುವುದು, ಮತ ಬ್ಯಾಂಕ್ಗಳಿಗಾಗಿ ಕಾಂಗ್ರೆಸ್ಸಿನ ಅಜಾಗರೂಕ ತಂತ್ರವನ್ನು ಬಹಿರಂಗಪಡಿಸುತ್ತದೆ. ಇದು ಆಕಸ್ಮಿಕವಲ್ಲ. ಇದು ಹಿಂದೂಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸಲಾಗಿದೆʼ ಎಂದು ಬಿಜೆಪಿ ಕಿಡಿಕಾರಿದೆ.












